ದಶಕಗಳಿಂದ ಅರೆನಿರ್ಮಾಣವಸ್ಥೆಯ ಆಲಯದಲ್ಲಿ ಪೂಜಿಸಲ್ಪಡುತ್ತಿರುವ ಕೊಂಡಜ್ಜಿ ಲಕ್ಷ್ಮೀ ವರದರಾಜ ಸ್ವಾಮಿ

900 ವರ್ಷಗಳ ಹೊಯ್ಸಳರ ಕಾಲದ ಐತಿಹಾಸಿಕ ‘ಕೊಂಡಜ್ಜಿ ಶ್ರೀ ಲಕ್ಷ್ಮೀ ವರದರಾಜ ಸ್ವಾಮಿ ದೇಗುಲ’ಕ್ಕೆ ಅಭಿವೃದ್ಧಿಯ ಭಾಗ್ಯ

ಬೇಲೂರು ಚೆನ್ನಕೇಶವ ವಿಗ್ರಹದಷ್ಟೇ ಸುಂದರವಾಗಿರುವ ಕೊಂಡಜ್ಜಿ ಲಕ್ಷ್ಮೀ ವರದರಾಜ ಸ್ವಾಮಿ ದೇವರ ಮೂರ್ತಿಯು ನಿತ್ಯವೂ ಪೂಜೆಗೊಳ್ಳುತ್ತಿದ್ದಾನೆ. ಆದರೆ ದೇವರಿಗೆ ಒಂದು ಸುಂದರವಾದ ಆಲಯವಿಲ್ಲ. ಅರೆನಿರ್ಮಾಣವಸ್ಥೆಯಲ್ಲಿರುವ ಈ ದೇಗುಲಕ್ಕೆ ಸುಂದರ ಆಲಯವನ್ನು ನಿರ್ಮಿಸಿ, ದೇವರ ಪೂಜೆಗೆ ಸಕಲ ಸೌಕರ್ಯಗಳನ್ನು ಮಾಡಿಕೊಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಹಾಸನ ಅಂದಾಕ್ಷಣ ಬೇಲೂರು ಹಳೇಬೀಡು ನೆನಪಾಗುವುದು. ಹೊಯ್ಸಳರ ಕಾಲದ ಶಿಲ್ಪಕಲೆಗಳ ತವರೂರು ಅಂದರೆ ತಪ್ಪಾಗಲಾರದು. ಚಾರಿತ್ರಿಕ, ಧಾರ್ಮಿಕ ತಾಣಗಳನ್ನೊಳಗೊಂಡಿರುವ ಐತಿಹಾಸಿಕ ಸ್ಥಳವದು. ಹಾಸನದಿಂದ ಹಳೇಬೀಡು ದಾರಿಯಲ್ಲಿಸಾಗಿದರೆ ಕೊಂಡಜ್ಜಿ ಎಂಬ ಹಳ್ಳಿ ಇದೆ. ಅಲ್ಲಿ ದೇಗುಲವೊಂದಿದೆ. ಅದುವೇ ಶ್ರೀ ಲಕ್ಷ್ಮೀ ವರದರಾಜ ಸ್ವಾಮಿ ದೇಗುಲ. ಸುಮಾರು 900 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಲಕ್ಷ್ಮೀ ವರದರಾಜ ಸ್ವಾಮಿಯ ಸುಂದರ ಮೂರ್ತಿಯದು. ನಿತ್ಯವೂ ಪೂಜೆಗೊಳ್ಳುತ್ತಿದ್ದಾನೆ. ಆದರೆ ಆ ದೇವನಿಗೊಂದು ಸುಂದರ ಗುಡಿ ಇಲ್ಲ, ಮಂದಿರ ಕಟ್ಟುವ ಕಾರ್ಯ ಇನ್ನೂ ಆಮೆಗತಿಯಲ್ಲಿ ಸಾಗಿದೆ.

ಹಾಸನದಿಂದ ಹಳೇಬೀಡುಗೆ ಹೋಗುವ ಮಾರ್ಗದಲ್ಲಿ ಸಾಲಿಗಾಮ ಎಂಬ ಸಣ್ಣ ಹಳ್ಳಿ ಬರುತ್ತದೆ. ಅಲ್ಲಿಂದ ಕೇವಲ 4 ಕಿಮೀ. ಮುಂದೆ ಹೋದರೆ ದೊಡ್ಡ ದ್ವಾರ ಸಿಗುತ್ತದೆ. ಅಲ್ಲಿ ಮುಂದೆ ಹೋದಾಗ ಒಂದು ದೊಡ್ಡ ಕೆರೆ ಕಾಣಿಸುತ್ತದೆ. ಕೆರೆಯ ಹಿಂದುಗಡೆ ಬೆಟ್ಟವಿದೆ. ಆ ಬೆಟ್ಟವನ್ನು ಸೀಗೆ ಗುಡ್ಡ ಎಂದು ಕರೆಯುತ್ತಾರೆ. ಬೆಟ್ಟದ ತಪ್ಪಲಿನಲ್ಲಿ ಕೊಂಡಜ್ಜಿ ಶ್ರೀಲಕ್ಷ್ಮೀ ವರದರಾಜ ಸ್ವಾಮಿ ದೇವಸ್ಥಾನವಿದೆ.
ಹೊಯ್ಸಳರ ಕಾಲದ ದೇವಸ್ಥಾನ ಇದಾಗಿದ್ದು, ಆದರೆ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ.
15 ಅಡಿ ಎತ್ತರದ ಭವ್ಯವಾದ ಮೂರ್ತಿ ಇದೆ. ಶಂಖ, ಚಕ್ರ, ಗದಾ, ಪದ್ಮ ವನ್ನು ನಾಲ್ಕು ಕೈಗಳಲ್ಲಿ ಹಿಡಿದಿರುವ ಈ ವಿಗ್ರಹವು ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡಿದೆ ಎಂಬುದಕ್ಕೆ ಸಾಕ್ಷಿ ನೀಡುತ್ತದೆ.
11 ಅಡಿ ಮೂರ್ತಿ, ಕೆಳಗೆ 4 ಅಡಿ ಪೀಠ (2 ಅಡಿ ಗರುಡ ಪೀಠ, 2 ಅಡಿ ಪದ್ಮಪೀಠ)ವನ್ನು ಹೊಂದಿದೆ.

ಇತ್ತೀಚಿನ ಬೆಳವಣಿಗೆಯ ಪ್ರಕಾರ ಹಾಸನ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಸ್ಥಳ ಪರಿಶೀಲನೆ ನಡೆಸಿ ದೇಗುಲದ ಅಭಿವೃದ್ಧಿ ಕಾರ್ಯವನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಮುಜರಾಯಿ ಇಲಾಖೆಗೊಳಪಟ್ಟ “ಎ’ ಗ್ರೇಡ್ ದೇಗುಲ ಹಾಸನಾಂಬೆ ದೇಗುಲದಿಂದ ರೂ. 50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಿದೆ.


ಈ ಮೂರ್ತಿ ಇಲ್ಲಿ ಹೇಗೆ ಬಂತು?

ಈ ಸುಂದರ ಮೂರ್ತಿಯನ್ನು ಮಾಡಿದ್ದು ಬೇಲೂರಿನ ಚೆನ್ನಕೇಶವ ದೇವಾಲಯಕ್ಕೆಂದು. ಮೂರ್ತಿ ಕೆತ್ತನೆ ಸಂಪೂರ್ಣಗೊ0ಡಾದ ನಂತರ ಇದನ್ನು ಬೇಲೂರು ಮಾರ್ಗವಾಗಿ ಸಾಗಿಸುತ್ತಿರುತ್ತಾರೆ. ಆ ದಾರಿಯಲ್ಲೇ ಹೋಗಿ ಬರುವವರನ್ನು ಉಪಚಾರ ಮಾಡಲೆಂದೇ ಒಂದು ಮನೆ ಅಲ್ಲಿರುತ್ತದೆ. ಮೂರ್ತಿಯನ್ನು ಸಾಗಿಸುವಾಗ ಅದೇ ಮಾರ್ಗದಲ್ಲಿದ್ದ ಅಜ್ಜಿಯ ಮನೆಯಲ್ಲಿ ಉಪಚಾರವನ್ನು ಸ್ವೀಕರಿಸುತ್ತಾರೆ. ಒಂದಿಬ್ಬರು ಮೂರ್ತಿಯ ಅಳತೆಯನ್ನು ತೆಗೆದುಕೊಂಡು ಬೇಲೂರಿಗೆ ಹೋಗುತ್ತಾರೆ. ಗರ್ಭಗುಡಿ ಸಿದ್ಧವಾಗಿರುತ್ತದೆ. ಆದರೆ ಮೂರ್ತಿಯ ಎತ್ತರ ಜಾಸ್ತಿ ಆಗಿರುತ್ತದೆ. ಆ ಕಾರಣದಿಂದ ಈ ಸುಂದರ ಮೂರ್ತಿಯನ್ನು ಅಲ್ಲೇ ಬಿಟ್ಟು ಬೇಲೂರಿನಲ್ಲಿ 9 ಅಡಿ ಎತ್ತರದ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ. ಅದನ್ನು ಬೇಲೂರಿನಲ್ಲಿ ಗಮನಿಸಬಹುದು.
ಹಾಗಾಗಿ ಭವ್ಯವಾದ ಮೂರ್ತಿಯನ್ನು ಅಲ್ಲಿಯೇ ಬಿಟ್ಟುಬಿಡುತ್ತಾರೆ. ಆದರೆ ಆ ಊರಿನವರೆಲ್ಲಾ ಇಷ್ಟು ಸುಂದರವಾದ ವಿಗ್ರಹವನ್ನು ಹೀಗೆ ಬಿಡುವುದು ಸರಿಯಲ್ಲ ಎಂದು ತೀರ್ಮಾನಿಸುತ್ತಾರೆ. ಆಗ ಆ ಊರಿನಲ್ಲಿದ್ದ ಅಜ್ಜಿ ಆ ವಿಗ್ರಹವನ್ನು ನಾನು ಕೊಂಡುಕೊಳ್ಳುತ್ತೇನೆ ಎಂದು ಹೇಳುತ್ತಾರೆ. ಅದನ್ನು ತೆಗೆದುಕೊಂಡು ಪ್ರತಿಷ್ಠಾಪನೆ ಮಾಡುತ್ತಾರೆ.
ಅಜ್ಜಿ ವಿಗ್ರಹವನ್ನು ಕೊಂಡುಕೊ0ಡುದರಿ0ದ ಅದಕ್ಕೆ ಕೊಂಡಜ್ಜಿ ಎನ್ನುವ ಹೆಸರು ಬಂತು ಎಂದು ಹೇಳಲಾಗುತ್ತದೆ. ಆದರೆ ಆ ಅಜ್ಜಿಯ ಹೆಸರಿನ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ. ಅಜ್ಜಿ ಕೊಂಡು ಪ್ರತಿಷ್ಠಾಪನೆ ಮಾಡಿಸಿರುವುದರಿಂದ ಕೊಂಡಜ್ಜಿ ಎನ್ನುವ ಹೆಸರು ಬಂದಿದೆ ಎಂಬುದು ಒಂದು ದಂತಕಥೆ.

ಲಕ್ಷ್ಮೀ ವರದರಾಜ ಸ್ವಾಮಿ ಎನ್ನುವ ಹೆಸರು ಹೇಗೆ ಬಂತು?

ವಿಗ್ರಹದಲ್ಲಿ ಲಕ್ಷ್ಮೀಯ ಮೂರ್ತಿಯಿಲ್ಲ. ಆದರೂ ಲಕ್ಷ್ಮೀ ವರದರಾಜ ಸ್ವಾಮಿ ಎನ್ನುವ ಹೆಸರು ಹೇಗೆ ಬಂತು ಎನ್ನುವ ಕುತೂಹಲ ಮೂಡಬಹುದು. ವಿಗ್ರಹವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಗೊತ್ತಾಗುತ್ತದೆ, ವರದರಾಜಸ್ವಾಮಿಯ ವಿಗ್ರಹದ ವಕ್ಷಸ್ಥಳದಲ್ಲಿ ಹೊಳೆಯುವ ಚಿತ್ರ ಕಾಣಿಸುತ್ತದೆ. ಅದೇ ಲಕ್ಷ್ಮೀ ಕೆತ್ತನೆ.
ಅಷ್ಟು ಮಾತ್ರವಲ್ಲ ಶಿಲ್ಪಿಯ ಕೈಚಳಕವನ್ನು ಗಮನಿಸಲೇಬೇಕು, ಅಷ್ಟೇ ನವಿರಾಗಿ ಲಕ್ಷ್ಮೀಗೆ ಮೂಗುತಿಯನ್ನೂ ಮಾಡಿರುವುದು.
ಮತ್ತೊಂದು ವಿಶೇಷತೆ ಅಂದರೆ ಸಾಮಾನ್ಯವಾಗಿ ಮೂರ್ತಿಯ ಹಿಂಭಾಗ ಚಪ್ಪಟೆಯಾಗಿರುತ್ತದೆ, ಯಾವುದೇ ಕೆತ್ತನೆಗಳಿರುವುದಿಲ್ಲ. ಆದರೆ ಈ ಮೂರ್ತಿಯ ಹಿಂಭಾಗದಲ್ಲಿಯೂ ಸುಂದರವಾದ ಕೆತ್ತನೆಯಿದೆ. ಇದನ್ನು ಮೋಹಿನಿ ಅವತಾರ ಎನ್ನುತ್ತಾರೆ. ಬೇಲೂರು ಚೆನ್ನಕೇಶವನ ದೇವಾಲಯ ಕೂಡಾ ಲ್ಲಿಯೂ ಮೋಹಿನಿ ಅವತಾರದ ಕೆತ್ತನೆಯನ್ನೊಳಗೊಂಡಿದೆ. ಈ ವಿಗ್ರಹದಲ್ಲಿ ಕಾಲ್ಗೆಜ್ಜೆ, ಕಾಲುಂಗುರ, ತುರುಬು ನೋಡಬಹುದು. ಇದನ್ನು ಬೇಲೂರಿನ ಚೆನ್ನಕೇಶವ ದೇವರ ಕೆತ್ತನೆಯಲ್ಲೂ ಕಾಣಬಹುದು.
ಒಂದು ಗಾದೆ ಮಾತಿದೆ, “ಕೇಶವನ ಎದುರಲ್ಲಿ ನೋಡು ವರದರಾಜ ಸ್ವಾಮಿಯ ಹಿಂಭಾಗ ನೋಡು’ ಎಂದು. ಈ ಭವ್ಯ ಮೂರ್ತಿಯ ಹಿಂಭಾಗ ಅಂತಹ ಸೌಂದರ್ಯಕ್ಕೆ ಹೊರತಾಗಿಲ್ಲ. ಇಷ್ಟೊಂದು ಅದ್ಭುತವಾದ ಶಿಲ್ಪವನ್ನು ಯಾರು ಕೆತ್ತಿರಬಹುದು ಎನ್ನುವ ಕುತೂಹಲ ಇದ್ದೇ ಇರುತ್ತದೆ. ಆದರೆ ಯಾರು ಮಾಡಿದರು ಅನ್ನುವ ಮಾಹಿತಿ ಎಲ್ಲೂ ಕಂಡುಬರುವುದಿಲ್ಲ.

ನಿರ್ಲಕ್ಷ್ಯಕ್ಕೊಳಗಾದ ದೇಗುಲವಿದು

ಈ ಸುಂದರ ವಿಗ್ರಹಕ್ಕೊಂಡು ಗುಡಿ ಕಟ್ಟಿಸಲು 10 ವರ್ಷಗಳ ಹಿಂದೆಯೇ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ. ಆದರೆ ಕೇವಲ ಶೇ.30 ರಷ್ಟು ಕೆಲಸ ಪೂರ್ಣಗೊಂಡಿರಬಹುದು. ಅರೆ ನಿರ್ಮಾಣವಸ್ಥೆಯಲ್ಲಿರುವ ದೇಗುಲದ ಬಗ್ಗೆ ಸರಕಾರಕ್ಕಾಗಲೀ, ಸಾರ್ವಜನಿಕರಿಗಾಗಲೀ ಕಾಳಜಿ ಇದ್ದಂತಿಲ್ಲ. ಹಾಗಾಗಿ ಈ ದೇಗುಲಕ್ಕೆ ಸರಕಾರ ಹಾಗೂ ಭಕ್ತಾದಿಗಳು ಮನಸು ಮಾಡಿ ಈ ಕ್ಷೇತ್ರವನ್ನು ಪುಣ್ಯಕ್ಷೇತ್ರವನ್ನಾಗಿಸುವ ಪುಣ್ಯ ಕಾರ್ಯವನ್ನು ಮಾಡಬೇಕಿದೆ. ಅರೆನಿರ್ಮಾಣವಸ್ಥೆಯಲ್ಲಿರುವ ಈ ದೇಗುಲಕ್ಕೆ ಸುಂದರ ಆಲಯವನ್ನು ನಿರ್ಮಿಸಿ, ದೇವರ ಪೂಜೆಗೆ ಸಕಲ ಸೌಕರ್ಯಗಳನ್ನು ಮಾಡಿಕೊಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles