ಸರಳತೆಯ ಸಾಕಾರಮೂರ್ತಿ ಹಿರೇಮಠದ ಸಂತ ಡಾ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ

ತುಮಕೂರಿನ ಹಿರೇಮಠದ ಶ್ರೀಗಳಾದ ಪೂಜ್ಯ ಡಾ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳವರ 60ನೇ ಜನ್ಮದಿನೋತ್ಸವ ಮಾರ್ಚ್ 29 ರಂದು. ಈ ಹಿನ್ನೆಲೆಯಲ್ಲಿ ಕನ್ನಡಪ್ರೆಸ್. ಕಾಮ್ ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಶ್ರೀವತ್ಸ ನಾಡಿಗ್ , ಶ್ರೀಗಳಿಗೆ ಶುಭಹಾರೈಸಿದ್ದಾರೆ.

ಶ್ರೀವತ್ಸ ನಾಡಿಗ್

ನಾನಾಗ ವಿಜಯ ಕರ್ನಾಟಕ ಗ್ರೂಪ್ ನ ಬೋಧಿವೃಕ್ಷ ಮತ್ತು ವಿಜಯNEXT ಪತ್ರಿಕೆಗಳ ಸಂಪಾದಕ. ನನ್ನ ಸಹೋದ್ಯೋಗಿ ವಾದಿರಾಜ ದೇಸಾಯಿ ಅವರು ಧಾರವಾಡದ ಕರ್ನಾಟಕ ವಿವಿಯ ತಮ್ಮ ಹಾಸ್ಟೆಲ್ ನ ಹಿರಿಯ ಸಹಪಾಠಿಯೊಬ್ಬರು ತುಮಕೂರಿನ ಮಠವೊಂದಕ್ಕೆ ಪೀಠಾಧಿಪತಿಗಳಾಗಿದ್ದಾರೆಂದೂ, ಅವರು ಬೆಂಗಳೂರಿಗೆ ಬಂದಿದ್ದು ಕಚೇರಿಗೆ ಆಹ್ವಾನಿಸೋಣ ಎಂದರು.

ನಾನು ಸರಿ ಎಂದೆ. ಈ ವೇಳೆಗೆ ದೇಸಾಯಿ, ಸ್ವಾಮೀಜಿ ಅವರ ಅಧ್ಯಾತ್ಮ ಸೆಳೆತ, ಓದುತ್ತಿರುವಾಗಲೆ ಅವರಲ್ಲಿ ಮನೆ ಮಾಡಿದ್ದ ಧಾರ್ಮಿಕ ಶ್ರದ್ಧೆ ಇತ್ಯಾದಿಗಳ ಬಗ್ಗೆ ವಿವರಿಸಿದ್ದರು. ಅಂತೂ ಸ್ವಾಮೀಜಿ ಅವರು ಕಚೇರಿಗೆ ಬರುವ ದಿನವೂ ಬಂತು. ಸ್ವಾಮೀಜಿ ಎಂದರೆ ಹಿಂದೆ ಮುಂದೆ ಶಿಷ್ಯ ಕೋಟಿ ಇರುತ್ತದೆಯೆಂದೂ, ಛತ್ರ ಚಾಮರಗಳಿರುತ್ತವೆಂದು ಭಾವಿಸಿದ್ದ ನಮಗೆ ಈ ಸ್ವಾಮೀಜಿ ಅಚ್ಚರಿ ಮೂಡಿಸಿದರು. ಅದೂ ಅಲ್ಲದೆ ಪತ್ರಿಕಾ ಕಚೇರಿಗೆ ನಾವು ಸ್ವಾಮೀಜಿಯೊಬ್ಬರನ್ನು ಆಹ್ವಾನಿಸಿದ್ದೂ ಅದೇ ಮೊದಲು. ಸ್ವಾಮೀಜಿಯೊಬ್ಬರನ್ನು ಹೇಗೆ ಎದುರುಗೊಳ್ಳುವುದು, ಪಾಲಿಸ ಬೇಕಾದ ಶಿಷ್ಟಾಚಾರಗಳೇನು ಎಂಬ ಗೊಂದಲದಲ್ಲೇ ಇದ್ದ ನಮಗೆ ಯಾವ ಇರುಸು ಮುರುಸು ಆಗದಂತೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಈ ಸ್ವಾಮೀಜಿ ನಮ್ಮ ಕಚೇರಿಗೆ ಬಂದರು. ಸ್ವಾಮೀಜಿ ಬಂದರು ಎನ್ನುವ ಸುದ್ದಿ ನಮಗೆ ಮುಟ್ಟುವ ಮೊದಲೆ ಅವರು ಸಂಪಾದಕರ ಚೇಂಬರ್ ನೊಳಗೆ ಬಂದಿದ್ದಾಗಿತ್ತು. ಆಜಾನುಬಾಹು. ತೆಳು ಗೆಂಪಿನ ಕಾವಿ ವಸ್ತ್ರ ಧರಿಸಿದ್ದ ಸ್ವಾಮೀಜಿ ಅವರನ್ನು ನೋಡುತ್ತಿದ್ದಂತೆ ನಮ್ಮ ಇಡೀ ತಂಡ ಸ್ವಾಮೀಜಿ ಅವರ ಸರಳ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದು ಸುಳ್ಳಲ್ಲ. ನಮಗೆ ಅಂದು ಸಂತರೊಬ್ಬರ ಸಾಕ್ಷತ್ ದರ್ಶನವಾಗಿತ್ತು. ಅವರೇ ನಮ್ಮ ತುಮಕೂರು ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯರು.

