ಮಾರ್ಚ್ 11 ರಂದು ಶ್ರೀಮದ್ಭಾಗವತ ಸಾರೋದ್ಧಾರ ಕರ್ತೃಗಳೂ, ಶ್ರೀ ರುದ್ರದೇವರ ಅಂಶ ಸಂಭೂತರೂ, ಶ್ರೀ ಅಗ್ನಿದೇವರ ಅಂಶ ಸಂಭೂತರಾದ ಶ್ರೀ ವ್ಯಾಸತತ್ತ್ವಜ್ಞ ತೀರ್ಥರ ವಿದ್ಯಾ ಶಿಷ್ಯರೂ ಆದ ಮಾದನೂರಿನ ತಪೋಮೂರ್ತಿ ಶ್ರೀ ವಿಷ್ಣುತೀರ್ಥರ ಆರಾಧನಾ ಮಹೋತ್ಸವದ ನಿಮಿತ್ತ ಸಕಾಲಿಕ ನುಡಿನಮನ.
*ಡಾ.ಗುರುರಾಜ ಪೋಶೆಟ್ಟಿಹಳ್ಳಿ
ಯಸ್ಯ ಪ್ರಚಂಡ ತಪಸಾ ಶ್ರುತಿಗೀತವೃತ್ತೈಃತುಷ್ಟೋ ಹರಿಃ ಕಿಲ ವಶಂ ವದತಾಮವಾಪ ।
ಶ್ರೀ ಮಧ್ವ ಸಮ್ಮತ ಪಯೋನಿಧಿ ಪೂರ್ಣಚಂದ್ರಃಶ್ರೀ ವಿಷ್ಣುತೀರ್ಥಮುನಿರಾಟ್ಮುದಮಾತನೋತು ।।
ಶ್ರೀ ವಿಷ್ಣುತೀರ್ಥರಂತಹಾ ಮಹಾತ್ಮರು ಜನಿಸುವುದು ವಿರಳ. ಹಾಗೂ ಸಮಾಜದ ಬಹು ಪುಣ್ಯ ಲಭ್ಯ ಫಲ. ಇಂತಹ ಉತ್ತಮ ಶ್ಲೋಕರ ಗುಣಾನುಕಥನವು ಪರಮ ಶ್ರೇಯಸ್ಸಿಗೆ ಕಾರಣವಾಗಿದೆ. ಇವರ ಚರಿತ್ರೆಯು ಜನರಿಗೆ ಮಾರ್ಗದರ್ಶಕವೂ ಆಗಿದೆ.
ಶ್ರೀ ವಿಷ್ಣುತೀರ್ಥರು ಕ್ರಿ ಶ 1756ನೇ ಸಂವತ್ಸರ ಶ್ರಾವಣ ಕೃಷ್ಣ ಅಷ್ಟಮೀ ದಿವಸ ಸವಣೂರು ಪ್ರಾಂತ ಸಿದ್ಧಾಪುರ ಗ್ರಾಮದಲ್ಲಿ ಜನಿಸಿದರು.
ತಂದೆ: ಶ್ರೀ ಬಾಳಾಚಾರ್ಯರು, ತಾಯಿ: ಸಾಧ್ವೀ ಭಾಗೀರಥೀ ಬಾಯಿ. ಈ ದಂಪತಿಗಳು ಮಹಾ ಸದಾಚಾರ ಸಂಪನ್ನರೂ, ಆಚಾರ ನಿಷ್ಠರೂ ಆಗಿದ್ದರು. ಇವರು ತಮಗೆ ಬಹು ಕಾಲದವರೆಗೆ ಮಕ್ಕಳಾಗದ ಕಾರಣ ಶ್ರೀ ಜಯತೀರ್ಥರ ಸೇವೆ ಮಾಡಿದರು. ಶ್ರೀ ಜಯತೀರ್ಥರ ಪೂರ್ಣಾನುಗ್ರಹದಿಂದ ಹುಟ್ಟಿದ ಕಾರಣ ಇವರಿಗೆ “ಜಯತೀರ್ಥ” ಎಂದು ನಾಮಕರಣ ಮಾಡಿದರು.
