*ಶ್ರೀನಿವಾಸ ಮೂರ್ತಿ ಎನ್ ಎಸ್
ಕರ್ನಾಟಕದ ವಾಸ್ತುಶಿಲ್ಪದ ಕೊಡುಗೆಯಲ್ಲಿ ಶೈವ ದೇವಾಲಯಗಳು ಗಣನೀಯವಾಗಿವೆ. ಕದಂಬರ ಕಾಲದಿಂದಲೂ ಹಲವು ಶೈವ ದೇವಾಲಯಗಳು ನಮ್ಮ ನಾಡಿನಲ್ಲಿ ನಿರ್ಮಾಣಗೊಂಡಿದ್ದು ಶಿವನನ್ನು ಲಿಂಗರೂಪದಲ್ಲಿ ಆರಾಧಿಸುವುದೇ ಹೆಚ್ಚು.
ಹೆಚ್ಚಿನ ಶಿವನ ಶಿಲ್ಪಗಳು ಅಲಂಕಾರಿಕ ಶಿಲ್ಪಗಳಾಗಿದ್ದು ಹೊರಭಿತ್ತಿಯಲ್ಲಿ ಕಾಣಿಸಿದ್ದೇ ಹೆಚ್ಚು. ಅಪರೂಪದಲ್ಲಿ ಶಿವನನ್ನು ಮೂರ್ತಿರೂಪದಲ್ಲಿ ಆರಾಧಿಸುವ ದೇವಾಲಯಗಳು ಇವೆ. ಅದರಲ್ಲೂ ಶಿವನನ್ನು ಪತ್ನಿಯ ಸಮೇತ ಆರಾಧಿಸುವ ದೇವಾಲಯಗಳು ತುಂಬಾ ಅಪುರೂಪ. ಬಳ್ಳಾರಿಯ ಗುಡೀಕೋಟೆಯಲ್ಲಿನ ಶಿವಪಾರ್ವತಿ ಮೂರ್ತಿ, ಹಾವೇರಿಯ ಕಳ್ಳಿಹಾಳದ ಪಾರ್ವತಿ ಪರಮೇಶ್ವರ ಅಂತಹ ದೇವಾಲಯಗಳಲ್ಲಿ ಒಂದು. ಈ ತರಹದ ಮತ್ತೊಂದು ಮೂರ್ತಿ ಕಾಣುವ ದೇವಾಲಯವೆಂದರೆ ಗೌರಿಪುರದ ಗೌರಿಶಂಕರ ದೇವಾಲಯ.
ಚಿತ್ರದುರ್ಗ ಜಿಲ್ಲೆಯ ಪರಶುರಾಮಪುರದ ಬಳಿ ಇರುವ ಈ ದೇವಾಲಯ ಗೌರಿಶಂಕರ ದೇವಾಲಯಕ್ಕೆ ಪ್ರಸಿದ್ದಿಯಾಗಿದ್ದು, ಈ ದೇವಾಲಯದಿಂದಲೇ ಅದಕ್ಕೆ ಈ ಹೆಸರು ಬಂದಿದೆ. ಸ್ಥಳ ಪುರಾಣದಂತೆ ಇಲ್ಲಿ ಪಾಂಡವರು ಅಜ್ಞಾತವಾಸದ ಸಂದರ್ಭದಲ್ಲಿ ಗಜಗೌರಿ ವ್ರತ ಆಚರಿಸಿದ್ದರಿಂದ ಈ ಸ್ಥಳಕ್ಕೆ ಗೌರಿಪುರ ಎಂಬ ಹೆಸರು ಬಂದಿತು. ನಂತರ ಇಲ್ಲಿ ಗೌರಿಶಂಕರ ದೇವಾಲಯ ನಿರ್ಮಾಣವಾಯಿತು ಎಂಬ ನಂಬಿಕೆ ಇದೆ.
