ಗೋಕಾಕ ತಾಲೂಕಿನ ಮೂಡಲಗಿಯಲ್ಲಿ ನೆಲೆಸಿರುವ ಸಾಹಿತಿ ಪ್ರೊ.ಸಂಗಮೇಶ ಗುಜಗೊಂಡ ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಇದೇ ಮೊದಲ ಬಾರಿಗೆ ಮೂಡಲಗಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿರುವ ಅವರೊಂದಿಗೆ ವೈಬಿ ಕಡಕೋಳ ಸಂದರ್ಶನ ನಡೆಸಿದ್ದು, ಸಂಪೂರ್ಣ ವಿವರ ಇಲ್ಲಿದೆ.
ಮೂಲತಃ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯವರಾದ ಸಂಗಮೇಶ ಗುಜಗೊಂಡವರು 1964 ಆಗಸ್ಟ್ 2 ರಂದು ಮಲ್ಲಪ್ಪ ಮತ್ತು ಮಹಾದೇವಿ ದಂಪತಿಗಳ ಮೊದಲ ಪುತ್ರ. ಬಾಲ್ಯದ ಶಿಕ್ಷಣ ಮನಗೂಳಿಯಲ್ಲಿ ಜರುಗಿತು. ನಂತರ 1987 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ದಾರವಾಡದಲ್ಲಿ ಭೂಗೋಳ ಶಾಸ್ತç ವಿಷಯದಲ್ಲಿ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಶಿಕ್ಷಣ ಪೂರೈಸಿದರು. 1987 ರ ಜುಲೈ 23 ರಿಂದ ಮೂಡಲಗಿಯ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತ ಭೂಗೋಳ ಶಾಸ್ತç ವಿಭಾಗದ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವರು.
ಕನ್ನಡದಲ್ಲಿ ಮಕ್ಕಳ ಸಾಹಿತ್ಯವನ್ನು ಅದರಲ್ಲೂ ಭೂಗೋಳ ಶಾಸ್ತç ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಮಕ್ಕಳ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡು ಅದರಲ್ಲಿಯೇ ಹಲವಾರು ಪ್ರಶಸ್ತಿ, ಸಮ್ಮಾನಗಳಿಗೆ ಪಾತ್ರರಾಗುತ್ತ ಬದುಕನ್ನು ನಡೆಸುತ್ತಿರುವ ಅಪರೂಪದ ವ್ಯಕ್ತಿ. ಮಕ್ಕಳ ಸಾಹಿತ್ಯ ರಚಿಸುವುದಷ್ಟೇ ಅಲ್ಲ ಮಕ್ಕಳ ಸಾಹಿತ್ಯ ಸಮ್ಮೇಳನಗಳಲ್ಲಿ ಕೂಡ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗುಜಗೊಂಡ ಅವರದು ಸೂಕ್ಷö್ಮ ಮನಸ್ಸು. ಶಾಂತ ಸ್ವಭಾವ. ಇವರ ಕವನಗಳು ಮತ್ತು ಕಥೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅಷ್ಟೇ ಅಲ್ಲ ಪ್ರಾಥಮಿಕ ಶಾಲೆಯ ಪಠ್ಯಪುಸ್ತಕಗಳಲ್ಲಿ ಪ್ರಕಟವಾಗುವ ಮೂಲಕ ಮಕ್ಕಳ ಮನಸ್ಸನ್ನು ಆಕರ್ಷಿಸಿವೆ.
*ನಿಮ್ಮ ಬರವಣಿಗೆಯ ಸ್ಪೂರ್ತಿ ಏನು?
ಮೊಟ್ಟ ಮೊದಲು ನಾನು ಗ್ರಾಮೀಣ ಪ್ರದೇಶದಿಂದ ಬಂದವನು. ಸುಮಾರು ನಲವತ್ತು ವರ್ಷಗಳ ಹಿಂದಿನ ಗ್ರಾಮೀಣ ಪ್ರದೇಶಗಳು, ಹಳ್ಳಿಯ ಜೀವನ, ಅಲ್ಲಿಯ ಜನಪದ ಬದುಕು, ಹಳ್ಳಿಯಲ್ಲಿನ ಆಟಗಳು.ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದವು. ಈಗಿನಂತೆ ಆಗ ಟೀವಿ ಮನರಂಜನೆಯ ಮಾಧ್ಯಮಗಳು ಗ್ರಾಮೀಣ ಪ್ರದೇಶದಲ್ಲಿ ಇರಲಿಲ್ಲ. ನನ್ನ ಬಾಲ್ಯದ ಶಿಕ್ಷಣದ ಜೊತೆಗೆ ಗ್ರಾಮೀಣ ಪ್ರದೇಶದ ಬದುಕು ಬರವಣಿಗೆಗೆ ಪ್ರೇರಣೆಯಾಯಿತು. ಆಗಿನ ನನ್ನ ಪ್ರಾಥಮಿಕ ಶಾಲಾ ಶಿಕ್ಷಕರು ನಮಗೆ ಸ್ಪೂರ್ತಿ ಎಂದರೆ ತಪ್ಪಾಗಲಿಕ್ಕಿಲ್ಲ.ಅಮದು ನಮ್ಮ ಗುರುಗಳು ಶಾಲೆಯ ಅವಧಿ ಅಷ್ಟೇ ಅಲ್ಲ ಶಾಲೆ ಬಿಟ್ಟ ನಂತರದ ಅವಧಿಯಲ್ಲಿಯೂ ಕೂಡ ನಮಗೆ ಕಥೆ ಹೇಳುವುದು. ಹಾಡು ಹೇಳಿಸುವುದು. ಪಠ್ಯೇತರ ವಿಷಯಗಳಲ್ಲಿ ಕೂಡ ನಮಗೆ ಹುರುಪು ತುಂಬುವ ಮೂಲಕ ನಮ್ಮಲ್ಲಿನ ವ್ಯಕ್ತಿತ್ವವನ್ನು ಅವರು ಹೊರಹೊಮ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
ಹಾಗಾದರೆ ನಿಮ್ಮ ಬರಹ ಪ್ರಾರಂಭವಾದ ಬಗೆ ಹೇಗೆ?
ಪ್ರಾಥಮಿಕ ಶಾಲೆಯಲ್ಲಿ ನಮಗೆ ಸೂಳೆಭಾವಿ ಅಂತಾ ಮುಖ್ಯ ಗುರುಗಳಿದ್ದರು.ಅವರು ಪ್ರತಿ ಶುಕ್ರವಾರ ಮದ್ಯಾಹ್ನ ಅವಧಿ ಒಂದರಿ0ದ ಏಳನೆಯ ತರಗತಿಯ ಎಲ್ಲ ಮಕ್ಕಳನ್ನು ಒಂದೆಡೆ ಕಲೆ ಹಾಕಿ ಅಲ್ಲಿ ಚರ್ಚಾಕೂಟ ಮತ್ತು ಕಥಾಕೂಟಗಳನ್ನು ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸರತಿಯ ಪ್ರಕಾರ ಬಂದು ಈ ಅವಧಿ ಕಥೆ ಹೇಳುವುದಾಗಲಿ. ಹಾಡು ಹೇಳುವುದಾಗಲಿ.ಹಾಸ್ಯ ಮಾಡುವುದಾಗಲಿ ಈ ರೀತಿ ತಮ್ಮಲ್ಲಿರುವ ಕಲೆಯನ್ನು ಪ್ರಚುರಗೊಳಿಸಬೇಕು. ಇದನ್ನು ಅವರು ಪ್ರತಿ ಮಗು ಪಾಲ್ಗೊಳ್ಳುವಂತೆ ಮಾಡಿದ್ದರು. ಹೀಗಾಗಿ ಇದು ಕೂಡ ನನ್ನ ಬರವಣಿಗೆಗೆ ಪ್ರಭಾವ ಬೀರಿದ ಒಂದು ಅಂಶ ಅಂತಾ ಹೇಳಬಲ್ಲೆ. ಒಟ್ಟಾರೆ ನಮ್ಮ ಬಾಲ್ಯ ಸಮೃದ್ದವಾಗಿತ್ತು ಇದು ಬರವಣಿಗೆಗೆ ಅವಕಾಶ ಒದಗಿಸಿತು.
ಬಾಲ್ಯವೇ ಬರಹಕ್ಕೆ ವೇದಿಕೆ ಹಾಗಾದರೆ ಮೊದಲ ಬರಹ ಪ್ರಕಟಗೊಂಡ ಗಳಿಗೆ ಹೇಗಿತ್ತು?
ಮಕ್ಕಳ ಸಾಹಿತ್ಯಕ್ಕೆ ನಮ್ಮ ಬಾಲ್ಯ ಜೀವನದ ಅನುಭವ ಯಥೇಚ್ಚವಾಗಿ ಕಾರಣ. ನಮ್ಮ ಮನೆಯಲ್ಲಿ ಆಗ ಚಂದಮಾಮ ಮಕ್ಕಳ ಮಾಸಪತ್ರಿಕೆ ತರಿಸುತ್ತಿದ್ದೆವು. ಅದರಲ್ಲಿನ ಕಥೆಗಳನ್ನು ಓದುತ್ತ ಓದುತ್ತ ನಾನು ಕೂಡ ೮ ನೇ ತರಗತಿ ಓದುತ್ತಿರುವಾಗ “ಜಯಶಾಲಿ ಜಾಣ ಮಿತ್ರರು”ಎಂಬ ಕಥೆ ಬರೆದೆ. ಆದರೆ ಅದನ್ನು ಕೆಲವು ದಿನ ಹಾಗೆ ಇಟ್ಟುಕೊಂಡಿದ್ದೆ ಯಾರಿಗೂ ತೋರಿಸಲು ಹೋಗಿರಲಿಲ್ಲ. ಅದು ನನ್ನ ಸಂಕೋಚ ಸ್ವಭಾವಕ್ಕೆ ನಿದರ್ಶನ. ಕೊನೆಗೆ ನಮ್ಮ ಪ್ರೌಡಶಾಲೆಯ ಚಿತ್ರಕಲಾ ಶಿಕ್ಷಕರಿಗೆ ಅದನ್ನು ತೋರಿಸಿದೆ. ಆಗ ಅವರು ಅದನ್ನು ಬಿಜಾಪುರಕ್ಕೆ ತಗೆದುಕೊಂಡು ಹೋಗಿ ಅಲ್ಲಿ ಪ್ರಕಟವಾಗುತ್ತಿದ್ದ ಕರ್ನಾಟಕ ಸಂದೇಶ ಎಂಬ ವಾರಪತ್ರಿಕೆಗೆ ಕೊಟ್ಟಿದ್ದರು. ಆ ವಾರ ಪತ್ರಿಕೆಯವರು ಆ ಕಥೆಯನ್ನು ಧಾರಾವಾಹಿಯಾಗಿ ಮರ್ನಾಲ್ಕು ವಾರ ಪ್ರಕಟವಾಯಿತು. ಆ ಪತ್ರಿಕೆಯನ್ನು ತಂದು ಅವರು ಕೊಟ್ಟಾಗ ನನಗೆ ಆದ ಸಂತಸ ಹೇಳತೀರದ್ದು. ಇದು ಬಾಲ್ಯದ ದಿನಗಳ ನನ್ನ ಬರವಣಿಗೆಯ ಸಂತಸದ ಸಂಗತಿ. ಈ ರೀತಿ ನನಗೆ ಬರಹದ ಒಲವು ಹೆಚ್ಚುತ್ತ ಹೋಯಿತು. ನಂತರ ನಾಡಿನ ಎಲ್ಲ ಪತ್ರಿಕೆಗಳಲ್ಲಿ ನನ್ನ ಬರಹ ಕವಿತೆಗಳು ಪ್ರಕಟವಾಗತೊಡಗಿದವು.
ತಾವು ಭೂಗೋಳ ಶಾಸ್ತç ವಿಷಯದ ಅದರಲ್ಲೂ ಕಾಲೇಜು ಹಂತದ ಭೋಧಕರು.ಮಕ್ಕಳ ಸಾಹಿತ್ಯದ ಕೃಷಿ ಹೇಗನಿಸುತ್ತದೆ.?
ನಿಜ. ನಾನು ಓದಿದ್ದು ಭೂಗೋಳ ಶಾಸ್ತç. ಮಾಡುತ್ತಿರುವುದು ಪದವಿ ಕಾಲೇಜಿನ ಭೂಗೋಳ ವಿಷಯದ ಉಪನ್ಯಾಸಕ ವೃತ್ತಿ. ಇದರಲ್ಲಿ ಮಕ್ಕಳ ಸಾಹಿತ್ಯದ ಕುರಿತು ನನಗೂ ಅನೇಕರೂ ಕೇಳುತ್ತಿರುತ್ತಾರೆ. ಪ್ರೌಢ ಸಾಹಿತ್ಯಕ್ಕಿಂತ ಹೆಚ್ಚು ಮಕ್ಕಳ ಸಾಹಿತ್ಯದ ಆಕರ್ಷಣೆ ಹೇಗೆ ಉಳಿಸಿಕೊಂಡಿರುವಿರಿ ಅಂತಾ. ನನ್ನ ಬಾಲ್ಯದ ದಿನಗಳೇ ಅದಕ್ಕೆ ಕಾರಣ ಯಾರು ಬಾಲ್ಯವನ್ನು ಸ್ವಾತಂತ್ರö್ಯದಿ0ದ ಎಲ್ಲ ರೀತಿಯ ಗ್ರಾಮೀಣ ಹಿನ್ನಲೆಯಲ್ಲಿ ಅನುಭವಿಸುತ್ತಾರೆಯೋ ಅವರಿಗೆ ಇದು ಅಸಾಧ್ಯವಾದುದೇನಲ್ಲ. ನನಗೆ ಮೊದಲಿನಿಂದಲೂ ಮಕ್ಕಳ ಸಾಹಿತ್ಯದಲ್ಲಿ ಆಸಕ್ತಿ ಹೆಚ್ಚುತ್ತಾ ಹೋಯಿತು. ಅದನ್ನು ನಾನು ರೂಢಿಸಿಕೊಂಡೆ ಹೀಗಾಗಿ ಇಂದಿಗೂ ಮಕ್ಕಳ ಸಾಹಿತ್ಯವನ್ನೇ ಬರೆಯುತ್ತಿರುವೆ.
ನಿಮ್ಮ ಬರವಣಿಗೆಯಲ್ಲಿನ ವಿವಿಧ ಪುರಸ್ಕಾರಗಳ ಬಗ್ಗೆ ಮಾಹಿತಿ ನೀಡಿ.
ನನ್ನ ಬರಹಗಳು ಅಂದರೆ ಮಕ್ಕಳ ಕವಿತೆ.ಕಥೆಗಳು ಇಂದು ನಾಡಿನ ಎಲ್ಲ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿವೆ.ಮಹಾರಾಷ್ಟçದ ಕನ್ನಡ ಮೂರನೆಯ ತರಗತಿಯ “ಬಾಲ ಭಾರತಿ” ಪಠ್ಯಪುಸ್ತಕದಲ್ಲಿ ” ಹುಟ್ಟು ಹಬ್ಬ” ಕವಿತೆ ೨೦೦೮ ರಿಂದ ಪ್ರಕಟಗೊಂಡಿದೆ. ಐದನೆಯ ತರಗತಿಯ ಪ್ರಥಮ ಭಾಷೆಯ ಸಿರಿಗನ್ನಡ ಮೊದಲ ಸೆಮಿಸ್ಟರ್ ಪುಸ್ತಕದಲ್ಲಿ ನನ್ನ “ಇನಾಮು ಪತ್ರ” ಕಥೆ ಪ್ರಕಟವಾಗಿದೆ.(೨೦೧೭ರ ವರೆಗೆ). ಆರನೆಯ ತರಗತಿಯ ಕನ್ನಡ ತೃತೀಯ ಭಾಷೆ ಪಠ್ಯ ಪುಸ್ತಕದಲ್ಲಿ “ಪ್ರೀತಿಯೆ ದೇವರು”ಕವಿತೆ ಪ್ರಕಟವಾಗಿದೆ.ಇನ್ನುಳಿದಂತೆ “ನೂರು ನಾಣ್ಯ ನೂರು ಮಾತು” ಮಕ್ಕಳ ಕಥಾ ಸಂಕಲನ. “ಅಮ್ಮಾ ಕೇಳೆ” ಮತ್ತು ” ಮತ್ತೆ ಬಂತು ಚೈತ್ರ” ಕವನ ಸಂಕಲನಗಳು.ಕಳೆದ ವರ್ಷ(೨೦೧೨) “ಸುವರ್ಣ ಸ್ವಾತಂತ್ರö್ಯ ಮತ್ತು ಪಾಪಣ್ಣ ಗುರುಗಳು” ಮಕ್ಕಳ ಕಥಾ ಸಂಕಲನಗಳು ಪ್ರಕಟವಾಗಿದ್ದು. ಇದರಲ್ಲಿ ೧೯೯೬ ರಲ್ಲಿ “ನೂರು ನಾಣ್ಯ ಮೂರು ಮಾತು”ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯಧನ ದೊರೆತಿದ್ದು, ಬನಹಟ್ಟಿಯ ರಾಜ್ಯ ಮಟ್ಟದ ತಮ್ಮಣ್ಣಪ್ಪ ಚಿಕ್ಕೋಡಿ ಮಕ್ಕಳ ಸಾಹಿತ್ಯ ಪುರಸ್ಕಾರ …. ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.