ರಂಭಾಪುರಿ ಪೀಠ (ಬಾಳೆಹೊನ್ನೂರು):
ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಶ್ರೀ ರಂಭಾಪುರಿ ಮಹಾ ಪೀಠವನ್ನು ಆರೋಹಣ ಮಾಡಿ 29 ವರುಷ ಕಳೆದು 30 ನೇ ವರ್ಷದಲ್ಲಿ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಹಾಗೂ ಶ್ರೀ ಜಗದ್ಗುರುಗಳವರು ತಮ್ಮ ವಯಸ್ಸಿನ 65ನೇ ವರ್ಷದಲ್ಲಿ ಪಾದಾರ್ಪಣೆ ಮಾಡಿರುವ ಹಿನ್ನೆಲೆಯಲ್ಲಿ ರಂಭಾಪುರಿ ಧರ್ಮ ಪೀಠದಲ್ಲಿ ಫೆಬ್ರುವರಿ 10 ರಿಂದ 14 ರವರೆಗೆ ಶತರುದ್ರಯಾಗ ಜರುಗಲಿದೆ.
ಇದರ ಅಂಗವಾಗಿ ಪ್ರತಿ ನಿತ್ಯ ಪ್ರಾತ:ಕಾಲ ಲಿಂಗೋದ್ಭವ ಶ್ರೀ ಜಗದ್ಗುರು ರೇಣುಕಾಚಾರ್ಯರ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ, ಶ್ರೀ ಸೋಮೇಶ್ವರ ಮಹಾಲಿಂಗ, ಶ್ರೀ ಮಹಾಗಣಪತಿ, ಶ್ರೀ ಪಾರ್ವತಿ-ಶ್ರೀ ಚೌಡೇಶ್ವರಿ-ಶ್ರೀ ಭದ್ರಕಾಳಿ ಅಮ್ಮನವರ ಹಾಗೂ ವೀರಾಂಜನೇಯ ಮಹಾ ಮೂರ್ತಿಗಳಿಗೆ ಮತ್ತು ಲಿಂಗೈಕ್ಯ ಶ್ರೀ ಜಗದ್ಗುರುಗಳವರ ಗದ್ದುಗೆಗಳಿಗೆ ರುದ್ರಾಭಿಷೇಕ, ಅಷ್ಟೋತ್ತರ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಲ ವಿಶೇಷ ಪೂಜೆ ಜರುಗುವುದು.
14 ರಂದು ಶ್ರೀಮದ್ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ 30ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವ ಧರ್ಮ ಸಮಾರಂಭ ನಡೆಯುವುದು. ಅಂದು ಪರಂಪರೆಯಿ0ದ ಬಂದ ವೀರಸಿಂಹಾಸನವನ್ನು ಪೂಜಿಸಿ ಶ್ರೀ ಜಗದ್ಗುರುಗಳವರು ಪೀಠಾರೋಹಣ ಮಾಡಿ ಶಾಂತಿ ಸಾಮರಸ್ಯದ ಸಂದೇಶ ನೀಡುವರು.
ಇದರಲ್ಲಿ ಸೇವಾ ಕರ್ತರು ಶಿಷ್ಯ ಸದ್ಭಕ್ತರು ಪಾಲ್ಗೊಳ್ಳಬಹುದಾಗಿದೆ. ಪ್ರತಿ ವರುಷ ಶ್ರೀ ಜಗದ್ಗುರುಗಳವರ ವರ್ಧಂತಿ ಮಹೋತ್ಸವ ನಾಡಿನ ವಿವಿಧ ಭಾಗಗಳಲ್ಲಿ ನಡೆಯುತ್ತಿತ್ತು. ಈ ವರ್ಷ ಶ್ರೀ ಪೀಠದ ಪರಿಸರದಲ್ಲಿ ಇದನ್ನು ಆಯೋಜಿಸಲಾಗಿದೆ. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಸೇರಿದಂತೆ ಕೋವಿಡ್ ೧೯ ನಿಯಂತ್ರಣದ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಶ್ರೀ ಪೀಠದ ಪ್ರಕಟಣೆ ತಿಳಿಸಿದೆ.
ವರದಿ: ಸಿ.ಎಚ್. ಬಾಳನಗೌಡ್ರ