ಪುರಂದರ ದಾಸರ ಕೀರ್ತನೆಗಳಲ್ಲಿನ ಸಂದೇಶ ಸಾರ್ವಕಾಲಿಕ

ಸುಮಾರು 450 ವರ್ಷಗಳ ಹಿಂದೆ ಬಾಳಿ ಬದುಕಿದ ಅವರ ಹೆಸರನ್ನು ಇಂದೂ ನಾವು ನೆನೆಸುತ್ತಿರುವುದೆಂದರೆ ಅದಕ್ಕೆ ಕಾರಣ ಅವರ ಸಾಹಿತ್ಯದಲ್ಲಿರುವ ಮೌಲ್ಯ. ಪುರಂದರರ ಸಿರಿವಂತಿಕೆ ಅನನ್ಯ, ಅಪೂರ್ವ. ಹುಟ್ಟಿನಿಂದ ಅವರು ಆಗರ್ಭ ಸಿರಿವಂತರು. ಚಿನ್ನದ ಹರಿವಾಣದಲ್ಲಿ ಉಂಡವರು. ಬೆಳ್ಳಿಯ ಢಾಳಿಯಲ್ಲಿ ನೀರು ಕುಡಿದವರು. ಅಂತಹವರು ಆ ಸಿರಿವಂತಿಕೆಯನ್ನು ಬಿಟ್ಟು ಧರ್ಮ ಸಿರಿವಂತರಾದುದು. ಭಕ್ತಿಯಲ್ಲಿ, ಧರ್ಮದಲ್ಲಿ, ಗಾಯನದಲ್ಲಿ ಅವರಿಗೆ ಸರಿಸಾಟಿಯಾದ ಸಿರುವಂತರು ಮತ್ಯಾರು? ಅಂತಹ ಸರ್ವ ಐಸಿರಿಯ ಸಿರಿ ಪುರಂದರರಿಗೆ ನಮ್ಮ ನಮನ.

* ಡಾ. ಗುರುರಾಜ ಪೋಶೆಟ್ಟಿಹಳ್ಳಿ

ನ್ನಡನಾಡಿನಲ್ಲಿ ಹದಿನಾರನೆಯ ಶತಮಾನದ ಹೊತ್ತಿಗೆ ಆವಿಷ್ಕಾರಗೊಂಡ ಹರಿದಾಸ ಪಂಥದ ನೇತಾರರೂ ಪ್ರಮುಖರೂ ದಾಸ ಸಾಹಿತ್ಯದ ಅಧ್ವರ್ಯುಗಳೂ ಆಗಿರುವ ಪುರಂದರದಾಸರನ್ನು ನೆನೆದುಕೊಳ್ಳಬೇಕು. ಕನ್ನಡ ಭಾಷೆಯ ಪ್ರಜ್ಞೆ, ಪ್ರಬುದ್ಧತೆಗಳಿಗೊಂದು ಸಾಕ್ಷಿಯಾಗಿ, ಜನರು ಆಡುವ ಮಾತನ್ನೇ ಕಾವ್ಯದ ಮೌಲ್ಯಕ್ಕೆ ಏರಿಸಿದವರಾಗಿ, ಸಾಹಿತ್ಯಕ್ಕೆ ಸಂಗೀತದ ಸಾಹಚರ್ಯ ನೀಡಿ ಕರ್ನಾಟಕ ಸಂಗೀತಕ್ಕೆ ಒಬ್ಬ ಗೌರವದ ಗುರುವಾಗಿ, ನೈತಿಕತೆಯ ನೆಲೆಗಟ್ಟಿನಲ್ಲಿ ಭಕ್ತಿ ತತ್ತ್ವದ ಪ್ರಚಾರಕರಾಗಿ `ದಾಸ ಸಾಹಿತ್ಯ’ವನ್ನು ಶ್ರೀಮಂತಗೊಳಿಸಿಕೊಟ್ಟವರು ಪುರಂದರದಾಸರು.

ಪುರಂದರದಾಸರ ಸಾಹಿತ್ಯದ ಮುಖ್ಯ ತತ್ತ್ವ ಭಕ್ತಿ. ಮೂಲ ಸತ್ಯ ಭಗವಂತ. ದಾಸ ಶಬ್ದ ಹೇಳುವುದೇ, ಒಡೆಯ ಮತ್ತು ದಾಸರ ಸಂಬಂಧವನ್ನು, ಒಡೆಯನಿರದಿದ್ದರೆ ದಾಸ ಎಂಬ ಶಬ್ದಕ್ಕೆ ಅರ್ಥವೇ ಇಲ್ಲ. ಪುರಂದರದಾಸರು ಭಕ್ತಿಯ ದಾರಿಯಲ್ಲಿ ಭಗವಂತನೆಂಬ ಮೂಲ ಸತ್ಯವನ್ನು ಹುಡುಕಲು ಹೊರಟವರು. ಹಾಗೆ ಅವರು ಹೊರಟಾಗ ಭಕ್ತಿಯ ದಾರಿಗೆ ತಮ್ಮನ್ನಷ್ಟೇ ತೆರೆದುಕೊಳ್ಳಲಿಲ್ಲ. ಅದನ್ನು ಇಡೀ ಸಮುದಾಯಕ್ಕೆ ತೆರೆದಿಟ್ಟರು. ಹಾಗೆ ತೆರೆದಿಡುವಾಗ ಬದುಕೆಂದರೇನು? ಹೇಗೆ ಬದುಕಬೇಕು? ಎಂಬುದನ್ನು ತಿಳಿಸುತ್ತ ಹೋದರು.

