ಭಗವಂತನೊಂದಿಗೆ ಹತ್ತಿರದ ನಂಟನ್ನು ಹೊಂದಿದ್ದ ಅಪರೋಕ್ಷ ಜ್ಞಾನಿ, ತಾವಿದ್ದ ಪರಿಸರದಲ್ಲಿ ಭಕ್ತಿರಸ ಪಲ್ಲವಿಸುವಂತೆ ಮಾಡಿ, ವಿಶ್ವಾಸ, ವಾತ್ಸಲ್ಯ, ಭಕ್ತಿ, ಪುಳಕಗಳ ವಿಠಲೋಪಾಸನೆಯನ್ನು ಮಾಡಿದ ನಾರದ ಮಹರ್ಷಿಗಳ ಅಂಶವೇ ಪುರಂದರದಾಸರು.
ಡಾ. ವಿದ್ಯಾಶ್ರೀ ಕಟ್ಟಿ
ಹರಿದಾಸರ ಸ್ಮರಣೆಯೇ ಉತ್ಸವ. ಉತ್ಸಾಹದಿಂದ ಸ್ಮರಣೆ ಮಾಡುವ ಮನಸುಗಳಿಗೆ, ಸಾಧನಜೀವಿಗಳಿಗೆ, ಜಿಜ್ಞಾಸುಗಳಿಗೆ, ಸಜ್ಜನರಿಗೆ, ಸದಾ ಸಂಭ್ರಮ. ಸಾಧನಭೂಮಿ ನಮ್ಮ ಭಾರತ, ಇಂತಹ ಪುಣ್ಯಭೂಮಿಯಲ್ಲಿ ಸಜ್ಜನರನ್ನು, ಪಾಮರರನ್ನು ಉದ್ಧರಿಸಲೆಂದೇ ಋಷಿಗಳು, ಸಂತಮಹ0ತರು ಹರಿದಾಸರುಗಳು ಅವತರಿಸಿದರು. ಅಂತಹ ಹರಿದಾಸರ ಸ್ಮರಣೆ ಕುಲಕೋಟಿ ಉದ್ಧರಣೆ.
ವೇದವ್ಯಾಸರ ಜ್ಞಾನಕಾರ್ಯದ ನೇತೃತ್ವ ವಹಿಸಲೆಂದೇ ವಾಯುದೇವರು ಆಚಾರ್ಯ ಮಧ್ವರಾಗಿ ಅವತರಿಸಿ ಬಂದರು. ಶ್ರೀಮದಾಚಾರ್ಯರ ಭಗವಂತನನ್ನು ಮುಕ್ತಕಂಠದಿ0ದ ಹಾಡುವ, ಭಕ್ತುö್ಯದ್ರೇಕದಿಂದ ಪಾರ್ಥ ಸಖನ ಧ್ಯಾನದಲ್ಲಿ ಮೈಮರೆಯುವ ದ್ವಾದಶಸ್ತೋತ್ರದಿಂದಲೇ ಆರಂಭವಾದ, ಈ ದಾಸೋಹಂ ಎಂಬ ನುಡಿ ದಾಸಸಾಹಿತ್ಯಕ್ಕೆ ಅಮೃತದ ಸಿಂಚನವಾಯಿತು. ನರಹರಿತೀರ್ಥರಿಂದ ಮುಂದುವರಿದ ಈ ದಾಸಾಮೃತ ಹರಿದಾಸರ ಉಸಿರಾಯಿತು.