ನಂತರ ಮಾತು ಕತೆಗೆ ಕುಳಿತಾಗ ಅವರ ಆಧ್ಯಾತ್ಮಿಕ ಜ್ಞಾನದ ಪರಿಚಯವಾಗಿತ್ತು. ವಚನ ಸಾಹಿತ್ಯದ ಬಗ್ಗೆ ಅಂಕಣ ಬರೆಯಿರಿ ಎಂದಾಗ ಒಪ್ಪಿಕೊಂಡು ಒಂದು ವಾರವೂ ತಪ್ಪದಂತೆ ಬರೆದರು. ಅಂಕಣವನ್ನು ಒಂದು ದಿನವೂ ತಪ್ಪಿಸಲಿಲ್ಲ. ಅನೇಕ ಅಂಕಣಕಾರರಿಗೆ ಆರಂಭದಲ್ಲಿದ್ದ ಉತ್ಸಾಹ ಬರು ಬರುತ್ತಾ ಕ್ಷೀಣಿಸುವುದುಂಟು ಆದರೆ ಸ್ವಾಮೀಜಿ ಅವರ ಉತ್ಸಾಹ ಕಡಿಮೆಯಾಗಲೇ ಇಲ್ಲ. ಅಂಕಣಕ್ಕಾಗಿ ಅವರು ವಚನ ಸಾಹಿತ್ಯದಲ್ಲಿ ಸಂಶೋಧನೆಯನ್ನೇ ಮಾಡಿ ಅದಕ್ಕೊಂದು ಹೊಸ ವ್ಯಾಖ್ಯಾನವನ್ನೇ ನೀಡಿದರು. ಅನಂತರ ಆಗಾಗ್ಗೆ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುವುದು ನಡೆದಿತ್ತು. ನಾವು ಹಮ್ಮಿಕೊಳ್ಳುತ್ತಿದ್ದ ಅನೇಕ ಸತ್ಸಂಗ ಕಾರ್ಯಕ್ರಮಗಳಿಗೆ ತುಂಬು ಪ್ರೀತಿಯಿಂದ ಆಗಮಿಸಿ ತಮ್ಮ ಜ್ಞಾನ ಸಂಪತ್ತನ್ನು ಓದುಗರೊಂದಿಗೆ ಹಂಚಿಕೊಂಡರು.