ಅವರ ಸಾಹಿತ್ಯವು ಜನರ ಮಧ್ಯ, ಜನರಿಂದ ಜನರ ಮುಂದೆಯೇ ಹುಟ್ಟಿಬೆಳೆದ ಸಾಹಿತ್ಯ. ಯಾವುದೇ ಒಂದು ಕೇಂದ್ರೀಕೃತ ವ್ಯವಸ್ಥೆಯಲ್ಲಿ ಹುಟ್ಟಿದ್ದಲ್ಲ, ಮನೆ ಮನೆ, ಓಣಿ ಓಣಿಗಳಲ್ಲಿ ತಿರುಗಾಡುತ್ತ, ಹಾಡುತ್ತ, ಕುಣಿಯುತ್ತ ಸಾಗುವಾಗ ಕಂಡ ಲೋಕಾನುಭವಗಳು, ಭಾವ ತನ್ಮಯತೆಯಲ್ಲಿ ಮೂಡಿ ಬಂದ ಈ ಕೃತಿಗಳು ಕತೆಯ ಎಲ್ಲ ಕಾವ್ಯಾಂಶಗಳಿಂದ ತುಂಬಿ ನಿಂತವು. ಸಾಹಿತ್ಯ ಮತ್ತು ಸಂಗೀತದ ಸಾಮರಸ್ಯ ಪ್ರತೀಕವಾದ ಈ ರಚನೆಗಳು ಶುದ್ಧ ಭಾವಗೀತೆಗಳಾಗಿವೆ.

