ಮಲೆನಾಡ ಮಡಿಲಿನ ಹರಿಹರಪುರದ ಶ್ರೀ ಶಾರದ ಪೀಠ

ಶೃಂಗೇರಿಯ ಹತ್ತಿರದಲ್ಲೇ ಇರುವ ಶಂಕರಾಚಾರ್ಯರಿಂದ ಸ್ಥಾಪಿತವಾದ ಮತ್ತೊಂದು ಪೀಠವಿದೆ. ಅದುವೇ ಹರಿಹರಪುರದ ಶ್ರೀ ಲಕ್ಷ್ಮೀನರಸಿಂಹ ಶಾರದಾ ಪೀಠ.

*ಶ್ರೀನಿವಾಸ ಮೂರ್ತಿ ಎನ್ ಎಸ್

ನಾಡಿನಲ್ಲಿ ದೇವಿಯ ಅರಾಧನೆಗೆ ಒಂದು ವಿಶೇಷ ಆದ್ಯತೆ ಇದೆ.  ನಾಡಿನ ಬಹುತೇಕ ದೇವಿಯ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಇಂತಹ ದೇವಿಯ ದೇವಾಲಯಗಳಲ್ಲಿ ಶ್ರೀ ಚಕ್ರದ ಆರಾಧನೆ ನಡೆದು ಬಂದಿದೆ.  ಶ್ರೀ ಶಂಕರಾಚಾರ್ಯರು ನಾಲ್ಕು ದಿಕ್ಕಿನಲ್ಲಿ ಪೀಠ ಸ್ಥಾಪಿಸಲು ಪ್ರವಾಸ ಮಾಡುವಾಗ ನಾಡಿನ ಹಲವು ಸ್ಥಳಗಳಿಗೆ ಭೇಟಿ ನೀಡಿ ತಮ್ಮ ಅಧ್ಯಾತ್ಮದ ಚಿಂತನೆಯನ್ನ ಪಸರಿಸಿದ್ದಾರೆ.  ಆ ಸಮಯದಲ್ಲಿ ಹಲವು ಸ್ಥಳಗಳ ಪ್ರಶಾಂತತೆ, ಭಕ್ತಿ ಮತ್ತು ಅಧ್ಯಾತ್ಮತೆಯ ಪರಿಸರಕ್ಕೆ ಮನಸೋತರೂ ಪೀಠ ಸ್ಥಾಪಿಸುಲು ಪೂರಕವಾದ ಪರಿಸರ ಕಾಣದ ಕಾರಣ ಅಲ್ಲಿ ಶ್ರೀ ಚಕ್ರವನ್ನು ಪ್ರತಿಷ್ಠಾಪಿಸಿ ಅದನ್ನು ಪೂಜಿಸಲು ಅರಾಧಿಸಲು ಬಿಟ್ಟು ಹೋಗುತ್ತಾರೆ. ಅಂತಹ ಶ್ರೀ ಶಂಕರಾಚಾರ್ಯರಿಂದ ಸ್ಥಾಪಿಸಿಲ್ಪಟ್ಟ ಶ್ರೀಚಕ್ರಗಳು ದೇಶದ ಹಲವೆಡೆ ಪೂಜಿಸಲ್ಪಡುತ್ತಿದ್ದು ಕರ್ನಾಟಕದಲ್ಲೂ ಅವು ಪೂಜೆಗೊಳ್ಳುತ್ತಿವೆ.  

ಅಂತಹ ಪ್ರಮುಖ ಕ್ಷೇತ್ರಗಳೆಂದರೆ ಶೃಂಗೇರಿ ಮತ್ತು ಕೊಲ್ಲೂರು. ಶೃಂಗೇರಿಯ ಹತ್ತಿರದಲ್ಲೇ ಇರುವ ಶಂಕರಾಚಾರ್ಯರಿಂದ ಸ್ಥಾಪಿತವಾದ ಮತ್ತೊಂದು ಪೀಠವಿದೆ. ಅದುವೇ ಹರಿಹರಪುರದ ಶ್ರೀ ಲಕ್ಷ್ಮೀನರಸಿಂಹ ಶಾರದಾ ಪೀಠ. ಇಲ್ಲಿಯೂ ಶ್ರೀ ಶಂಕರಾಚಾರ್ಯರಿಂದ ಸ್ಥಾಪಿಸಿಲ್ಪಟ್ಟ ಶ್ರೀ ಚಕ್ರವಿದ್ದು  ಸಂಭ್ರಮದ ಪೂಜೆ ನಡೆಯುತ್ತದೆ. ನಾಡಿನ ಪ್ರಮುಖ ಶಾರದಾ ಪೀಠವೆಂದೇ ಇದು ಗುರುತಿಸಿಕೊಂಡಿದೆ.

ಇಲ್ಲಿನ ಸ್ಥಳೀಯ ಪುರಾಣದಂತೆ ಶ್ರೀ ಅಗಸ್ತ್ಯ ಮಹರ್ಷಿಗಳು ಇಲ್ಲಿ ತಪೋನಿರತರಾಗಿದ್ದು ಇಲ್ಲಿನ ತುಂಗಾನದಿಯ ತಟದ ಸುಂದರ ಪರಿಸರಕ್ಕೆ ಮನಸೋತು ತಾವು ಪೂಜಿಸುತ್ತಿದ್ದ ಶ್ರೀ ಲಕ್ಷ್ಮೀನರಸಿಂಹದ ಚಿಕ್ಕ ಸಾಲಿಗ್ರಾಮ ಮೂರ್ತಿಗಳನ್ನು ತಮ್ಮ ಶಿಷ್ಯ ಶ್ರೀ ಗೋವಿಂದ ಯೋಗಿಗಳಿಗೆ ನೀಡಿ ತೆರಳಿದರು ಎಂಬ ನಂಬಿಕೆ ಇದೆ.  ಈಗಲೂ ಶ್ರೀ ಲಕ್ಷ್ಮೀನರಸಿಂಹ ಮೂರ್ತಿಗಳು ಪೂಜಿಸಲ್ಪಡುತ್ತಿದೆ.

ಇನ್ನು ನಂತರ ಕಾಲದಲ್ಲಿ ಶ್ರೀ ಶಂಕರಾಚಾರ್ಯರು ದಕ್ಷಿಣದಲ್ಲಿ ಪೀಠ ಸ್ಥಾಪನೆಗೆ ಜಾಗ ಅರಸುತ್ತ ಸಂಚಾರ ಮಾಡುತ್ತ ಇರುವಾಗ ಶೃಂಗೇರಿಗೆ ತೆರೆಳುವ ಮುನ್ನ ಹರಿಹರಪುರದ ತುಂಗಾನದಿಯ ತೀರದ ಸುಂದರ ಪರಿಸರದಲ್ಲಿ ಇರುವ ಈ ಕ್ಷೇತ್ರಕ್ಕೆ ಮನಸೋತರು. ಆ ಸಮಯದಲ್ಲಿ ಅಲ್ಲಿ ಸಾಲಿಗ್ರಾಮ ಸ್ವರೂಪದ ನರಸಿಂಹ ದೇವರ ಪೂಜೆ ನಿರ್ವಹಿಸುತ್ತಾ ಇದ್ದ ಶ್ರೀ ಕೃಷ್ಣ ಯೋಗಿಂದ್ರರ ಸನ್ನಿಧಾನದಲ್ಲಿ ಅವರ ಕೋರಿಕೆಯಂತೆ ತಂಗುತ್ತಾರೆ. ಶಂಕರಾಚಾರ್ಯರ ಉದ್ದೇಶ ಅರಿತ ಕೃಷ್ಣ ಯೋಗಿಂದ್ರರು ಇಲ್ಲಿಯೂ ಶ್ರೀಚಕ್ರ ಪತ್ರಿಷ್ಟಾಪಿಸುವಂತೆ ಕೋರುತ್ತಾರೆ. ಇಲ್ಲಿನ ಅಧ್ಯಾತ್ಮ ಪರಿಸರಕ್ಕೆ ಮನಸೋತ ಶ್ರೀ ಶಂಕರಾಚಾರ್ಯರು ತಮ್ಮ ಅಧಿದೇವತೆಯಾಗಿದ್ದ ಶ್ರೀ ಶಾರದಾ ಮಾತೆಯನ್ನು ಶ್ರೀ ಚಕ್ರದ ಮೂಲಕ ಸ್ಥಾಪಿಸಿ ಅದರ ಉಪಾಸನೆಯ ನಿರ್ವಹಣೆಯನ್ನು ಶ್ರೀಕೃಷ್ಣ ಯೋಗೀಂದ್ರರಿಗೆ ಒಪ್ಪಿಸಿ ಮುಂದೆ ಶೃಂಗೇರಿಗೆ ಪ್ರಯಾಣ ಬೆಳಸಿದರು.

ಹೀಗೆ ಸ್ಥಾಪಿತವಾದ ಶ್ರೀ ಕ್ಷೇತ್ರದಲ್ಲಿ ಶೃಂಗೇರಿಯಲ್ಲಿ ಪೀಠದ ಪ್ರಥಮ ಪೀಠಾಧೀಶರಾದ ಶ್ರೀ ಸುರೇಶ್ವಾರಾಚಾರ್ಯರು ಶ್ರೀ ಕೃಷ್ಣ ಯೋಗೀಂದ್ರರಿಗೆ ಸಂನಾಸ್ಯ ದೀಕ್ಷೆ ನೀಡಿ ಇಲ್ಲಿ ಶ್ರೀ ಶಾರದಾ ಪೀಠವನ್ನು  ಸ್ಥಾಪನೆ ಮಾಡಿದರು. ಹೀಗೆ ಸ್ಥಾಪನೆಯಾದ ಕ್ಷೇತ್ರದಲ್ಲಿ ಇಂದಿಗೂ ಪೂಜೆ ನಡೆಯುತ್ತಿದೆ. ಇಲ್ಲಿ ನರಸಿಂಹ ದೇವರು ಇದ್ದ ಕಾರಣ ಈ ಕ್ಷೇತ್ರಕ್ಕೆ ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಶ್ಮೀನರಸಿಂಹ ಪೀಠ ಎಂದೇ ಹೆಸರು ಬಂದಿತು.

ಇನ್ನು ಇಲ್ಲಿ 8 ನೇ ಶತಮಾನದಿಂದ ಆರಂಭವಾಗಿ ಗುರುಪರಂಪರೆಯ ಪದ್ದತಿ ನಡೆದು ಬಂದಿದ್ದು ಈಗ ಇಲ್ಲಿ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿಗಳು 25 ನೇ ಪೀಠಾಧೀಶರಾಗಿದ್ದಾರೆ.  ಹಿಂದಿನ ಗುರುಗಳು ತಮ್ಮ ಉತ್ತರಾಧಿಕಾರಿ ನೇಮಿಸ ಕಾರಣ ಶ್ರೀ ಶೃಂಗೇರಿ ಸ್ವಾಮೀಜಿಗಳಿಂದ ಉತ್ತರಾಧಿಕಾರಿಯಾಗಿ ನೇಮಕಗೊಂಡ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿಗಳು ಮೂಲತಹ ಶೃಂಗೇರಿ ಸಮೀಪದ ಉಳುವೆ ಗ್ರಾಮದವರು. ತಾಂತ್ರಿಕ ವಿಜ್ಞಾನದಲ್ಲಿ ಪದವಿ ಪಡೆದು ಸೇವೆ ಸಲ್ಲಿಸುವಾಗ ರಾಮಕೃಷ್ಣ ಆಶ್ರಮದ ಸಂಪರ್ಕದಲ್ಲಿ  ಆಧ್ಯಾತ್ಮದ ನೆಲೆಯನ್ನ ಕಂಡುಕೊಂಡು ನಂತರ ಶೃಂಗೇರಿಯಲ್ಲಿ ಹೆಚ್ಚಿನ ವೇದ ಅಧ್ಯಯನ ಪಡೆದರು. 

ಪ್ರಸ್ತುತ ಶ್ರೀ ಮಠದ ಅಭ್ಯುದಯಕ್ಕೆ ಮರೆಯಾಗುತ್ತಿರುವ ಗುರು ಕುಲದ ಪರಿಕಲ್ಪನೆಯನ್ನು ಆಧುನಿಕ ಕಾಲಕ್ಕೆ ಹೊಂದಿಸಿ ಮರಳಿ ತರುವ ಕಾಯಕಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಡೀ ದೇವಾಲಯವನ್ನು ಶಿಲಾಮಯವಾಗಿ ಪುನರ್ ನಿರ್ಮಾಣ ಮಾಡಿದ್ದು ವೇದ ಪಾಠಶಾಲೆ ಮುಂತಾದ ಕಾರ್ಯಕ್ರಮಗಳಿಂದ ಹಳೆಯ ಶ್ರೀ ಮಠಕ್ಕೆ ಹೊಸ ಸ್ಪರ್ಶ ನೀಡಿದ್ದಾರೆ.

ಇನ್ನು ಇತಿಹಾಸ ಪುಟದಲ್ಲಿಇದಕ್ಕೆ ಕಪಾಲಂ ಎಂಬ ಹೆಸರು ಇತ್ತು. ಬಹುಷಹ ಕಪಾಲಿಕರು ಪ್ರಭಾವದಿಂದ ಈ ಹೆಸರು ಬಂದಿರಬಹುದು. ಸುಮಾರು 14 ನೇ ಶತಮಾನದಲ್ಲಿ ವಿಜಯನಗರದ ಹರಿಹರನ ಕಾಲದಲ್ಲಿ ಇಲ್ಲಿ ಅಗ್ರಹಾರವನ್ನು ನಿರ್ಮಿಸಿ ಈ ಅಗ್ರಹಾರಕ್ಕೆ ಹರಿಹರಿಹಪುರ ಎಂಬ ಹೆಸರು ಇರಿಸಿ ವಿವಿಧ ದಾನ ಹಾಗು ದತ್ತಿ ನೀಡಿದ ಉಲ್ಲೇಖ ನೋಡಬಹುದು. ಇನ್ನು ಇಲ್ಲಿನ ಮಾಧಾವೇಶ್ವರ ದೇವಾಲಯದಲ್ಲಿ ವಿಜಯನಗರದ ಶಾಸನಗಳಿದ್ದು ಆ ಕಾಲದಲ್ಲಿ ಈ ಗ್ರಾಮಕ್ಕೆ ದತ್ತಿ ನೀಡಿದ ಉಲ್ಲೇಖ ನೋಡಬಹುದು. ಇನ್ನು ಇಲ್ಲಿ ವರದ ವೆಂಕಟರಮಣ ದೇವಾಲಯ ಸಹ ಇಲ್ಲಿ ಇದೆ. ಇಲ್ಲಿ ಒಂಬತ್ತು ಸುತ್ತಿನ ಪಾಳು ಬಿದ್ದ ಕೋಟೆ ಇದ್ದು ಇಲ್ಲಿನ ಪಾಳೇಗಾರ ರಂಗನಾಥನಿಂದ ನಿರ್ಮಾಣವಾಗಿದೆ.

ದಸರೆಯಲ್ಲಿ ಇಲ್ಲಿ ವಿಶೇಷ ಪೂಜೆ ನಡೆಯಲ್ಲಿದ್ದು ಪ್ರತಿದಿನವೂ ಶ್ರೀ ಶಾರದಾ ಮಾತೆಗೆ ಪ್ರತಿ ದಿನವೂ ವಿಶೇಷ ವಾಹನದೊಂದಿಗೆ ಅಲಂಕಾರ ಮಾಡುವುದು ವಿಶೇಷ.

ತಲುಪವ ಬಗ್ಗೆ: ಶಿವಮೊಗ್ಗ – ಕೊಪ್ಪ ಮಾರ್ಗವಾಗಿ ಶೃಂಗೇರಿಗೆ ಹೋಗುವಾಗ ಕೊಪ್ಪದಿಂದ ಸುಮಾರು 10 ಕಿಮೀ ದೂರದಲ್ಲಿದೆ. ಬೆಂಗಳೂರು – ಶೃಂಗೇರಿ ಮಾರ್ಗವಾಗಿ ಬರುವುದಾದರೆ ಕೊಪ್ಪ – ಶಿವಮೊಗ್ಗ ಮಾರ್ಗದಲ್ಲಿ ಸುಮಾರು 18 ಕಿಮೀ ದೂರದಲ್ಲಿ ಈ ಊರನ್ನು ತಲುಪವಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles