ಪತ್ರಿಕೋದ್ಯಮ ಒಂದು ಪವಿತ್ರ ಕಾರ್ಯ: ಶ್ರೀ ರಂಭಾಪುರಿ ಜಗದ್ಗುರು

ರಂಭಾಪುರಿ ಪೀಠ (ಬಾಳೆಹೊನ್ನೂರು): ನಾಡಿನ ಜನತೆಯ ಕುಂದು ಕೊರತೆಯನ್ನು ಗುರುತಿಸಿ ಸರ್ಕಾರಕ್ಕೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಪತ್ರಿಕೆ ಮತ್ತು ಪತ್ರಕರ್ತರು ಮಾಡುತ್ತ ಬಂದಿದ್ದಾರೆ. ಪತ್ರಿಕೋದ್ಯಮ ಒಂದು ಪವಿತ್ರ ಕಾರ್ಯವಾಗಿದೆ. ಸತ್ಯದ ಪರವಾಗಿದ್ದವರಿಗೆ ಸಂಕಷ್ಟಗಳು ಹೆಚ್ಚು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶ್ರೀ ರಂಭಾಪುರಿ ಪೀಠದಲ್ಲಿ ಚಿಕ್ಕಮಗಳೂರು ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ದ್ವಾದಶ ಮಹೋತ್ಸವದ ಅಂಗವಾಗಿ ಮಾರ್ಚ್ 29 ರಂದು ಜರುಗಿದ ಚಿಕ್ಕಮಗಳೂರು ಜಿಲ್ಲಾ ದ್ವಿತೀಯ ಮಾಧ್ಯಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ತನ್ನಂತೆ ಇನ್ನೊಬ್ಬರೆಂದು ಕಾಣುವ ಪ್ರವೃತ್ತಿ ಕಡಿಮೆ ಆಗುತ್ತಿರುವುದರಿಂದಲೇ ಸಮಾಜದಲ್ಲಿ ಒಂದಿಲ್ಲೊದು ತಲ್ಲಣಗಳನ್ನು ಕಾಣುತ್ತಿದೇವೆ. ಪತ್ರಿಕಾ ರಂಗದಲ್ಲಿ ಪ್ರಾಮಾಣಿಕತೆ ಮತ್ತು ನಿಸ್ವಾರ್ಥಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸುವ ಕಾರ್ಯ ಸಮಾಜ ಮತ್ತು ಸರ್ಕಾರದಿಂದ ನಡೆಯಬೇಕು. ಪತ್ರಿಕೋದ್ಯಮ ನಡಸುವುದು ಮುಳ್ಳಿನ ದಾರಿಯಲ್ಲಿ ನಡೆದಂತೆ. ಜಾತಿ ಧರ್ಮಗಳ ಸಂಘರ್ಷಮಯ ವಾತಾವರಣದಲ್ಲಿ ಮಾಧ್ಯಮಗಳ ಹೊಣೆಗಾರಿಕೆ ಹೆಚ್ಚಾಗಿದೆ. ಚಿಕ್ಕೊಳಲೆ ಸದಾಶಿವ ಶಾಸ್ತಿçಗಳು ಧರ್ಮ ಜಾಗೃತಿಗಾಗಿ ಶ್ರಮಿಸಿದವರು. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಉತ್ತಮ ಕೆಲಸವಾಗಿದೆ. ಭವಿಷ್ಯತ್ತಿನ ಪೀಳಿಗೆ ಸತ್ಯವನ್ನರಿತು ಮುನ್ನಡೆಯಬೇಕು. ಶ್ರೀ ರಂಭಾಪುರಿ ಪೀಠದ ಅಭಿವೃದ್ಧಿಯಲ್ಲಿ ಮಾಧ್ಯಮದವರು ನೀಡಿದ ಸಹಕಾರವನ್ನು ಮರೆಯುವಂತಿಲ್ಲ ಎಂದರು.

