ತುಳಸಿ ಗಿಡವನ್ನು ಪೂಜನೀಯ ಭಾವದಿಂದ ಬೆಳೆಸುತ್ತೇವೆ. ಹಿಂದೂಗಳ ಪ್ರತಿಯೊಬ್ಬರ ಮನೆ ಮುಂದೆ ಇರುವ ತುಳಸಿಗಿಡದಲ್ಲಿ ದೈವದ ಸಾನ್ನಿಧ್ಯವಿದೆ ಎಂಬ ಭಾವನೆ ಎಲ್ಲರದ್ದು. ಆ ನಂಬಿಕೆಗೆ ಅನುಗುಣವಾಗಿ ತುಳಸಿಗಿಡಕ್ಕೆ ದೀಪ ಹಚ್ಚುತ್ತೇವೆ.
ಹಗಲು ಹೊತ್ತಿನಲ್ಲಿ ವಾತಾವರಣದಲ್ಲಿನ ಅನಿಷ್ಟ ಶಕ್ತಿಗಳು ಗುಪ್ತವಾಗಿದ್ದು ಸೂರ್ಯಾಸ್ತದ ಬಳಿಕ ಹೊರಹೊಮ್ಮುತ್ತದೆ. ಇದರಿಂದಾಗಿಯೇ ಸಂಧ್ಯಾಕಾಲದಲ್ಲಿ ದೃಷ್ಟಿ ತಗಲುವುದು, ರಾತ್ರಿ ಕಾಲದಲ್ಲಿ ದುಷ್ಕೃತ್ಯಗಳು ನಡೆಯುವುದು ಸಾಮಾನ್ಯವಾಗಿದೆ. ಇಂಥಹ ತೊಂದರೆಗಳಿಂದ ಪಾರಾಗಲು ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಹಚ್ಚುವುದು, ಊದುಬತ್ತಿ ಉರಿಸುವುದು, ಶಂಖಧ್ವನಿ ಮಾಡುವುದು, ಜಾಗಟೆ, ಗಂಟೆ, ತಾಳ ಬಾರಿಸುವುದು, ಭಜನೆ ಮಾಡುವುದು, ಉಪನಯನವಾದವರು ಸಂಧ್ಯಾವಂದನೆ ಮಾಡುವುದು, ಮುದ್ರೆ ಅಥವಾ ಭಸ್ಮಧಾರಣೆ ಮಾಡುವುದು ಸೂಕ್ತ.
ಗೃಹಿಣಿಯರು ಸಂಜೆಯ ಹೊತ್ತು ಶುಚಿರ್ಭೂತರಾಗಿ ಸೂರ್ಯಾಸ್ತದ ಸಮಯಕ್ಕೆ, ಸರಿಯಾಗಿ ತುಳಸಿಕಟ್ಟೆಯಲ್ಲಿ ತುಳಸಿಯ ಕಡೆಗೆ, ದೀಪ ಜ್ವಾಲೆಯು ಮುಖಮಾಡಿರುವಂತೆ ತುಪ್ಪದ ಅಥವಾ ಎಳ್ಳೆಣ್ಣೆಯ ದೀಪವನ್ನು ಸಾತ್ವಿಕ ಊದುಬತ್ತಿಯನ್ನು ಉರಿಸಿಟ್ಟು ತುಳಸಿಗೆ ಪ್ರದಕ್ಷಿಣೆ ಹಾಕಿ, ನಮಸ್ಕರಿಸಬೇಕು. ತುಳಸಿಯ ಸ್ತೋತ್ರವನ್ನೂ ಹೇಳಬಹುದು.
ಹೀಗೆ ಮಾಡುವುದರಿಂದ ಆ ದೀಪದ ಬೆಳಕಿನಲ್ಲಿ ತುಳಸಿಯು, ತುಳಸಿಕಟ್ಟೆಯ ಹಾಗೂ ಮನೆಯ ಸುತ್ತಲೂ ಅದನ್ನು ಕಣ್ಣಿಗೆ ಗೋಚರವಾಗದ, ಸೂಕ್ಷ್ಮರೂಪದ ಸಂರಕ್ಷಣಾ ಕವಚವನ್ನು ನಿರ್ಮಿಸಿ ಅನಿಷ್ಟ ಶಕ್ತಿಗಳಿಂದ ಜೀವಗಳಿಗೆ ತೊಂದರೆಯಾಗದಂತೆ ರಕ್ಷಣೆ ನೀಡುವುದು.
ದೀಪ ಜ್ಯೋತಿಯ ಸ್ತೋತ್ರವು ಈ ಕೆಳಗೆ ಕಂಡಂತಿರುವುದು
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಃ ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋಸ್ತುತೆ| ದೀಪಜ್ಯೋತಿಃ ಪರಬ್ರಹ್ಮಾ ದೀಪಜ್ಯೋತಿ ರ್ಜನಾರ್ದನಃ ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನಮೋಸ್ತುತೇ||