ಧಾರ್ಮಿಕ ಮೌಲ್ಯಗಳ ಸಂರಕ್ಷಣೆ ಮಠಗಳ ಗುರಿ: ಶ್ರೀ ರಂಭಾಪುರಿ ಜಗದ್ಗುರುಗಳು

ಕಲಬುರ್ಗಿ: ಆಧುನಿಕ ಯುಗದಲ್ಲಿ ಬೆಳೆಯುತ್ತಿರುವ ಯುವ ಜನಾಂಗದಲ್ಲಿ ಧಾರ್ಮಿಕ ಮೌಲ್ಯಗಳು ಕುಸಿಯುತ್ತಿವೆ. ಧರ್ಮ ಸಂಸ್ಕೃತಿ ಮತ್ತು ಪರಂಪರೆಯ ಮೌಲ್ಯಗಳ ಬಗೆಗೆ ನಿರ್ಲಕ್ಷö್ಯ ಮನೋಭಾವ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ ಧರ್ಮ ಸಂರಕ್ಷಣೆ ಮತ್ತು ಧಾರ್ಮಿಕ ಮೌಲ್ಯಗಳ ಪುನರುತ್ಥಾನಗೊಳಿಸುವ ಜವಾಬ್ದಾರಿ ಮಠಗಳ ಮೇಲೆ ಇದೆಯೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಫೆಬ್ರುವರಿ 21 ರಂದು ತಾಲೂಕಿನ ಸುಕ್ಷೇತ್ರ ಬಬಲಾದ(ಎಸ್) ಗ್ರಾಮದ ಶ್ರೀ ಮದ್ರಂಭಾಪುರಿ ಖಾಸಾ ಶಾಖಾ ಬೃಹನ್ಮಠದ ಅಧಿಕಾರ ಹಸ್ತಾಂತರ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ದೇಶಕ್ಕೊಂದು ಸಂವಿಧಾನ ಇರುವಂತೆ ಧರ್ಮಕ್ಕೊಂದು ಧರ್ಮ ಸಂವಿಧಾನವಿದೆ. ವೀರಶೈವ ಧರ್ಮದಲ್ಲಿ ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ÷್ಥಲಗಳು ಮೂಲವಾಗಿವೆ. ಇವುಗಳ ಅರಿವು ಮತ್ತು ಆಚರಣೆ ಬಹಳ ಮುಖ್ಯ. ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ, ದಾನಕ್ಕಿಂತ ದಾಸೋಹ, ಚರಿತ್ರೆಗಿಂತ ಚಾರಿತ್ರö್ಯ ಮುಖ್ಯವೆಂದು ವೀರಶೈವ ಧರ್ಮ ಸಾರಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಜೀವನ ದರ್ಶನದ ಅಮೂಲ್ಯ ವಿಚಾರ ಧಾರೆಗಳನ್ನು ಕಾಣಬಹುದು. ಜೀವನ ಶ್ರೇಯಸ್ಸಿಗೆ ಕಾರಣವಾಗಿರುವ ಧರ್ಮ ಸಂಸ್ಕೃತಿ ಬೆಳೆಸುವ ಮಹತ್ಕಾರ್ಯ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಬಬಲಾದ ಗ್ರಾಮದ ಶ್ರೀಮದ್ರಂಭಾಪುರಿ ಖಾಸಾ ಶಾಖಾ ಮಠ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಈ ಹಿಂದಿನ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳಿಂದ ತೆರವಾದ ಸ್ಥಾನಕ್ಕೆ ದೇವಾಪುರ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳವರನ್ನು ನಿಯುಕ್ತಿಗೊಳಿಸಿ ಅಧಿಕಾರ ಹಸ್ತಾಂತರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ನೂತನ ಶ್ರೀಗಳವರು ಧಾರ್ಮಿಕ ಜಾಗೃತಿಯ ಜೊತೆಗೆ ಸಾಮಾಜಿಕ ಚಿಂತನೆ ಹೊಂದಿ ಮಠದ ಅಭಿವೃದ್ಧಿಗೊಳಿಸುವರೆಂಬ ವಿಶ್ವಾಸ ತಮಗಿದೆ ಎಂದು ರೇಶ್ಮೆ ಮಡಿ ಸ್ಮರಣಿಕೆ ನೀಡಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ದಂಡ ಕಮಂಡಲು ಪಂಚಮುದ್ರಾ ಪ್ರದಾನ ಮಾಡಿ ಆಶೀರ್ವದಿಸಿದರು.
ನೂತನ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳಿಗೆ ಹಿಂದಿನ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಮಠದ ದಾಖಲೆ ಪತ್ರಗಳನ್ನು ಹಸ್ತಾಂತರಿಸಿ ಮಾತನಾಡಿ ನೂತನ ಶ್ರೀಗಳವರ ಕ್ರಿಯಾ ಕರ್ತೃತ್ವ ಶಕ್ತಿ ದೊಡ್ಡದು. ವೀರಶೈವ ಧರ್ಮ ಗುರು ಪರಂಪರೆಯ ಆದರ್ಶಗಳನ್ನು ಬೆಳೆಸುವರೆಂದು ಸಂತಸ ವ್ಯಕ್ತಪಡಿಸಿದರು. ಅಧಿಕಾರ ಸ್ವೀಕರಿಸಿದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಬದುಕಿ ಬಾಳುವ ಮನುಷ್ಯನಿಗೆ ಧರ್ಮಪ್ರಜ್ಞೆ, ಸಾಮಾಜಿಕ ಅರಿವು ಮತ್ತು ಆಚರಣೆಗಳ ಅವಶ್ಯಕತೆಯಿದೆ. ಗುರು ಮಠಗಳು ವೀರಶೈವ ಧರ್ಮದ ಕಣ್ಣು. ಶ್ರೀ ರಂಭಾಪುರಿ ಜಗದ್ಗುರುಗಳವರ ಮಾರ್ಗದರ್ಶನದಂತೆ ಧಾರ್ಮಿಕ ಮೌಲ್ಯಗಳ ಪುನರುತ್ಥಾನ ಹಾಗೂ ಶ್ರೀ ಮಠದ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾಗಿ ಘೋಷಿಸಿ ಈ ಭಾಗದ ಭಕ್ತರ ಸಹಕಾರ ಸದಾ ಇರಲೆಂದು ಬಯಸಿದರು. ಚಿನ್ಮಯಗಿರಿ ಸಿದ್ಧರಾಮ ಶಿವಾಚಾರ್ಯರು, ಹೊನ್ನಕಿರಣಗಿ ಚಂದ್ರಗು0ಡ ಶಿವಾಚಾರ್ಯರು, ಪಡಸಾವಳಿ ಡಾ. ಶಂಭುಲಿಂಗ ಶಿವಾಚಾರ್ಯರು, ಶ್ರೀನಿವಾಸ ಸರಡಗಿ ಡಾ. ರೇವಣಸಿದ್ಧ ಶಿವಾಚಾರ್ಯರು, ರಾಜೇಶ್ವರ ಘನಲಿಂಗ ರುದ್ರಮುನಿ ಶಿವಾಚಾರ್ಯರು, ದೋರನಹಳ್ಳಿ ಶಿವಲಿಂಗ ರಾಜೇಂದ್ರ ಶಿವಾಚಾರ್ಯರು, ತೊನಸನಹಳ್ಳಿ ರೇವಣಸಿದ್ಧ ಶಿವಾಚಾರ್ಯರು, ದಂಡಗು0ಡ ಸಂಗನಬಸವ ಶಿವಾಚಾರ್ಯರು, ನವಲಕಲ್ಲ ಸೋಮನಾಥ ಶಿವಾಚಾರ್ಯರು, ಮಹಾರಾಷ್ಟçದ ಜವಳಿ ವಿರಕ್ತಮಠದ ಗಂಗಾಧರ ಶ್ರೀ, ಅಣದೂರಿನ ಶಿವಯೋಗಿ ಶಿವಾಚಾರ್ಯರು ಸಮಾರಂಭದಲ್ಲಿ ಪಾಲ್ಗೊಂಡು ನೂತನ ಶ್ರೀಗಳವರಿಗೆ ಶುಭ ಹಾರೈಸಿದರು.

ಅಧಿಕಾರ ಹಸ್ತಾಂತರ ಧರ್ಮ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕ.ಕ.ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ನಗರ ನೀರು ಸರಬರಾಜು ಮಂಡಳಿ ಅಧ್ಯಕ್ಷ ಶಾಸಕ ರಾಜುಗೌಡ (ನರಸಿಂಹ ನಾಯಕ), ಯಾದಗಿರಿ ಜಿ.ಪಂ. ಅಧ್ಯಕ್ಷ ಬಸನಗೌಡ ಯಡಿಯಾಪುರ, ಕಲಬುರ್ಗಿ ಡಿ.ಸಿ.ಸಿ.ಬ್ಯಾಂಕ ಉಪಾಧ್ಯಕ್ಷ ಡಾ. ಸುರೇಶ ಸಜ್ಜನ, ಬೆಂಗಳೂರಿನ ಡಾ.ದಯಾನಂದ ಎಸ್. ಪಟ್ಟಣಶೆಟ್ಟಿ, ಕಲಬುರ್ಗಿಯ ಸತೀಶ ವ್ಹಿ. ಗುತ್ತೇದಾರ, ಕೃಷ್ಙಜೀ ಕುಲಕರ್ಣಿ, ಕರಿಸಿದ್ಧಪ್ಪ ಪಾಟೀಲ ಹರಸೂರ ಹಾಗೂ ಶಿವಶರಣಪ್ಪ ಸಾಹು ಸೀರಿ ಭಾಗವಹಿಸಿದ್ದರು. ದಾನಿಗಳು ಮತ್ತು ನಾಡಿನ ನಾನಾ ಭಾಗಗಳಿಂದ ಶಿಷ್ಯ ಸದ್ಭಕ್ತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.


ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಜಗದ್ಗುರು ರಂಭಾಪುರೀ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು.

Related Articles

ಪ್ರತಿಕ್ರಿಯೆ ನೀಡಿ

Latest Articles