ದೈವಾರಾಧನೆಯ ಕಥಾಹಂದರ ಹೊಂದಿದ ‘ಪಿಂಗಾರ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಸಿಂಗಾರ

ಮಂಗಳೂರು: ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ತನ್ನ ಮುಡಿಗೆರಿಸಿಕೊಂಡಿದ್ದ ಪಿಂಗಾರ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಇರದ ಇತರೆ ಭಾಷೆಗಳಲ್ಲಿನ ಚಲನಚಿತ್ರ ವಿಭಾಗದಲ್ಲಿ ತುಳು ಭಾಷೆಯ “ಪಿಂಗಾರ’ ಚಿತ್ರ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ‘ಪಡ್ಡಾಯಿ’ ಮತ್ತು ‘ಮದಿಪು’ ಚಿತ್ರಕ್ಕೆ ಈ ಹಿಂದೆ ರಾಷ್ಟ್ರೀಯ ಪ್ರಶಸ್ತಿ ದೊರಕಿತ್ತು. ಕನ್ನಡ ಮತ್ತು ತುಳು ಭಾಷೆಯಲ್ಲಿ ನಿರ್ಮಾಣಗೊಂಡಿರುವ ‘ಪಿಂಗಾರ’ ಚಿತ್ರ ಇನ್ನಷ್ಟೇ ಚಿತ್ರಮಂದಿರಕ್ಕೆ ಬರಬೇಕಿದೆ.

ಕರ್ನಾಟಕದ ಕರಾವಳಿ ಭಾಗವಾದ ತುಳುನಾಡಿನ ವಿಶಿಷ್ಟವೆಂದರೆ ಅಲ್ಲಿನ ಜನ ದೇವಾರಾಧನೆಗಿಂತ ದೈವಾರಧನೆ ಸಂಸ್ಕೃತಿಯನ್ನು ಪಾಲಿಸುತ್ತಾರೆ. ದೈವವನ್ನು ತಮ್ಮ ಮೇಲೆ ಆವರಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವ ದೈವದ ಪಾತ್ರಧಾರಿಗಳನ್ನು ಕ್ಷಣಿಕವಾಗಿ ದೇವರೆಂದೇ ಪರಿಗಣಿಸಲಾಗುವುದು.

ಪಿಂಗಾರ ಚಿತ್ರಕಥೆಯು ಈ ಅಪರೂಪದ ಸಂಸ್ಕೃತಿಯ ಸುತ್ತ ಹೆಣೆಯಲ್ಪಟ್ಟಿದೆ. ತನಿಯ ಎಂಬ ಭೂತ ಕಟ್ಟುವವರ ಮೈಮೇಳೆ ದೈವ/ಭೂತ ದರ್ಶನ ಬಂದು ನುಡಿಯುವ ಒಂದು ಮಾತಿನಿಂದ ತಪ್ಪಿತಸ್ಥ ಮನೋಭಾವದಲ್ಲಿರುವ ಮೇಲು ಜಾತಿಗೆ ಸೇರಿದ ಮೂರು ಜನರ ಜೀವನದಲ್ಲಿ ಹೇಗೆ ಹೊಸ ತಿರುವು ಸೃಷ್ಟಿಯಾಗುತ್ತದೆ ಎಂಬ ಕಥಾ ವಸ್ತುವನ್ನು ಇಟ್ಟುಕೊಂಡು, ಮೇಲು ಕೀಳೆಂಬ ಜಾತಿ ಪದ್ಧತಿ ಮನುಷ್ಯನ ಅಹಂ ಹಾಗೂ ಅದರಿಂದ ಆಗುವ ಅನ್ಯಾಯಕ್ಕೆ ಪ್ರಕೃತಿ ಹೇಗೆ ದೈವದ ಮೂಲಕ ಉತ್ತರ ಕೊಡುತ್ತದೆ ಎಂಬುದನ್ನು ಸ್ವಾರಸ್ಯಕರವಾಗಿ ಪ್ರಸ್ತುತಪಡಿಸಲಾಗಿದೆ.

ನಿರ್ದೇಶಕರು: ಆರ್ ಪ್ರೀತಮ್ ಶೆಟ್ಟಿ, ನಿರ್ಮಾಪಕರು: ಅವಿನಾಶ್ ಯು ಶೆಟ್ಟಿ, ಮಂಜುನಾಥ್ ರೆಡ್ಡಿ. ಛಾಯಾಗ್ರಾಹಣ: ವಿ ಪವನ್ ಕುಮಾರ್, ಕಲಾವಿದರು: ನೀಮಾ ರೇ, ಶರಣ್ ಶೆಟ್ಟಿ, ಉಷಾ ಭಂಡಾರಿ, ಸಿಂಚನಾ ಚಂದ್ರಮೋಹನ್, ಸುನಿಲ್ ನೆಲ್ಲಿಗುಡ್ಡೆ, ರಂಜಿತ್ ಸುವರ್ಣ, ಪ್ರಶಾಂತ್ ಸಿ ಕೆ.

Related Articles

ಪ್ರತಿಕ್ರಿಯೆ ನೀಡಿ

Latest Articles