* ಕೃಷ್ಣಪ್ರಕಾಶ ಉಳಿತ್ತಾಯ

ದಕ್ಷಿಣಾಮೂರ್ತಿ ಪರಶಿವನ ವಿಭೂತಿರೂಪಗಳಲ್ಲಿ ಒಂದು. ದಕ್ಷಿಣಾ ಅಂದರೆ ಬುದ್ಧಿ ಎಂಬ ಅರ್ಥವೂ ಇದೆ. ಬುದ್ಧಿಯೇ ಮೂರ್ತಿವತ್ತಾಗಿ ಇರುವವ ದಕ್ಷಿಣಾಮೂರ್ತಿ ಅಥವಾ ಬುದ್ಧಿಯ ಕಡೆಗೆ ಅಭಿಮುಖವಾಗಿ ಇರುವವ ದಕ್ಷಿಣಾಮೂರ್ತಿ ಎನ್ನತ್ತಾರೆ ತಿಳಿದವರು. ಮಹಾ ವಟವೃಕ್ಷದ ಕೆಳಗೆ ಕುಳಿತು ಮೌನವಾಗಿಯೇ ತನ್ನ ಇರವಿನಿಂದಲೇ ಅರಿವಿನ ಹರಿವನ್ನು ವೃದ್ಧರಾದ ಶಿಷ್ಯರಿಗೆ ಹರಿಸುತ್ತಾ; ಮೌನವ್ಯಾಖ್ಯಾನದ ಸುಧಾಸಮುದ್ರವನ್ನು ಕೊಡುತ್ತಾ; ಜ್ಞಾನಮುದ್ರೆಯನ್ನು ಧರಿಸಿರುವ; ಶುದ್ಧ ಜ್ಞಾನಸ್ವರೂಪಿಯಾದ; ಪ್ರಶಾಂತವಾದ ಮುಖಮುದ್ರೆಯನ್ನು ಹೊಂದಿದವನಾಗಿ; ಕರ್ಪೂರದಂತೆ ಬಿಳಿಯಾದ ಬಣ್ಣವುಳ್ಳ ಯುವಕನಾದ ದಕ್ಷಿಣಾಮೂರ್ತಿಯನ್ನು ಜ್ಞಾನದ ಅಧಿದೇವತೆಯಾಗಿ ಮತ್ತು ಆದಿಗುರುವೆಂದು ಆರಾಧಿಸುತ್ತಾರೆ.
“ನಿತ್ಯಶೋ ದಕ್ಷಿಣಾಮೂರ್ತೀಂ ಧ್ಯಾಯೆತ್ ಸಾಧಕಸತ್ತಮಃ|
ಶಾಸ್ತ್ರವ್ಯಾಖ್ಯಾನಸಾಮರ್ಥ್ಯಂ ಲಭತೇ ವತ್ಸರಾಂತರೇ||” ವರುಷ ಪರ್ಯಂತ ದಿನವೂ ದಕ್ಷಿಣಾಮೂರ್ತಿಯನ್ನುಆರಾಧಿಸಿದರೆ ಶಾಸ್ತ್ರದ ವ್ಯಾಖ್ಯಾನ ಸಾಮರ್ಥ್ಯವನ್ನು ಪಡೆಯುತ್ತಾನೆ ಎಂಬುದು ಆರಾಧನೆಯ ಫಲ. ದಕ್ಷಿಣಾಮೂರ್ತಿಯನ್ನು ಜ್ಞಾನಧಿದೈವವಾಗಿ “ಮೇಧಾದಕ್ಷಿಣಾಮೂರ್ತಿ” ಎಂಬತೆಯೂ ಕರೆಯುತ್ತಾರೆ. “ಚಿತ್ರಂ ವಟತರೋರ್ಮೂಲೇ ವೃದ್ಧಾಃ ಶಿಷ್ಯಾ ಗುರುರ್ಯುವಾ|ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತೇ ಛಿನ್ನಸಂಶಯಾಃ||” ಎಂಬಲ್ಲಿಯೂ ಗುರುವಿನ ಇರವೇ ಶಿಷ್ಯರ ಸಂಶಯವನ್ನು ಛೇಧಿಸಿದೆ ಎಂದು ಹೇಳಿದೆ.
ಆಚಾರ್ಯ ಶಂಕರರ ದಕ್ಷಿಣಾಮೂರ್ತಿ ಸ್ತೋತ್ರ ಅತ್ಯಂತ ಪ್ರಸಿದ್ಧ. ಹತ್ತು ಶ್ಲೋಕಗಳ ಪುಟ್ಟ ಸ್ತೋತ್ರ ಆಚಾರ್ಯರು ಕಂಡ ವೇದಾಂತದ ತಥ್ಯದರ್ಶನವನ್ನು ಹೇಳುತ್ತದೆ. ಜತೆ ಜತೆಗೇ ದಕ್ಷಿಣಾಮೂರ್ತಿ ಸ್ವರೂಪಿಯ ಸ್ತುತಿ. ಶ್ರವಣ ಗಂಭೀರವೂ ಪಠಣ ಸುಭಗತೆಯಿಂದಲೂ ಕೂಡಿದ ದಕ್ಷಿಣಾಮೂರ್ತಿ ಸ್ವರೂಪಿ ಶ್ರೀಚಕ್ರಾರಾಧನೆಯಲ್ಲೂ ಪ್ರಧಾನ ಪಾತ್ರವಹಿಸುತ್ತದೆ. ಶ್ರೀಚಕ್ರಾರಾಧನೆಯಲ್ಲಿ ಬರುವ ಕೆಲವು ಮಂತ್ರಗಳ ದ್ರಷ್ಟಾರನಾಗಿ ದಕ್ಷಿಣಾಮೂರ್ತಿಯನ್ನು ಕಾಣುತ್ತೇವೆ. ಶ್ರೀಚಕ್ರದ (ಮಯಾತತ್ತ್ವದ ಅಂದರೆ ಬ್ರಹ್ಮಾಂಡದ ಸಮಸ್ತ ಅಭಿವ್ಯಕ್ತಿಯ ಸ್ವರೂಪದ ಸಂಪೂರ್ಣ ತಿಳಿವಳಿಕೆ ಕೇವಲ ದಕ್ಷಿಣಾಮೂರ್ತಿ ಎಂಬ ಮಾತೂ ಇದೆ). ಇರಲಿ.
ವಿಶ್ವಂ ದರ್ಪಣದೃಶ್ಯಮಾನನಗರೀತಲ್ಯಂ ನಿಜಾಂತರ್ಗತಂ
ಪಶ್ಯನ್ನಾತ್ಮನಿ ಮಾಯಯಾ ಬಹಿರಿವೋದ್ಭೂತಂ ಯಥಾ ನಿದ್ರಯಾ|
ಯಸ್ಸಾಕ್ಷಾತ್ಕುರುತೇ ಪ್ರಬೋಧಸಮಯೇ ಸ್ವಾತ್ಮಾನಮೇವಾದ್ವಯಂ
ತಸ್ಮೈ ಶ್ರೀ ಗುರುಮೂರ್ತಯೇ ನಮಃಇದಂ ಶ್ರೀ ದಕ್ಷಿಣಾಮೂರ್ತಯೇ||
ಈ ಪ್ರಪಂಚವು ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬದಂತೆ ನಮ್ಮೊಳಗೇ (ಆತ್ಮನ ಒಳಗೇ ಇರುವ) ಅಥವಾ ಪಿಂಡಾಂಡದೊಳಗಿರುವ ಬ್ರಹ್ಮಾಂಡ ಪ್ರತಿಫಲಿಸಿ ಹೊರಗೆ ಕಾಣುವಂತೆ ಈ ಪ್ರಪಂಚ ನಮಗೆ ಭಾಸವಾಗುತ್ತಿದೆ. ಕನಸಲ್ಲಿ ಕಂಡ ವಿಷಯಗಳಂತೆ ಸತ್ಯವೆಂಬಂತೆ ಕಾಣುತ್ತದೆ. ಕನಸಲ್ಲಿ ವಿಷಯಗಳನ್ನು ಇದು ಕೇವಲ ಕನಸು ಎಂಬಂತೆ ಕಾಣುವ ದಕ್ಷಿಣಾಮೂರ್ತಿಯು ನನಸಲ್ಲೂ ಹೊರಗಿನ ಅಭಿವ್ಯಕ್ತಿ ಆತ್ಮದ ಆಭಾಸವಷ್ಟೇ ಎಂಬಂತೆ ತಿಳಿಯುತ್ತಾನೆ. ಅಂತಹಾ ಪರಮ ಜ್ಞಾನಸ್ವರೂಪಿಯಾದ ದಕ್ಷಿಣಾಮೂರ್ತಿಗೆ ನಮಸ್ಕಾರ ಎಂಬುದು ಸ್ತುತಿಯ ಭಾವ.
ಪ್ರಪಂಚವನ್ನು ನೋಡುತ್ತೇವೆ, ಅನುಭವಿಸುತ್ತೇವೆ. ಇದು ಅಸತ್ಯ ಹೇಗಾಗಲು ಸಾಧ್ಯ. ಇದರ ಮಥಿತಾರ್ಥ ಅಸತ್ಯ ಆಭಾಸ ಅಂದರೆ ಕ್ಷಣಿಕ ಎಂದಿರಲೂ ಬಹುದಲ್ಲವೇ? ಪ್ರಪಂಚ ಬದಲಾಗುತ್ತಾ ಇದೆ. ಈ ಬದಲಾವಣೆ ಜಗದ ನಿಯಮವೆಂದು ಮನಸ್ಸಿಗೆ ಗಟ್ಟಿಯಾಗಿ ಸದ್ಯ ಆಗುತ್ತಿರುವುದರ ಬಗೆಗೆ ಚಿಂತಿಸದಿರುವುದು ಜ್ಞಾನಿಯ ಲಕ್ಷಣವಾಗಲು ಸಾಧ್ಯವಿಲ್ಲವೇ? ಕನಸಲ್ಲೂ ನಾವು ಪಡೆಯುವ ಅನುಭವ ಸತ್ಯವೇ. ಅಲ್ಲಿಯ ಅನುಭವವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. “ಮಾಯಾ” ಅಂದರೆ ಅಶಾಶ್ವತ ಎಂದೂ ಯೋಚಿಸಲು ಎಡೆ ಇದೆ. ಸುರೇಶ್ವರಾಚಾರ್ಯರು ತಮ್ಮ “ಮಾನಸೋಲ್ಲಾಸ” ಎಂಬ ದಕ್ಷಿಣಾಮೂರ್ತಿ ಸ್ತೋತ್ರದ ವ್ಯಾಖ್ಯಾನದಲ್ಲಿ ಹೀಗೆ ಹೇಳುತ್ತಾರೆ:
ಆತ್ಮಲಾಭಾತ್ಪರೋ ಲಾಭೋ ನಾಸ್ತೀತಿ ಮುನಯೋ ವಿದುಃ|
ತಲ್ಲಾಭಾರ್ಥಂ ಗುರುಸ್ತೌತಿ ಸ್ವಾತ್ಮಾನಂ ಪರಮೇಶ್ವರಮ್||
ಆತ್ಮಲಾಭಕ್ಕಿಂತಲೂ ಶ್ರೇಷ್ಠವಾದ ಲಾಭವು ಬೇರಿಲ್ಲವಾದುದರಿಂದ ಮನನಶೀಲರಾದ ಮುನಿಗಳು ಇದನ್ನು ತಿಳಿದವರಾಗಿದ್ದುದರಿಂದ ಗುರುವು ಆತ್ಮತತ್ತ್ವದ ಕುರಿತೇ ಮನನಶಿಲನಾಗಿ ಧ್ಯಾನಿಸುತ್ತಾನೆ ಎನ್ನುತ್ತಾರೆ. ಅಂತಹಾ ಪ್ರಜ್ಞಾನಘನ ಸ್ವರೂಪನಾದ ದಕ್ಷಿಣಾಮೂರ್ತಿ ನಮಗೆಲ್ಲರಿಗೂ ಸುಜ್ಞಾನವನ್ನಿತ್ತು ಪೊರೆಯಲಿ.
ಈಶಾವಾಸ್ಯ, ಸದಾಶಿವ ದೇವಸ್ಥಾನದ ಬಳಿ
ಫೆರ್ಮಂಕಿ, ಮಂಗಳೂರು.