ಗೀತ ನರ್ತನದಿಂದ ಕೃಷ್ಣನ್ನ ಪೂಜಿಸುವ ಪುರಂದರದಾಸರ0ತಹ ಕೃತಿಗಳನ್ನು ಹಾಡುವುದೇ ಸಂಭ್ರಮ. ದಾಸರು ಹಾಡುಗಳ ದಿಬ್ಬಣ ಹೊರಡಿಸಿ ನಾದಲಯಭಾವದ ರಸದೌತಣ ನೀಡಿದರು. ಇಡೀ ಸಂಗೀತ ಕ್ಷೇತ್ರವನ್ನು ಸಮೃದ್ಧಗೊಳಿಸಿದ ಪಿತಾಮಹರು. ಇದು ಹಾಡಿಂದ ಹಾಡಿಗೆ, ಒಬ್ಬರಿಂದ ಇನ್ನೊಬ್ಬರಿಗೆ, ಮೌಖಿಕ ಪರಂಪರೆಯಾಗಿ ಬಂತು. ಪುರಂದರದಾಸರು ಲಕ್ಷ ಲಕ್ಷ ಹಾಡುಗಳನ್ನು ರಚಿಸಿದ್ದಾರೆಂಬ ಸಂಪ್ರದಾಯದ ಮಾತು ಇದ್ದರೂ ದೊರೆತಿರುವುದು ಅಲ್ಪ. ಈ ಕಾಲಕ್ಕೆ, ಸಜ್ಜನ ಸಮುದಾಯಕ್ಕೆ ಅದು ಸಿಗುತ್ತಿರುವುದು ದಾಸ ಸಾಹಿತ್ಯದ ಮೂಲಕ.
ಈಸಬೇಕು ಇದ್ದು ಜಯಿಸಬೇಕು, ಮಾನವ ಜನ್ಮ ದೊಡ್ಡದು ಅದ ಹಾನಿ ಮಾಡಲುಬೇಡಿ ಹುಚ್ಚಪ್ಪಗಳಿರಾ, ಹಾಗೆಯೇ ಪುರಂದರದಾಸರ ಬಹು ಉಪದೇಶಾತ್ಮಕವಾದ, ಮನೋಜ್ಞವಾದ, ಕೃತಿಗಳಲ್ಲೊಂದು “ಮನವ ಶೋಧಿಸಬೇಕು ನಿಚ್ಚ” ಎಂಬ ಈ ಕೃತಿಯಲ್ಲಿ ಪುರಂದರದಾಸರು ಸಾರ್ವತ್ರಿಕವಾದ ಸಾರ್ವಕಾಲಿಕವಾದ ಉಪದೇಶವನ್ನು, ಮನುಕುಲಕ್ಕೆ ಸಂದೇಶವೊAದನ್ನು ನಮಗೆಲ್ಲರಿಗೂ ನೀಡಿದ್ದಾರೆ. ಸತ್ವಗುಣದ ಉನ್ನತಿಗಾಗಿ ಜೀವಿಯು ಆಧ್ಯಾತ್ಮಿಕ ಜೀವನದಲ್ಲಿ ಮೆಟ್ಟಿಲು ಮೆಟ್ಟಿಲಾಗಿ ಮೇಲೆ ಏರಬೇಕಾದ ಸೂತ್ರವೊಂದನ್ನು ನೀಡಿದ್ದಾರೆ. ಮನನ ಮಾಡಿದಷ್ಟು ವಿವಿಧ ಅರ್ಥಗಳು ತೆರೆದುಕೊಳ್ಳುವ ಕೃತಿ ಇದು.
ಮನವ ಶೋಧಿಸಬೇಕು ನಿಚ್ಚ
ಭಗವಂತನಿಗೆ ನಾವು ಮಾಡಿದ ದ್ವಂದ್ವ ಕರ್ಮಗಳೆಲ್ಲವನ್ನು ಸಮರ್ಪಣೆ ಮಾಡುತ್ತೇವೆಯೋ, ಅದೇ ರೀತಿ ದಿನದಿನವು ಅನುದಿನವು ಪ್ರತಿಯೊಬ್ಬರೂ ನಮ್ಮ ಮನಸ್ಸನ್ನು ನಾವು ಅರಿತುಕೊಳ್ಳಲು ಯತ್ನಿಸಬೇಕು. ಏಕಾದಶೇಂದ್ರಿಯಗಳಲ್ಲಿ ಮನವು ಪ್ರಧಾನವಾದುದು. ಅವು ನಾವು ಮಾಡುವ ಪಾಪಪುಣ್ಯದ ಕೆಲಸಗಳನ್ನು, ಸತ್ಕರ್ಮ ದುಷ್ಕರ್ಮಗಳನ್ನು ನಿರ್ಧರಿಸುತ್ತದೆ. ಅದಕ್ಕಾಗಿ ನಾವು ಮನದಲ್ಲಿ ಹುದುಗಿರುವ ಅರಿಷಡ್ವರ್ಗಗಳನ್ನು, ಅರಿಯಬೇಕು. ನಾವು ಉಪಯೋಗಿಸುವ ಜಲವನ್ನು ಹೇಗೆ ಕೊಳೆ ಇಲ್ಲದಂತೆ ಶೋಧಿಸುತ್ತೇವೆ ಅದರಂತೆ ಕಾಮ ಕ್ರೋಧ ಮದ ಮತ್ಸರ ಇವುಗಳಿಂದ ನಮ್ಮ ಮನವು ಕೊಳಕಾಗದಂತೆ ನಿರ್ಮಲಗೊಳಿಸಿಕೊಳ್ಳಬೇಕು. ಹಾಗೆಯೇ ಅಂದ0ದು ನಾವು ಮಾಡಿದ ಪಾಪ ಕಾರ್ಯಗಳನ್ನು, ಪುಣ್ಯ ಕಾರ್ಯಗಳನ್ನು ತುಲನೆ ಮಾಡಿ ನೋಡಬೇಕು. ಹೇಗೆ ವ್ಯಾಪಾರಿಯು ದಿನದ ಅಂತ್ಯದಲ್ಲಿ ಅಂದಿನ ಆಯವ್ಯಯಗಳನ್ನು ಖರ್ಚು ಆದಾಯಗಳನ್ನು ಹೊಂದಿಸಿ ನೋಡುತ್ತಾನೆಯೋ, ಅದರಂತೆ ನಾವು ಗೈದ ಪಾಪ ಪುಣ್ಯದ ಕೆಲಸಗಳನ್ನು ತೂಗಿ ನೋಡಿದಾಗ ನಮಗೆ ಅರಿವಾಗಿ ನಾವು ನಮ್ಮ ಜೀವನಕ್ರಮವನ್ನು ಸರಿ ಪಡಿಸಿಕೊಂಡು, ಪುಣ್ಯಕಾರ್ಯಗಳನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಬೇಕು ಅಂದು ಉಪದೇಶಿದ್ದಾರೆ.
ಧರ್ಮ ಭಜಿಸಿ
ಈ ಕಾರ್ಯ ಸುಲಭವಾದುದಲ್ಲ. ಅದಕ್ಕೆ ಜ್ಞಾನದ ಅಗತ್ಯವಿದೆ. ಮೊದಲು ಸದಾಚಾರ ಸಂಹಿತೆ ನಿರೂಪಿಸುವಂತೆ ಯಾವುದು ಧರ್ಮ? ಯಾವುದು ಅಧರ್ಮ? ಎಂಬುದನ್ನು ಗುರೂಪದೇಶದಿಂದ, ಅಧ್ಯಯನದಿಂದ, ಮನನದಿಂದ ನಿರ್ಧರಿಸಿಕೊಳ್ಳಬೇಕು. ನಂತರ ಅಧರ್ಮ ಕಾರ್ಯಗಳನ್ನು ನಿರ್ಮೂಲಗೊಳಿಸಿಕೊಳ್ಳಲು ಹೇಗೆ, ಬೇರು ಕತ್ತರಿಸಿದರೆ ವೃಕ್ಷವೇ ಒಣಗಿ ಒಳಗೆ ಹೋಗುವುದು, ಬಿದ್ದು ಹೋಗುವುದು, ಹಾಗೆ ಅಧರ್ಮ ವೃಕ್ಷದ ಬೇರುಗಳು ಯಾವುದೆಂದು ಅರಿತು ಆಚರಿಸುವುದನ್ನು, ಮಾಡುವುದನ್ನು ಬಿಡಬೇಕು.