ಮೂರು ವರ್ಷದ ಹಿಂದೆ ಅವರ ವರ್ಧಂತಿ ಉತ್ಸವದಲ್ಲಿ ಭಾಗಿಯಾಗುವ ಅವಕಾಶ ಒದಗಿಬಂದಿತ್ತು. ನಾನು ಮತ್ತು ಸಹೋದ್ಯೋಗಿಯಾಗಿದ್ದ ದಿ. ಗೌರಿಪುರ ಚಂದ್ರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಈ ಸಂದರ್ಭದಲ್ಲಿ ಯುವ ಜನರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸುವಲ್ಲಿ ಸ್ವಾಮೀಜಿ ಮಾಡಿದ ಕಾರ್ಯ ಕಂಡು ಬೆರಗಾದೆವು. ಆಧುನಿಕ ಸಂವಹನ ಮಾಧ್ಯಮಗಳಾದ ವಾಟ್ಸಪ್, ಫೇಸ್ ಬುಕ್ ಇತ್ಯಾದಿಗಳ ಮೂಲಕ ಯುವಜನರಿಗೆ ಮಾರ್ಗದರ್ಶನ ನೀಡುತ್ತಿರುವ ಸ್ವಾಮೀಜಿ ಅವರ ಕೈಂಕರ್ಯ ಬಹು ದೊಡ್ಡದು. ಯುವ ಶಕ್ತಿ ಸರಿಯಾದ ದಾರಿಯಲ್ಲಿ ಸಾಗಿದಾಗ ದೇಶವೂ ಸರಿಯಾದ ದಾರಿಯಲ್ಲಿ ಸಾಗುತ್ತದೆ. ಇದೇ ಅಲ್ಲವೇ ದೇಶ ಸೇವೆ. ಸ್ವಾಮೀಜಿ ಅವರ ನೇತೃತ್ವದಲ್ಲಿ ತುಮಕೂರಿನ ಹಿರೇಮಠ ಹೇಗೆ ಅಭಿವೃದ್ಧಿ ಯಾಗುತ್ತಿದೆ ಎಂಬುದು ನಮ್ಮ ಕಣ್ಣ ಮುಂದಿದೆ. ಅದೊಂದು ನಾಡಿನ ಶ್ರದ್ಧಾ ಭಕ್ತಿಯ ಕೇಂದ್ರವಾಗಿ ಹೊರ ಹೊಮ್ಮುತ್ತಿದೆ.

ಸ್ವಾಮೀಜಿ ಅವರಿಗೆ ಅರುವತ್ತಾಯಿತು ಎಂಬ ಸಂಗತಿ ನನಗೆ ಈ ನಾಲ್ಕು ಸಾಲು ಬರೆಯಲು ಪ್ರೇರೇಪಣೆ ಆಯಿತು. ಅವರನ್ನು ನೋಡಿದರೆ ಅರುವತ್ತಾಯಿತು ಎಂದು ಅನ್ನಿಸುವುದಿಲ್ಲ. ಇನ್ನು ಯುವಕರಗಿಂತ ಹೆಚ್ಚಿನ ಉತ್ಸಾಹ ಅವರಲ್ಲಿದೆ. ಇನ್ನು ನೂರ್ಕಾಲ ಈ ನಾಡಿನಲ್ಲಿ ಅಧ್ಯಾತ್ಮ ಜಾಗೃತಿಯನ್ನು ಮೂಡಿಸುವ ಶಕ್ತಿಯನ್ನು ಭಗವಂತ ಶ್ರೀಗಳಿಗೆ ಕರುಣಿಸಲಿ. ಇನ್ನೂ ಮಹೋನ್ನತ ಕಾರ್ಯಗಳು ಸ್ವಾಮೀಜಿ ಅವರಿಂದ ನೇರವೇರಲಿ ಎಂಬ ಪ್ರಾರ್ಥನೆ ನನ್ನದು.

Related Articles

ಪ್ರತಿಕ್ರಿಯೆ ನೀಡಿ

Latest Articles