ರಂಭಾಪುರಿ ಪೀಠ (ಬಾಳೆಹೊನ್ನೂರು) : ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಿಂದ ಪ್ರತಿ ವರುಷ ಕೊಡಲ್ಪಡುವ ಶ್ರೀ ಜಗದ್ಗುರು ರೇಣುಕಾಚಾರ್ಯ ಅತ್ಯುನ್ನತ ಪ್ರಶಸ್ತಿಯನ್ನು ಈ ವರ್ಷ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗಳ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ|| ಸುದರ್ಶನ ಬಲ್ಲಾಳರಿಗೆ ಪ್ರದಾನ ಮಾಡಲಾಗುವುದೆಂದು ಶ್ರೀಮದ್ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಪ್ರಕಟಿಸಿದ್ದಾರೆ.
ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು, ಕಂಚಿನ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ. ಮಾರ್ಚ್ 26 ರಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಪವಿತ್ರ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದೆಂದು ಶ್ರೀ ರಂಭಾಪುರಿ ಜಗದ್ಗುರುಗಳು ತಿಳಿಸಿದ್ದಾರೆ.
ಡಾ ಸುದರ್ಶನ ಬಲ್ಲಾಳ ಅವರ ಪರಿಚಯ
ಡಾ|| ಸುದರ್ಶನ ಬಲ್ಲಾಳ ಅವರು ಉಡುಪಿ ಜಿಲ್ಲೆಯ ಹೆಬ್ರಿಯವರು. ತಂದೆ ಬೇಲಂಜೆ ಸಂಜೀವ ಹೆಗಡೆ, ತಾಯಿ ಪ್ರಫುಲ್ಲಾ ಹೆಗಡೆ. ಜಮಿನ್ದಾರ ಹಾಗೂ ವ್ಯಾಪಾರಸ್ಥ ಮನೆತನದಲ್ಲಿ ಡಾ|| ಬಲ್ಲಾಳರು ಜನಿಸಿದ್ದು ಉಡುಪಿಯಲ್ಲಿ (೧೫-೦೯-೧೯೫೪) ಹೆಬ್ರಿಯಲ್ಲಿ ಪ್ರಾಥಮಿಕ, ಪ್ರೌಢ ಅಧ್ಯಯನ ನಡೆಸಿ ಎಂ.ಬಿ.ಬಿ.ಎಸ್ ಮತ್ತು ಎಂ.ಡಿ ಪದವಿಗಳನ್ನು ಬಂಗಾರ ಪದಕಗಳೊಡನೆ ಮತ್ತು ಬ್ಲೂö್ಯರಿಬ್ಬನ್ (Blue Ribbon) ಪ್ರಶಸ್ತಿಯೊಂದಿಗೆ ಮಣಿಪಾಲ್ ವೈದ್ಯಕೀಯ ಮಹಾವಿದ್ಯಾಲಯದಿಂದ ಉತ್ತೀರ್ಣರಾದರು. ನಂತರ ಅಮೆರಿಕಾದಲ್ಲಿ ವ್ಯಾಸಂಗ ಮುಂದುವರಿಸಿ ಅಮೆರಿಕಾದ ಟ್ರಿಪಲ್ ಬೋರ್ಡ್ನಿಂದ , ಇಂಟರ್‌ನಲ್ ಮೆಡಿಸಿನ್ , ನೆಪ್ರೋಲಾಜಿ ಅಂದರೆ ಮೂತ್ರಪಿಂಡ ರೋಗಗಳಿಗೆ ಸಂಬ0ಧಪಟ್ಟ ವಿಜ್ಞಾನ ಮತ್ತು ತುರ್ತುಚಿಕಿತ್ಸೆ ವಿಜ್ಞಾನಗಳಲ್ಲಿ ಪರಿಣಿತರಾಗಿ ತೇರ್ಗಡೆ ಹೊಂದಿದರು. ಇದು ಅವರ ಅಪೂರ್ವ ಸಾಧನೆ. ನಂತರ ಅಮೇರಿಕಾದ ಸೇಂಟ್ ಲೂಯಿಸ್ ವಿಶ್ವವಿದ್ಯಾಲಯ ವೈದ್ಯಕೀಯ ಶಾಸ್ತçದಲ್ಲಿ ಮೂತ್ರಪಿಂಡ ಮತ್ತು ಮೂತ್ರಪಿಂಡದ ಕಸಿಯಲ್ಲಿ ಪರಿಣಿತ ವೈದ್ಯರಾದರು. ಅದೇ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಕೆಲವು ವರ್ಷ ಸೇವೆ ಸಲ್ಲಿಸಿದರು. ಡಾ|| ಬಲ್ಲಾಳರು ಮುಂದೆ ತಾಯ್ನಾಡಿಗೆ ಮರಳಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಮೂತ್ರಪಿಂಡ ವಿಭಾಗದ ಮುಖ್ಯಸ್ಥರಾಗಿ ಆಯ್ಕೆಗೊಂಡರು. ಇವರ ಸೇವೆಯನ್ನು ಗಮನಿಸಿ ಬ್ರಿಟಿಷ್ ಸರ್ಕಾರ ಫೆಲೋ ಆಫ್ ರಾಯಲ್ ಕಾಲೇಜ್ ಆಫ್ ಫಿಜಿಸಿಯನ್ಸ್ ಎಂಬ ಫೆಲೊಶಿಪ್‌ನಿಂದ ಗೌರವಿಸಿತು. ಇದು ಭಾರತೀಯ ವೈದ್ಯ ಜಗತ್ತಿಗೆ ಸಂದ ಗೌರವವೆಂದೇ ಹೇಳಬಹುದು.
ಮಣಿಪಾಲ್ ಉನ್ನತ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾದ ಡಾ|| ಬಲ್ಲಾಳರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗಳ ಸಮೂಹದ ಮತ್ತು ಸಂಶೋಧನೆ ಕೇಂದ್ರಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಉತ್ಕೃಷ್ಟ ಶಿಕ್ಷಕರು, ಸಂಶೋಧಕರು ವೈದ್ಯರಾಗಿ ರೋಗಿಗಳಿಗೆ ತೋರುವ ಅನುಕಂಪ ಅಭಿನಂದನೀಯ.
ಡಾ|| ಬಲ್ಲಾಳರು ಸಮಾಜಕ್ಕೆ ಸಲ್ಲಿಸಿದ ಸರ್ವತೋಮುಖ ಸೇವೆ ಹಾಗೂ ಮಾನವೀಯತೆಗಾಗಿ ಬಂದ ಪ್ರಶಸ್ತಿ-ಪುರಸ್ಕಾರಗಳಿಗೆ ಲೆಕ್ಕವಿಲ್ಲ. 2005ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2010ರಲ್ಲಿ ಆರ್ಯಭಟ್ ಇಂಟರ್‌ನ್ಯಾಷನಲ್ ಅವಾರ್ಡ್, 2010ರಲ್ಲಿ ಡಾ|| ಬಿ.ಸಿ.ರಾಯ್ ಪ್ರಶಸ್ತಿ, 2017ರಲ್ಲಿ ದೂರದರ್ಶನ ಚಂದನ ಪ್ರಶಸ್ತಿ ಹಾಗೂ 2018ರಲ್ಲಿ ಜೀವಮಾನ ಶ್ರೇಷ್ಠ ಪ್ರಶಸ್ತಿ ಸೇರಿದಂತೆ 15ಕ್ಕೂ ಹೆಚ್ಚು ಪ್ರಶಸ್ತಿಗೆ ಭಾಜನರಾಗಿದ್ದು ಶ್ಲಾಘನೀಯ.
ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,