ಶಿರಕೋಳ ಹಿರೇಮಠದ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಸುಳ್ಳ, ಮಳಲಿ ಮತ್ತು ಕೆಂಭಾವಿ ಶ್ರೀಗಳು ಉಪಸ್ಥಿತರಿದ್ದರು.
ಸಮ್ಮೇಳನಾಧ್ಯಕ್ಷ ಬೆಂಗಳೂರಿನ ಹಿರಿಯ ಪತ್ರಕರ್ತ ದು.ಗು. ಲಕ್ಷö್ಮಣ ಅವರು ಮಾತನಾಡಿ ಪತ್ರಕರ್ತರ ಜೀವನ ಮಟ್ಟ ಸುಧಾರಿಸಬೇಕು. 178 ವರ್ಷಗಳ ಇತಿಹಾಸ ಹೊಂದಿದ ಕನ್ನಡ ಪತ್ರಿಕೋದ್ಯಮ ಅನೇಕ ಏಳು ಬೀಳುಗಳನ್ನು ಕಂಡಿದೆ. ಪ್ರತಿ ವರುಷ ಆಚರಿಸುವ ಪತ್ರಿಕಾ ದಿನಾಚರಣೆ ದಿನದಂದು ಪತ್ರಿಕಾ ರಂಗದಲ್ಲಿ ದುಡಿದ ಶ್ರೇಷ್ಠ ವ್ಯಕ್ತಿಗಳನ್ನು ನೆನೆಯುವ ಕಾರ್ಯವಾಗಬೇಕು. ಡಿವ್ಹಿಜಿ, ಮೊಹರೆ ಹನುಮಂತರಾಯರು, ತಿ.ತಾ. ಶರ್ಮರಂಥವರನ್ನು ನಾವು ಸ್ಮರಿಸುವ ಕಾರ್ಯ ಮಾಡಬೇಕು. ಉತ್ತಮ ಪತ್ರಕರ್ತರನ್ನು ಸರ್ಕಾರ ಮತ್ತು ಸಮಾಜ ಗುರುತಿಸಿ ಗೌರವಿಸಬೇಕೆಂದರು.
ಸಮಾರಂಭ ಉದ್ಘಾಟಿಸಿದ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡರು ಮಾತನಾಡಿ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗಗಳ0ತೆ ಪತ್ರಿಕಾ ರಂಗ ಕೂಡ ಒಂದು ಅಂಗವಾಗಿ ಕಾರ್ಯ ನಿರ್ವಹಿಸುತ್ತಿದೆ. ಸ್ವಸ್ಥ ಸಮಾಜಕ್ಕೆ ಪತ್ರಿಕೆಗಳ ಕೊಡುಗೆ ದೊಡ್ಡದು. ಪತ್ರಿಕೆಗಳು ಬಂಡವಾಳ ಶಾಹಿಗಳ ಕೈ ಸೇರುವಂತಾಗಬಾರದು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಚಿಕ್ಕಮಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅರಗ ರವಿ ಮತ್ತು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ.ರಾಜಶೇಖರ್ ಮಾತನಾಡಿ, ಇಂದು ನಡೆದಿರುವ ಮಾಧ್ಯಮ ಸಮ್ಮೇಳನ ಇಂದಿನ ಅಗತ್ಯವಾಗಿದೆ. ಶ್ರೀ ಜಗದ್ಗುರು ರಂಭಾಪುರಿ ಪೀಠ ಮಾಧ್ಯಮದವರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತ ಬಂದಿದೆ ಎಂದರು.

ಅಂಕಣಕಾರ ಮತ್ತು ರಾಜಕೀಯ ವಿಶ್ಲೇಷಕರಾದ ನವದೆಹಲಿಯ ಪ್ರೊ. ಪ್ರೇಮಶೇಖರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಕಡೂರು ‘ಸ್ನೇಹಪ್ರಿಯ’ ಸಂಪಾದಕ ಟಿ.ಎನ್.ಎ. ಮೊದಲಿಯಾರ್ ಮತ್ತು ಬಾಳೆಹೊನ್ನೂರು ಸಂಯುಕ್ತ ಕರ್ನಾಟಕ-ಉದಯವಾಣಿ ವರದಿಗಾರ ಯಜ್ಞಪುರುಷ ಭಟ್ ಇವರಿಗೆ ಚಿಕ್ಕೊಳಲೆ ಸದಾಶಿವ ಶಾಸ್ತಿç ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶ್ರೀದೇವಿ ಗುರುಕುಲದ ಡಾ. ದಯಾನಂದಮೂರ್ತಿ ತಂಡದವರಿಂದ ಪ್ರಾರ್ಥನೆ, ಚಿಕ್ಕಮಗಳೂರಿನ ಶ್ರೀ ಪಾರ್ವತಿ ಮಹಿಳಾ ಮಂಡಳದವರಿಂದ ಭಕ್ತಿಗೀತೆ, ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಚಿ.ಸ. ಪ್ರಭುಲಿಂಗಶಾಸ್ತಿç ಇವರಿಂದ ಸ್ವಾಗತ, ಶಿಕ್ಷಕ ವೀರೇಶ ಕುಲಕರ್ಣಿ ಇವರಿಂದ ನಿರೂಪಣೆ ನಡೆದವು. ಇದಕ್ಕೂ ಮುನ್ನ ಛಾಯಾ ಚಿತ್ರ ಪ್ರದರ್ಶನವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ವೀಕ್ಷಿಸಿದರು.

ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಜಗದ್ಗುರು ರಂಭಾಪುರೀ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು

Related Articles

ಪ್ರತಿಕ್ರಿಯೆ ನೀಡಿ

Latest Articles