*ಕೃಷ್ಣಪ್ರಕಾಶ್ ಉಳಿತ್ತಾಯ
ದೇವರ್ಷಿಗಣಸಂಘಾತಸ್ತೂಯಮಾನಾತ್ಮವೈಭವಾ|
ಭಂಡಾಸುರವಧೋದ್ಯುಕ್ತಶಕ್ತಿಸೇನಾಸಮನ್ವಿತಾ||
ಇವೆರಡು ಅತ್ಯಪೂರ್ವವಾದ ನಾಮಗಳು. ಲಲಿತಾ ಪರಮೇಶ್ವರಿಯ ಎರಡು ಹೆಸರುಗಳನ್ನು ಇಲ್ಲಿ ಸ್ಮರಿಸಿದೆ. ಎರಡು ಭಿನ್ನ ನೆಲೆಯ ರೂಪಗಳನ್ನು ಋಷಿ ಇಲ್ಲಿ ಹೆಸರಿಸಿದ್ದಾರೆ. ಮೊದಲ ಹೆಸರಲ್ಲಿ “ದೇವರ್ಷಿಗಣಸಂಘಾತಸ್ತೂಯಮಾನಾತ್ಮವೈಭವಾ” ನಾರದಾದಿ ದೇವರ್ಷಿಗಳ ದೊಡ್ಡಗಡಣವೇ ನೆರೆದು ಲಲಿತಾಪರಮೇಶ್ವರಿಯನ್ನು ಸ್ತುತಿಸುತ್ತಿದ್ದಾರೆ. ಅಂಥ ಸ್ತುತಿಗಳಿಂದ ಸ್ತುತ್ಯಳಾದವಳಾದ ಆತ್ಮವೈಭವವನ್ನು ಹೊಂದಿರುವವಳು. ಹೀಗೆ ಲಲಿತೆಯನ್ನು ಆರಾಧಿಸುತ್ತಾರೆ ಈ ನಾಮದಲ್ಲಿ. ದೇವರ್ಷಿಗಡಣವೇ ಆಕೆಯ ಆತ್ಮವೈಭವವನ್ನು ಕುರಿತಾಗಿ ಆರಾಧನಾ ಭಾವದಿಂದ ಭಜಿಸುತ್ತಾರೆ.
ಮತ್ತಿನ ಹೆಸರು ಇದಕ್ಕಿಂಥ ಭಿನ್ನ ನೆಲೆಯದಾಗಿದೆ. “ಭಂಡಾಸುರವಧೋದ್ಯುಕ್ತಶಕ್ತಿಸೇನಾಸಮನ್ವಿತಾ” ಭಂಡಾಸುರನ ವಧೆಗಾಗಿ ದೇವಿಯ ಪ್ರಾದುರ್ಭಾವವಾಗುತ್ತದೆ ಎಂಬುದು ಸರಿಯಷ್ಟೆ. ಅಂಥಾ ಭಂಡಾಸುರನ ವಧೆಗೆ ತನ್ನ ಶಕ್ತಿಸೇನೆಯಿಂದ ಕೂಡಿರುವವಳನ್ನಾಗಿ ಅದೇ ಸ್ವರೂಪದಿಂದ ಋಷಿ ಲಲಿತೆಯನ್ನು ಕಾಣುತ್ತಾನೆ.
ಋಷಿಗಳು ಆತ್ಮವೈಭವವನ್ನು ಕೊಂಡಾಡಿದರೆ; ಲಲಿತಾ ಪರಮೇಶ್ವರಿಯ ಶಕ್ತಿಸೇನೆ ಆಕೆಯ ಕ್ಷಾತ್ರವೈಭವವನ್ನು ಕೊಂಡಾಡುತ್ತಾರೆಂದು ಚಿಂತಿಸಬಹುದು. ಇಂಥ ಆತ್ಮವೈಭವವೂ ಕ್ಷಾತ್ರ ತೇಜಸ್ಸೂ ಈ ಪದ್ಯದಲ್ಲಿ ಸಮನ್ವಿತವಾಗಿದೆ. ದೇವಕಾರ್ಯಸಮುದ್ಯತೆಯಾದ ದೇವಿ ದೇವರ್ಷಿಗಳಿಂದ ಸ್ತುತ್ಯಳಾಗಿ ಭಂಡಾಸುರವಧೆಗೋಸ್ಕರ ಅವತಾರ ತಳೆದಳು ಎಂಬುದೂ ಇಲ್ಲಿ ಅನುಸಂಧಾನ ಮಾಡುವಂಥದ್ದು.
ಆತ್ಮಶಕ್ತಿಯೂ ಕ್ಷಾತ್ರಶಕ್ತಿಯೂ ಇಲ್ಲಿ ಆಕಾರಪಡೆದು ನಮ್ಮಿಂದ ಭಜಿಸಲ್ಪಟ್ಟರೆ ನಮ್ಮಲ್ಲೂ ಅಂಥ ಗುಣಗಳ ವೃದ್ಧಿ ಎಂದುದು ಪ್ರಸಾದವಾಗಬಹುದು. ಆದುದರಿಂದ ಜಗದ ಹಿತಕ್ಕಾಗಿ ಆತ್ಮಶಕ್ತಿಯನ್ನೂ ಕ್ಷಾತ್ರಶಕ್ತಿಯನ್ನು ಪಡೆಯಲು ತಾಯಿ ಲಲಿತೆಯನ್ನು ಆರಾಧಿಸೋಣ.