*ವೈ ಬಿ ಕಡಕೋಳ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕು ಕೇಂದ್ರ ಈಗ ಇದು ಸವದತ್ತಿ ಎಲ್ಲಮ್ಮಾ ಕ್ಷೇತ್ರವೆಂದೂ ಹೆಸರಾಗಿದೆ. ಬೆಳಗಾವಿ ಜಿಲ್ಲಾ ಕೇಂದ್ರದಿ0ದ 88 ಕಿ.ಮೀ, ಧಾರವಾಡ ಜಿಲ್ಲಾ ಕೇಂದ್ರದಿ0ದ 38 ಕಿ.ಮೀ. ಅಂತರದಲ್ಲಿದ್ದು ತಾಲೂಕು ಕೇಂದ್ರವಾಗಿ ಮಲಪ್ರಭಾ ನದಿ ದಡದಲ್ಲಿನ ತಾಣವಾಗಿ ಯಲ್ಲಮ್ಮಾ ದೇವಾಲಯ ನವಿಲುತೀರ್ಥ ಆಣೆಕಟ್ಟು, ಮುನವಳ್ಳಿ ಸಕ್ಕರೆ ಕಾರ್ಖಾನೆ, ಸಿರಸಂಗಿ ಲಿಂಗರಾಜರ ವಾಡೆ, ಕಾಳಿಕಾದೇವಿ ದೇವಾಲಯ, ಮುನವಳ್ಳಿ ಪಂಚಲಿ0ಗೇಶ್ವರ.ದಕ್ಷಿಣ ಕಾಶಿ ಹೂಲಿ.ಎಕ್ಕೇರಿ ವರವಿಕೊಳ್ಳ. ಅನೇಕ ಪ್ರಸಿದ್ದ ತಾಣಗಳನ್ನು ಹೊಂದಿದ ತಾಲೂಕಾ ಕೆಂದ್ರ.
ಇದನ್ನು ಹಿಂದೆ “ಪರಸಗಡ” ವಿಧಾನಸಭಾ ಕ್ಷೇತ್ರವೆಂದೂ ಕರೆಯುತ್ತಿದ್ದರು. ಅಂದರೆ ಇಲ್ಲಿ ಮರಾಠರ ಆಳ್ವಕೆಯ ಕಾಲದಲ್ಲಿ ಇದು ತೊರಗಲ್ ನಾಡಿನ ಒಂದು ಭಾಗವಾಗಿ ಬೆಟ್ಟದ ಮೇಲೊಂದು ಕೋಟೆಯಿದ್ದು ಇದನ್ನು ಪರಸಗಡ ಕೋಟೆ ಎಂದೂ ಹೇಳುವರು. ಇದು ಛತ್ರಪತಿ ಶಿವಾಜಿಗೆ ಸೇರಿದ್ದು(೧೬೭೪) ನಂತರ ಸವಣೂರಿನ ನವಾಬರಿಗೆ ಸೇರಿದ ಬಗ್ಗೆ ದಾಖಲೆಗಳಿವೆ. ಇದು ನಿಸರ್ಗದತ್ತವಾದ ಗಗನಚುಂಬಿಯ0ಥಹ ಬಂಡೆಗಳು ಕೋಡೆಯೊಳಗಡೆ ಗವಿಗಳು ಅವುಗಳಲ್ಲಿ ಜಿನುಗುವ ನೀರಿನ ಝರಿಗಳ ಮೂಲಕ ಆಕರ್ಷಣೀಯವಾಗಿದೆ. ಇಲ್ಲಿ ಎರಡು ಕೋಟೆಗಳಿವೆ ಒಂದು ಪರಸಗಡ ಕೋಟೆಯಾದರೆ ಇನ್ನೊಂದು ದೇಸಾಯರ ಆಳ್ವಕೆಯ ಕಾಲದ ಗ್ರಾಮದೊಳಗಿನ ಕೋಟೆ.
ಇಲ್ಲಿ ಗಜಾನನ ದೇವಸ್ಥಾನ ಕಟ್ಟಿ ಓಣಿ ದೇಸಾಯಿ ಗಲ್ಲಿಯಲ್ಲಿದೆ. ಈ ದೇವಸ್ಥಾನವು ಬಹಳ ಪ್ರಸಿದ್ದಿಯಾಗಿದ್ದು ವೈಶಿಷ್ಟö್ಯಪೂರ್ಣವಾಗಿದೆ. ಸುಮಾರು ಇನ್ನೂರು ವರ್ಷಗಳ ಹಿಂದೆ ಈ ಸ್ಥಳದಲ್ಲಿ ಇದ್ದು ಉದ್ಭವ ಗಣಪತಿಯಾಗಿದ್ದು ಕಟ್ಟಿ ಮನೆತನದವರು ಪೂಜಿಸುತ್ತ ಬಂದಿರುವರು
ಮೊದಲು ಇಲ್ಲಿ ತುಳಸಿ ಬನವಿತ್ತು. ತುಳಸಿ ಬನದಲ್ಲಿ ಈ ಉದ್ಭವ ಗಣಪತಿ ದರ್ಶನ. ಇಲ್ಲಿ ಹತ್ತಿರದಲ್ಲಿ ರಾಘವೇಂದ್ರ ಮಠವಿದ್ದು, ಅದರ ಅರ್ಚಕರ ಸ್ವಪ್ನದಲ್ಲಿ ಗಣೇಶನ ಇರುವಿಕೆಯ ಕುರಿತು ಕಂಡ ಕನಸನ್ನು ಅನುಸರಿಸಿ ತುಳಸಿ ಬನದಲ್ಲಿ ನೋಡಿದಾಗ ಈ ಉದ್ಭವ ಗಣಪತಿ ಕಂಡ ಆ ಮನೆತನದವರು ಅಲ್ಲಿ ಪ್ರತಿನಿತ್ಯವೂ ಪೂಜಾ ಕಾರ್ಯ ನೆರವೇರಿಸತೊಡಗಿದರು.