ಮೂರ್ತಿಯ ವಿಶೇಷತೆ
ವಿಜಯನಗರೋತ್ತರ ಕಾಲ ಸುಮಾರು 16 ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯ ಅತ್ಯಂತ ಸರಳವಾಗಿದ್ದು ಗರ್ಭಗುಡಿ, ಸುಖನಾಸಿ, ನವರಂಗ ಹಾಗೂ ಮುಖಮಂಟಪ ಹೊಂದಿದೆ. ಗರ್ಭಗುಡಿಯಲ್ಲಿ ಸುಮಾರು 5 ಆಡಿ ಎತ್ತರದ ಸುಂದರ ಗೌರಿ ಶಂಕರ ಮೂರ್ತಿ ಇದೆ. ಪಾರ್ವತಿಯನ್ನು ಬಳಸಿ ಕುಳಿತಿರುವಂತೆ ಇರುವ ಶಿಲ್ಪವಿದೆ. ಶಿವ ಚತುರ್ಭುಜನಾಗಿದ್ದುಮೇಲಿನ ಕೈನಲ್ಲಿ ಪರಶು, ಚಿಗರೆ ಇದ್ದು ಕೆಳಭಾಗದ ಬಲಗೈ ಅಭಯ ಹಸ್ತ ಹಿಡಿದಂತೆ ಹಾಗೂ ಇನ್ನೊಂದು ಕೈನಲ್ಲಿ ಪಾರ್ವತಿಯನ್ನ ಬಳಸಿರುವಂತೆ ಇದೆ. ಪಾರ್ವತಿಯ ಬಲಗೈನಲ್ಲಿ ಕಮಲವಿದ್ದರ ಇನ್ನೊಂದು ಕೈ ಶಿವನ ತೊಡೆಯ ಮೇಲೆ ಇದೆ. ಇಲ್ಲಿನ ಗೌರಿ ಶಂಕರ ಮೂರ್ತಿ ಕರ್ನಾಟಕದಲ್ಲಿ ದೊರೆತ ಅಪರೂಪದ ಶಿಲ್ಪವಾಗಿದ್ದು ಶಿವ ಪತ್ನಿಯ ಸಮೇತ ಕಾಣುವ ಸುಂದರ ದೇವಾಲಯಗಳಲ್ಲಿಯೇ ವಿಶೇಷವಾದುದು.
ಸುಖನಾಸಿಯ ಸರಳವಾಗಿದ್ದು ಯಾವುದೇ ಶಿಲ್ಪಗಳಾಗಲಿ, ಕೆತ್ತನೆಯಾಗಲಿ ಕಾಣಬರುವುದಿಲ್ಲ. ನವರಂಗದಲ್ಲಿ ಗೌರಿ ಶಂಕರನ ಮೂರ್ತಿಯ ಮುಂದೆ ನಂದಿಯ ಶಿಲ್ಪವಿದೆ. ನವರಂಗದಲ್ಲಿ ನಾಲ್ಕು ಕಂಭಗಳು ಹಾಗು ಅರೆಗಂಭಗಳಿದ್ದು ಇಲ್ಲಿ ನರಸಿಂಹ, ಆಂಜನೇಯ, ಸರಸ್ವತಿ ದುರ್ಗ, ಬೇಡರ ಕಣ್ಣಪ್ಪ, ವಿನಾಯಕ, ಭೈರವ, ರಾಮ ಪರಿವಾರ ಮುಂತಾದ ಕೆತ್ತನೆ ಇದೆ. ಇಲ್ಲಿನ ನಾಲ್ಕು ಮುಖ ಹಾಗು ಒಂದು ದೇಹದ ಗೋವಿನ ಕೆತ್ತನೆ ನೋಡಲೇ ಬೇಕಾದುದು. ವಿತಾನದಲ್ಲಿ ಯಾವುದೇ ಕೆತ್ತನೆ ಇಲ್ಲದೇ ಸರಳವಾಗಿದೆ. ಮುಖಮಂಟಪದ ಬಾಗಿಲುವಾಡದಲ್ಲಿ ಭೂ ದೇವಿ ಹಾಗು ಶ್ರೀ ದೇವಿಯ ಕೆತ್ತನೆ ಇದೆ.
ಇಲ್ಲಿ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ, ಕಾರ್ತೀಕ ಮಾಸದಲ್ಲಿ ದೇವರ ಜಾತ್ರೆ ನಡೆಯುತ್ತದೆ.
ತಲುಪುವ ಬಗೆ: ಚಿತ್ರದುರ್ಗ – ಚಳ್ಳಕೆರೆ – ಪರುಶರಾಮಪುರ – ನಾಯಕನಹಟ್ಟಿಯ ಮೂಲಕ ಇಲ್ಲಿಗೆ ತಲುಪಬಹುದು. ಚಳ್ಳಕೆರೆಯಿಂದ ಸುಮಾರು 22 ಕಿ.ಮೀ ದೂರದಲ್ಲಿ ಈ ದೇವಾಲಯ ಇದೆ. ಹತ್ತಿರದಲ್ಲಿ ಇರವ ನಾಯಕನಹಟ್ಟಿ ದೇವಾಲಯವನ್ನು ನೋಡಿ ಬರಬಹುದು.