ಆಗುಂಬೆಯ ಮಡಿಲಲ್ಲಿ ವೇಣುಗೋಪಾಲ ಸ್ವಾಮಿಯ ಸುಂದರ ಆಲಯ

*ಶ್ರೀನಿವಾಸ ಮೂರ್ತಿ ಎನ್ ಎಸ್

ನಾಡಿನ ವಾಸ್ತುಶಿಲ್ಪ ಲೋಕದಲ್ಲಿ ಹಲವು ರಾಜರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದು ರಾಜ್ಯಾದ್ಯಂತ ಹಲವು ದೇವಾಲಯಗಳಿವೆ.  ಇನ್ನು ಮಲೆನಾಡಿನ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದ ಶಿವಮೊಗ್ಗ ಜಿಲ್ಲೆಯಲ್ಲೂ ಇದ್ದು ವರುಣನ ಪ್ರಮುಖ ಕೇಂದ್ರವಾದ ಆಗುಂಬೆ ಎಂದೊಡನೆ ನಮಗೆ ನೆನಾಪಾಗುವುದು ಪ್ರಕೃತಿಯ ರಮಣೀಯ ಚಿತ್ರವೇ. ಆದರೆ ಅಲ್ಲಿಯೂ ಸುಂದರ ವೇಣುಗೋಪಾಲ ದೇವಾಲಯವಿದ್ದು ಬಹಳ ಜನರಿಗೆ ಇದು ಅಪರಿಚತವೇ. ಪುರಾತನವಾದ ದೇವಾಲಯವಾದರೂ ಪ್ರಚಾರದ ಕೊರತೆಯ ಕಾರಣ ಪ್ರವಾಸಿಗರು ಈ ದೇವಾಲಯವನ್ನ ಅಷ್ಟಾಗಿ ಗಮನಿಸದೇ ಹೋಗುವ ಸಾಧ್ಯತೆಯೆ ಹೆಚ್ಚು.

ಇನ್ನು ಈ ದೇವಾಲಯದ ನಿರ್ಮಾಣದ ಬಗ್ಗೆ ಖಚಿತ ಮಾಹಿತಿ ಎಲ್ಲೂ ಸಿಗುವುದಿಲ್ಲ. ದೇವಾಲಯದ ಗರ್ಭಗುಡಿಯಲ್ಲಿನ ಶಿಲ್ಪ ಗಮನಿಸಿದಲ್ಲಿ ಹೊಯ್ಸಳರ ಕಾಲದ್ದು ಎಂಬ ಊಹೆ ಇದ್ದರೂ ದೇವಾಲಯದ ಹಾಗು ಮೂರ್ತಿಯ ವಾಸ್ತು ಲಕ್ಷಣಗಳನ್ನ ಗಮನಿಸಿದಲ್ಲಿ ಇದು ವಿಜಯನಗರ ಕಾಲದ ದೇವಾಲಯ. ಹಾಗಾಗಿ ವಿಜಯನಗರ ಕಾಲದ ಆರಂಭಿಕ ಕಾಲದಲ್ಲಿ ನಿರ್ಮಾಣವಾದ ಅಥವಾ ಮರು ನಿರ್ಮಾಣವಾದ ದೇವಾಲಯವಿರಬಹುದು.

ಮೂಲತಹ ಈ ದೇವಾಲಯ ಗರ್ಭಗುಡಿ, ಪ್ರದಕ್ಷಿಣ ಪಥಾ, ನವರಂಗ ಹಾಗು ಮಂಟಪವನ್ನು ಹೊಂದಿದ್ದು  ಗರ್ಭಗುಡಿಯಲ್ಲಿ ಸುಂದರವಾದ ವೇಣುಗೋಪಾಲ ಮೂರ್ತಿ ಇದೆ. ಶಿಲ್ಪ ಚಕ್ರ ಶಂಖದಾರಿಯಾಗಿದ್ದು ಉಳಿದ ಎರಡು ಕೈಗಳಲ್ಲಿ ಸುಂದರವಾದ ವೇಣುವಿನ ಕೆತ್ತನೆ ಇದೆ.  ಮೂರ್ತಿಯ ಮೇಲೆ ಶೇಷ ಕೆತ್ತನೆ ಇದ್ದು ಇಲ್ಲಿನ ಏಳು ಹೆಡೆಗಳು ಗಮನ ಸೆಳೆಯುತ್ತದೆ. ಸುಂದರ ಪ್ರಭಾವಳಿಯನ್ನ ಹೊಂದಿದ್ದು ಇಲ್ಲಿನ ದಶಾವತಾರಗಳ ಕೆತ್ತನೆ ಗಮನ ಸೆಳೆಯುತ್ತದೆ. ಪ್ರಭಾವಳಿಯಲ್ಲಿನ ಸಿಂಹ ಮುಖಿ ಕೆತ್ತನೆ ಇದ್ದು ಹೊಯ್ಸಳರ ಕೆತ್ತನೆಯನ್ನ ಹೋಲುತ್ತದೆ. ಇನ್ನು ಗರುಡ ಪೀಠವಿದ್ದು ಶಿಲ್ಪ ನರ್ತನೆಯ ಭಂಗಿಯಲ್ಲಿದ್ದು ಎರಡೂ ಕಾಲಿನ ಪಕ್ಕದಲ್ಲಿನ ಗೋವುಗಳ ಕೆತ್ತನೆ ಸುಂದರವಾಗಿದೆ. ಕೊರಳಲ್ಲಿ ಕಂಠೀಹಾರ, ಕಾಲಿನ ಕಡಗ ಇದ್ದು ಗೋಪಾಲಕರು ಕೈ ಮುಗಿಯುವಂತೆ ಕೆತ್ತಲಾಗಿದೆ. ಮೂರ್ತಿಯ ಇಕ್ಕೆಲಗಳಲ್ಲಿ ರುಕ್ಮಿಣಿ ಹಾಗೂ ರಾಧೆಯರ ಕೆತ್ತನೆ ನೋಡಬಹುದು. ಕಟಿಯಲ್ಲಿನ ವೈಜಯಂತಿಯ ಮಾಲೆ ಕೆತ್ತನೆ ಸಹ ಕಲಾತ್ಮಕವಾಗಿದೆ.

ಇನ್ನು ದೇವಾಲಯದ ದ್ವಾರದಲ್ಲಿ ವೈಷ್ಣವ ದ್ವಾರ ಪಾಲಕರಿದ್ದು ಲಲಾಟದಲ್ಲಿನ ಗಜಲಕ್ಷ್ಮೀಯ ಕೆತ್ತನೆ ನೋಡಬಹುದು. ದೇವಾಲಯಕ್ಕೆ ಕದಂಬ ನಾಗರ ಶೈಲಿಯ (ಘಾಂಸನಾ) ಮಾದರಿಯ ಶಿಖರವಿದೆ.  ನವರಂಗದಲ್ಲಿನ ಕಂಭಗಳು ವಿಜಯನಗರ ಕಾಲಕ್ಕೆ ಸೇರಿದ್ದು ವಿತಾನ (ಭುವನೇಶ್ವರಿ) ದಲ್ಲಿನ ಕಮಲದ ಕೆತ್ತನೆ ಗಮನ ಸೆಳೆಯುತ್ತದೆ. ದೇವಾಲಯದ ಕೆತ್ತನೆಗಳು ವಿಜಯನಗರ ಕಾಲಕ್ಕೆ ಸೇರಿದ್ದರೆ ಮಂಟಪದ ಭಾಗ ಮಾತ್ರ ಆಧುನಿಕ ಸೇರ್ಪಡೆ.  ಇನ್ನು ದೇವಾಲಯಕ್ಕೆ ಹೊಸದಾಗಿ ಪ್ರವೇಶ ದ್ವಾರ ನಿರ್ಮಾಣವಾಗಿದ್ದು ಕರಾವಳಿಯ ದೇವಾಲಯಗಳನ್ನ ನೆನಪಿಸುತ್ತದೆ.

ತಲುಪುವ ಹೀಗೆ: ಚಿರಪರಿಚತವಾದ ಅಗುಂಬೆ ಶಿವಮೊಗ್ಗ – ಉಡುಪಿ ಹೆದ್ದಾರಿಯಲ್ಲಿದ್ದು ಶಿವಮೊಗ್ಗದಿಂದ ಸುಮಾರು 93 ಕಿ ಮೀ ಹಾಗು ಉಡುಪಿಯಿಂದ 55 ಕಿಮೀ ದೂರದಲ್ಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles