ಬೆಂಗಳೂರಿನ ಶ್ರೀ ಪುರಂದರ ಇಂಟರ್‍ನ್ಯಾಷನಲ್ ಟ್ರಸ್ಟ್ (ರಿ) ವತಿಯಿಂದ 22ನೇ ವರ್ಷದ ಪುರಂದರದಾಸರ ಪುಣ್ಯದಿನದ ಸಂಸ್ಮರಣೆಯಲ್ಲಿ ಅಂಕಣಕಾರ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರಿಗೆ ‘ಸಂಚಾರಿ ಕನಕ ಪುರಂದರ ಪ್ರಶಸ್ತಿ’ ಪ್ರದಾನವನ್ನು ಫೆ. 12 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಪುರಾಣ ಪ್ರಸಿದ್ಧ ತೀರ್ಥಕ್ಷೇತ್ರ ರಂಗಸ್ಥಳದ ಭೂ-ನೀಳಾ ಸಮೇತ ಮೋಕ್ಷ ಶ್ರೀರಂಗನಾಥನ ದಿವ್ಯಸನ್ನಿಧಿಯಲ್ಲಿ ಉಪಸ್ಥಿತ ಭಕ್ತ ಸಮೂಹದ ಸಮ್ಮುಖದಲ್ಲಿ ಆಯೋಜಿಸಿತ್ತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲೇಖಕ ಡಾ.ಗುರುರಾಜ ಅವರು, ಕರ್ನಾಟಕದ ಸಾಂಸ್ಕøತಿಕ ಭೂಮಿಕೆಯಲ್ಲಿ ಎಲ್ಲರೂ ಮೆಚ್ಚುವಂತಹ ಒಂದು ಕವಲೆಂದರೆ ದಾಸ ಸಾಹಿತ್ಯ. ಕನ್ನಡ ಭಾಷೆಯ ಪ್ರಜ್ಞೆ, ಪ್ರಬುದ್ದತೆಗಳಿಗೊಂದು ಸಾಕ್ಷಿಯಾಗಿ, ಜನರು ಆಡುವ ಮಾತನ್ನೇ ಕಾವ್ಯದ ಮೌಲ್ಯಕ್ಕೆ ಏರಿಸಿದವರಾಗಿ, ಸಾಹಿತ್ಯಕ್ಕೆ ಸಂಗೀತದ ಸಾಹಚರ್ಯ ನೀಡಿ ಕರ್ನಾಟಕ ಸಂಗೀತಕೊಬ್ಬ ಗೌರವದ ಗುರುವಾಗಿ, ನೈತಿಕತೆಯ ನೆಲೆಗಟ್ಟಿನಲ್ಲಿ ಭಕ್ತಿ ತತ್ವದ ಪ್ರಚಾರಕನಾಗಿ ‘ದಾಸಸಾಹಿತ್ಯ’ ವನ್ನು ಶ್ರೀಮಂತಗೊಳಿಸಿ, ಆಧ್ಯಾತ್ಮ, ಕಲೆ, ಸಂಸ್ಕøತಿಗಳ ಒಕ್ಕೂಟ ನಿರ್ಮಿಸಿದ ಆಕೃತಿಗಳಲ್ಲಿ ಭವ್ಯವಾದುದು ಪುರಂದರದಾಸರ ವ್ಯಕ್ತಿತ್ವ. ಅವರು ಬಾಳಿದ ಕಾಲವೇ ಹರಿದಾಸ ಸಾಹಿತ್ಯದ ವಸಂತಕಾಲ. ಅಂತರಂಗದ ನಡೆ ದಾಸರ ನುಡಿಕಟ್ಟಿನಲ್ಲಿ ಶಾಬ್ದಿಕ ಕಸರತ್ತಾಗದೆ ಅನುಭೂತಿಯ ಆವಿಷ್ಕಾರವಾಗಿ ಮೂಡಿ ಕನ್ನಡದ ಕನ್ನಡಿಯಲ್ಲಿ ಕಣ್ಣಿಗೆ ಕಟ್ಟುವಂತೆ ಪಡಿಮೂಡಿಸಿದ ಅನನ್ಯ ದೇಸಿ ಪ್ರತಿಭೆ. ಅಂತಹ ಹರಿಶರಣರಿಗೆ ನಮೋ ನಮಃ.ಕನ್ನಡಿಗರ ಆತ್ಮಶಕ್ತಿಯನ್ನು ಸದೃಢಗೊಳಿಸಿದ ಕನಕದಾಸರ ಜೀವನ ಮತ್ತು ಸಾಧನೆ ಬತ್ತಲಾರದ ಗಂಗೆ ಸವೆಯಲಾರದ ಮಹಾಪರ್ವತ. ಸಾವಿಲ್ಲದ ಸಾಹಿತ್ಯದ ಮೂಲಕ ಚಿರಂತನ ಮೌಲ್ಯಗಳನ್ನು ನೀಡಿರುವ ಕನಕದಾಸರು ಮಾನವಕುಲ ಸಾಮರಸ್ಯ ಮತ್ತು ಸಮೃದ್ಧಿಯ ಸೆಲೆಯಾಗಬೇಕೆಂಬ ಕನಸು ಕಂಡವರು. ಆ ಕನಸಿನ ನನಸ್ಸಿಗಾಗಿ ಹೋರಾಡಿದವರು. ದೇಸಿಯ ಸತ್ವ-ತತ್ವದ ನೆಲೆ-ಬೆಲೆಯನ್ನು ತೆರೆದು ತೋರಿಸಿದವರು. ಜೀವನದಲ್ಲಿ ಕಷ್ಟ-ಸುಖಗಳೆಲ್ಲ ಬರುತ್ತವೆ. ಲೌಕಿಕ ಸುಖದ ಸುತ್ತಲೇ ಸಾಮಾನ್ಯರ ತಿಳಿವಳಿಕೆ ಸುತ್ತುತ್ತದೆ. ಇವುಗಳ ನಶ್ವರತೆ ತಿಳಿಯುವುದೇ ನಿಜವಾದ ಆಧ್ಯಾತ್ಮ’ ಎಂದು ಅಭಿಪ್ರಾಯಪಟ್ಟರು .
ಇದೇ ಸಂದರ್ಭದಲ್ಲಿ ಕರುನಾಡ್ ಸೆಂಟರ್ ಫಾರ್ ಫರ್ಮಾನಿಂಗ್ ಆರ್ಟ್ಸ್ ನಿಧಾಗ್ ಕರುನಾಡ್ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ -ಗಾಯನ- ಭರತನಾಟ್ಯ – ಕೋಲಾಟ ಹಾಗೂ ಹಿರಿಯ ನಾಗರಿಕರಿಗೆ ಗೌರವ ಸರ್ಮಪಣೆ ನಡೆಯಿತು. ಸಂಸ್ಥೆಯ ರೂವಾರಿ ಮೋಹನ್ ಕುಮಾರ್ , ಪರಿಮಳ ರಾಮಕೃಷ್ಣ ರಾವ್ ಮೊದಲಾದವರು ಉಪಸ್ಥಿತರಿದ್ದರು.