ಬರೀ ಧರ್ಮದ ಬೇರುಗಳನ್ನು ಕತ್ತರಿಸಿ ಧರ್ಮಮಾರ್ಗ ಯಾವುದೆಂದು ಅರಿತು ಅದರಂತೆ ನಡೆಯಬೇಕು. ನಡೆದಂತೆ ನುಡಿಯಬೇಕು. ಎಲ್ಲಕ್ಕೂ ಮಿಗಿಲಾಗಿ ಹೃದಯದಲ್ಲಿ ಭಕ್ತಿಭಾವ ತುಂಬಿರಬೇಕು. ನವವಿಧ ಭಕ್ತಿಗಳಲ್ಲಿ ತನಗೆ ಸಾಧ್ಯವಾದ ಭಕ್ತಿ ಮಾರ್ಗದಿಂದ ಪರಮಾತ್ಮನನ್ನು ಪೂಜಿಸಬೇಕು ಎಂದು ತಿಳಿಹೇಳಿದ್ದಾರೆ.
ಮನವ ಭಂಗಿಸಿ
ಮನಸ್ಸು ಬಹು ಚಂಚಲ. ಅದು ಸದಾ ವಿಷಯ ಸುಖವನ್ನೇ ಬಯಸುತ್ತದೆ. ಅಂತಹ ಚಂಚಲ ಮನಸ್ಸನ್ನು ನಿಗ್ರಹಿಸಬೇಕು. ಅದಕ್ಕೊಂದು ದಾರಿ ಎಂದರೆ ವಿಷಯಸುಖಗಳಲ್ಲಿ ನಾವು ಮಗ್ನರಾಗದೇ ದೇಹವನ್ನು ಉಪವಾಸ ಅನುಷ್ಠಾನ, ಆಚರಣೆಗಳಿಂದ ದಂಡಿಸಬೇಕು. ಹೀಗೆ ಜ್ಞಾನ ಭಕ್ತಿ ವೈರಾಗ್ಯದಿಂದ ನೆನೆದು ಭಗವಂತನ ದರ್ಶನಕ್ಕಾಗಿ ಹಂಬಲಿಸಿದರೆ, ಅವನ ಸಾಕ್ಷಾತ್ಕಾರಕ್ಕಾಗಿ ಹಾತೊರೆದರೆ, ಕೊನೆಗೊಮ್ಮೆ ಅಪರೋಕ್ಷ ಜ್ಞಾನವಾಗುವುದು. ಭಗವಂತನು ನಮ್ಮ ಹೃದಯ ಕಮಲದಲ್ಲಿ ಬಿಂಬನಾಗಿ ನೆಲೆಸಿರುವನೆಂಬ ಮಹಾತ್ಮ ಜ್ಞಾನ ಉಂಟಾಗುವುದು. ಇಂತು ಸನ್ಮಾರ್ಗದಲ್ಲಿ ನೆಡೆದಾಗ ಕೊನೆಗೊಮ್ಮೆ ಮುಕ್ತಿ ದೊರೆತೇ ದೊರೆಯುತ್ತದೆ. ಪರಮಾತ್ಮ ಇಂತಹ ಸಾತ್ವಿಕ ಜೀವಿಗಳಿಗೆ ಕರುಣಿಸಿ, ಮುಕ್ತಿ ಕೊಟ್ಟೆ ಕೊಡುತ್ತಾನೆ.
ಆತನ ಪುರಂದರವಿಠಲ
ಭಗವಂತನ ಭಕ್ತರಿಗೆ ತೊಂದರೆಗಳು ಉಂಟಾಗುವುದಿಲ್ಲ. ಅವರು ಎಲ್ಲ ಕಷ್ಟಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬಲ್ಲರು. ಭಗವಂತ ಅವರನ್ನ ಕಾಪಾಡುತ್ತಾನೆ. ಆದ್ದರಿಂದ ಅವನೇ ಗತಿ. ಅವನೇ ಮತಿ. ಅವನೇ ಸ್ಥಿತಿ. ಅವನಾದರೋ ಶುದ್ಧ ಚಿನ್ಮಯ ಸ್ವರೂಪ. ಅವನಿಗೆ ಯಾವ ಪಾಪ, ದೋಷದ ಲೇಪಗಳಿಲ್ಲ. ನಿರ್ದೋಷ, ಭಕ್ತವತ್ಸಲ ಪರಮಾತ್ಮನೇ ಮುಕ್ತಿಪ್ರದನು. ಅದನ್ನರಿತು ಅವನಲ್ಲಿ ಭಕ್ತಿಯಿಂದ ಆರಾಧಿಸಿದರೆ ಮುಕ್ತಿಯನ್ನು ಪಡೆಯಿರಿ ಎಂದು, ಪುರಂದರದಾಸರು ಈ ಕೃತಿಯಲ್ಲಿ ಸದ್ಭಕ್ತರಿಗೆ, ನೀತಿ ಮಾರ್ಗವನ್ನು ಸದಾಚಾರವನ್ನು, ಮನಮುಟ್ಟುವಂತೆ ಮನೋಜ್ಞವಾದ ಸಂದೇಶದ ಆಯವ್ಯಯ ಪಟ್ಟಿ (ಬ್ಯಾಲೆನ್ಸ ಶೀಟ್) ವೊಂದನ್ನು ಈ ಕೃತಿಯ ಮೂಲಕ ಅಂದೇ ನೀಡಿದ್ದಾರೆ.
ಸಹಸ್ರಾರು ವರ್ಷಗಳ ಪರಂಪರೆಯ ಕನ್ನಡ ಸಾಹಿತ್ಯದಲ್ಲಿ ದಾಸಸಾಹಿತ್ಯದ ಕೊಡುಗೆ ಅತ್ಯಂತ ಮಹತ್ವದ್ದು. ಅನುಪಮವಾದ ನಾದ ಶೈಲಿಯ, ದಾಸಸಾಹಿತ್ಯ ಐದು ಶತಮಾನಗಳ ಕಾಲ ಕನ್ನಡ ಜನರಿಗೆ ಸಂಸ್ಕಾರ, ಸಂಸ್ಕೃತಿ ಪುಳಕ, ರೋಮಾಂಚನ, ಹಾಗೂ ಸಾಧನೆಗೆ ಅನುವು ಮಾಡಿಕೊಟ್ಟ ದಿವ್ಯ ಸಾಹಿತ್ಯವಾಗಿ ಪರಿಣಮಿಸಿದೆ. ಬಹಳಷ್ಟು ಮಹಿಳೆಯರ ನರನಾಡಿಗಳಲ್ಲಿ ನಿರಂತರ ಹರಿಯುತ್ತಿರುವ ಅಂತರಗ0ಗೆಯಾಗಿದೆ ದಾಸಸಾಹಿತ್ಯ. ನಮ್ಮೊಳಗೆ, ನಮ್ಮೊಡನೆ ಸದಾ ಇರುವ ಆ ದೇವರೇ ನಮ್ಮ ನಿಜವಾದ ಸಖ. ಆ ಸಖನಿಂದಲೇ ನಮಗೆ ಸುಖ ಎಂಬ ಶಾಶ್ವತ ಸತ್ಯವನ್ನು ಅನುಭವಕ್ಕೆ ತಂದು ಕೊಟ್ಟಿದ್ದು ದಾಸಸಾಹಿತ್ಯ.
