ಸರಳ ಸಂತನ ಉದಾತ್ತ ಚಿಂತನ

ತುಮಕೂರು ಹಿರೇಮಠದ ಅಧ್ಯಕ್ಷ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಅವರಿಗೆ ಮಾರ್ಚ್ 29ರಂದು 60 ನೇ ವರ್ಷದ ಜನ್ಮ ದಿನದ ಸಂಭ್ರಮ. ಶ್ರೀಗಳ ಸಾಧನೆ, ವ್ಯಕ್ತಿತ್ವ, ಅವರೊಂದಿಗಿನ ಒಡನಾಟವನ್ನು ಅಕ್ಷರಗಳಲ್ಲಿ ಬಣ್ಣಿಸಿದ್ದಾರೆ ಹಿರಿಯ ಪತ್ರಕರ್ತ ಬೆಂಗಳೂರಿನ ವಾದಿರಾಜ ದೇಸಾಯಿ ಅವರು.

ವಾದಿರಾಜ ದೇಸಾಯಿ

ಡಾ. ಶ್ರೀ ಶಿವಾನಂದ ಮಹಾಸ್ವಾಮಿಗಳನ್ನು ನಾನು ಮೊದಲ ಬಾರಿಗೆ ಭೇಟಿಯಾಗಿದ್ದು 1984ರಲ್ಲಿ. ಆಗ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ, ಸಂಸ್ಕೃತ ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು. ನಾನು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ. ಕಾಕತಾಳೀಯವಾಗಿ ನಾವಿಬ್ಬರೂ ಕ್ಯಾಂಪಸ್ ನಲ್ಲಿದ್ದ ಹಾಸ್ಟೆಲ್ ನಲ್ಲಿ ಸಹಪಾಠಿಗಳಾದೆವು. ಹೀಗಾಗಿ ಅವರೊಡನೆ ಒಡನಾಟ ಹೆಚ್ಚಾಯಿತು. ಅವರಿದ್ದ ಕೋಣೆಗೆ ನಾನು ಹೋಗುತ್ತಿದ್ದೆ.

ಸರಳ ಜೀವನ, ಉದಾತ್ತ ಚಿಂತನೆ ಆಗಿನಿಂದಲೂ ಸ್ವಾಮೀಜಿಯ ಮೂಲ ಮಂತ್ರವಾಗಿದೆ. ಕಾಟನ್ ಅಂಗಿ ಮತ್ತು ಲುಂಗಿ (ಪಂಚೆ) ಸದಾ ಅವರ ವೇಷಭೂಷಣವಾಗಿರುತ್ತಿತ್ತು. ಅವರಿದ್ದ ಕೊಠಡಿಯಲ್ಲಿ ಅವರ ಟೇಬಲ್ ಯಾವಾಗಲೂ ನೀಟ್ ಆಗಿರುತ್ತಿತ್ತು. ಅಲ್ಲಿ ಅಂಗೈ ಅಗಲದ ಕಾಗದಗಳನ್ನು ಜೋಡಿಸಿಟ್ಟಿರುತ್ತಿದ್ದರು. ಅದರಲ್ಲಿ ದಿನಚರಿ ಬರೆಯುವ ರೂಢಿ ಅವರಿಗಿತ್ತು. ಇವರದ್ದು ಮುತ್ತಿನಂತಹ ಅಕ್ಷರಗಳು. ಇನ್ನು ಆತ್ಮೀಯತೆ, ಮೃದುವಾದ ಮಾತಿನ ಶೈಲಿಯಿಂದ ಆಕರ್ಷಿಸುವ ಶಕ್ತಿ ಕರಗತವಾಗಿತ್ತು. ಬೆಳಗ್ಗೆ ಬೇಗನೆ ಏಳುತ್ತಿದ್ದರು. ಆಗಿನಿಂದಲೇ ಆಧ್ಯಾತ್ಮಿಕದತ್ತ ಒಲವು ಇತ್ತು. ನಡೆ – ನುಡಿಗಳಲ್ಲಿ ಜಾತಿ, ಬಡವ-ಬಲ್ಲಿದ ಎಂಬ ಭಾವನೆ ಇರಲಿಲ್ಲ.
ಪಿಜಿ ವ್ಯಾಸಂಗ ಮುಗಿದ ಮೇಲೆ ಶ್ರೀ ಶಿವಾನಂದ ( ಸ್ವಾಮೀಜಿ) ಅವರ ಜೊತೆ ಸಂಪರ್ಕ ಇಲ್ಲವಾಯಿತು. ಹಲವು ವರ್ಷಗಳ ನಂತರ ಅವರು ಪೀಠಾಧಿಪತಿ ಆದ ಬಳಿಕ ಪ್ರಮುಖ ಪತ್ರಿಕೆಯೊಂದರಲ್ಲಿ ಅವರು ಬರೆಯುತ್ತಿದ್ದ ಅಂಕಣ ನನ್ನ ಕಣ್ಣಿಗೆ ಬಿತ್ತು. ಅದರಲ್ಲಿದ್ದ ಸೆಲ್ ನಂಬರ್ ನೋಡಿ ಕೂಡಲೇ ಸಂಪರ್ಕಿಸಿದೆ. ಕೂಡಲೇ ನನ್ನನ್ನು ಗುರುತಿಸಿದ ಸ್ವಾಮೀಜಿಯವರು ಮೊದಲಿನ ಅದೇ ಆತ್ಮೀಯತೆಯಿಂದ ಮಾತಿಗಿಳಿದರು. ಅಂದಿನಿಂದಲೂ ಆ ಸಂಪರ್ಕ ಮೊಬೈಲ್, ವಾಟ್ಸಪ್ ಸಹಾಯದಿಂದ ನಿರಂತರವಾಗಿ ಮುಂದುವರೆದಿದೆ.

