ರಂಭಾಪುರಿ ಪೀಠ (ಬಾಳೆಹೊನ್ನೂರು): ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಮಾರ್ಚ್ 25 ರಿಂದ 30 ರವರೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಗಳು ಹಾಗೂ ಧರ್ಮ ಸಮಾರಂಭ ನಡೆಯುವುದಾಗಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.
ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹಾಗೂ ಕೇದಾರ ಶ್ರೀ ಭೀಮಾಶಂಕರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಮಾ. 25 ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸುವ ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ ಸಮಾರಂಭದಲ್ಲಿ ‘ಸಿದ್ಧಾಂತ ಶಿಖಾಮಣಿ ಭಾವಾರ್ಥ ನಿರೂಪಣೆ’ ಕೃತಿ ಬಿಡುಗಡೆಯಾಗುವುದು. ಸಚಿವರಾದ ಕೋಟಾ ಶ್ರೀನಿವಾಸ, ಬಿಜೆಪಿ ಪ್ರಧಾನ ಕಾರ್ಯದರ್ಶಿ-ಶಾಸಕ ಸಿ.ಟಿ.ರವಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಈಶ್ವರ ಖಂಡ್ರೆ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಐಟಿಐ ನೂತನ ಕಟ್ಟಡ ಹಾಗೂ ಶಿವಾಚಾರ್ಯ ಚೈತನ್ಯ ಧಾಮ ನೂತನ ಕಟ್ಟಡದ ಉದ್ಘಾಟನೆಗೊಳ್ಳಲಿದೆ.
ಉಭಯ ಜಗದ್ಗುರುಗಳ ಸಾನ್ನಿಧ್ಯದಲ್ಲಿ 26 ರ ಬೆಳಗ್ಗೆ ಜರುಗುವ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಸೌಹಾರ್ದ ಶಾಂತಿ ಸಮ್ಮೇಳನವನ್ನು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು.
ಈ ವರ್ಷದ ಪ್ರತಿಷ್ಠಿತ “ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ”ಯನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗಳ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಹೆಚ್. ಸುದರ್ಶನ ಬಲ್ಲಾಳ ಇವರಿಗೆ ಪ್ರದಾನ ಮಾಡಲಾಗುವುದು.
ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟವಾಗಿರುವ ಭಾಷಾ ವಿಜ್ಞಾನಿ ಡಾ.ಸಂಗಮೇಶ ಸವದತ್ತಿಮಠ ವಿರಚಿತ “ವೀರಶೈವ ಪರಿಶೋಧ ಪರಂಪರೆ ಇತಿಹಾಸ ಮತ್ತು ವರ್ತಮಾನ” ಕೃತಿಯನ್ನು ವಿ.ಆರ್.ಎಲ್. ಸಮೂಹ ಸಂಸ್ಥೆಗಳ ಛರ‍್ಮನ್ನರಾದ ಡಾ. ವಿಜಯ ಸಂಕೇಶ್ವರ ಲೋಕಾರ್ಪಣೆ ಮಾಡುವರು. ಮುಖ್ಯ ಅತಿಥಿಗಳಾಗಿ ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ, ಉಪ ಮುಖ್ಯ ಮಂತ್ರಿ ಗೋವಿಂದ ಕಾರಜೋಳ ಸಚಿವರಾದ ಬಸವರಾಜ ಬೊಮ್ಮಾಯಿ, ಮುರುಗೇಶ ನಿರಾಣಿ, ಸಿ.ಸಿ.ಪಾಟೀಲ, ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಶಾಸಕ ಡಿ.ಆರ್.ಪಾಟೀಲ, ವೀ.ಲಿಂ.ಅ.ನಿಗಮದ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ(ನ)ದ ಅಧ್ಯಕ್ಷ ಎಂ. ರುದ್ರೇಶ, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ ಆಗಮಿಸುವರು. ಗೌರಿಗದ್ದೆ ಅವಧೂತ ಆಶ್ರಮದ ವಿನಯ ಗುರೂಜಿ ಭಾಗವಹಿಸುವರು.
