ಮಂಗಳೂರಿನಲ್ಲೊಂದು ಸೂರ್ಯ ದೇವನ ಆಲಯ, ಅಲ್ಲೀಗ ಉತ್ಸವದ ಸಂಭ್ರಮ

ಜಗತ್ತಿಗೆ ಬೆಳಕು ನೀಡುವ ಸೂರ್ಯನನ್ನು ದೇವನೆಂದೇ ಪೂಜಿಸುತ್ತೇವೆ. ದೇಶದಲ್ಲಿ ಸೂರ್ಯ ದೇವನ ದೇಗುಲಗಳಿರುವುದು ಕಡಿಮೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿಗೆ ಸಮೀಪದ ಮರೋಳಿಯಲ್ಲಿ ಪುರಾತನ ಐತಿಹ್ಯವುಳ್ಳ ಸೂರ್ಯದೇವನ ಆಲಯವಿದೆ.

ಅಲ್ಲೀಗ ಉತ್ಸವದ ಸಂಭ್ರಮ. ಫೆ.16 ರಂದು ಜಾತ್ರೋತ್ಸವ ಕಾರ್ಯಕ್ರಮಗಳು ಆರಂಭಗೊ0ಡಿದ್ದು 18 ರಂದು ರಾತ್ರಿ ನಡುದೀಪೋತ್ಸವ, ಪ್ರತಿಭಾ ಪ್ರದರ್ಶನ, 19 ರಂದು ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 6 ರಿಂದ ರಥೋತ್ಸವ, 20 ರಂದು ಬೆಳಗ್ಗೆ ತುಲಾಭಾರ ಸೇವೆ ನಡೆಯಲಿದೆ. ದಿನಂಪ್ರತಿ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ ನಡೆಯಲಿದೆ.

ತುಲಾಭಾರ ಸೇವೆ

ಶ್ರೀ ಕ್ಷೇತ್ರ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ತುಲಾಭಾರ ಸೇವೆ ಮಾಡಲು ಇಚ್ಛಿಸುವವರು ಶ್ರೀ ಕ್ಷೇತ್ರದಲ್ಲಿ ರೂ.1500/-ಮುಂಚಿತವಾಗಿ ಪಾವತಿಸಿ ಅಗತ್ಯ ಸಾಹಿತ್ಯಗಳೊಂದಿಗೆ ಶುಚಿರ್ಭೂತರಾಗಿ 20.02.2021ರಂದು ಬೆಳಗ್ಗೆ ಗಂಟೆ 9.೦೦ಕ್ಕೆ ಹಾಜರಿರುವಂತೆ ಕೋರಲಾಗಿದೆ. ಹೆಚ್ಚಿನ ವಿವರಗಳಿಗೆ ಕಛೇರಿಯ ದೂರವಾಣಿಗೆ 9945779524 ಗೆ ಸಂಪರ್ಕಿಸಬಹುದಾಗಿದೆ.

ಶ್ರೀಕ್ಷೇತ್ರದ ವಿಶೇಷತೆ


ಶ್ರೀಕ್ಷೇತ್ರದಲ್ಲಿ ಪರಬ್ರಹ್ಮನ ಸ್ವರೂಪಗಳಾದ ಶಿವ, ಪರಾಶಕ್ತಿ, ಮಹಾವಿಷ್ಣು ಹಾಗೂ ಚತುರ್ಮುಖ ದೇವರು, ಶ್ರೀ ಸೂರ್ಯನಾರಾಯಣ, ಮಹಾಗಣಪತಿ ಹಾಗೂ ನಾಗಬ್ರಹ್ಮನ ಸಾನ್ನಿಧ್ಯವಿದೆ.

ಮರೋಳಿ ಸೂರ್ಯನಾರಾಯಣ ದೇವಸ್ಥಾನಕ್ಕೆ ಒಂದು ವಿಶೇಷ ಐತಿಹ್ಯ ಇದೆ. ಆದಿಯಲ್ಲಿ ಇದು ಒಂದು ಗುಹೆ, ಅರಣ್ಯ, ಜಲಚರಗಳಿಂದ ಕೂಡಿದ ಪ್ರಕೃತಿ ರಮಣೀಯ ಪ್ರದೇಶ. ಆ ಸಮಯದಲ್ಲಿ ಮಹಾ ತಪಸ್ವಿ ಋಷಿಯೊಬ್ಬರಿಗೆ ಗೋಲಾಕೃತಿಯೊಂದು ಪ್ರಕಾಶ ರೂಪದಲ್ಲಿ ಕಾಣಿಸಿ, ಶ್ರೀ ಸೂರ್ಯನಾರಾಯಣ ದೇವರ ಆವಿರ್ಭಾವ ಆಯಿತು ಎಂದು ಪ್ರತೀತಿ.

ಸಂಸ್ಕ್ರತದಲ್ಲಿ “ಮರಾಲಿ” ಎಂದರೆ ಸಾತ್ವಿಕ-ಸುಂದರ ಎಂದು ಅರ್ಥ. ಮರಾಲ ಋಷಿಯ ಕತೆಯು ಇದೆ. ಸುಮಾರು 1200 ವರ್ಷಗಳ ಹಿಂದೆ ತಪಸ್ವಿಗಳಿಂದ ಸ್ಥಾಪನೆಗೊಂಡಿತ್ತು ಎನ್ನಲಾದ ಶ್ರೀ ಸೂರ್ಯನಾರಾಯಣ ಕ್ಷೇತ್ರವು ಕ್ರಿಶ.16ನೇ ಶತಮಾನದಲ್ಲಿ ಯುದ್ಧ ಮತ್ತು ರಾಜಾಶ್ರಯದ ಕೊರತೆಯಿಂದಾಗಿ ಜೀರ್ಣಾವಸ್ಥೆಯನ್ನು ತಲುಪಿತ್ತು. ಕಾಲಾಂತರದಲ್ಲಿ ಇಲ್ಲಿ ಯಾವುದೋ ರಾಜರುಗಳ ನಡುವೆ ಯುದ್ಧವಾಗಿ ಈ ದೇವಸ್ಥಾನ ನಿರ್ನಾಮವಾಯಿತು. ಮುಂದೆ ಒಂದು ದಿನ ದೇವಸ್ಥಾನವೇ ಇಲ್ಲದ ಈಗಿನ ಶೂನ್ಯವಾಗಿದ್ದ ಸ್ಥಳದಲ್ಲಿ ಎರಡು ಗುತ್ತು ಮನೆಯ ಮಾತೆಯವರು ಈ ಸ್ಥಳದಲ್ಲಿ ಹಾಯ್ದು ಹೋಗುವ ಸಂದರ್ಭ ಕತ್ತಲಾಯಿತು. ಆಗ ಗೋಲರೂಪದಲ್ಲಿ ಪ್ರಭೆಯೊಂದು ಮಾತೆಯರಿಗೆ ಕಂಡು ದಿಗ್ಭಮೆಗೊಂಡು, ವಿಷಯ ತಿಳಿದ ರಾಣಿಯು ಅಲ್ಲೇ ದೇವಸ್ಥಾನ ಪುನಃ ನಿರ್ಮಾಣ ಮಾಡುವ ಸಂಕಲ್ಪ ಮಾಡಿದಳು. ಇದಕ್ಕೆ ಸಂವಾದಿಯಾಗಿ ಜೈನರಾಣಿಯೊಬ್ಬಳು ಈಗ ಇರುವ ದೇವಸ್ಥಾನವನ್ನು ಪುನಃ ನಿರ್ಮಾಣ ಮಾಡಿದಳು ಎಂಬುದು ಇತಿಹಾಸ.

ಹರಿ, ಹರ, ಬ್ರಹ್ಮ ಹಾಗೂ ಶಕ್ತಿ ಸಾನ್ನಿಧ್ಯವನ್ನು ಹೊಂದಿರುವ ಶ್ರೀ ಸೂರ್ಯನಾರಾಯಣ ಸ್ವಾಮಿ ದೇವಾಲಯವು ಪವಿತ್ರ ಕ್ಷೇತ್ರವಾಗಿದ್ದು ಈ ದೇವಾಲಯದ ಶಕ್ತಿಯನ್ನು ನಂಬಿ ಬಂದ ಭಕ್ತರಿಗೆ ಈ ಕ್ಷೇತ್ರದ ದೇವರು ಉನ್ನತಿಯನ್ನು ದಯಪಾಲಿಸಿದ ಸಾಕಷ್ಟು ಉದಾಹರಣೆಗಳು ಇವೆ.

ಸೂರ್ಯ ಮಂಡಲದ ಪ್ರಧಾನ ದೇವರು ಶ್ರೀ ಸವಿತೃ ಸೂರ್ಯನಾರಾಯಣ. ನಮಗೆ ನಿತ್ಯ ಕಾಣುವ ದೇವರು. ಏಳು ಕುದುರೆಗಳ ರಥವನ್ನು ಏರಿ ಅರುಣನನ್ನು ಸಾರಥಿಯಾಗಿಟ್ಟುಕೊಂಡು ನಿತ್ಯ ಸಂಚಾರಿ ಎಂದು ಪ್ರತೀತಿ. ಸೌರಮಾನ ಪಂಥದವರಿಗೆ ಇವನು ಮೂಲ ಆಕಾರ, ಇವನು ಕಳಿಂಗ ದೇಶೋದ್ಭವ. ಹುಟ್ಟಿದ ದಿನ ಪ್ರಭಾವ ನಾಮ ಸಂವತ್ಸರ ಮಾಘಮಾಸ ಶುಕ್ಲ ಪಕ್ಷ ಸಪ್ತಮಿ. ಅದುವೇ ನಾವು ಆಚರಿಸುವ ರಥಸಪ್ತಮಿಯ ಮಹಾರಥೋತ್ಸವ.

ಭಾರತ ದೇಶದಲ್ಲಿ ಸೂರ್ಯನ ಆರಾಧನೆ ಸನಾತನವಾದದ್ದು. ರಾಮಾಯಣದಲ್ಲಿ ರಾವಣವಧಾ ಪ್ರಸಂಗದಲ್ಲಿ ಶ್ರೀ ಸೂರ್ಯಮಂತ್ರ ಆದಿತ್ಯಹೃದಯದ ಪ್ರಭಾವ, ಮುಂದೆ ಮಹಾಭಾರತದಲ್ಲಿ ಭಗವಾನ್ ಶ್ರೀಕೃಷ್ಣ ಸೂರ್ಯದೇವರಿಗೆ ಕೊಡುತ್ತಿದ್ದ ಪ್ರಾತಃ ಅರ್ಘ್ರ್ಯವೇ ಗಯನ ಪ್ರಕರಣಕ್ಕೆ ಕಾರಣ ಎನ್ನುವುದರಿಂದ ಶ್ರೀ ಸೂರ್ಯನ ಆರಾಧನೆ ಅನಾದಿಕಾಲದಿಂದಲೂ ಇತ್ತು ಎಂಬುದು ಜನಜನಿತ. ಋಷಿ ಮುನಿಗಳು ಅವರ ನಿತ್ಯಾನುಷ್ಠಾನದಲ್ಲಿ ಪ್ರಾತಃ ಸಂಧ್ಯೆಯನ್ನು ಶ್ರೀ ಸೂರ್ಯದೇವರಿಗೆ ಅರ್ಘ್ರ್ಯ ಕೊಟ್ಟು ಪ್ರಾರಂಭಿಸಿ, ಮನಸ್ಸಿನ ಹತೋಟಿಗೆ ಹಾಗೂ ಬುದ್ಧಿಯ ವಿಕಾಸವನ್ನು ಅಪೇಕ್ಷಿಸುವ ಮಹಾಗಾಯತ್ರಿ ಮಂತ್ರವನ್ನು ಪಠಿಸುವುದು ಶ್ರೀ ಸೂರ್ಯನ ಕುರಿತದ್ದೇ ಆಗಿದೆ.

ಶ್ರೀ ಸೂರ್ಯದೇವರಿಗೆ ಮುಖ್ಯ ಸ್ಥಾನ, ಭುರ್, ಭುವ, ಸ್ವಹಃ ಎಂಬ ಗಾಯತ್ರಿ ಮಂತ್ರದ ಪ್ರಕಾರವು ಶ್ರೀ ಸೂರ್ಯ ಮೂರು ಲೋಕದ ದೇವರು. ಯೋಗಶಾಸ್ತ್ರದಲ್ಲಿ ಎಲ್ಲಾ ವ್ಯಾಯಾಮಗಳನ್ನು ಒಳಗೊಂಡಂತಹ ಒಂದು ವಿಶೇಷ ಅಭ್ಯಾಸ ಎಂದರೆ ಶ್ರೀ ಸೂರ್ಯ ಮಂತ್ರಪೂರ್ವಕ ಶ್ರೀ ಸೂರ್ಯ ನಮಸ್ಕಾರ. ಹಿಂದೂಧರ್ಮದ ಪುನರುತ್ಥಾನಕ್ಕೆ ಕಾರಣಿಕ ಪುರುಷರು ಶ್ರೀಮದ್ ಶಂಕರಾಚಾರ್ಯರು ಎಲ್ಲ ಪಂಥದವರನ್ನು ಒಗ್ಗೂಡಿಸಲು ಪಂಚಾಯತನದ ಪೂಜಾಪದ್ಧತಿಯನ್ನು ಪ್ರಾರಂಭಿಸುವಾಗ ಶ್ರೀ ಶಿವ, ಶ್ರೀ ವಿಷ್ಣು, ಶ್ರೀ ದೇವಿ, ಶ್ರೀ ಗಣಪತಿಯೊಂದಿಗೆ ಐದನೆಯವರಾಗಿ ಆರಾಧಿಸಲ್ಪಡುವವರು ಶ್ರೀ ಸೂರ್ಯನಾರಾಯಣ ದೇವರು. ಜ್ಯೋತಿಶಾಸ್ತ್ರವು ನವಗ್ರಹಗಳ ಮೇಲೆ ಚಿಂತನೆ ಮಾಡುವುದಾದರೂ ನವಗ್ರಹಗಳಲ್ಲಿ ರಾಜ ಗ್ರಹ ಸೂರ್ಯ.

ತಲುಪುವ ಬಗೆ: ಹತ್ತಿರದ ರೈಲು ನಿಲ್ದಾಣ ಮಂಗಳೂರು ಜಂಕ್ಷನ್, ಕಂಕನಾಡಿ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೆಂಜಾರು ಹತ್ತಿರದ ವಿಮಾನ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಬಿಜೈ
ಖಾಸಗಿ ಬಸ್ ನಿಲ್ದಾಣ, ಮಂಗಳೂರು ಹತ್ತಿರದ ಬಸ್ ನಿಲ್ದಾಣ.

Related Articles

ಪ್ರತಿಕ್ರಿಯೆ ನೀಡಿ

Latest Articles