ಬೆಂಗಳೂರು: ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆಜ್ಞಾನುಸಾರ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯ ಅವರ ನೇತೃತ್ವದಲ್ಲಿ ಮಾರ್ಚ್ 18ರಂದು ಚಂದ್ರಿಕಾ ಗಿರೀಶ್ ಅವರಿಂದ ದಾಸರ ಪದಗಳ ಗಾಯನ ಕಾರ್ಯಕ್ರಮ ನಡೆಯಿತು.
“ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿ ಮತಿ ಪ್ರೇರಿಸುವಳು ಪಾರ್ವತಿದೇವೀ” ಎಂದು ವಿಘ್ನೇಶ್ವರನನ್ನು ಪ್ರಾರ್ಥಿಸುತ್ತಾ ಗಾಯನ ಸೇವೆಯನ್ನು ಪ್ರಾರಂಭಿಸಿದರು. “ಸ್ಮರಿಸು ಗುರುಗಳ ಮನವೇ”, “ಎಂಥಾ ದಯವಂತನೋ ಮಂತ್ರಮುನಿ ನಾಥನೋ”, “ಎದ್ದು ಬರುತಾರೆ ನೋಡೆ ಮುದ್ದು ಬೃಂದಾವನದೊಳಗಿಂದ”, “ತಾನೇ ಗೋಕುಲಕೆ ಬಂದ ಶಿವ ಭವಭಯಹರ”, “ಸ್ವಾಮಿ ಮುಖ್ಯಪ್ರಾಣ”, “ಜಗತ್ಪತಿಯ ತೋರಮ್ಮ”, “ರಂಗ ಬಾರನೇ ಶ್ರೀರಂಗ ಬಾರನೇ”, “ಬಂದನೋ ಗೋವಿಂದ ಚೆಂದದಿ ಆನಂದ”, “ಏನು ಪುಣ್ಯವ ಮಾಡಿ ನಾನಿಂದು ನಿನ್ನ ಕಂಡೆ”, “ಏನು ಒಲ್ಲೆ ಹರಿಯೆ ನಿನ್ನ ಸ್ತುತಿಸಿ ಕೇಳುವುದು”, ಜಯದೇವ ಜಯದೇವ ಜಯ ವೆಂಕಟೇಶ” ಇನ್ನೂ ಮುಂತಾದ ಹಲವಾರು ಅಪರೂಪದ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿ,”ಇಂದಿನ ದಿನವೇ ಶುಭದಿನವು” ಎಂಬ ಉಗಾಭೋಗದಿಂದ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.
ಪಕ್ಕವಾದ್ಯದಲ್ಲಿ, ಕೀ-ಬೋರ್ಡ್ ನಲ್ಲಿ ಅಮಿತ್ ಶರ್ಮಾ, ತಬಲಾದಲ್ಲಿ ಸರ್ವೋತ್ತಮ ಸಾಥ್ ನೀಡಿದರು.
ವರದಿ: ದೇಸಾಯಿ ಸುಧೀಂದ್ರ