ದಾಸತ್ವಕ್ಕೆ ಮೊರೆ ಹೋದ ಘಟನೆ

ಮುತ್ತು ರತ್ನಗಳ ವ್ಯಾಪಾರಿಯಾಗಿದ್ದ ಶ್ರೀನಿವಾಸ ನಾಯಕರು ಅಲೌಕಿಕ ಘಟನೆಯೊಂದರಿಂದ ಮನಃಪರಿವರ್ತನೆಗೊಂಡು ತಮ್ಮ ಸಮಸ್ತ ಸಂಪತ್ತನ್ನು `ಕೃಷ್ಣಾರ್ಪಣ’ ಎಂದು ತ್ಯಾಗ ಮಾಡಿ ಹರಿದಾಸರಾಗುತ್ತಾರೆ. ಈ ಲೌಕಿಕ ಘಟನೆಯ ವಿಷಯದಲ್ಲಿ ಅನೇಕ ದಂತಕಥೆಗಳಿದ್ದು ಅವು ಯಾವುದಕ್ಕೂ ನಿಖರ ಪ್ರಮಾಣವಿರುವುದಿಲ್ಲ. ಆದರೆ ದಾಸರ ಕೀರ್ತನೆಗಳು ಹಾಗೂ ಅವರ ಅನಂತರ ಆ ಪರಂಪರೆಯಲ್ಲಿ ಬಂದ ಇತರ ಹರಿದಾಸರುಗಳ ವಚನಗಳಿಂದ ಅವರ ಪತ್ನಿಯ ದೆಸೆಯಿಂದ ಅವರ ಜಿಪುಣತನ ಮಾಯವಾಗಿ, ಜೀವನದಲ್ಲಿ ವೈರಾಗ್ಯ ಮೂಡಿ, ದಾಸತ್ವಕ್ಕೆ ಮೊರೆ ಹೋದುದು ಕಂಡುಬರುತ್ತದೆ. ದಾಸತ್ವ ವಹಿಸಿದ ಮಾತ್ರಕ್ಕೆ ಅವರು ಗೃಹಸ್ಥ ಜೀವನ ಬಿಟ್ಟವರಲ್ಲ. ಆ ವೇಳೆಗಾಗಲೆ ದಾಸರಿಗೆ ನಾಲ್ವರು ಪುತ್ರರು ಒಬ್ಬ ಪುತ್ತಿಯೂ ಇದ್ದರು. ಪತ್ನಿ-ಪುತ್ರ-ಪುತ್ರಿಯರ ಸಮೇತ ಆಯ್ಕೆ ಅವರದಾಯಿತು.
ಸ್ವತಃ ಪುರಂದರರು ನವಕೋಟಿಯನ್ನು ಧಿಕ್ಕಿರಿಸಿ ಬಂದ ಧೀಮಂತ. ಅವರ ಕಾಂಚನ ನಿರ್ಮೋಹ ಎಷ್ಟಿತ್ತೆಂಬುದನ್ನು ಕೆಳಗಿನ ಪ್ರಸಂಗಗಳಿಂದ ನೋಡಬಹುದು.
ಶ್ರೀನಿವಾಸ ನಾಯಕ ತನ್ನ ಲೋಭಿತನದಿಂದ ಮುದುಕನ ವೇಷದಲ್ಲಿ ಬಂದಿದ್ದ ಪಾಂಡುರಂಗ ವಿಠ್ಠಲನನ್ನು ಬರಿಗೈಯಲ್ಲಿ ಕಳುಹಿಸಿದಾಗ, ಆ ಮುದುಕ ದಾಸರಿಲ್ಲದ ವೇಳೆಯಲ್ಲಿ ಅವರ ಮನೆಗೆ ಹೋಗಿ ದಾಸರ ಪತ್ನಿ ಸರಸ್ವತಿಯನ್ನು ಯಾಚಿಸಿ, ಆಕೆ ತನ್ನ ತವರಿನಿಂದ ಬಂದಿದ್ದು ತಾನು ಧರಿಸಿದ್ದ ಮೂಗುತಿಯನ್ನೇ ಅವನಿಗೆ ಭಿಕ್ಷೆ ನೀಡುತ್ತಾಳೆ. ಮುದುಕ ಮತ್ತೆ ನಾಯಕನ ಅಂಗಡಿಗೆ ಹೋಗಿ ಅದನ್ನು ಮಾರಲು ಯತ್ನಿಸಿದಾಗ ಅನುಮಾನಗೊಂಡ ನಾಯಕನು ಅದನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಭದ್ರಪಡಿಸಿ ಮನೆಗೆ ಬಂದು ಪತ್ನಿಯನ್ನು ಪ್ರಶ್ನಿಸಿದಾಗ, ಉತ್ತರ ನೀಡಲು ಅಸಮರ್ಥಳಾದ ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಸ್ವತಃ ಪಾಂಡುರಂಗನೇ ಬಂದು ವಿಷದ ಬಟ್ಟಲಲ್ಲಿ ಆಕೆಯ ಮೂಗುತಿಯನ್ನು ದಯಪಾಲಿಸುತ್ತಾನೆ. ಅದನ್ನು ಆಕೆ ಪತಿಗೆ ತೋರಿಸಿ ನಡೆದ ವಿಷಯವನ್ನು ಹೇಳಿದಾಗ, ತನ್ನನ್ನು ಪರೀಕ್ಷಿಸಲು ಬಂದ ಮುದುಕ ಪಾಂಡುರಂಗನೆ0ದರಿತು, ತನ್ನ ಸಮಸ್ತ ಆಸ್ತಿಯನ್ನು ತೃಣವಾಗೆಣಿಸಿ ಊರು ಬಿಟ್ಟು ಶ್ರೀ ವ್ಯಾಸರಾಜರನ್ನು ಕಾಣಲು ಪಂಪಾಕ್ಷೇತ್ರಕ್ಕೆ ತೆರಳುತ್ತಾನೆ. ಮಾರ್ಗಮಧ್ಯದಲ್ಲಿ ಬಾಯಾರಿಕೆಯಾದಾಗ ನಾಯಕನು ನೀರು ಕೇಳಲು, ಅವನ ಪತ್ನಿ ಸರಸ್ವತಿ ತನ್ನ ಚೀಲದಿಂದ ಬೆಳ್ಳಿಯ ಲೋಟವೊಂದರಲ್ಲಿ ನೀರು ತೆಗೆದುಕೊಡುತ್ತಾಳೆ. ಅಚಾನಕವಾಗಿ ಆದರೂ ಬೆಳ್ಳಿ ವ್ಯಾಮೋಹದಿಂದ ಖತಿಗೊಂಡ ನಾಯಕ ಅದನ್ನು ಆಕೆಯ ಕೈಯಿಂದ ಕಸಿದುಕೊಂಡು ಸಮೀಪದಲ್ಲಿದ್ದ ತೊರೆಯೊಂದರಲ್ಲಿ ಬಿಸುಡುತ್ತಾನೆ. ಇಂತಹ ವೈರಾಗ್ಯ ನಿಧಿ, ಜಗತ್ತನ್ನೇ ತ್ಯಜಿಸಿದ ಬೈರಾಗಿ ತನ್ನ ಪ್ರತಿಷ್ಠೆಗಾಗಿ ತಾನು ನಾಲ್ಕು ಲಕ್ಷಕ್ಕೂ ಮಿಕ್ಕಿ ಪದಗಳನ್ನು ರಚಿಸಿದನೆಂದು ಹುಸಿ ನುಡಿಯುತ್ತಾನೆಯೇ? ಹೀಗಾಗಿ ಅವರು ಬರೆದ ಕೃತಿಗಳ ಸಂಖ್ಯೆಯ ವಿಷಯದಲ್ಲಿಯೂ ಒಮ್ಮತಕ್ಕೆ ಬರುವುದು ಸಾಧ್ಯವಾಗಲಿಲ್ಲ.

