ಬಳ್ಳಾರಿ: ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ದೇವರ ವಾರ್ಷಿಕ ಕಾರ್ಣಿಕೋತ್ಸವಕ್ಕೆ ಮೈಲಾರ ಗ್ರಾಮಸ್ಥರನ್ನು ಹೊರತುಪಡಿಸಿ ಹೊರಗಿನ ಭಕ್ತರಿಗೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.
ಫೆ.19ರಿಂದ ಮಾ.2ರವರೆಗೆ ನಡೆಯಲಿರುವ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ಮತ್ತು ಕಾರ್ಣಿಕೋತ್ಸವವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೊರಡಿಸಿರುವ ಗೈಡ್‍ಲೈನ್ಸ್‍ಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿಕೊಂಡು ಆಚರಿಸಲು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ನಿರ್ಧರಿಸಲಾಗಿದೆ. ಕಾರ್ಣಿಕೋತ್ಸವದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಕಾರ್ಣಿಕೋತ್ಸವಕ್ಕೆ ಫೆ.19ರಿಂದ ಮಾ.2ರವರೆಗೆ ಅಗತ್ಯ ಪೊಲೀಸ್ ಭದ್ರತಾ ವ್ಯವಸ್ಥೆ ಹಾಗೂ ಬ್ಯಾರಿಕೆಡ್ ಸೇರಿದಂತೆ ಭದ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು; ಯಾವುದೇ ಕಾರಣಕ್ಕೂ ಜನರು ಎತ್ತಿನ ಗಾಡಿಗಳು, ಟ್ಯಾಕ್ಟರ್, ವಾಹನಗಳ ಮೂಲಕ ಮೈಲಾರ ಪ್ರವೇಶಿಸದಂತೆ ಕ್ರಮ ಕೈಗೊಳ್ಳಬೇಕು. ಈ ಕುರಿತು ಹಡಗಲಿ, ಹರಪನಳ್ಳಿ ಹಾಗೂ ಹಾವೇರಿ, ದಾವಣಗೆರೆ, ಗದಗ ಜಿಲ್ಲೆಗಲ್ಲಿಯೂ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಡಿಸಿ ಮಾಲಪಾಟಿ ಅವರು ಸೂಚಿಸಿದರು.
ಸಾರ್ವಜನಿಕರಿಗೆ ಮತ್ತು ಭಕ್ತಾದಿಗಳಿಗೆ ಮೈಲಾರ ಗ್ರಾಮದಲ್ಲಿ ಫೆ.19ರಿಂದ ಮಾ.2ರವರೆಗೆ ವಾಸ್ತವ್ಯ ಮಾಡುವುದಕ್ಕೆ ಅವಕಾಶ ಇರುವುದಿಲ್ಲ. ಮೈಲಾರ, ಕುರವತ್ತಿ, ಹ್ಯಾರಡಾ ಕಡೆಯಿಂದ ಯಾವುದೇ ವಾಹನಗಳು(ಲಾರಿ, ಟ್ಯಾಕ್ಟರ್, ಲಘುವಾಹನ, ಕಾರು, ಆಟೋ, ಮಿನಿ ಬಸ್, ಇತ್ಯಾದಿ) ಮೈಲಾರ ಗ್ರಾಮಕ್ಕೆ ಬರದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಮೈಲಾರ/ಕುರವತ್ತಿ ಗ್ರಾಮದ ಸರಹದ್ದಿನ ಜಮೀನುಗಳಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗಳು ನಡೆಸಲು ಅವಕಾಶವಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮೈಲಾರ ಜಾತ್ರೆಗೆ ಸಂಬಂಧಿಸಿದಂತೆ ಈ ಮುಂಚೆ ಪ್ರತಿ ವರ್ಷ ಯಾವ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿತ್ತೋ ಅದೇ ರೀತಿಯ ಸೌಲಭ್ಯಗಳನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಜಿಲ್ಲಾಧಿಕಾರಿ ಮಾಲಪಾಟಿ ಅವರು ಮೈಲಾರ ಶ್ರೀ ಮೈಲಾರಲಿಂಗ ಸ್ವಾಮಿ ದೇವಸ್ಥಾನದ ರೂಢಿ ಸಂಪ್ರದಾಯದ ಪೂಜಾ ಕಾರ್ಯ, ಧಾರ್ಮಿಕ ಕಾರ್ಯಗಳಿಗೆ ಯಾವುದೇ ರೀತಿಯ ಚ್ಯುತಿ ಬಾರದಂತೆ ನಿರ್ವಹಿಸಲು ಸೂಚನೆ ನೀಡಿದರು.
ಕಾರ್ಣಿಕ ನುಡಿ ಸ್ಪಷ್ಟವಾಗಿ ಕೇಳುವ ಹಾಗೆ ಧ್ವನಿವರ್ಧಕ ವ್ಯವಸ್ಥೆ ಮಾಡಿ;ವಿಶೇಷ ಬಸ್ ಓಡಿಸದಿರಿ: ಮೈಲಾರ ಕಾರ್ಣಿಕೋತ್ಸವಕ್ಕೆ ಪ್ರತಿವರ್ಷ ವಿಶೇಷ್ ಬಸ್‍ಗಳನ್ನು ಓಡಿಸಲಾಗುತ್ತಿತ್ತು: ಈ ವರ್ಷ ಆ ರೀತಿಯ ವಿಶೇಷ ಬಸ್ ಸೌಲಭ್ಯ ಮತ್ತು ಓಡಿಸುವುದಕ್ಕೆ ಮುಂದಾಗಬಾರದು ಎಂದು ಕೆಎಸ್‍ಆರ್‍ಟಿಸಿ ಡಿಸಿಗಳಿಗೆ ಸೂಚನೆ ನೀಡಿದ ಡಿಸಿ ಮಾಲಪಾಟಿ ಅವರು ಪ್ರತಿನಿತ್ಯ ಓಡಿಸಲಾಗುತ್ತಿರುವ ಬಸ್‍ಗಳನ್ನು ಸಹ ಕಾರ್ಣಿಕೋತ್ಸವ ನಡೆಯುವ ಮಾ.1ರಂದು ಸ್ವಲ್ಪ ಕಡಿತ ಮಾಡಿ ಎಂದು ಅವರು ಸಲಹೆ ನೀಡಿದರು.
ಕಾರ್ಣಿಕ ಮೈದಾನದಲ್ಲಿ ಕಾರ್ಣಿಕ ನುಡಿ ಸ್ಪಷ್ಟವಾಗಿ ಕೇಳುವ ಹಾಗೆ ಧ್ವನಿವರ್ಧಕ ವ್ಯವಸ್ಥೆ ಮತ್ತು ಕಾರ್ಣಿಕ ನುಡಿಯನ್ನು ಸೆರೆಯಿಡಿಯಲು ಅತ್ಯಾಧುನಿಕ ಸಲಕರಣೆಗಳನ್ನು ಬಳಸಿಕೊಂಡು ರಿಕಾರ್ಡ್ ಮಾಡಿಕೊಳ್ಳುವ ವ್ಯವಸ್ಥೆ ಹಾಗೂ ಮಾಧ್ಯಮಗಳ ಮೂಲಕ ಬಿಡುಗಡೆ ಮಾಡುವ ವ್ಯವಸ್ಥೆ ಮಾಡಲು ಡಿಸಿ ಮಾಲಪಾಟಿ ಅವರು ಸೂಚಿಸಿದರು. ಕಾರ್ಣಿಕ ನಡೆಯುವ ಸ್ಥಳದಲ್ಲಿ ಸೂಕ್ತ ಬ್ಯಾರಿಕೇಡಿಂಗ್ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಕಾರ್ಣಿಕೋತ್ಸವ ನಡೆಯುವ ನಾಲ್ಕೈದು ದಿನಗಳ ಮುಂಚೆ ಇನ್ನೊಂದು ಬಾರಿ ಸಭೆ ನಡೆಸಿ ಇನ್ನಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಕುರವತ್ತಿಯ ಮಲ್ಲಿಕಾರ್ಜುನಸ್ವಾಮಿ ಮತ್ತು ಬಸವೇಶ್ವರ ಸ್ವಾಮಿ ರಥೋತ್ಸವ ವಿಷಯದಲ್ಲಿ ಇದೇ ನಿಯಮಗಳನ್ನು ಅನುಸರಿಸಲು ಡಿಸಿ ಮಾಲಪಾಟಿ ಅವರು ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಜಿಪಂ ಸಿಇಒ ಕೆ.ಆರ್.ನಂದಿನಿ, ಎಡಿಸಿ ಪಿ.ಎಸ್.ಮಂಜುನಾಥ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಪ್ರಕಾಶ, ಹಡಗಲಿ ತಹಸೀಲ್ದಾರ್ ವಿಶ್ವಜಿತ್ ಮೆಹತಾ, ತಾಪಂ ಇಒ ಸೋಮಶೇಖರ,ಪೊಲೀಸ್ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.