ನವಕೋಟಿ ನಾರಾಯಣರಾಗಿದ್ದ ಶ್ರೀನಿವಾಸ ನಾಯಕರು ಐಶ್ವರ್ಯದಲ್ಲಿ ನಾರಾಯಣರಾಗಿದ್ದವರು. ನಾನೇ ಶ್ರೀಮಂತನೆ0ಬ ಭಾವದೊಂದಿಗೆ ಅತ್ಯಂತ ಕೃಪಣತನದ ಬುದ್ಧಿಯೂ ಇತ್ತು. ಅಂತಸ್ತಿನಲ್ಲಿ ಉಪ್ಪರಿಗೆ ಮನೆ, ಕೊಪ್ಪರಿಗೆ ಹಣವಿದ್ದ ಭೂಪತಿ, ಸಾಹಿತ್ಯದಲ್ಲಿ ಐದು ಶತಮಾನಗಳ ಕಾಲ ಉಳಿದು ಬಂದ ಅಪೂರ್ವ ದಾಸಸಾಹಿತ್ಯನಿಧಿಯನ್ನು ನೀಡಿದ ಮಹಾತ್ಮರು. ಜ್ಞಾನದಲ್ಲಿ ಸಕಲ ಶಾಸ್ತ್ರಕೋವಿದರಾಗಿ, ಅಪರೋಕ್ಷ ಜ್ಞಾನಿಗಳೆಂದೆನಿಸಿಕೊ0ಡವರು. ಸಂಗೀತ ಕ್ಷೇತ್ರದಲ್ಲಿ ಕರ್ನಾಟಕ ಸಂಗೀತ ಪಿತಾಮಹ ಎಂದೇ ಪ್ರಸಿದ್ಧರು. ಭಕ್ತಿಯಲ್ಲಿ ಭಕ್ತಿ ಸೂತ್ರಗಳನ್ನು ಬರೆದ ನಾರದರ ಅವತಾರವೆನಿಸಿದರು. ಗೀತನರ್ತನದಿಂದ ಕೃಷ್ಣನ ಪೂಜಿಸುವ ಪೂತಾತ್ಮ ಪುರಂದರ ದಾಸರಿವರಯ್ಯ, ದಾಸರೆಂದರೆ ಪುರಂದರದಾಸರಯ್ಯ ಎಂದು ಗುರುಗಳಾದ ವ್ಯಾಸರಾಜರಿಂದಲೇ ಮುಕ್ತ ಪ್ರಶಂಸೆಗೆ ಪಾತ್ರರಾದವರು. ಭಗವಂತನ ಮಹಿಮೆ ತಿಳಿದು ತಮ್ಮ ಲೋಭದಿಂದಾಗಿ ಮುದುಕನ ಅವತಾರದಲ್ಲಿ ಬಂದ ಭಗವಂತನನ್ನು ಅಲೆದಾಡಿಸಿದ ತಪ್ಪನ್ನು ನೆನೆದು ಬಿನ್ನಹಕೆ ಬಾಯಿಲ್ಲವಯ್ಯ' ಎಂದು ಅವನಲ್ಲಿ ದೀನರಾಗಿ ಮೊರೆಯಿಟ್ಟರು. ಹೆಂಡತಿಯಿ0ದ ಸನ್ಮಾರ್ಗದ ದಾರಿ ಕಂಡಿದ್ದರಿ0ದ
ಹೆಂಡತಿ ಸಂತತಿ ಸಾವಿರವಾಗಲಿ’ ಎಂದರು. ತ್ಯಾಗ ವೈರಾಗ್ಯದ ಮೂರ್ತಿಯಾದರು. ತಮ್ಮ ಎಲ್ಲಾ ಆಸ್ತಿ – ಆಕಾಂಕ್ಷೆಗಳ ಮೇಲೆ ಒಂದು ತುಳಸೀದಳ ಹಾಕಿ ಕೃಷ್ಣಾರ್ಪಣ ಎಂದು ಹೇಳಿದರು. ಅವೆಲ್ಲವನ್ನು ದಾನ ಮಾಡಿ ಲಜ್ಜೆ ಬಿಟ್ಟು, ಗೆಜ್ಜೆ ಕಟ್ಟಿ, ತಂಬೂರಿ ಜೋಳಿಗೆ ಹಿಡಿದು, ಮಧುಕರ ವೃತ್ತಿಗೆ ಬಂದರು. ತಂಬೂರಿ ಮೀಟಿದರು, ಭವಾಬ್ಧಿ ದಾಟಿದವರು.