ನಾರದರ ಅಂಶ ಪುರಂದರದಾಸರು
ಅವರ ಪೀಳಿಗೆಯಲ್ಲಿ ಮುಂದೆ ಬಂದ ವಿಜಯದಾಸರು ಅವರನ್ನು ನಾರದರ ಅಂಶವೆಂದೇ ಗುರುತಿಸುತ್ತಾರೆ. ಕರ್ನಾಟಕ ಸಂಗೀತಕ್ಕೆ ಸ್ಪಷ್ಟ ಬುನಾದಿ ಹಾಕಿದ ಪುರಂದರರನ್ನು ಹಾಗೆ ಗುರುತಿಸುವುದು ಸರಿಯಾಗಿಯೇ ಇದೆ. ವಿಜಯದಾಸರು ಒಂಬತ್ತು ಪದ್ಯಗಳಲ್ಲಿ ಪುರಂದರದಾಸರ ಚರಿತ್ರೆಯನ್ನು ಸಂಕ್ಷಿಪ್ತವಾಗಿ ನಿರೂಪಿಸಿದ್ದು, ಅದರಲ್ಲಿ ಅವರು ಪುರಂದರ ಎಂಬ ನಗರಿಯಲ್ಲಿ ಜನಿಸಿದ್ದರೆಂದೂ ವ್ಯಾಸರಾಜರ ಶಿಷ್ಯರಾಗಿ ದೇಶ ದೇಶಗಳಲ್ಲಿ ತಿರುಗಿ ಭಕ್ತಿ ಸಂದೇಶ ನೀಡಿದರೆಂದೂ ಅವರು ನಾರದರ ಪುನರವತಾರವೇ ಎಂದೂ ಪ್ರತಿಪಾದಿಸುತ್ತಾರೆ.

ಶ್ರೀ ವಿಜಯದಾಸರು, ಪುರಂದರದಾಸರ ಕಾಲಕ್ಕಿಂತ ಇನ್ನೂರು ವರುಷ ಮುಂದಿನವರು. ಅಂದಿನ ದಿನಮಾನಗಳಲ್ಲಿ ಪ್ರಚಲಿತವಾಗಿದ್ದ ವಿಷಯವನ್ನೇ ಬರೆದಿರುವರು. ಅವರ ಕಾಲದಲ್ಲಿಯೇ ಪುರಂದರರ ವಿಷಯಗಳು ಅಸ್ಪಷ್ಟವಾಗಿರುವುದರಿಂದ ಇಂದು ದಾಸರ ಬಗ್ಗೆ ನಿರ್ದಿಷ್ಟ ನಿಲುವು ತಳೆಯುವುದು ಅಸಾಧ್ಯ. ಹೀಗಾಗಿ ಕರ್ನಾಟಕದ ಹರಿದಾಸ ಪರಂಪರೆಯ ವಿಷಯ ಬಂದಾಗ ನಾವು ಅವರ ದೇಶ, ಕಾಲ, ವಂಶ, ಕುಲ ಎಂಬುದರ ಬಗೆಗೆ ಹೆಚ್ಚು ಗಮನ ಕೊಡದೆ, ಲಭ್ಯವಿರುವ ಅವರ ಕೃತಿಗಳ ಸಂದೇಶವನ್ನು ಗುರುತಿಸಿ ಪ್ರಸ್ತುತ ಕಾಲಕ್ಕೆ ಅವೆಷ್ಟು ಸಮಂಜಸ ಎಂಬುದಷ್ಟೇ ಗಮನಿಸಬೇಕಾಗಿದೆ.

ಹಾಗೆ ನೋಡಿದಾಗ ಪುರಂದರರ ಕೀರ್ತನೆಗಳ ಸಂದೇಶ ಸಾರ್ವಕಾಲಿಕ. ಸಂಸ್ಕೃತವೇ ಹೆಚ್ಚು ಪ್ರಚಾರದಲ್ಲಿದ್ದು, ವ್ಯಾಸಕೂಟ ಅಥವಾ ದೇವನಾಗರಿ ಪಾಂಡಿತ್ಯವೇ ಪಾಂಡಿತ್ಯ, ಉಳಿದ ದೇಶಿ ಭಾಷೆಗಳಲ್ಲಿ ಬಂದ ಕೃತಿಗಳು ಅಗಣ್ಯ ಎಂದಿದ್ದ ಕಾಲದಲ್ಲಿ, ಜನಪದವನ್ನು ಮುಟ್ಟಲು ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಧರ್ಮ ಸಂದೇಶ ನೀಡಿದವರಲ್ಲಿ ಅಗ್ರಗಣ್ಯ ಸ್ಥಾನ ಪುರಂದರದಾಸರದಾಗುತ್ತದೆ.
ಅಚಲಾನಂದರಿಂದ ಆರಂಭವಾದ ಭಾಗವತ ಧರ್ಮ ಆಚಾರ್ಯ ಮಧ್ವರಿಂದ ದ್ವೈತ ಸಿದ್ಧಾಂತದ ರೂಪು ತಳೆದು, ಉತ್ತರೋತ್ತರ ನರಹರಿ ತೀರ್ಥ, ಶ್ರೀಪಾದರಾಜ, ವ್ಯಾಸರಾಜ, ವಾದಿರಾಜ- ಇವರುಗಳಿಂದ ಸ್ಪಷ್ಟ ಸಾಹಿತ್ಯ ವಿಭಾಗವಾಗಿ ಗುರುತಿಸಲ್ಪಟ್ಟಿತು. ಅವರು ಬಾಯಿಯಲ್ಲಿ ನುಡಿದ ಮಾತುಗಳು ಪದಗಳು, ದೇವರ ನಾಮಗಳು, ಕೀರ್ತನೆಗಳು, ಉಗಾಭೋಗಗಳು, ಸುಳಾದಿಗಳು, ಮುಂಡಿಗೆಗಳು-ಹೀಗೆ ಅನೇಕ ಉಪ ವಿಭಾಗಗಳಲ್ಲಿ ಬೆಡಗು ಪಡೆದು ಸೊಬಗಿನಿಂದ ಮೆರೆಯಿತು. ಕೇವಲ ಪಂಡಿತ ಮಾನ್ಯವಾಗಿದ್ದ ಉಪನಿಷತ್ತಿನ ಸಾರವನ್ನು, ಭಗವದ್ಗೀತೆಯ ಸಂದೇಶಗಳನ್ನು ದಾಸರು ಕನ್ನಡಿಗರಿಗೆ ಉಣಬಡಿಸಿದರು. ನಾರದರ ನವವಿಧ ಭಕ್ತಿಯ, ಅವರ ಭಕ್ತಿಸೂತ್ರಗಳ ವ್ಯಾಖ್ಯಾನವೇ ಪುರಂದರ ಕೃತಿಗಳ ಸಾರ ಎಂದರೆ ತಪ್ಪಾಗಲಾರದು.

ಇಂದಿಗೂ ಪ್ರಸ್ತುತವೆನಿಸುವ ಅವರ ಒಂದು ಕೀರ್ತನೆ ಹೀಗಿದೆ.


ತನುವ ನೀರೋಳಗಿದ್ದಿ ಫಲವೇನು? ತಮ್ಮ
ಮನದಲ್ಲಿ ದೃಢ ಭಕ್ತಿಯಿಲ್ಲದ ಮನುಜರು
ದುಷ್ಟರ ಸಂಗವ ಬಿಡುವುದೆ ಸ್ನಾನ
ಶಿಷ್ಟರ ಸಂಗದೊಳಿರುವುದೆ ಸ್ನಾನ
ದಾನ ಧರ್ಮಂಗಳ ಮಾಡುವುದೆ ಸ್ನಾನ
ಜ್ಞಾನ ತತ್ತ÷್ವಂಗಳ ತಿಳಿವುದೆ ಸ್ನಾನ
ಹೀನ ಪಾಪಂಗಳ ಬಿಡುವುದೆ ಸ್ನಾನ
ಧ್ಯಾನದಿ ಮಾಧವನ ನೋಳ್ಪುದೆ ಸ್ನಾನ.

ಬಹಿರಂಗ ಆಚರಣೆ ಕೇವಲ ಅಂತರಂಗ ಶುದ್ಧಿಗೆ ಕಾರಣ ಎಂಬುದನ್ನು ಅದೆಷ್ಟು ದೃಢವಾಗಿ-ಸುಮಾರು ಆರುನೂರು ವರ್ಷಗಳ ಹಿಂದೆಯೇ ಹೇಳಿದ್ದಾರೆ ಪುರಂದರರು.
ಜಾತಿ-ಮತದ ವಿಷಯದಲ್ಲಿ ಭೇದಭಾವ ಮಾಡದ ಅವರು ಲಿಂಗಾಯತ-ಬ್ರಾಹ್ಮಣ ಸಮುದಾಯದ ಒಗ್ಗಟ್ಟಿಗಾಗಿ ಶ್ರಮಿಸಿದರು. ಅಂತ್ಯಜರ ಬಗ್ಗೆ ಉನ್ನತಿಗಾಗಿ ಶ್ರಮಿಸಿದರು. ಹುಟ್ಟಿನಿಂದ ಜಾತಿಯಿಲ್ಲ. ಆಚರಣೆಯಿಂದ ಜಾತಿ ಎಂಬುದನ್ನು ಬಹು ಮಾರ್ಮಿಕವಾಗಿ ದಾಸರು ಹೀಗೆ ಹೇಳುತ್ತಾರೆ:
ಆಸೆ ಮಾತನು ಕೊಟ್ಟು ಭಾಷೆ ತಪ್ಪುವವ ಹೊಲೆಯ
ಲೇಸು ಉಪಕಾರಗಳ ಮಾಡದವ ಹೊಲೆಯ
ಮೋಸದಲಿ ಜೀವನದ ಮುನಿದು ಕೆಡಿಸುವ ಹೊಲೆಯ
ಹುಸಿಯ ಬೊಗಳುವನೊಬ್ಬ ಹುಚ್ಚು ಹೊಲೆಯ.

ಪುರಂದರದಾಸರು ಮಧ್ವರ ತತ್ತ್ವಗಳಲ್ಲಿ ಅಚಲವಾದ ನಂಬುಗೆಯನ್ನು ಇಟ್ಟವರು ನಿಜ, ಆದರೆ ಅವರಿಗೆ ಮಧ್ವರ ಸಿದ್ಧಾಂತದ ಹಿನ್ನೆಲೆಯಲ್ಲಿ ಅವರು ಹೇಳಿದ ಸಾಧನೆ ಬಹು ಮುಖ್ಯವಾಯಿತು. ಸಾಧನೆ ಎಂದರೆ ಭಗವತತ್ತ್ವ ಸಾಕ್ಷಾತ್ಕಾರ, ಭಕ್ತಿ ಇವುಗಳಿಗೆ ಮಧ್ವ ಸಿದ್ಧಾಂತದ ತತ್ತ್ವಗಳು ಅವರಿಗೆ ಊರುಗೋಲಾದುವು. ಪುರಂದರದಾಸರೆ0ದೂ ಒಂದು ವರ್ಗಕ್ಕೆ ಮೀಸಲಾಗಲಿಲ್ಲ. ಅವರು ಏರಿದ ಎತ್ತರವನ್ನು ಗುರುತಿಸಿದಾಗ, ಈ ಅಂಶ ಸ್ಪಷ್ಟವಾಗುತ್ತದೆ. ಅಂತರಂಗದಲ್ಲಿ ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆದ, ಅಪರೋಕ್ಷ ಜ್ಞಾನಿಗಳೆನಿಸಿದ, ವಿಶ್ವದ ಎಲ್ಲ ಅನುಭಾವಿಗಳಿಗೆ ಸಮಾನವಾದ ಗುಣಗಳು ಅವರಲ್ಲಿವೆ.

ಸಂಸ್ಕೃತದಿಂದಲೇ ಮುಕ್ತಿ. ಶಾಸ್ತ್ರ ಪಾಂಡಿತ್ಯವಿಲ್ಲದವರು ಪಾಮರರು. ಪಾಪಿಗಳು ಎನ್ನುವ ಮನೋಧರ್ಮ ಪ್ರಚಲಿತದಲ್ಲಿದ್ದಾಗ ಅವರು ಕನ್ನಡದಲ್ಲಿ ವೇದಾಂತದ ಗಹನ ತತ್ತ್ವಗಳನ್ನು ಹೇಳಿದರು. ಕನ್ನಡದಲ್ಲಿಯೇ ಜನಸಾಮಾನ್ಯರು ಮುಕ್ತಿಗೆ ಪೂರ್ವವಾದ ಜ್ಞಾನವನ್ನು ಪಡೆಯಲು ದಾರಿ ಮಾಡಿಕೊಟ್ಟರು. ಅವರು `ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಬೇಡಿ’ ಎಂದರು. ಅವರ ಕೀರ್ತನೆಗಳಲ್ಲಿ ಬಾರದೇ ಇದ್ದ ವಿಚಾರಗಳೇ ಇಲ್ಲ, ಧರ್ಮ, ನೀತಿ, ವೇದಾಂತ, ರಾಜಕಾರಣ, ಅರ್ಥನೀತಿ, ಸಾಮಾನ್ಯನೀತಿ ನೋವು ಎಲ್ಲವೂ ಇದೆ, ಮುಖ್ಯವಾಗಿ ಜೀವನಗಂಗೆಯ ಬೃಹದ್ದರ್ಶನವನ್ನು ಅವರು ತಮ್ಮ ಸಾಹಿತ್ಯದಲ್ಲಿ ಮಾಡಿಸಿದ್ದಾರೆ.

ಪ್ರಸ್ತುತದ ಸಮಾಜೋ-ರಾಜಕೀಯ ಸಂದರ್ಭಗಳ ಸ್ಥಿತ್ಯಂತರದ ಸನ್ನಿವೇಶಗಳಲ್ಲಿ ನಿಂದಕರಿರಬೇಕಿರಬೇಕು! ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ದವು ಹಾಂಗೆ|| ಎನ್ನುವ ಹಾಡು ಹೊಸಬಗೆಯ ಅರ್ಥಸ್ಫುರಣವನ್ನೇ ಒದಗಿಸಿಕೊಡುತ್ತದೆ. ಮೊನಚು ಮಾತಿನ ಈ ಹಾಡು ಕುಂಬಳಕಾಯಿ ಕಳ್ಳರು ಹೆಗಲುಮುಟ್ಟಿ ನೋಡಿಕೊಳ್ಳುವಂತೆ ಮಾತಿನ ಚಡಿಯೇಟು ನೀಡುತ್ತದೆ. ದುಷ್ಟರೊಂದಿಗೆ ನೇರ ಸಂಘರ್ಷಕ್ಕೆ ತೊಡಗಿಕೊಳ್ಳದೆ ಸಂಘರ್ಷದ ನೆಲೆಯನ್ನೇ ಶಕ್ತಿಕೇಂದ್ರವನ್ನಾಗಿಕೊಳ್ಳುವ0ಥ ಅದ್ಬುತ ಜಾಣತನ ಇಲ್ಲಿ ಮೂಡಿಬಂದಿದೆ. ‘ಅಂದ0ದು ಮಾಡಿದ ಪಾಪವೆಂಬೋ ಮಲ ತಿಂದು ಹೋಗುವರಯ್ಯ ನಿಂದಕರು’ ಎನ್ನುವಲ್ಲಿ ಸಾಮಾಜಿಕ ಟೀಕೆ-ಟಿಪ್ಪಣಿಗಳಿಗೆ ನಮ್ಮನ್ನು ನಾವೇ ಒಡ್ಡಿಕೊಳ್ಳುವ ಮನೋದಾರ್ಢ್ಯ ಮತ್ತು ನಮ್ಮ ಕೆಲಸಕಾರ್ಯಗಳಲ್ಲಿ ಪಾರದರ್ಶಕತೆಯನ್ನು ಬೆಳೆಸಿಕೊಳ್ಳಬೇಕೆನ್ನುವುದು ಸೂಚ್ಯವಾಗಿದೆ. ‘ದೃಷ್ಟಜನರು ಈ ಸೃಷ್ಟಿಯೊಳಿದ್ದರೆ ಶಿಷ್ಟಜನರಿಗೆಲ್ಲ ಕೀರ್ತಿಗಳು’ ಎನ್ನುವಲ್ಲಿ ಸತ್ಯಮಾರ್ಗದ ಸಾಮರ್ಥ್ಯವನ್ನು ಹೇಳುತ್ತಲೇ ದಾಸರು ನಿಂದಕರನ್ನು ಲೇವಡಿ ಮಾಡಿಯೂ ಇದ್ದಾರೆ. ಆದರೆ ಈ ಲೇವಡಿ ಕ್ಷಣಿಕವಷ್ಟೇ. ‘ದುರುಳ ಜನಂಗಳು ಚಿರಕಾಲ ಇರುವಂತೆ! ಕರವ ಮುಗಿದು ವರವ ಬೇಡುವೆನು|| ‘ಪರಿಪರಿ ತಮಸಿಗೆ ಗುರಿಯಹರಲ್ಲದೆ| ಪರಮ ದಯಾನಿಧೇ ಪುರಂದರ ವಿಠಲ || ಎಂದು ಕೊನೆಗೊಳ್ಳುವ ಪಂಕ್ತಿಗಳು ಪುರಂದರದಾಸರು ಹೊಂದಿದ್ದ ಜೀವಕಾರುಣ್ಯದ, ದಯೆ, ಮಾನವೀಯತೆ ಮತ್ತು ಸರ್ವೋದಯದ ಅತ್ಯುತ್ಕೃಷ್ಟ ಮಾದರಿಗಳು ಎಂದೇ ಹೇಳಬೇಕಾದೀತು.

ಸಂಗೀತ ಕ್ಷೇತ್ರಕ್ಕೆ ಪುರಂದರದಾಸರ ಕೊಡುಗೆ

ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ ಪುರಂದರದಾಸರು ದಾಸಕೂಟದ ಅರ್ಧ್ವಯುಗಳಾಗಿ ತಮ್ಮ ಹಿರಿಯರಾದ ನರಹರಿತೀರ್ಥರು, ಶ್ರೀಪಾದರಾಯರು ಮತ್ತು ವ್ಯಾಸರಾಯರ ಪರಂಪರೆಯನ್ನನುಸರಿಸಿ ಕೀರ್ತನೆಯ ಮಾದರಿಯಲ್ಲಿ ಪದಗಳನ್ನು ರಚಿಸಿದರು. ಪಲ್ಲವಿ, ಅನುಪಲ್ಲವಿ ಮತ್ತು ಚರಣಗಳ ಇದೇ ಮಾದರಿ ಇಂದಿಗೂ ಕರ್ನಾಟಕ ಶಾಸ್ತ್ರೀಯಯ ಸಂಗೀತದ ಹೂರಣ. ತಮ್ಮ ಹಿರಿಯ ಸಮಕಾಲೀನರಾಗಿದ್ದ ತಾಳ್ಳಪಾಕಂ ಅಣ್ಣಮಾಚಾರ್ಯರನ್ನೂ ಭೇಟಿ ಮಾಡಿದ ಪುರಂದರದಾಸರು, ಅವರ ರಚನೆಗಳಿಂದಲೂ ಪ್ರಭಾವಿತವಾಗಿರುವ ಸಾಧ್ಯತೆಗಳಿಲ್ಲದಿಲ್ಲ. ಹರಿದಾಸ ಸಾಹಿತ್ಯದ ವಿಶಿಷ್ಟ ರೂಪಗಳಾದ ಸುಳಾದಿಗಳು, ಇಂದು ಅನಿಬದ್ದ ಗಾಯನವಾಗಿ ಹಾಡಲ್ಪಡುತ್ತಿರುವ ಉಗಾಭೋಗಗಳನ್ನು ರಚಿಸಿ ಕನ್ನಡ ಸಾಹಿತ್ಯ ಸಂಪದವನ್ನು ಶ್ರೀಮಂತಗೊಳಿಸಿದರು.

