ಮುಕ್ಕೋಟಿ ದೇವತೆಗಳಿದ್ದಾರೆ ಎಂಬ ನಂಬಿಕೆ ನಮ್ಮದು. ಪ್ರತಿಯೊಂದು ದೇವತೆಗೂ ಅವುಗಳದ್ದೇ ಆದ ಹಿನ್ನೆಲೆಯಂತೆ ಮಂದಿರಗಳನ್ನು ಕಟ್ಟಿ, ಆಚರಣೆ, ಸಂಪ್ರದಾಯಗಳನ್ನು ರೂಢಿಸಿಕೊಂದು ಬರಲಾಗಿದೆ.
ಹಾಗೆಯೇ ದೇಶದೆಲ್ಲೆಡೆ ಶಕ್ತಿಯ ದೇವತೆಯ ಆರಾಧನೆಯೂ ನಡೆಯುತ್ತದೆ.
ದೇವಿ ಅಂದಾಕ್ಷಣ ದುರ್ಗಾ ಮಾತೆ, ಕಾಳಿ ಮಾತೆ, ಚಾಮುಂಡೇಶ್ವರಿ, ಸರಸ್ವತಿ, ಶಾರದೆ, ಪಾರ್ವತಿ ದೇವಿಯ ದೇಗುಲಗಳನ್ನು ಹೆಚ್ಚಾಗಿ ನೋಡುತ್ತೇವೆ. ಆದರೆ ಇಲ್ಲೊಂದು ಲಿಂಗರೂಪದಲ್ಲಿ ನೆಲೆಯಾದ ಶಕ್ತಿ ದೇವತೆಯ ಕೇಂದ್ರವೊಂದಿದೆ. ಅದುವೇ ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಲಿಂಗಭೈರವಿ ದೇವಸ್ಥಾನ.
ಇಂತಹ ವೈವಿಧ್ಯತೆಗಳ ನಡುವೆ ವಿಶಿಷ್ಟ ಎಂಬಂತೆ ಮಹಿಳೆಯರೇ ನಡೆಸುವ ದೇಗುಲವಿದು. ಅಧ್ಯಾತ್ಮ ಗುರು ಸದ್ಗುರು ಜಗ್ಗಿ ವಾಸದೇವ್ ಅವರಿಂದ ಇಶಾ ಫೌಂಡೇಷನ್ ಮೂಲಕ ನಿರ್ಮಾಣಗೊಂಡ ದೇವ ಮಂದಿರ.
ಸಾಮಾನ್ಯವಾಗಿ ದೇವಸ್ಥಾನದ ಗರ್ಭಗುಡಿಯಲ್ಲಿ ಪುರುಷರು ಕೈಗೊಳ್ಳುವ ಎಲ್ಲಾ ಧಾರ್ಮಿಕ ಕೈಂಕರ್ಯಗಳನ್ನು ವಿಧಿ ವಿಧಾನಗಳನ್ನು ಲಿಂಗಭೈರವಿ ದೇಗುಲದಲ್ಲಿ ತರಬೇತಿ ಪಡೆದ ಮಹಿಳೆಯರೇ ನಿರ್ವಹಿಸುತ್ತಾರೆ. ದೇವರ ಪೂಜೆ, ಸೇವೆಗಳನ್ನು ಮಾಡುವ ಪುರುಷರನ್ನು ಅರ್ಚಕರು, ಪೂಜಾರಿಗಳು ಎಂದು ಕರೆಯಲ್ಪಟ್ಟರೆ, ಲಿಂಗಭೈರವಿ ದೇವಿಯ ಪೂಜೆ ಪುನಸ್ಕಾರ ಮಾಡುವ ಮಹಿಳೆಯರನ್ನುಇಲ್ಲಿ ಭೈರಾಗಿನಿ ಎಂದು ಕರೆಯುತ್ತಾರೆ. ಅವರು ಕೆಂಪು ಬಣ್ಣದ ಸೀರೆ ಉಟ್ಟು, ಹಣೆಯಲ್ಲಿ ಕುಂಕುಮ ಧರಿಸಿರುತ್ತಾರೆ.
ವಿಶೇಷ ಅಂದರೆ ಇಲ್ಲಿ ಪುರುಷ ಮಹಿಳೆ ಎನ್ನುವ ಭೇಧವಿಲ್ಲದೇ ದೇವಿಯ ದರ್ಶನವನ್ನು ಪಡೆಯಬಹುದು. ಆದರೆ ಮಹಿಳೆಯರಿಗೆ ಮಾತ್ರ ಗರ್ಭಗುಡಿಯೊಳಗೆ ಪ್ರವೇಶವೂ ಇದೆ.
ದರ್ಶನ ಸಮಯ: ಪ್ರತಿ ದಿನ ಬೆಳಗ್ಗೆ 6.30ರಿಂದ 8.20 , ಮಧ್ಯಾಹ್ನ 1.20 ರಿಂದ ಸಂಜೆ 4.20 ರವರೆಗೆ ದೇವಿ ದರ್ಶನ ಪಡೆಯಬಹುದು.
ಬೆಳಗ್ಗೆ 7.40, ಮಧ್ಯಾಹ್ನ 12.40 ಹಾಗೂ ರಾತ್ರಿ 7.40ಕ್ಕೆ ಪ್ರತಿದಿನ ಅಭಿಷೇಕ ನಡೆಯುತ್ತದೆ.
ನವರಾತ್ರಿ ವಿಶೇಷ
ನವರಾತ್ರಿಯ ಸಂದರ್ಭದಲ್ಲಿ 9 ದಿನವೂ ವಿಶೇಷ ಪೂಜೆ ನಡೆಯುತ್ತದೆ. ಮೊದಲ ಮೂರು ದಿನ ದುರ್ಗಾದೇವಿಗೆ ಕುಂಕುಮದ ಅಭಿಷೇಕ, ನಂತರದ ಮೂರು ದಿನ ಲಕ್ಷ್ಮಿದೇವಿಗೆ ಅರಶಿನದ ಅಭಿಷೇಕ ಹಾಗೂ ಕೊನೆಯ ಮೂರು ದಿನ ಸರಸ್ವತಿ ದೇವಿಗೆ ಚಂದನದ ಅಭಿಷೇಕ ನಡೆಯುತ್ತದೆ.
ಹೋಗುವುದು ಹೇಗೆ?
ತಮಿಳುನಾಡಿನ ಕೊಯಂಬತ್ತೂರಿನಿಂದ 30 ಕಿಮೀ ದೂರದಲ್ಲಿದೆ. ವಿಮಾನ, ರೈಲು ಹಾಗೂ ರಸ್ತೆ ಮಾರ್ಗದ ಸಂಪರ್ಕವಿದೆ. ಕೊಯಂಬತ್ತೂರಿನಿಂದ ಲಿಂಗಭೈರವಿ ದೇಗುಲಕ್ಕೆ ಬಸ್ ಸೌಕರ್ಯವಿದೆ.
ಹೆಚ್ಚಿನ ಮಾಹಿತಿಗೆ: https://lingabhairavi.org