ಪಳನಿ ದಂಡಾಯುಧಪಾಣಿ ದೇಗುಲದಲ್ಲಿ ಹರಕೆ ಸಲ್ಲಿಸಿದ ಕ್ರಿಕೆಟಿಗ ತಂಗರಸು ನಟರಾಜನ್

ಮಧುರೈ: ಕ್ರಿಕೆಟಿಗ ತಂಗರಸು ನಟರಾಜನ್ ಅವರು ಪಳನಿ ದಂಡಾಯುಧಪಾಣಿ ಸ್ವಾಮಿ ದೇಗುಲಕ್ಕೆ ಶನಿವಾರ ಜ.30 ರಂದು ಭೇಟಿ ನೀಡಿ ಹರಕೆ ತೀರಿಸಿದ್ದಾರೆ. ಅವರು ದೇಗುಲದಲ್ಲಿ ಮುಡಿ ಅರ್ಪಿಸುವುದರ ಮೂಲಕ ನಂಬಿದ ದೇವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.


670 ಮೆಟ್ಟಿಲುಗಳನ್ನೊಳಗೊಂಡಿರುವ ಶಿವಗಿರಿ ಬೆಟ್ಟದ ಮೇಲಿರುವ ಈ ದೇಗುಲದಲ್ಲಿ ಕೆಲವು ತಿಂಗಳುಗಳ ಬಳಿಕ ಇತ್ತೀಚೆಗಷ್ಟೇ ಆರಂಭಿಸಲಾಗಿರುವ ರೋಪ್ ಕಾರ್ ಸೇವೆಯನ್ನು ಬಳಸಿಕೊಂಡು ದೇಗುಲವನ್ನು ತಲುಪಿದರು.


ಯಾರ್ಕರ್ ಸ್ಪೆಷಲಿಸ್ಟ್ ಟಿ ನಟರಾಜನ್ ಅವರ ಆಗಮನದ ಸುದ್ದಿ ತಿಳಿದ ಅಭಿಮಾನಿಗಳು ನಟರಾಜನ್ ಅವರನ್ನು ನೋಡಲು, ಸೆಲ್ಫೀ ತೆಗೆಸಿಕೊಳ್ಳಲು ದೇಗುಲದಲ್ಲಿ ಕಾದು ಕುಳಿತಿದ್ದರು.


ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ನಡೆದ ಟೆಸ್ಟ್ ಸಿರೀಸ್‌ನಲ್ಲಿ ಭಾರತ ಜಯ ಗಳಿಸಿದ ನಂತರ ಬಹಳಷ್ಟು ಖ್ಯಾತಿ ಪಡೆದ ಟಿ ನಟರಾಜನ್ ಮೊದಲು ತಮಿಳುನಾಡಿನ ಪ್ರೀಮಿಯರ್ ಲೀಗ್ ನಲ್ಲಿ, ನಂತರ ಭಾರತದ ಪ್ರೀಮಿಯರ್ ಲೀಗ್ ನಲ್ಲಿ ಹೆಸರು ಮಾಡಿದ್ದರು. ಆಸ್ಟ್ರೇಲಿಯಾ ಪ್ರವಾಸದ ನಂತರ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
ತಂಗರಸು ನಟರಾಜನ್ ಭಾರತದ ಪರ ಒಂದೇ ಪ್ರವಾಸದಲ್ಲಿ ಮೂರೂ ಮಾದರಿಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾದ ಕ್ಯಾನ್ಬೆರಾದಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ನಂತರ ಟಿ-20, ಹಾಗೂ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.
ಬಡತನವಿದ್ದರೂ ತನ್ನ ಪರಿಶ್ರಮ ಬದ್ಧತೆ ಮತ್ತು ಕ್ರಿಕೆಟ್ ಮೇಲಿನ ಪ್ರೀತಿಯಿಂದಲೇ ಸಾಧನೆ ಮಾಡಿರುವ ಪ್ರತಿಭಾವಂತ ಆಟಗಾರ ತಂಗರಸು ನಟರಾಜನ್, ತಮಿಳುನಾಡಿನಲ್ಲಿ ಬಡ ಮಕ್ಕಳಿಗಾಗಿ ಕ್ರಿಕೆಟ್ ಅಕಾಡೆಮಿಯನ್ನೂ ಸ್ಥಾಪಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles