ಶಿವಮೊಗ್ಗ: ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ದಶಧರ್ಮ ಸೂತ್ರಗಳು ಅವರ ಚಿಂತನೆಗಳು ಸರ್ವ ಸಮಾಜಕ್ಕೂ ದಾರಿ ದೀಪ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ ಹರಕೆರೆ ಗ್ರಾಮದಲ್ಲಿನಿರ್ಮಾಣಗೊಳ್ಳಲಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರಕ್ಕೆ ಫೆಬ್ರುವರಿ 24 ರಂದು ಶಿಲಾನ್ಯಾಸ- ಭೂಮಿ ಪೂಜೆಯ ನಂತರ ನಡೆದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಹರಕೆರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ರಂಭಾಪುರೀಶ ಗುರುನಿವಾಸದ ಕಟ್ಟಡ ಕಾರ್ಯ ಎಸ್.ಎಸ್. ಜ್ಯೋತಿಪ್ರಕಾಶ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು ಭಕ್ತರು ಸರಕಾರ ನೆರವು ಒದಗಿಸಿದೆ. ಇದರ ಪಕ್ಕದಲ್ಲಿಯೇ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದ ಆಶಯವನ್ನು ಸಚಿವ ಕೆ.ಎಸ್. ಈಶ್ವರಪ್ಪನವರಿಗೆ ತಿಳಿಸಿದಾಗ ಅದರ ಜವಾಬ್ದಾರಿಯನ್ನು ಈಶ್ವರಪ್ಪನವರು ವಹಿಸಿಕೊಂಡು ಈ ದಿನ ಭೂಮಿ ಪೂಜೆ ನಡೆದಿರುವುದು ತಮಗೆ ಸಂತಸ ತಂದಿದೆ. ಟಿ.ವ್ಹಿ.ಈಶ್ವರಯ್ಯ-ಸಹೋದರರು ದಾನವಾಗಿ ನೀಡಿದ ಈ ಭೂಮಿಯಲ್ಲಿ ಅವರ ಆಶಯದಂತೆ ಜನಹಿತ ಕಾರ್ಯಗಳು ನಡೆಯುತ್ತವೆ. ಹಂತ ಹಂತವಾಗಿ ವಿವಿಧ ಕಟ್ಟಡ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಪಂಚ ಪೀಠಗಳ ಮಧ್ಯೆ ಇತ್ತೀಚಿನ ಸಮಸ್ಯೆ ಪರಿಹರಿಸಲಾರದ ಸಮಸ್ಯೆ ಏನೂ ಅಲ್ಲ. ಇದು ಆಂತರಿಕ ಸಮಸ್ಯೆಯಾಗಿದ್ದು ಕೆಲವು ಕಾನೂನು ತೊಡಕುಗಳು ಇದ್ದು ಸಮಾನ ಪೀಠಾಚಾರ್ಯರು ಕುಳಿತು ಪರಿಹರಿಸಿಕೊಳ್ಳಬೇಕಾಗಿದೆ. ಸತ್ಯವನ್ನು ಎತ್ತಿ ಹಿಡಿಯುವ ಕೆಲಸವಾಗಬೇಕಾಗಿದೆ. ಭಾರತೀಯ ಸಂಸ್ಕೃತಿ ಆದರ್ಶ ಮೌಲ್ಯಗಳಿಗೆ ಕುಂದು ಬಂದಾಗ ರಂಭಾಪುರಿ ಪೀಠ ನಿಷ್ಠೂರವಾಗಿ ಖಂಡಿಸುತ್ತ ಬಂದಿದೆ. ದೇಶಕ್ಕೆ ಒಂದು ಸಂವಿಧಾನವಿದ್ದ0ತೆ ಧರ್ಮಕ್ಕೂ ಸಂವಿಧಾನವಿದೆ. ಎಲ್ಲ ಮೇಲ್ವರ್ಗದಲ್ಲಿಯೂ ಬಡವರಿದ್ದಾರೆ. ಜಾತಿ ಆಧಾರಿತ ಮೀಸಲಾತಿಗಿಂತ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಕಾನೂನು ಜಾರಿಗೊಂಡರೆ ಬಹುತೇಕ ಸಮಸ್ಯೆ ನಿವಾರಣೆ ಆಗಬಹುದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಹೆಚ್ಚು ಜನಪರ ವಿಧಾಯಕ ಕಾರ್ಯಗಳನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಹೆಚ್ಚು ಆತ್ಮಸ್ಥೆöÊರ್ಯ ತುಂಬುವ ಕೆಲಸವಾಗಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್. ಈಶ್ವರಪ್ಪನವರು ಮಾತನಾಡಿ ಭೂದಾನಿಗಳು ನೀಡಿದ ಈ ಜಾಗೆಯಲ್ಲಿ ಧಾರ್ಮಿಕ ಕಾರ್ಯಗಳ ಜೊತೆಯಲ್ಲಿ ಶೈಕ್ಷಣಿಕ ಸಾಮಾಜಿಕ ಕಾರ್ಯಗಳು ನಡೆದಲ್ಲಿ ಸಮಾಜ ಮತ್ತು ಸರ್ಕಾರದಿಂದ ನೆರವು ನೀಡಲಾಗುವುದು. ಶ್ರೀ ರಂಭಾಪುರಿ ಜಗದ್ಗುರುಗಳ ಆಶಯಕ್ಕೆ ಚ್ಯುತಿ ಬಾರದಂತೆ ಅವರ ಆಶಯದಂತೆ ಎಲ್ಲ ಕೆಲಸಗಳನ್ನು ಮಾಡಿಕೊಡಲಾಗುವುದು ಎಂದು ತಿಳಿಸಿದ ಅವರು ಪಂಚ ಪೀಠಾಧೀಶರನ್ನು ಒಂದೇ ವೇದಿಕೆಯ ಮೇಲೆ ನೋಡುವ ಆಶೆ ಭಕ್ತರದ್ದಾಗಿದೆ. ಆದಷ್ಟು ಬೇಗನೇ ಈ ಕಾರ್ಯ ನಡೆಯುವಂತಾಗಲಿ ಎಂದರು.
ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು. ಸಮಾರಂಭದಲ್ಲಿ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ, ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ಜೆ.ರಾಜಶೇಖರ, ದಾನಿಗಳಾದ ಟಿ.ವಿ. ಈಶ್ವರಯ್ಯನವರು, ಯೋಗಾಚಾರ್ಯ ರುದ್ರಾರಾಧ್ಯರು, ಕಾರ್ಪೋರೇಟರ್ ಅನಿತಾ ರವಿಶಂಕರ, ಉಮೇಶಾರಾಧ್ಯ, ವೀರೇಶ ಪಾಟೀಲ, ಕೆ.ಸಿ.ನಾಗರಾಜ, ಚಂದ್ರಶೇಖರಯ್ಯ, ಮರುಳೇಶ ಮುಂತಾದವರು ಇದ್ದರು.
ಶಿವಮೊಗ್ಗ ಜಿಲ್ಲಾ ಜಂಗಮ ಮಹಿಳಾ ಸಂಘದ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು. ಎನ್.ಜೆ. ರಾಜಶೇಖರ ಸ್ವಾಗತಿಸಿದರು. ಎಸ್.ಎನ್. ಮಹಾಲಿಂಗಯ್ಯ ಶಾಸ್ತಿç ನಿರೂಪಿಸಿದರು. ಶಿವಮೊಗ್ಗ ಜಿಲ್ಲಾ ಜಂಗಮ ಅರ್ಚಕ ಸಂಘದವರು ದೇವಸ್ಥಾನದ ಭೂಮಿ ಪೂಜೆಯ ವಿಧಿ ವಿಧಾನಗಳನ್ನು ನೆರವೇರಿಸಿದರು.
ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಜಗದ್ಗುರು ರಂಭಾಪುರೀ ವೀರಸಿಂಹಾಸನ ಮಹಾಸಂಸ್ಥಾನ ಪೀಠ,