ಮಂತ್ರಾಲಯ ಪ್ರಭುಗಳ ಕಾರುಣ್ಯ
ಜಯತೀರ್ಥನ ಶಕ್ತಿ; ಕುಶಾಗ್ರಮತಿ ಮತ್ತು ವಿದ್ಯಾಸಕ್ತಿಯನ್ನು ಕಂಡು ಶ್ರೀ ಬಾಳಾಚಾರ್ಯರು ಸಂತೋಷ ಪಟ್ಟು ಪ್ರೌಢ ಶಿಕ್ಷಣವನ್ನು ಯೋಗ್ಯ ಗುರುಗಳಿಂದ ಕೊಡಿಸಿ ಅವರನ್ನು ವಿದ್ವಾಂಸರನ್ನಾಗಿ ರೂಪಿಸಬೇಕೆಂದು ಬಯಸಿ ಇದಕ್ಕಾಗಿ ಯೋಗ್ಯ ಪಂಡಿತಾಗ್ರೇಸರರನ್ನು ಆಶ್ರಯಿಸಬೇಕೆಂದು ವಿಚಾರ ಮಾಡಿ ತಮ್ಮ ಮಗನಿಗೆ ಯೋಗ್ಯ ಗುರುಗಳನ್ನು ತೋರಿಸಲು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರೊಬ್ಬರೇ ಸಮರ್ಥರೆಂದು ತಿಳಿದು ಮಗನೊಂದಿಗೆ ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಬಂದರು.ಶ್ರೀ ಬಾಳಾಚಾರ್ಯರು ಮಗನೊಂದಿಗೆ ಮಂತ್ರಾಲಯಕ್ಕೆ ಬಂದು ತುಂಗಭದ್ರೆಯಲ್ಲಿ ಮಿಂದು ಶುಭ್ರರಾಗಿ ಬಂದು ಶ್ರೀ ಗುರುಸಾರ್ವಭೌಮರ ವೃಂದಾವನದ ಮುಂದೆ ನಿಂತು ” ತನಗೆ ಜ್ಞಾನ ತೋರುವ ಯೋಗ್ಯ ಗುರುವನ್ನು ತೋರಿಸು ” ಎಂದು ಜಯತೀರ್ಥನು ವಿನಮ್ರವಾಗಿ ಪ್ರಾರ್ಥಿಸಿದ!ವಿದ್ಯಾ ಪಕ್ಷಪಾತಿಗಳೂ; ಭಕ್ತ ಶಿಷ್ಯ ಜನೋದ್ಧಾರಕರೂ; ಕಲಿಯುಗ ಕಲ್ಪವೃಕ್ಷ ಕಾಮಧೇನುವೆಂದು ಜಗತ್ಪ್ರಸಿದ್ಧರೂ; ಅಘಟಿತಘಟನಾ ಕಾರ್ಯ ಮಾಡುವುದರಲ್ಲಿ ಸಮರ್ಥರೂ ಆದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರೇ ” ಕರುವನ್ನು ( ಜಯತೀರ್ಥ ) ಹಸುವಿನ ( ಐಜಿ ಶ್ರೀ ವೇಂಕಟರಾಮಾಚಾರ್ಯರು ) ಬಳಿ ಸೇರಿಸುವ ಅದೃಶ್ಯ ಸೂತ್ರಧಾರರಾಗಿ, ಪಂಡಿತ ಶ್ರೇಷ್ಠ ಶ್ರೀ ಐಜಿ ವೇಂಕಟರಾಮಾಚಾರ್ಯರನ್ನು ಮಂತ್ರಾಲಯಕ್ಕೆ ಬರುವಂತೆ ಪ್ರೇರೇಪಿಸಿದರು.ಇತ್ತ ಗುರುಗಳಿಗಾಗಿ ಹಂಬಲಿಸುತ್ತಾ ತಮ್ಮನ್ನಾಶ್ರಯಿಸಿದ ಜಯತೀರ್ಥನಿಗೆ ಶ್ರೀ ಐಜಿ ವೇಂಕಟರಾಮಾಚಾರ್ಯರಂತಹಾ ಜ್ಞಾನಿ ಶ್ರೇಷ್ಠರನ್ನು ಶ್ರೀ ಗುರುರಾಜರು ಕರುಣಿಸಿದರು. ಜಯತೀರ್ಥನಂತೂ ಶ್ರೀ ಐಜಿ ವೇಂಕಟರಾಮಾಚಾರ್ಯರ ದರ್ಶನ ಮಾತ್ರದಿಂದಲೇ ಪುಳಕಿತನಾದನು. ಎಷ್ಟೋ ಜನ್ಮಗಳ ಸಂಬಂಧವಿರುವಂತೆ ಭಾವಾವಿಷ್ಟನಾಗಿ ಅವರ ಸಾಮಿಪ್ಯವನ್ನು ಬಯಸಿದನು.
ಶ್ರೀ ಐಜಿ ವೇಂಕಟರಾಮಾಚಾರ್ಯರ ಕೃಪಾ ದೃಷ್ಟಿ
ಶ್ರೀ ಐಜಿ ವೇಂಕಟರಾಮಾಚಾರ್ಯರ ಪವಿತ್ರವಾದ ಪಾದ ಕಮಲಗಳ ಮೇಲೆ ಜಯತೀರ್ಥನು ತನ್ನ ಶಿರವನ್ನಿಟ್ಟು ವಿದ್ಯಾ ದಾನ ಮಾಡಿ ಉದ್ಧರಿಸಬೇಕೆಂದು ಪ್ರಾರ್ಥಿಸಿದ. ಜಯತೀರ್ಥನ ನಯ – ವಿನಯಾದಿ ಸದ್ಗುಣಗಳನ್ನು ಕಂಡು ಶ್ರೀ ಐಜಿ ವೇಂಕಟರಾಮಾಚಾರ್ಯರಿಗೆ ಅತೀವ ಸಂತೋಷವಾಯಿತು. ಇಂತಹಾ ಶಿಷ್ಯ ರತ್ನವನ್ನು ಪಡೆಯಬೇಕೆಂದೇ ಶ್ರೀ ಐಜಿ ವೇಂಕಟರಾಮಾಚಾರ್ಯರು ಶ್ರೀ ಗುರುಸಾರ್ವಭೌಮರ ಪ್ರೇರಣೆಯಂತೆ ಮಂತ್ರಾಲಯಕ್ಕೆ ಆಗಮಿಸಿದ್ದರು.ಶ್ರೀ ಹರಿ ವಾಯು ಗುರುಗಳ ಪರಮಾನುಗ್ರಹದಿಂದ ತಮ್ಮ ವಿದ್ಯೆಯನ್ನು ಧಾರೆಯೆರೆಯಲು ಅನಾಯಾಸವಾಗಿ ಶಿಷ್ಯೋತ್ತಮನೊಬ್ಬನು ದೊರಕಿದನೆಂದು ಶ್ರೀ ಐಜಿ ವೇಂಕಟರಾಮಾಚಾರ್ಯರು ಬಹಳ ಸಂತೋಷಪಟ್ಟರು.
ಶ್ರೀ ಐಜಿ ವೇಂಕಟರಾಮಾಚಾರ್ಯರು ತಮ್ಮ ಪಾದಾಕ್ರಾಂತನಾದ ಜಯತೀರ್ಥನನ್ನು ಮೈದಡವಿ ಎಬ್ಬಿಸಿ ಆತ್ಮೀಯತೆಯಿಂದ ಮಾತನಾಡಿಸಿ; ಅವನ ಕಾಂತಿಯುಕ್ತವಾದ ಮುಖ ಕಮಲದಲ್ಲಿ ಅವತಾರ ಪುರುಷನ ದಿವ್ಯ ಲಕ್ಷಣಗಳನ್ನು ಕಂಡು ಪುಳಕಿತರಾದರು. ಮುಂದೆ ಜಯತೀರ್ಥನಿಂದ ದ್ವೈತ ಮತಕ್ಕೆ ಅನುಪಮವಾದ ಸೇವೆ ಸಲ್ಲುವುದೆಂದು ಮನಗೊಂಡು ಶ್ರೀ ಐಜಿ ವೇಂಕಟರಾಮಾಚಾರ್ಯರು ಜಯತೀರ್ಥನನ್ನು ತಮ್ಮ ವಿದ್ಯಾ ಶಿಷ್ಯನನ್ನಾಗಿ ಸ್ವೀಕರಿಸಿದರು.
ವಿದ್ಯಾ ಗುರುಗಳು
ಐಜಿ ಶ್ರೀ ವೇಂಕಟರಾಮಾಚಾರ್ಯರು ( ಶ್ರೀ ವ್ಯಾಸತತ್ತ್ವಜ್ಞರು )ವೇಣೀ ಸೋಮಪುರದ ಶ್ರೀ ಐಜಿ ಆಚಾರ್ಯರಲ್ಲಿ ಬ್ರಹ್ಮಚರ್ಯದಿಂದ ವಿದ್ಯಾಭ್ಯಾಸ ಮಾಡಿ ನ್ಯಾಯ – ವ್ಯಾಕರಣ – ಮೀಮಾಂಸಾ – ವೇದಾಂತಗಳಲ್ಲಿ ಘನ ಪಂಡಿತರಾಗುತ್ತಾರೆ.
ಪ್ರೌಢ ಗ್ರಂಥಗಳ ಅಧ್ಯಯನ
ಜ್ಞಾನ ಭಕ್ತಿ ವೈರಾಗ್ಯ ಭರಿತರೂ; ಶ್ರೇಷ್ಠ ವಿದ್ವಾಂಸರಾದ ಶ್ರೀ ಐಜಿ ವೇಂಕಟರಾಮಾಚಾರ್ಯರ ಶಿಷ್ಯತ್ವವನ್ನು ವಹಿಸಿ ಗುರು ಶುಶ್ರೂಷನಿರತನಾದ ಜಯತೀರ್ಥನ ಜ್ಞಾನದಾಹ, ವಿಧೇಯತೆ, ಗುರುಭಕ್ತಿ, ಅರ್ಪಣಾಭಾವ ಮುಂತಾದ ಸದ್ಗುಣಗಳು ಶ್ರೀ ಐಜಿ ವೇಂಕಟರಾಮಾಚಾರ್ಯರ ಮನಸ್ಸನ್ನು ಸೆರೆ ಹಿಡಿದವು. ಅಲ್ಲದೇ ಜಯತೀರ್ಥನಿಗೆ ಸಮಗ್ರವಾದ ದ್ವೈತ ವೇದಾಂತ ವಿದ್ಯೆಯನ್ನು ಆಮೂಲಾಗ್ರವಾಗಿ ಪಾಠ ಮಾಡಿ ವಿದ್ವತ್ಪ್ರಪಂಚವೇ ಬೆರಗಾಗುವಂತೆ ಶ್ರೇಷ್ಠ ಪಂಡಿತನನ್ನಾಗಿ ತಯಾರು ಮಾಡಿ ತಮ್ಮ ವಿದ್ಯೆಯನ್ನು ಜಯತೀರ್ಥನಿಗೆ ಧಾರೆಯೆರೆದು ಸಾರ್ಥಕತೆಯ ಕಂಡರು.
ಶ್ರೀ ಐಜಿ ವೇಂಕಟರಾಮಾಚಾರ್ಯರ ಮಾತೃವಾತ್ಸಲ್ಯ
ಶ್ರೀ ಐಜಿ ವೇಂಕಟರಾಮಾಚಾರ್ಯರು ತಾವು ಹೋದಲ್ಲೆಲ್ಲಾ ತಮ್ಮ ಪ್ರೀತಿಯ ವಿದ್ಯಾ ಶಿಷ್ಯನಾದ ಜಯತೀರ್ಥನನ್ನು ಕರೆದುಕೊಂಡು ಹೋಗುತ್ತಿದ್ದರು. ವಿದ್ವಜ್ಜನ ಸಮೂಹದಲ್ಲಿ; ಪಂಡಿತ ಮಂಡಲಿಯಲ್ಲಿ; ರಾಜಾಸ್ಥಾನದಲ್ಲಿ ಶಿಷ್ಯನನ್ನು ಮುಕ್ತಕಂಠದಿಂದ ಪ್ರಶಂಸಿಸಿ ಅವನ ಪ್ರತಿಭಾ ಸಾಮರ್ಥ್ಯಗಳನ್ನು ಪ್ರಕಟ ಪಡಿಸುವ ಅವಕಾಶಗಳನ್ನು ಕಲ್ಪಿಸಿ ಕೊಡುತ್ತಿದ್ದರು.
ಗುರು ಪುತ್ರನ ಅಪಮೃತ್ಯು ಪರಿಹಾರ
ಶ್ರೀ ಜಯತೀರ್ಥಾಚಾರ್ಯರು ವೇಣೀಸೋಮಪುರದಲ್ಲಿ ಶ್ರೀ ಐಜಿ ವೇಂಕಟರಾಮಾಚಾರ್ಯರ ಆಶ್ರಯದಲ್ಲಿದ್ದಾಗ ಅವರ ಮಕ್ಕಳಾದ ಶ್ರೀ ಗೋಪಾಲಕೃಷ್ಣಾಚಾರ್ಯರಿಗೆ ಪ್ರಾರಬ್ಧವಶಾತ್ ಅಪಮೃತ್ಯು ಪ್ರಾಪ್ತವಾದಾಗ ಗುರುಗಳ ಆಜ್ಞೆಯಂತೆ ” ಶ್ರೀ ನೃಸಿಂಹ ಮಂತ್ರ ” ವನ್ನು ಒಂದು ಸಪ್ತಾಹ ಜಪ ಮಾಡಿ ಅವರ ಅಪಮೃತ್ಯುವನ್ನು ಪರಿಹಾರ ಮಾಡಿದರು. ಹೇಳಿ ಕೇಳಿ ಮೊದಲೇ ಇವರು ಮೂಲ ರೂಪದಲ್ಲಿ ನೃಸಿಂಹೋಪಾಸಕರಲ್ಲವೇ!
ಪಾದುಕಾ ಮಹಿಮೆ
ಒಂದು ಸಲ ಶ್ರೀ ಐಜಿ ವೇಂಕಟರಾಮಾಚಾರ್ಯರು ತಮ್ಮ ಶಿಷ್ಯನ ಮನೆಗೆ ಶುಭ ಸಮಾರಂಭಕ್ಕೆ ಹೋಗಬೇಕಾದ ಸಂದರ್ಭದಲ್ಲಿ ತಮ್ಮ ಶಿಷ್ಯರನ್ನೆಲ್ಲಾ ಮೊದಲೇ ಕಳುಹಿಸಿದ್ದರು.ಶ್ರೀ ಐಜಿ ವೇಂಕಟರಾಮಾಚಾರ್ಯರು ಕುದುರೆಯ ಮೇಲೆ ಸಮಾರಂಭಕ್ಕೆ ಹೊರಟರು.
ಜೊತೆಯಲ್ಲಿ ಅವರ ಪ್ರಿಯ ಶಿಷ್ಯರಾದ ಶ್ರೀ ಜಯತೀರ್ಥಾಚಾರ್ಯರೊಂದಿಗೆ. ಬೇಸಿಗೆ ಆದ್ದರಿಂದ ಬಿಸಿಲಿನ ತಾಪದಿಂದ ಹೆಜ್ಜೆಯಿಡುವುದೇ ಕಠಿಣವಾಯಿತು. ಬಿಸಿಲಿನಲ್ಲಿ ಬರಿಗಾಲಲ್ಲಿ ನಡೆಯುತ್ತಿದ್ದ ಶಿಷ್ಯನನ್ನು ಕಂಡು ಪರಿತಾಪಗೊಂಡು ಶ್ರೀ ಐಜಿ ವೇಂಕಟರಾಮಾಚಾರ್ಯರು ತಮ್ಮ ಪಾದುಕೆಯನ್ನು ತೆಗೆದು ತಮ್ಮ ಶಿಷ್ಯರಾದ ಶ್ರೀ ಜಯತೀರ್ಥಾಚಾರ್ಯರಿಗೆ ಕೊಟ್ಟರು.ಶ್ರೀ ಜಯತೀರ್ಥಾಚಾರ್ಯರು ಗುರುಗಳು ನೀಡಿದ ಪಾದುಕೆಗಳನ್ನು ವಿನಮ್ರವಾಗಿ ಸ್ವೀಕರಿಸಿ; ಗುರುಭಕ್ತಿ ಧುರಂಧರರಾದ ಅವರಿಗೆ ಅವುಗಳನ್ನು ಕಾಲಿನಲ್ಲಿ ಮೆಟ್ಟಿಕೊಳ್ಳಲು ಮನಸ್ಸಾಗಲಿಲ್ಲ.
ಭವ ತಾರಕವಾದ ಗುರುಗಳ ಪಾದುಕೆಗಳು ಅನಾಯಾಸವಾಗಿ ತಮ್ಮ ಕರಗತವಾಗಿದ್ದಕ್ಕೆ ಬಹಳ ಸಂತೋಷ ಪಟ್ಟು ತಮ್ಮ ತಲೆಯ ಮೇಲೆ ಇಟ್ಟುಕೊಂಡು ನಡೆಯಲಾರಂಭಿಸಿದರು. ಪಾದುಕೆಯ ಮಹಿಮೆಯಿಂದ ಬಿಸಿಲಿನ ತಾಪ ಆಗದೇ ತಂಪಾದ ಹುಲ್ಲಿನ ಮೇಲೆ ಹೆಜ್ಜೆ ಇಟ್ಟಂತೆ ಅನುಭವವಾಯಿತು. ಗುರುಗಳ ಪಾದುಕೆಯು ಅದ್ಭುತ ಮಹಿಮೆಯನ್ನೇ ಮಾಡಿಬಿಟ್ಟಿತು.
ಅವಧೂತರಾದರು
ಮುಂದೆ ಶ್ರೀ ಜಯತೀರ್ಥಾಚಾರ್ಯರು ಗೃಹಸ್ಥಾಶ್ರಮಿಗಳಾಗಿ ಶಿಷ್ಯರಿಗೆ ಆದರದಿಂದ ಪಾಠ ಪ್ರವಚನ ಮಾಡುತ್ತಲಿದ್ದರು.
ಶ್ರೀ ಪುರಂದರದಾಸರ ಈ ಪದವು ಶ್ರೀ ಜಯತೀರ್ಥಾಚಾರ್ಯರ ಜೀವನ ದಿಶೆಯನ್ನೇ ಬದಲು ಮಾಡಿತು. ತತ್ ಕ್ಷಣವೇ ಶ್ರೀ ಜಯತೀರ್ಥಾಚಾರ್ಯರು ವೈರಾಗ್ಯ ತಾಳಿ ಪತ್ನಿ, ಪುತ್ರ, ಗೃಹಾದಿಗಳನ್ನು ತ್ಯಾಗ ಮಾಡಿದರು. ಸರ್ವಾಧಾರನೂ; ಸರ್ವಸಾರನೂ ಆದ ಪರಮಾತ್ಮನನ್ನು ಹೊರತು ಪಡಿಸಿ ಜಗತ್ತಿನಲ್ಲಿರುವ ಸರ್ವ ಚರಾಚರ ವಸ್ತುಗಳೂ ಸಾರ ರಹಿತವೆಂದರಿತು ಶ್ರೀ ಜಯತೀರ್ಥಾಚಾರ್ಯರು ಅವಧೂತರಾದರು.ಮಳಖೇಡಕ್ಕೆ ಹೋಗಿ ಶ್ರೀ ಜಯತೀರ್ಥರ ಮೂಲ ಮೃತ್ತಿಕಾ ಸನ್ನಿಧಾನದಲ್ಲಿ ಸೇವೆ ಮಾಡಬೇಕೆಂದು ಪ್ರಯಾಣ ಮಾಡಿದರು. ಎರಡು ಸಲ ಪ್ರಯತ್ನ ಮಾಡಿದರೂ ದಾರಿಯಲ್ಲಿ ದೊಡ್ಡ ಸರ್ಪವು ಅಡ್ಡಗಟ್ಟಿದ್ದರಿಂದ ಅಪಶಕುನವೆಂದು ರಾತ್ರಿ ಮಲಗಿದರು. ಆ ರಾತ್ರಿ ಈ ರೀತಿ ಸ್ವಪ್ನವಾಯಿತು. ಸ್ವಾಧ್ಯಾಯಾನ್ ಮಾ ಪ್ರಮದಃ ಸ್ವಾಧ್ಯಾಯ ಪ್ರವಚನ ಏವೇತಿ ನಾಕೋ ಮೌದ್ಗಲ್ಯಃ ತದ್ಧಿ ತಪಃ ತದ್ಧಿ ತಪಃ ।ಎಂದು ಹೇಳಿದಂತೆ ಆಯಿತು. ಮುಂದೆ ವಾನಪ್ರಸ್ಥಾಶ್ರಮ ಸ್ವೀಕರಿಸಿ ಮಲಾಪಹಾರಿಣೀ ತೀರದಲ್ಲಿರುವ ಮುನವಳ್ಳಿ ಗ್ರಾಮದಲ್ಲಿ ವಾಸ ಮಾಡಿಕೊಂಡಿ ಶಿಷ್ಯರಿಗೆ ಪಾಠ ಪ್ರವಚನ ಮಾಡುತ್ತಿದ್ದರು. ಮುನವಳ್ಳಿಯಲ್ಲಿ ನಿತ್ಯ ಕರ್ಮಾನುಷ್ಠಾನ ಮಾಡುತ್ತಾ ಪ್ರತಿದಿನ ಸುಮಧ್ವ ವಿಜಯ ಪೂರ್ತಿ ಪಾರಾಯಣ ಮಾಡಿ, ಮಧುಕರೀ ವೃತ್ತಿಯಿಂದ ಶಿಷ್ಯರನ್ನು ಪೋಷಿಸಿ 12 ಆವರ್ತಿ ಶ್ರೀಮನ್ನ್ಯಾಯಸುಧಾ ಪರಿಮಳ ಪಾಠ ಪ್ರವಚನ ಜರುಗಿಸಿ ಮಂಗಳ ಮಾಡಿ ಶ್ರೀ ಹರಿಗೆ ಸಮರ್ಪಿಸಿದರು.
ಶ್ರೀ ರಮಾ ಸ್ತೋತ್ರದ ಮಹಿಮಾ
ಈ ಅವಧೂತ ಶಿಖಾಮಣಿಗಳು ಪ್ರತಿನಿತ್ಯ ಆಹ್ನೀಕ ಮಾಡುವ ಸಮಯದಲ್ಲಿ ಇವರ ಶಿಷ್ಯರು ಇವರಿಗೆ ತಿಳಿಯದಂತೆ ಒಂದು ತಾಮ್ರದ ಘಟ್ಟಿ ದೊಡ್ಡ ಅರ್ಧಾಣೆಯನ್ನು ಇವರ ಆಸನ ಬುಡದಲ್ಲಿ ಇಡುತ್ತಿದ್ದರು. 14 ಶ್ಲೋಕಗಳಿಂದ ರಮಾ ಸ್ತೋತ್ರವನ್ನು ನಿತ್ಯವೂ ಅಭಿಮಂತ್ರಿಸುತ್ತಿದ್ದರು.
ಇವರ ಆಹ್ನೀಕ ಮುಗಿದ ಮೇಲೆ ಆ ಆಸನದ ಬುಡದಲ್ಲಿಯ ಆ ತಾಮ್ರದ ನಾಣ್ಯವು ಚಿನ್ನದ್ದಾಗಿರುತ್ತಿತ್ತು. ಈ ಚಿನ್ನದ ನಾಣ್ಯವನ್ನು ಮಾರಿ 200 ಜನ ಶಿಷ್ಯರಿಗೆ ನಿತ್ಯವೂ ಮೃಷ್ಟಾನ್ನ ಭೋಜನ ನಡೆಯುತ್ತಿತ್ತು. ಈ ರೀತಿ ಒಂದು ವರ್ಷ ನಡೆಯಿತು.
ಗ್ರಂಥಗಳು
ಶ್ರೀ ಕೃಷ್ಣಾಷ್ಟಕಮ್ ( ಅಂತ್ಯ ಕಾಲ ಪ್ರಾರ್ಥನಾ )
ಇದು ಶ್ರೀ ವಿಷ್ಣುತೀರ್ಥರ ಕೃತಿಗಳಲ್ಲಿಯೇ ಅಪೂರ್ವವಾದ ಕೃತಿ. ಇದರಲ್ಲಿ 8 ಶ್ಲೋಕಗಳಿವೆ. ಇದು ಸಂಸ್ಕೃತದಲ್ಲಿ ರಚಿತವಾಗಿದೆ. ಪ್ರತಿಯೊಂದು ಪಂಕ್ತಿಯೂ ಮೆಲಕು ಹಾಕುವಂತಿದ್ದು ಭಕ್ತ ಹೃದಯ ತನ್ನ ಅಂತ್ಯ ಕಾಲದ ವರೆಗೂ ಕೂಡಿಟ್ಟು ಕೊಳ್ಳಬೇಕಾದ ಬಹು ಆಪ್ತ ಕೃತಿ ಇದಾಗಿದೆ.
ಸುಮಧ್ವ ವಿಜಯ ಪ್ರಮೇಯ ಫಲ ಮಾಲಿಕಾ
ಇದು ಶ್ರೀ ನಾರಾಯಣ ಪಂಡಿತಚಾರ್ಯರಿಂದ ರಚಿತವಾದ 1008 ಶ್ಲೋಕವುಳ್ಳ ಸುಮಧ್ವ ವಿಜಯ ಪಾರಾಯಣದಿಂದ ತಮಗೆ ಸಿಕ್ಕ ಫಲವನ್ನು ಕೇವಲ 22 ಶ್ಲೋಕದಲ್ಲಿ ಮೂಲಕ್ಕೆ ಚ್ಯುತಿ ಬಾರದಂತೆ ಗ್ರಂಥದ ಸಾರ ಸರ್ವಸ್ವವನ್ನು ಅತ್ಯಂತ ಸತ್ವಯುತವಾಗಿ ಬಿಂಬಿಸುವ ಈ ಕೃತಿ.ಶ್ರೀ ವಿಷ್ಣುತೀರ್ಥರ ಪಾಂಡಿತ್ಯಕ್ಕೂ, ಪ್ರತಿಭಾ ಸಾಮಥ್ಯಕ್ಕೂ ಹಿಡಿದ ಕೈಗನ್ನಡಿಯಾಗಿದೆ.
ಅಧ್ಯಾತ್ಮಾಮೃತ ರಸರಂಜನೀ
49 ಶ್ಲೋಕಗಳುಳ್ಳ ” ಆಧ್ಯಾತ್ಮಾಮೃತ ರಸರಂಜನೀ ” ಯೆಂಬ ಕೃತಿಯಲ್ಲಿ ಮನೋದೋಷ ನಿರಸನ ಪ್ರಕರಣ: ಧ್ಯಾನ ಪ್ರಕರಣ ಮತ್ತು ಸರ್ವ ಸಮರ್ಪಣ ಪ್ರಕರಣಗಳ ಕುರಿತು ತಿಳಿಸುವ ಕೃತಿ.
ಮುಕ್ತಮಾಲಾ (ಭಗವದ್ಗೀತಾ ಸಾರೋದ್ಧಾರ)
ಕೇವಲ 20 ಶ್ಲೋಕಗಳಲ್ಲಿ – 18 ಅಧ್ಯಾಯಗಳ 700 ಶ್ಲೋಕಗಳ ಸಾರವನ್ನು ಶ್ರೀ ವಿಷ್ಣುತೀರ್ಥರು ಸಂಗ್ರಹಿಸಿ ಕೊಟ್ಟಿದ್ದಾರೆ.
ನ್ಯಾಯಸುಧಾ ಸ್ತೋತ್ರ
ಶ್ರೀ ಜಯತೀರ್ಥರ ಮೇರು ಕೃತಿಯಾದ ಶ್ರೀಮನ್ನ್ಯಾಯಸುಧಾ ಗ್ರಂಥವನ್ನು ಕೊಂಡಾಡುವ 8 ಶ್ಲೋಕಗಳುಳ್ಳ ಸ್ತೋತ್ರ ರತ್ನವಿದು. ಶ್ರೀ ಟೀಕಾಕೃತ್ಪಾದರ ಗ್ರಂಥಗಳನ್ನು ಭಕ್ತಿ ಶ್ರದ್ಧೆಗಳಿಂದ ಅಧ್ಯಯನ ಮಾಡುವವರು ಈ ಭವ ಬಂಧನದಲ್ಲಿ ಪುನಃ ಬೀಳುವುದೇ ಇಲ್ಲವೆಂದು ಒತ್ತಿ ಹೇಳುವ ಕೃತಿ.
ಭಾಗವತ ಧರ್ಮ ಸ್ತೋತ್ರ
8 ಶ್ಲೋಕಗಳುಳ್ಳ ಈ ಕೃತಿಯಲ್ಲಿ ಭಾಗವತ ಧರ್ಮದ ಹಿರಿಮೆಯನ್ನೂ; ಭಗವದ್ಭಕ್ತರ ಮಹಿಮೆಯನ್ನೂ ಅತ್ಯಂತ ಸುಂದರವಾಗಿ ಚಿತ್ರಿಸಿದ್ದಾರೆ ಶ್ರೀ ವಿಷ್ಣುತೀರ್ಥರು.
ಉಪದೇಶ ಪತ್ರ
ಶ್ರೀ ವಿಷ್ಣುತೀರ್ಥರಿಗೆ ತಮ್ಮ ಶಿಷ್ಯರಾದ ಗೋಕಾವಿ ಅನಂತಾದ್ರೀಶರಲ್ಲಿ ಎಂಥಹಾ ಅಂತಃಕಾರಣವಿತ್ತು. ಸಾಧನೆಯ ಸತ್ಪಥದಲ್ಲಿ ಅವರನ್ನು ಸುರಕ್ಷಿತವಾಗಿ ಮುನ್ನಡೆಸುವ ಕಳಕಳಿಯಿತ್ತು ಎಂಬುದನ್ನು ಈ ಉಪದೇಶ ಪತ್ರದಿಂದ ವ್ಯಕ್ತವಾಗುತ್ತದೆ. ಇದು ಕನ್ನಡದಲ್ಲಿ ಬರೆಯಲ್ಪಟ್ಟ ಪತ್ರ.
ಆಜ್ಞಾ ಪತ್ರಮ್
ಉಪದೇಶ ಪತ್ರದಲ್ಲಿ ಉದ್ಹೃತವಾದ ಬಹುತೇಕ ವಿಷಯಗಳನ್ನೊಳಗೊಂಡ ಸಂಸ್ಕೃತದ ” ಆಜ್ಞಾ ಪತ್ರ ” ವನ್ನು ಸ್ವತಃ ಶ್ರೀ ವಿಷ್ಣುತೀರ್ಥರೇ ತಮ್ಮ ಶಿಷ್ಯರ ಮಾರ್ಗದರ್ಶನಕ್ಕಾಗಿ ಹೊರಡಿಸುತ್ತಿದ್ದರು.
ಆತ್ಮ ಸುಖಬೋಧಿನಿ ಪತ್ರಿಕಾ
ಪರಮಾತ್ಮನ ಅನುಗ್ರಹದಿಂದಲೇ ಜೀವರಿಗೆ ಸ್ವರೂಪ ಸುಖ ಸಾಧ್ಯ ಎಂಬುದನ್ನು ನಿರೂಪಿಸಲು ಹೊರಟಿರುವ ಕೃತಿ.ಇದು ಕನ್ನಡದಲ್ಲಿ ರಚಿತವಾಗಿದೆ.
ಬಿಂಬಾರ್ಪಣ ವಿಧಿಃ
ಸರ್ವ ಕರ್ಮಗಳನ್ನೂ ಬಿಂಬ ರೂಪಿ ಭಗವಂತನಿಗೆ ಸಮರ್ಪಿಸುವ ” ಬಿಂಬಾರ್ಪಣ ವಿಧಿಃ ” ಶ್ರೀ ವಿಷ್ಣುತೀರ್ಥರ ಸಂಸ್ಕೃತ ಭಾಷೆಯ ಸುಲಲಿತ ಶೈಲಿಯಲ್ಲಿ ರಚಿಸಿರುವ ಗದ್ಯ ಕೃತಿಯಾಗಿದೆ.
ಶ್ರೀಮನ್ನ್ಯಾಯಸುಧಾಟಿಪ್ಪಣಿ (ರಸ ರಂಜನೀ)
ಶ್ರೀಮನ್ನ್ಯಾಯಸುಧಾ ಗ್ರಂಥದ ಮೂಲದರ್ಥವನ್ನು ಸಜ್ಜನರಿಗೆ ತಿಳಿಯ ಪಡಿಸಲೆಂದೇ ಶ್ರದ್ಧೆಯಿಂದ ತಮ್ಮೆಲ್ಲಾ ಪ್ರತಿಭಾ ಸಾಮರ್ಥ್ಯವನ್ನು ಕ್ರೋಢೀಕರಿಸಿ ” ಶ್ರೀಮನ್ನ್ಯಾಯಸುಧಾ ಟಿಪ್ಪಣಿ ” ಯನ್ನು ರಚಿಸಿದ್ದಾರೆ.
ಷೋಡಶೀ
ಅಮೂಲ್ಯವಾದ ಅನೇಕ ಪ್ರಮೇಯ ಪುಂಜಗಳಿಂದ ಕೂಡಿದ ಈ ದೀರ್ಘ ರಚನೆಯಲ್ಲಿ… ಬಂಧಕ – ಬಂಧಕ ನಿವೃತ್ತಿ – ಬಿಂಬ ಪ್ರತಿಬಿಂಬ ಭಾವ – ಬಿಂಬ ಸ್ಥಾಪನಾ – ಸ್ಥೂಲ ಶರೀರ ಸೃಷ್ಠಿ – ಅವಸ್ಥಾತ್ರಾಯ ನಿರ್ಮಾಣ – ಪ್ರಾಣ ವ್ಯಾಪಾರ,- – ಭೋಜನ – ಇಂದ್ರಿಯ ವ್ಯಾಪಾರ – ತತ್ತ್ವಕಾರ್ಯ- ರಥಾದಿ – ಜಾಗೃತ – ಸ್ವಪ್ನ – ಸುಷುಪ್ತಿ – ಗಮನಾಗಮನ ಮತ್ತು ಮೋಕ್ಷ ಎಂಬ 16 ಪ್ರಕರಣಗಳಿದ್ದು ” ಷೋಡಶೀ ” ಯೆಂಬ ಹೆಸರನ್ನು ಅನ್ವರ್ಥಗೊಳಿಸಿದೆ.
ಚತುರ್ದಶೀ
ಜೀವ ಹೋಮ – ಉಪನಯನ – ಸೂರ್ಯಗತಿ – ಆಯುರ್ಯಜ್ಞ – ವೇದಾಧ್ಯಯನ – ಭಿಕ್ಷಾಟನೆ – ಭೋಜನ – ಪಾಪಲೇಪ – ಜೀವ ಪ್ರಯಾಣ ಮಾರ್ಗ – ಬ್ರಹ್ಮಯಜ್ಞ – ಶುದ್ಧಯಜ್ಞ – ಸ್ವರೂಪಯಜ್ಞ – ಸುಲಭ ಪೂಜೆ – ಗುರು ಪ್ರಸಾದ ಲಾಭ ಯೆಂಬ 14 ಪ್ರಕರಣಗಳೊಂದಿಗೆ ಅತ್ಯಮೂಲ್ಯವಾದ ಪ್ರಮೇಯಗಳನ್ನೊಳಗೊಂಡ ಕೃತಿ.
ಗೀತಾಸಾರೋದ್ಧಾರದಂತೆ ಶ್ರೀಮದ್ಭಾಗವತಸಾರೋದ್ಧಾರವೂ ಶ್ರೀ ಅಡವಿ ಸ್ವಾಮಿಗಳಿಂದ ರಚಿತವಾದ ಅಪೂರ್ವ ಕೃತಿ.
ಅವತಾರ ಸಮಾಪ್ತಿ
ಶ್ರೀ ಕೃಷ್ಣನ ಜಯಂತೀಯಂದು ಅವತರಿಸಿ; ಶ್ರೀ ಕೃಷ್ಣ ಕೃಪೆಗೆ ಪಾತ್ರರಾಗುವ ಉತ್ಕೃಷ್ಟವಾದ ಕಾರ್ಯಗಳನ್ನು ಮಾಡಿ; ನಂಬಿ ಬಂದ ಶಿಷ್ಟ ಜನರಿಗೆ ಶ್ರೇಷ್ಠವಾದ ಶ್ರೀ ಕೃಷ್ಣ ಪಥವನ್ನು ತೋರಿಸಿ; ಭಕ್ತ ವೃಂದದ ಇಷ್ಟಾರ್ಥವನ್ನು ಸಲ್ಲಿಸಲು; ಶ್ರೀ ಕೃಷ್ಣ ಸಖರೂ, ವೈಷ್ಣವೋತ್ತಮರೂ ಆದ ಶ್ರೀ ರುದ್ರದೇವರ ಜಯಂತೀ ದಿನವಾದ ಶಿವರಾತ್ರಿಯೆಂದು ಶ್ರೀ ವಿಷ್ಣುತೀರ್ಥರು ಕೃಷ್ಣಾ ನದೀ ತೀರದಲ್ಲಿರುವ ಮಾದನೂರಿನಲ್ಲಿ ವೃಂದಾವನಸ್ಥರಾದರು.
ವಿಷ್ಣುತೀರ್ಥಃ ಕಲ್ಪವೃಕ್ಷೋ ವಿಷ್ಣುತೀರ್ಥಶ್ಚ ಕಾಮಧೃಕ್ । ಚಿಂತಾಮಣಿರ್ವಿಷ್ಣುತೀರ್ಥೋ ಯತೀಂದ್ರಃ ಕಾಮದಃ ।।