ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ, “ನಿನ್ನಾ ಒಲುಮೆಯಿಂದ ಪ್ರತಿಷ್ಠಾನಂ (ರಿ)”ಬೆಂಗಳೂರು ಇವರು ನಡೆಸುತ್ತಿರುವ 16 ನೇ ವರ್ಷದ “ಶ್ರೀಮಧ್ವಪುರಂದರೋತ್ಸವ”ದ ಉದ್ಘಾಟನಾ ವೇದಿಕೆಯಲ್ಲಿ ಪಲಿಮಾರು ಮಠದ ತತ್ವ ಸಂಶೋಧನಾ ಸಂಸತ್ತಿನ ಮೂಲಕ ಮಾಧ್ವ ಪೀಠಾಧಿಪಗಳವರ ಆಯ್ದ ನುಡಿಮುತ್ತುಗಳನ್ನು ಸಗ್ರಿ ರಾಘವೇಂದ್ರ ಆಚಾರ್ಯರು ಮತ್ತು ಓಂಪ್ರಕಾಶ್ ರವರು ಸಂಗ್ರಹಿಸಿದ “ಸರ್ವದಾ ಪ್ರತಿಪಾದಯ” ಎಂಬ ಪುಸ್ತಕವನ್ನು ಪರ್ಯಾಯ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀ ಪಾದರು ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.
‘ಶ್ರೀ ಮಧ್ವಪುರಂದರೋತ್ಸವ’ವನ್ನು ಪರ್ಯಾಯ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರೊಂದಿಗೆ ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟನೆ ಮಾಡಿ, ಸನ್ಯಾಸಿಗಳು ಕೊಟ್ಟ ಮದ್ದನ್ನು ಕೊಳ್ಳದ ನಮಗೆ ದಾಸರೆಂಬ ಅಮ್ಮ ಕೊಟ್ಟ ಊಟವನ್ನು ನಮ್ಮೆಲ್ಲರಿಗೂ ಶ್ರೀಕೃಷ್ಣನ ಸನ್ನಿಧಿಯಲ್ಲಿ ಬಡಿಸುತ್ತಿರುವ ಮೈಸೂರು ರಾಮಚಂದ್ರ ಆಚಾರ್ಯರ ಕೊಡುಗೆ ಎಲ್ಲರಿಗೂ ಆದರ್ಶವಾಗಲಿ ಎಂದು ಆಶೀರ್ವಚನ ನೀಡಿದರು.
ಪುತ್ತಿಗೆ ಶ್ರೀಪಾದರು ಮಧ್ವ ತತ್ವವೆಂಬ ಸೂರ್ಯನ ಬೆಳಕಿನಲ್ಲಿ ದಾಸ ತತ್ವವೆಂಬ ಚಂದ್ರನ ಬೆಳಕನ್ನು ನೀಡಿರುವ ದಾಸರನ್ನು ಸ್ಮರಿಸುವ ಅವಕಾಶ ನಮಗೆ ಲಭಿಸಿದೆ ಎಂದು ಅನುಗ್ರಹಿಸಿದರು. ಕಾರ್ಯಕ್ರಮವನ್ನು ಪ್ರತಿಷ್ಠಾನದ ಮೈಸೂರು ರಾಮಚಂದ್ರ ಆಚಾರ್ಯರು ನಿರ್ವಹಿಸಿದರು.