‘ಧರ್ಮ’ ಸಂರಕ್ಷಣೆಯ ಬೇಲಿ ಇದ್ದಂತೆ : ಶ್ರೀ ರಂಭಾಪುರಿ ಜಗದ್ಗುರುಗಳು

ರಂಭಾಪುರಿ ಪೀಠ (ಬಾಳೆಹೊನ್ನೂರು): ಮನುಷ್ಯ ಜೀವನವನ್ನು ಸುಂದರ ಶುದ್ಧಗೊಳಿಸುವುದೇ ಧರ್ಮದ ಮೂಲ ಗುರಿಯಾಗಿದೆ. ಭೋಗ ಮೋಕ್ಷಗಳಿಗೆ ಧರ್ಮವೇ ಮೂಲಾಧಾರವಾಗಿದೆ. ಧರ್ಮ ಎಂಬುದು ಮಾನವ ಸಂರಕ್ಷಣೆಯ ಬೇಲಿ ಇದ್ದಂತೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶ್ರೀ ರಂಭಾಪುರಿ ಪೀಠದಲ್ಲಿ 30ನೇ ವರ್ಷದ ಪೀಠಾರೋಹಣ ವರ್ಧಂತಿ ಅಂಗವಾಗಿ ಫೆಬ್ರುವರಿ 11ರಂದು ಜರುಗಿದ ಶತರುದ್ರ ಯಾಗದ 2ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಎಲ್ಲರನ್ನು ಒಗ್ಗೂಡಿಸುವುದೇ ಭಾರತೀಯ ಸಂಸ್ಕೃತಿಯ ವೈಶಿಷ್ಠö್ಯತೆಯಾಗಿದೆ. ಭಗವಂತನಿತ್ತ ಸಂಪತ್ತು ನಿಜವಾದ ಬಾಳಿನ ಅಮೂಲ್ಯ ಸಂಪತ್ತು. ಭಕ್ತ ಭಗವಂತನೆಡೆಗೆ ಸಾಗಿದಾಗ ಜೀವನ ಪಾವನ ಪುನೀತಗೊಳ್ಳುತ್ತದೆ. ದೇವರು ಎಲ್ಲರಲ್ಲೂ ಇದ್ದಾನೆ. ಆದರೆ ದೇವರಲ್ಲಿ ಎಲ್ಲರೂ ಇಲ್ಲ. ಭೌತಿಕ ಬದುಕಿನಲ್ಲಿ ಬಳಲಿ ಬಂದವರಿಗೆ ಪುಣ್ಯ ತಾಣಗಳು ಶಾಂತಿ ನೆಮ್ಮದಿಯನ್ನು ತಂದು ಕೊಡುತ್ತವೆ. ಬಾಳೆಂಬ ಕಾಯಿಯನ್ನು ಹಣ್ಣಾಗಿಸಿ ಉನ್ನತಿಯತ್ತ ಕರೆದೊಯ್ಯುವುದೇ ಗುರು ಧರ್ಮವಾಗಿದೆ ಎಂದರು.

ಸಮಾರಂಭದಲ್ಲಿ ಪಾಲ್ಗೊಂಡ ಎಮ್ಮಿಗನೂರು ಹಂಪಿ ಸಾವಿರ ದೇವರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸಂಸ್ಕಾರದ ಕೊರತೆಗಳಿಂದಲೇ ಸಮಸ್ಯೆಗಳು ಬೆಳೆಯುತ್ತವೆ. ತತ್ವವನರಿತವನಿಗೆ ಸತ್ಯದ ಬೆಳಕು ಗೋಚರವಾಗುತ್ತದೆ. ಶಿವಾಚಾರ್ಯ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂದರು.

ಕಣ್ವಕುಪ್ಪಿ ಗವಿಮಠದ ಡಾ. ನಾಲ್ವಡಿ ಶಾಂತಲಿ0ಗ ಶ್ರೀಗಳು ಮತ್ತು ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶ್ರೀಗಳು ನೇತೃತ್ವ ವಹಿಸಿದ್ದರು. ಹಾವೇರಿ, ಸಂಗೊಳ್ಳಿ, ಮಸ್ಕಿ, ದೊಡ್ಡಸಗರ, ಅರಗಿನಡೋಣಿ, ಸಿಂಧನೂರು ಶ್ರೀಗಳು ಪಾಲ್ಗೊಂಡಿದ್ದರು.

ಚಿಕ್ಕಮಗಳೂರು ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಎಂ.ಎಸ್. ಚನ್ನಕೇಶವ, ಬೆಂಗಳೂರಿನ ಗುರುಪಾದಯ್ಯ ಹಿರೇಮಠ, ಚಂದ್ರಶೇಖರ ನಾಗರಾಳಮಠ, ಸೌಳಂಗ ಚಂದ್ರಶೇಖರಗೌಡ್ರು, ದಾವಣಗೆರೆ ಶುಭಾ ಈಶ್ವರಪ್ಪ ಶೆಟ್ಟರ, ಲಲಿತಾ ಶಿವಯೋಗಿ ಮೊದಲಾದವರು ಶತರುದ್ರ ಯಾಗ ಪೂಜಾ ಸೇವೆ ಸಲ್ಲಿಸಿದರು.
ವೇದ ವಿದ್ವಾಂಸ ಚನ್ನಬಸವಾರಾಧ್ಯ ಮತ್ತು ಎಲ್ಲಾ ವೈದಿಕ ತಂಡದವರು ರುದ್ರ ಪಠಣ ಮಹಾಪೂಜೆಯಲ್ಲಿ ಪಾಲ್ಗೊಂಡಿದ್ದರು.


ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಜಗದ್ಗುರು ರಂಭಾಪುರೀ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು.

Related Articles

ಪ್ರತಿಕ್ರಿಯೆ ನೀಡಿ

Latest Articles