ಪುರಂದರದಾಸರ ಕೃತಿಗಳ ರೂಪದಲ್ಲಿಯೇ ಅವರ ವಿವೇಕ ವೈರಾಗ್ಯಶೀಲ ವ್ಯಕ್ತಿತ್ವವು ಕನ್ನಡಿಗರಿಗೆ ಲಭ್ಯವಾಗಿದೆ. ಭಕ್ತಿ ಭಾವ, ಸನ್ನಡತೆ ಸಂಸ್ಕಾರಗಳ ಅವರ ಸಜ್ಜನಿಕೆಯ ಬದುಕಿನ ವಿಶ್ವರೂಪವನ್ನೇ ಅವರ ಕೃತಿಗಳು ತೆರೆದು ತೋರುತ್ತವೆ. ಜನರೊಡನೆ ಬೆರೆತು ಜನಜೀವನವನ್ನು ಹತ್ತಿರದಿಂದ ಕಂಡು0ಡ ಅನುಭವ ಸಂಪತ್ತು, ಹರಿಯನ್ನು ಅನನ್ಯವಾಗಿ ಪ್ರೀತಿಸಿ ಪಡೆದುಕೊಂಡ ಅನುಭವಾ ಸಂಪತ್ತು, ಕನ್ನಡದ ಮನೆಮಾತನ್ನೇ ಕೃತಿಯಾಗಿಸುವ ಕನ್ನಡಿಗ ಕವಿಯ ಹೃದಯ ಸಂಪತ್ತು ಸಾಮಾಜಿಕ ಕಳಕಳಿ ಮತ್ತು ಸರ್ವದ ಉದ್ಧಾರವನ್ನು ಬಯಸುವ ಮನೋಸಂಪತ್ತು ಇವೆಲ್ಲವೂ ಪುರಂದರದಾಸರಲ್ಲಿ ಇದ್ದುದ್ದರಿಂದಲೇ ಅವರು ಇಹವನ್ನು ನಿರಾಕರಿಸದೆ, ಪರತತ್ತ÷್ವದ ಸಾಧನೆಯ ಕಡೆ ಸಾಮಾನ್ಯರನ್ನು ಒಯ್ಯುವ ಸಹೃದಯ ನೇತಾರರಾದರು. ದೈವಭಕ್ತಿಯೇ ಅವರ ಕಾವ್ಯದ ಮೂಲ ಸ್ತೋತ್ರವಾದರೂ ಮಾನವನ ಇಹದ ಬದುಕೇ ಅದರ ಕೇಂದ್ರ ಬಿಂದುವೂ ಆಗಿದೆ. ಈ ಸತ್ಯವನ್ನು ನಾವು ಮನಗಾಣಬೇಕಾದರೆ ಪುರಂದರದಾಸರ ಕೃತಿಗಳ ಅನುಪಮವಾದೊಂದು ಲೋಕದೊಳಗೆ ಮನಃ ಪ್ರವೇಶ ಮಾಡಿ ಅನುಸಂಧಾನ ಗೈಯಬೇಕು.


ಪುಷ್ಯಮಾಸ ಕೃಷ್ಣಪಕ್ಷ ಅಮಾವಾಸ್ಯೆ-ಪುರಂದರದಾಸರು ಇಹಲೋಕವನ್ನು ತ್ಯಜಿಸಿ ಹರಿಪಾದ ಸೇರಿದ ದಿವಸ. ಅವರ ಪುಣ್ಯತಿಥಿಯನ್ನು ಆರಾಧನಾ ದಿನವನ್ನಾಗಿ ಎಲ್ಲೆಡೆಯೂ ಆಚರಿಸಲಾಗುತ್ತಿದೆ. ಸುಮಾರು 450 ವರ್ಷಗಳ ಹಿಂದೆ ಬಾಳಿ ಬದುಕಿದ ಅವರ ಹೆಸರನ್ನು ಇಂದೂ ನಾವು ನೆನೆಸುತ್ತಿರುವುದೆಂದರೆ ಅದಕ್ಕೆ ಕಾರಣ ಅವರ ಸಾಹಿತ್ಯದಲ್ಲಿರುವ ಮೌಲ್ಯ. ಪುರಂದರರ ಸಿರಿವಂತಿಕೆ ಅನನ್ಯ, ಅಪೂರ್ವ. ಹುಟ್ಟಿನಿಂದ ಅವರು ಆಗರ್ಭ ಸಿರಿವಂತರು. ಚಿನ್ನದ ಹರಿವಾಣದಲ್ಲಿ ಉಂಡವರು. ಬೆಳ್ಳಿಯ ಢಾಳಿಯಲ್ಲಿ ನೀರು ಕುಡಿದವರು. ಅಂತಹವರು ಆ ಸಿರಿವಂತಿಕೆಯನ್ನು ಬಿಟ್ಟು ಧರ್ಮ ಸಿರಿವಂತರಾದುದು. ಭಕ್ತಿಯಲ್ಲಿ, ಧರ್ಮದಲ್ಲಿ, ಗಾಯನದಲ್ಲಿ ಅವರಿಗೆ ಸರಿಸಾಟಿಯಾದ ಸಿರುವಂತರು ಮತ್ಯಾರು? ಅಂತಹ ಸರ್ವ ಐಸಿರಿಯ ಸಿರಿ ಪುರಂದರರಿಗೆ ನಮ್ಮ ನಮನ.
ಮನನೋಭಿಷ್ಟ ದಾತಾರಂ ಸರ್ವಾಭಿಷ್ಟ ಫಲಪ್ರದಂ
ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿ.

Related Articles

ಪ್ರತಿಕ್ರಿಯೆ ನೀಡಿ

Latest Articles