ಸವದತ್ತಿ: “ಕೊರೋನಾ ಕಾಲದಲ್ಲಿ ದೇವಸ್ಥಾನಗಳೆಲ್ಲ ಮುಚ್ಚಿದ್ದವು. ಆದರೆ ಕೊರೋನಾ ಸೇನಾನಿಗಳ ರೂಪದಲ್ಲಿ ದೇವರು ನಮ್ಮನ್ನು ರಕ್ಷಿಸಿದ್ದಾನೆ. ಈ ದಿಸೆಯಲ್ಲಿ ಮುನವಳ್ಳಿಯ ಸೋಮಶೇಖರಮಠದ ಪೂಜ್ಯರು ಈ ವರ್ಷ ಮಠದಲ್ಲಿ ಕೊರೋನಾ ಸೇನಾನಿಗಳನ್ನು ಸನ್ಮಾನಿಸಿ ಗುರುರಕ್ಷೆ ನೀಡಿದ್ದು ಸಂತಸದ ವಿಚಾರ” ಎಂದು ಕುಂದರಗಿ ಅಡವೀ ಸಿದ್ದೇಶ್ವರಮಠದ ಅಮರಸಿದ್ದೇಶ್ವರ ಸ್ವಾಮೀಜಿ ನುಡಿದರು.
ಅವರು ಸವದತ್ತಿ ತಾಲೂಕಿನ ಮುನವಳ್ಳಿಯ ಸೋಮಶೇಖರ ಮಠದಲ್ಲಿ ಜರುಗಿದ ಲಿಂ.ಬಸವಲಿಂಗ ಸ್ವಾಮೀಜಿ 65 ನೇ ಪುಣ್ಯ ಸ್ಮರಣೋತ್ಸವದಲ್ಲಿ ಮಾತನಾಡಿದರು.
“ ಶಿಕ್ಷಣದ ಮೂಲಕ ಪ್ರತಿಯೊಬ್ಬರೂ ಸಮಾಜದಲ್ಲಿ ಮುನ್ನಲೆಗೆ ಬರಬೇಕು. ಹೊಂದಾಣಿಕೆ ಸೇವಾ ಮನೋಭಾವ, ಜೀವನದ ಮೂಲ ಧ್ಯೇಯವಾಗಬೇಕು. ಮುನವಳ್ಳಿ ಸೋಮಶೇಖರ ಮಠ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೇ ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಮಠದ ಈ ಕಾರ್ಯ ಮುಂದುವರಿಯಲಿ”ಎ0ದು ಇದೇ ಸಂದರ್ಭದಲ್ಲಿ ಮಾತನಾಡಿದ ಮುರಗೋಡ ಮಹಾಂತ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ಮುನವಳ್ಳಿ ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ ಮಾತನಾಡಿ “ ಪ್ರತಿ ವರ್ಷ ಲಿಂ.ಬಸವಲಿಂಗ ಸ್ವಾಮೀಜಿ ಪುಣ್ಯ ಸ್ಮರಣೋತ್ಸವವನ್ನು ಐದು ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು.ಇದೇ ಸಂದರ್ಭದಲ್ಲಿ ನಾಡಿನ ಸಾಧಕರೊಬ್ಬರಿಗೆ ಮುರುಘಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿತ್ತು. ಆದರೆ ಈ ಬಾರಿ ಕೋರೋನಾ ಕಾರಣ ಒಂದೇ ದಿನಕ್ಕೆ ಸೀಮಿತವಾಗಿ ಸರಳವಾಗಿ ಪುಣ್ಯ ಸ್ಮರಣೋತ್ಸವವನ್ನು ಆಚರಿಸಲಾಗಿದೆ. ಮುಂದಿನ ವರ್ಷ ಇಬ್ಬರು ಸಾಧಕರಿಗೆ ಪ್ರಶಸ್ತಿ ವಿತರಿಸಿ ಗೌರವಿಸಲಾಗುವುದು” ಎಂದರು.
ಕೊರೊನಾ ಸೇನಾನಿಗಳಿಗೆ ಸನ್ಮಾನ
ತಾಲೂಕಿನ ಮುನವಳ್ಳಿಯ ಸೋಮಶೇಖರ ಮಠದಲ್ಲಿ ಜರುಗಿದ ಲಿಂ.ಬಸವಲಿಂಗ ಸ್ವಾಮೀಜಿ 65ನೇ ಪುಣ್ಯ ಸ್ಮರಣೋತ್ಸವದಲ್ಲಿ ಕೊರೋನಾ ಸೇನಾನಿಗಳಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಇಲಾಖೆಯ ಎಎಸ್‌ಐ ಬಿ.ಆರ್.ಸಣಮಾಳಗಿ, ಪಿ.ಎಸ್.ಹಿರೇಹೊಳಿ, ಈರಣ್ಣ ಸಂಗೊಳ್ಳಿ ಇವರಿಗೆ ಗುರುರಕ್ಷೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುರಗೋಡ ಮಹಾಂತ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ, ಕುಂದರಗಿ ಅಡವೀ ಸಿದ್ದೇಶ್ವರ ಮಠದ ಅಮರಸಿದ್ದೇಶ್ವರ ಸ್ವಾಮೀಜಿ, ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ, ಸಿಂದೋಗಿ ಮುನವಳ್ಳಿಯ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದ ಶ್ರೋತ್ರೀಯ ಬ್ರಹ್ಮನಿಷ್ಠ ಮುಕ್ಕಾನಂದ ಸ್ವಾಮೀಜಿ, ಬೈಲಹೊಂಗಲ ಮೂರು ಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ, ಶಂಕರ ರಾಜೇಂದ್ರ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಶಿವಲಿಂಗ ಸ್ವಾಮೀಜಿ, ಯರಗಟ್ಟಿಯ ಗಣಪತಿ ಮಹಾರಾಜರು, ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ, ಪುರಸಭೆ ಅಧ್ಯಕ್ಷ ವಿಜಯ ಅಮಠೆ, ರವೀಂದ್ರ ಯಲಿಗಾರ, ಎಂ.ಆರ್.ಗೋಪಶೆಟ್ಟಿ, ರಮೇಶ ಗೋಮಾಡಿ, ಅರುಣಗೌಡ ಪಾಟೀಲ, ಮುನವಳ್ಳಿ ಗುರು ಹಿರಿಯರು ಉಪಸ್ಥಿತರಿದ್ದರು.
ವರದಿ: ವೈ ಬಿ ಕಡಕೋಳ