*ಶ್ರೀನಿವಾಸ ಮೂರ್ತಿ ಎನ್. ಎಸ್.
ಶಿವಮೊಗ್ಗ ಜಿಲ್ಲೆ ನಾಡಿನ ಅತೀ ಪುರಾತನ ದೇವಾಲಯ ಸೇರಿದಂತೆ ಹಲವು ರಾಜ ಮನೆತನಗಳಲ್ಲಿ ನಿರ್ಮಾಣವಾದ ದೇವಾಲಯಗಳು ತಮ್ಮದೇ ಆದ ಚಾಪನ್ನು ಮೂಡಿಸಿವೆ. ಹಾಗೆಯೇ ಶಿವಮೊಗ್ಗ ನಗರದ ಇತಿಹಾಸ ಪುಟ ತಿರುವಿದಾಗ ನಮಗೆ ಹಲವು ದೇವಾಲಯಗಳು ಕಾಣ ಸಿಗುತ್ತವೆ. ಅವುಗಳಲ್ಲಿ ಗಂಗರ ಕಾಲದಲ್ಲಿ ನಿರ್ಮಾಣವಾದ ಶ್ರೀ ಆದಿ ರಂಗನಾಥ ದೇವಾಲಯ ಪ್ರಮುಖವಾದುದು. ಈ ದೇವಾಲಯ ಶಿವಮೊಗ್ಗ ನಗರ ಅತೀ ಪುರಾತನ ದೇವಾಲಯಗಳಲ್ಲಿ ಒಂದು.
ಇತಿಹಾಸ ಪುಟದಲ್ಲಿ ಈ ದೇವಾಲಯದ ನಿರ್ಮಾಣದ ಕಾಲವನ್ನು ಗಮನಸಿದಲ್ಲಿ ಸುಮಾರು ೧೧ ನೇ ಶತಮಾನದಲ್ಲಿ ಇಲ್ಲಿ ಗಂಗ ವಂಶದ ದೊರೆ ತ್ರಿಭುವನಮಲ್ಲ ಭುಜಬಲ ಗಂಗ ಪೆರಮ್ಮಾಡಿ ಕಾಲದಲ್ಲಿ ವೆಂಕಟನಾಯಕ ಇಲ್ಲಿ ದೇವಾಲಯ ನಿರ್ಮಿಸಿದ ಬಗ್ಗೆ ದೇವಾಲಯದ ಆವರಣದಲ್ಲಿನ ಶಾಸನ ಹೇಳುತ್ತದೆ. ಗಂಗರ ಕಾಲದಲ್ಲಿ ದೇವಾಲಯದ ಮೂರ್ತಿಯ ಬಗ್ಗೆ ಸ್ವಷ್ಟ ಉಲ್ಲೇಖ ಕಾಣದಿದ್ದರೂ ದೇವಾಲಯದ ನಿರ್ಮಿತ ಶಿಲ್ಪಿ ಸರಿಯೋಜನ ಉಲ್ಲೇಖವಿದೆ. ದೇವಾಲಯ ಕಾಲ ಕಾಲಕ್ಕೆ ನವೀಕರಣಗೊಂಡಿದ್ದು ಮೂಲ ದೇವಾಲಯದ ಸ್ವರೂಪ ಬದಲಾಗಿದೆ.
ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ ಮತ್ತು ಮುಖಮಂಟಪವಿದೆ. ಚತ್ತುರ್ರಶ ಗರ್ಭಗುಡಿಯಲ್ಲಿ ಸುಂದರ ರಂಗನಾಥನ ಮೂರ್ತಿ ಇದೆ. ರಂಗನಾಥನ ಮೂರ್ತಿ ಶಂಖ, ಚಕ್ರ ಹಾಗು ಅಭಯಧಾರಿ ಹಸ್ತ ಹೊಂದಿದ್ದು ಇನ್ನೊಂದು ಕೈನಲ್ಲಿ ಗಧಾ ಹೊಂದಿದ್ದು ಮುಖದಲ್ಲಿನ ಪ್ರಶಾಂತತೆ ಗಮನ ಸೆಳೆಯುತ್ತದೆ. ಇಲ್ಲಿ ದ್ವಾರ ಪಟ್ಟಿಕೆಯಲ್ಲಿ ನಂದಿಯ ವಿಗ್ರಹ ಕಾಣ ಬರುವದರಿಂದ ಮೂಲತ ಈ ದೇವಾಲಯ ಶಿವ ದೇವಾಲಯವಾಗಿದ್ದು ನಂತರ ಕಾಲದಲ್ಲಿ ರಂಗನಾಥನ ಮೂರ್ತಿ ಸ್ಥಾಪಿಸದಂತೆ ಕಾಣುತ್ತದೆ. ಅಂತರಾಳದ ದ್ವಾರ ಪಟ್ಟಿಕೆಯಲ್ಲಿ ಗಣಪತಿಯ ಕೆತ್ತನೆ ಇದ್ದು ಗರ್ಭಗುಡಿ ದ್ವಾರದಲ್ಲಿ ದ್ವಾರಪಾಲಕರೆ ಕೆತ್ತನೆ ಇದೆ.
ಇಲ್ಲಿ ಒಂಬತ್ತು ಅಂಕಣದ ನವರಂಗ ಇದ್ದು ನಾಲ್ಕು ನಿರಾಲಂಕೃತ ಕಂಬಗಳಿವೆ. ನವರಂಗದಲ್ಲಿ ಒಂದು ಸಣ್ಣ ಪೀಟವಿದ್ದು ಇಲ್ಲಿ ಸುಮಾರು ನಾಲ್ಕು ಅಡಿ ಎತ್ತರದ ಸಣ್ಣ ಶಿಲಾ ಸ್ಥಂಬವಿದ್ದು ಇದರ ತಳದಲ್ಲಿ ಆಂಜನೇಯನ ಮೂರ್ತಿ ಇದೆ. ಇದನ್ನ ಗರುಡಗಂಭ ಅಥವಾ ಆಂಜನೇಯ ಕಂಭವೆಂದೂ ಕರೆಯುವ ವಾಡಿಕೆ ಇದೆ. ಇಲ್ಲಿ ಆಗಿನ ಕಾಲದಲ್ಲಿ ಬಳಸುತ್ತಿದ್ದೆ ಯುದ್ದದ ಕತ್ತಿ ಇದೆ. ದೇವಾಲಯಕ್ಕೆ ದ್ರಾವಿಡ ಶೈಲಿಯ ಗೋಪುರವಿದ್ದು ದ್ವಿತಲ ಶೈಲಿಯಲ್ಲಿದ್ದು ಇಳಿಜಾರಾದ ಕಪೋತವಿದೆ.
ಗರ್ಭಗುಡಿ ಮತ್ತು ನವರಂಗ ಹೊರತು ಪಡಸಿದರೆ ಉಳಿದ ದೇವಾಲಯದ ಬಾಗಗಳು ಇಟ್ಟಿಗೆಯಿಂದ ನಿರ್ಮಾಣವಾಗಿದೆ. ಇಲ್ಲಿ ಡ್ರಾವಿಡ ಶೈಲಿಯ ಶಿಖರವಿದ್ದು ನಾಲ್ಕು ಮೂಲೆಯಲ್ಲ ಸಿಂಹದ ಕೆತ್ತೆನೆ ನೋಡಬಹುದು. ಉಳಿದಂತೆ ದೇವಾಲಯದಲ್ಲಿ ಹೊರ ಬಾಗದಲ್ಲಿ ಯಾವುದೇ ಶಿಲಾ ಬಾಗ ಇರದ ಕಾರಣ ಕೆತ್ತೆನೆಗಳಾಗಲಿ ಕಾಣ ಸಿಗುವದಿಲ್ಲ. ಈ ದೇವಾಲಯ ಶಿಲಾ ವೈಬವದ ಹಿನ್ನೆಲೆಯಲ್ಲಿ ಮುಖ್ಯವಾದ ದೇವಾಲಯ ಎನಿಸದಿದ್ದರೂ ಇತಿಹಾಸ ಹಾಗು ಶಿಲ್ಪದ ಹಿನ್ನೆಲೆಯಲ್ಲಿ ಪ್ರಮುಖವಾದ ದೇವಾಲಯ.
ದೇವಾಲಯದ ಎದುರು ಭಾಗದಲ್ಲಿ ಸುಂದರ ಶಿಲಾ ಮಂಟಪವಿದೆ. ಸುಮಾರು 16 ಅಡಿ ಎತ್ತರ ಇರುವ ಈ ಮಂಟಪದಲ್ಲಿ ನಾಲ್ಕು ಕಂಭಗಳಲ್ಲಿ ಇವುಗಳಲ್ಲಿ ಗಣಪತಿ, ನಾಟ್ಯಗಾತಿಯರು, ಸಾಧುಗಳು ಮುಂತಾದ ಕೆತ್ತೆನೆ ನೋಡಬಹುದು. ಬಹುಷಹ ಆ ಕಾಲದಲ್ಲಿ ಉತ್ಸವ ಸಮಯದಲ್ಲಿ ಬಳಸಲು ನಿರ್ಮಿಸಿರಬಹುದು. ದೇವಾಲಯದ ಹತ್ತಿರದ ಚಿಕ್ಕ ಗುಡಿಯಲ್ಲಿ ನಾಲ್ಕು ಹೆಡೆಯ ನಾಗ ಕಲ್ಲಿನ ಕೆತ್ತನೆ ಸಹ ಇದೆ.
ಇಲ್ಲಿ ಪ್ರತಿ ವರ್ಷ ನಡೆಯುವ ರಥೋತ್ಸವ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯ ಭಕ್ತರು ಸೇರುತ್ತಾರೆ. ಆದರೆ ಅತ್ಯಂತ ಹಳೆಯ ದೇವಾಲಯವಾದ ಇಲ್ಲಿ ಸುತ್ತಲೂ ಉತ್ಕನನ ನಡೆದಲ್ಲಿ ಇತಿಹಾಸದ ಕುರುಹಗಳು ಸಿಗಬಹುದು. ಶಿವಮೊಗ್ಗದ ಇತಿಹಾಸ ಸಾರಲು ಕಾದು ಕುಳಿತಿರುವಂತೆ ಇರುವ ಈ ದೇವಾಲಯದ ಶಿವಮೊಗ್ಗದ ಇತಿಹಾಸ ಆಸಕ್ತರು ಹಾಗು ಭಕ್ತರು ನೋಡಲೇ ಬೇಕಾದ ದೇವಾಲಯ.
ಈ ದೇವಾಲಯ ಶಿವಮೊಗ್ಗದ ಗೋಪಾಳ ಬಡಾವಣೆಯಲ್ಲಿದ್ದುಇತಿಹಾಸ ಆಸಕ್ತರಿಗೆ ಮತ್ತು ಭಕ್ತರಿಗೆ ಒಂದು ಒಳ್ಳೆಯ ಪ್ರಶಾಂತ ವಾತಾವರಣದ ಸುಂದರ ಸ್ಥಳ.