ಅರುವತ್ತರ ಪ್ರಾಯದಲ್ಲಿಯೂ ಇವರ ಪಾದರಸದಂತಹ ಚಟುವಟಿಕೆಗಳು ಎಲ್ಲರನ್ನು ಚಕಿತಗೊಳಿಸುತ್ತವೆ. ತಮ್ಮ ಬರೆಹಗಳಲ್ಲಿ ಪ್ರಚಲಿತ ಸಂಗತಿಗಳಿಗೆ ಪೂರ್ವಗ್ರಹ ಇಲ್ಲದೆ ಪ್ರತಿಸ್ಪಂದಿಸುವ ರೀತಿ ಪ್ರಶಂಸನೀಯ. ಇನ್ನು ಅಂಕಣಗಳಲ್ಲಿ ಮನಮುಟ್ಟುವಂತಿರುವ ಮಾತು, ನುಡಿಮುತ್ತುಗಳಲ್ಲಿ ಯುವಜನತೆಗೆ ಸಂದೇಶ ನೀಡುವ ರೀತಿ ಅನನ್ಯ. ಇವರಿಗೆ ಇವರೇ ಸರಿಸಾಟಿ.

ಯುವಕರಂತೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯ. ಅತ್ತ ತಪೋವನ ನಿರ್ಮಿಸಿದಂತಹ ಕ್ರಿಯಾಶೀಲ ಮನೋಭಾವ. ಈ ಮಹಾಸ್ವಾಮಿಗಳ ವ್ಯಕ್ತಿತ್ವವನ್ನು ಕೆಲವೇ ಸಾಲುಗಳಲ್ಲಿ ಸೆರೆ ಹಿಡಿಯಲಾಗದು. ಇವರದ್ದು ಸತ್ವಯುತ ಬರವಣಿಗೆ. ಹಿಂದಿನ ಪ್ರಸಂಗಗಳ ಉದಾಹರಣೆ ಸಹಿತ ಈಗಿನ ವಿಷಯಗಳನ್ನು ಪ್ರಸ್ತಾವಿಸುವ ಶೈಲಿಯು ಬಹಳ ಜನರಿಗೆ ಅಸಾಧ್ಯ ಎಂದು ನಾನು ವಿನಮ್ರ ದಿಂದ ಹೇಳಬಯಸುತ್ತೇನೆ. ಲೀಲಾಜಾಲವಾಗಿ ಬಳಸುವ ಶಬ್ದಗಳ ಕೈಚಳಕಕ್ಕೆ ನಾನು ಅಕ್ಷರಶಃ ಮೂಕನಾಗಿರುವೆ. ಶ್ರೀ ಶಿವಾನಂದ ಸ್ವಾಮೀಜಿ ಅಂತವರು ನನ್ನ ಜೀವನದಲ್ಲಿ ಸಿಕ್ಕಿದ್ದು ನನ್ನ ಅದೃಷ್ಟ. ಬುದ್ಧಿಯವರು ನೂರ್ಕಾಲ ಬಾಳಲಿ; ಇವರ ಬೋಧನೆಗಳು ಭಾರತ ದೇಶದ ಅಗಲಕ್ಕೆ ಬೆಳೆಯಲಿ ಎಂದು ಆಶಿಸುವೆ.

Related Articles

ಪ್ರತಿಕ್ರಿಯೆ ನೀಡಿ

Latest Articles