ನಂತರ ಆ ಮನೆತನದವರು ತಮ್ಮ ಭಕ್ತಿಯ ಸಮರ್ಪಣೆಯ ಜೊತೆಗೆ ಕಷ್ಟ ಕಾಲದಲ್ಲಿ ಈ ಗಣಪತಿಯನ್ನು ನೆನೆದು ತಮ್ಮ ಕಷ್ಟ ಪರಿಹರಿಸೆನುತ ಬೇಡಿಕೊಳ್ಳಲು ತಮಗೆ ಒದಗಿದ ಕಷ್ಟಗಳು ಪರಿಹಾರವಾಗತೊಡಗುತ್ತ ಬರತೊಡಗಿದವು.
ಹೀಗೆ ಅಕ್ಕಪಕ್ಕದ ಜನರಿಗೆ ಈ ಗಣಪತಿಯ ಕುರಿತು ಇಷ್ಟಾರ್ಥಸಿದ್ದಿ ಎಂಬ ಸಂದೇಶ ಪ್ರಾಪ್ತವಾಗಿ ಅನೇಕರು ತಮ್ಮ ಭಕ್ತಿಯ ಕೋರಿಕೆಗಳನ್ನು ಬೇಡಿಕೊಂಡು ಅದರಿಂದ ಫಲವನ್ನು ಹೊಂದಿ ಗಣಪತಿಗೆ ಅಭಿಷೇಕ ವಿಶೇಷ ಪೂಜೆ ಮಾಡಿಸುತ್ತ ಬರತೊಡಗಿದರು. ಗಣಪತಿ ಇರುವ ಸ್ಥಳದಲ್ಲಿ ಕಾಲಕ್ರಮೇಣ ಪುಟ್ಟದಾದ ದೇವಾಲಯವನ್ನು ಅಂದಿನ ಹಿರಿಯರು ನಿರ್ಮಿಸಿಕೊಂಡರು. 2000 ರಲ್ಲಿ ಈ ಹಳೆಯ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ನೂತನ ದೇವಸ್ಥಾನ ಕಟ್ಟಲಾಯಿತು. ಈ ಗಣಪತಿ ಭಕ್ತರ ಹರಕೆಗಳನ್ನು ಈಡೇರಿಸುತ್ತಾ ತನ್ನದೆ ಆದ ಶಕ್ತಿಯಿಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೇವಸ್ಥಾನವಾಗಿ ಇಂದಿಗೂ ಜನಜನಿತವಾಗಿದೆ.
ಈ ದೇವಸ್ಥಾನದಲ್ಲಿ ಸೋಮವಾರರಂದು ಗಣೇಶ ಜಯಂತಿ ಆಚರಿಸಲಾಯಿತು. ಈ ನಿಮಿತ್ಯವಾಗಿ ಗಜಾನನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮುಂಜಾನೆ ಪಂಚಾಮೃತ ಅಭಿಷೇಕ, ಮೂರ್ತಿಗೆ ಪುಷ್ಪಾಲಂಕಾರ ನಂತರ ಮಹಾ ಮಂಗಳಾರತಿ, ಗಜಾನನ ತೋಟ್ಟಿಲೋತ್ಸವವವನ್ನು ದೇವಸ್ಥಾನದ ಅರ್ಚಕರಾದ ಧೀರೇಂದ್ರ ಕಾನಡೆ ದಂಪತಿಗಳು ನಡೆಸಿಕೊಟ್ಟರು. ನಂತರ ಮಹಿಳೆಯರಿಂದ ಮಂಗಳಾರತಿ ಜರುಗಿತು. ಮುಂಬರುವ ದಿನಗಳಲ್ಲಿಇಲ್ಲಿ ಪುಟ್ಟದಾದ ಸಮುದಾಯ ಭವನವನ್ನು ನಿರ್ಮಿಸುವ ಕುರಿತು ಅರ್ಚಕರು ಈ ಸಂದರ್ಭದಲ್ಲಿ ತಿಳಿಸಿದರು.
ಪ್ರತಿನಿತ್ಯ ಪೂಜೆಗೊಳ್ಳುವ ಈ ಗಣಪತಿಗೆ ಸಾಂದರ್ಭಿಕವಾಗಿ ವಿಶೇಷ ಪೂಜೆಗಳು, ಅಭಿಷೇಕ ಸಂಕಷ್ಟ ಹರ ಚತುರ್ಥಿಯ ದಿನದಂದು ಅಭಿಷೇಕ ಪೂಜೆ ಜರುಗುತ್ತಿವೆ.