27 ರಂದು ರೈತ ಮತ್ತು ಕೃಷಿ ಚಿಂತನ ಸಮಾರಂಭದಲ್ಲಿ ಸಾಧನೆಯ ಸತ್ಪಥ ಭಾಗ-2 ಕೃತಿಯನ್ನು ಕೈಗಾರಿಕಾ ಖಾತೆ ಸಚಿವ ಜಗದೀಶ ಶೆಟ್ಟರ ಬಿಡುಗಡೆ ಮಾಡುವರು. “ನೈಸರ್ಗಿಕ ಕೃಷಿ” ಕುರಿತು ಪ್ರಗತಿಪರ ಕೃಷಿಕ ಚಂದ್ರಶೇಖರ ನಾರಾಯಣಪುರ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್, ಕ.ರಾ.ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಕಳಕಪ್ಪ ಬಂಡಿ, ವಿ.ಪ.ಸದಸ್ಯ ಎಸ್.ಎಲ್. ಬೋಜೇಗೌಡರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವರು.
28 ರಂದು ನಡೆಯುವ ಧರ್ಮ ಮತ್ತು ಮಹಿಳೆ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ‘ಕಾಯಕ ಯೋಗಿ ವೀರ ಗಂಗಾಧರ ಜಗದ್ಗುರುಗಳು’ ನಾಟಕದ ಕೃತಿ ಬಿಡುಗಡೆ ಮಾಡುವರು. ಡಾ. ಸಂಗಮೇಶ ಸವದತ್ತಿಮಠರು ‘ಶಿವಾರಾಧನಾ ಪ್ರದೀಪಿಕಾ’ ಕೃತಿ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಬಿ.ವೈ.ಅರುಣಾದೇವಿ, ಬಾಳೆಹೊನ್ನೂರಿನ ಬಿ.ಸಿ.ಗೀತಾ ಸೇರಿದಂತೆ ಜಿಲ್ಲಾ ಪಂಚಾಯತ ತಾಲೂಕ ಪಂಚಾಯತ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರುಗಳು ಪಾಲ್ಗೊಳ್ಳುವರು.
29 ರಂದು ಚಿಕ್ಕಮಗಳೂರು ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ವತಿಯಿಂದ ಚಿಕ್ಕಮಗಳೂರು ಜಿಲ್ಲಾ ದ್ವಿತೀಯ ಮಾಧ್ಯಮ ಸಮ್ಮೇಳನ ಜರುಗಲಿದ್ದು ಚಿಕ್ಕೊಳಲೆ ಸದಾಶಿವ ಶಾಸ್ತಿç ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಸುವರ್ಣಾದೇವಿ ಮಹಿಳಾ ರತ್ನ ಪ್ರಶಸ್ತಿ ಪ್ರದಾನ ನಡೆಯಲಿದೆ.
ಪ್ರತಿದಿನ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ
ಮಾ. 26 ರಂದು ಪ್ರಾತ:ಕಾಲದಲ್ಲಿ ಶಿವದೀಕ್ಷಾ-ಅಯ್ಯಾಚಾರ ನೆರವೇರಲಿದ್ದು ಅಪೇಕ್ಷಿತರು 2 ದಿನ ಮುಂಚಿತವಾಗಿ ಕಾರ್ಯಾಲಯದಲ್ಲಿ ಹೆಸರು ನೊಂದಾಯಿಸಬೇಕು. ಆಗಮಿಸುವ ಭಕ್ತಾದಿಗಳಿಗೆ ಉಚಿತ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಸಮಾರಂಭಗಳಲ್ಲಿ ನಾಡಿನ ವಿವಿಧ ಮಠಾಧೀಶರು ಭಾಗವಹಿಸುವರು. ಪ್ರತಿ ದಿನ ಸಂಗೀತ, ಭರತ ನಾಟ್ಯ ಕಾರ್ಯಕ್ರಮಗಳು ಇರುತ್ತವೆ.
30 ರಂದು ಭದ್ರಾ ನದಿ ತೀರದಲ್ಲಿ ಸುರಗೀ ಸಮಾರಾಧನೆಯೊಂದಿಗೆ ಎಲ್ಲ ಕಾರ್ಯಕ್ರಮಗಳು ಮಂಗಲಗೊಳ್ಳುವವು. ಸಮಾರಂಭಗಳಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಅಂತರ ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ತಿಳಿಸಿದ್ದಾರೆ.
ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ
ಜಗದ್ಗುರು ರಂಭಾಪುರೀ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು.