ತೀರ್ಥ ಪ್ರಾಶನದ ಮಹತ್ವ

ದೇವಸ್ಥಾನದಲ್ಲಿ ಅರ್ಚಕರು ಬೆಳ್ಳಿ ಅಥವಾ ತಾಮ್ರದ ಪಾತ್ರೆಯಲ್ಲಿ ತೀರ್ಥವನ್ನು ಕೊಡುವುದನ್ನು ಗಮನಿಸಿರಬಹುದು. ಶುದ್ಧನೀರು, ತುಳಸಿ ಎಲೆ ಮತ್ತು ಬೆಳ್ಳಿ ಅಥವಾ ತಾಮ್ರದ ಪಾತ್ರೆಯಲ್ಲಿದ್ದರೆ ಅದು ತ್ರಿದೋಷಗಳನ್ನು (ವಾತ,ಪಿತ್ಥ,ಕಫ) ನಿವಾರಿಸುವ ಔಷಧವಾಗುತ್ತದೆ ಎನ್ನುತ್ತದೆ ಆಯುರ್ವೇದ. ಆಸ್ತಮಾ, ನೆಗಡಿ, ಕೆಮ್ಮು, ಶ್ವಾಸ ಹಾಗೂ ಹೃದಯ ಸಂಬಂಧಿ ಕಾಯಿಲೆಗಳನ್ನು ಹಾಗೂ ಇತ್ತೀಚಿನ ಮಾರಕ ರೋಗ ಡೆಂಗ್ಯೂವನ್ನೂ ಸಹ ತುಳಸಿಯ ಮೂಲಕ ನಿಯಂತ್ರಿಸಬಹುದೆಂದು ಆಯುರ್ವೇದ ತಿಳಿಸುತ್ತದೆ. ಪಚನಕ್ರಿಯೆಗೂ ತುಳಸಿ ಸಹಕಾರಿ. ತುಳಸಿ ಎಲೆಗಳನ್ನು ತಿಂದರೆ ಜೀರ್ಣಶಕ್ತಿಯ ಉದ್ದೀಪನವಾಗುತ್ತದೆಂದು ಆಯುರ್ವೇದ ಹೇಳಿದೆ. ಹಾಗಾಗಿ ತುಳಸಿನೀರಿನಿಂದ ತಯಾರಿಸಲ್ಪಟ್ಟ ತೀರ್ಥವೂ ಸಹ ಔಷಧವೇ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಹಲವಾರು ವೈಜ್ಞಾನಿಕ ಸಂಶೋಧನೆಗಳಿಂದ ತಾಮ್ರ, ಬೆಳ್ಳಿ ಹಾಗೂ ಮಣ್ಣಿನ ಪಾತ್ರೆಗಳಲ್ಲಿ ಶೇಖರಿಸಿದ ನೀರು ಆರೋಗ್ಯಕ್ಕೆ ಪಥ್ಯಕರ ಎಂಬುದು ಸಾಬೀತಾಗಿದೆ. ಹಾಗೇ, ಶಂಖದಿಂದ ಅಭೀಷೇಕದ ನೀರು ತೀರ್ಥವಾಗುತ್ತದೆ. ಆಯುರ್ವೇದದ ಪ್ರಕಾರ ಶಂಖದ ನೀರಿಗೆ ಅನೇಕ ಔಷಧೀಯ ಗುಣಗಳಿರುತ್ತವೆ. ಇದು ಹೊಟ್ಟೆನೋವು, ತಲೆನೋವು, ಅಜೀರ್ಣ, ದೃಷ್ಟಿ ಸಂಬಂಧಿ, ಚರ್ಮಸಂಬಂಧಿ ದೋಷಗಳನ್ನು ನಿವಾರಿಸುತ್ತದೆ. ಇದರ ಜೊತೆ ದೇವರ ಕಲ್ಲಿನ ಪ್ರತಿಮೆ ಅಥವಾ ಪಂಚಲೋಹ ವಿಗ್ರಹದ ಮೇಲೆ ಅಭಿಷೇಕ ಮಾಡಿದ್ದರಿಂದ ಪ್ರತಿಮೆಯಲ್ಲಿರುವ ಅನೇಕ ಸಕಾರಾತ್ಮಕ ಅಂಶಗಳೂ ತೀರ್ಥದೊಂದಿಗೆ ಸೇರುತ್ತವೆ. ತುಳಸಿ, ತಾಮ್ರ ಅಥವಾ ಬೆಳ್ಳಿ ಪಾತ್ರೆಯಲ್ಲಿನ ನೀರು, ಶಂಖದ ನೀರು, ದೇವರ ವಿಗ್ರಹದ ನೀರು, ಈ ಎಲ್ಲವುಗಳ ಸಮ್ಮಿಶ್ರಣ ತೀರ್ಥ. ಹಾಗಾಗಿ ತೀರ್ಥವೂ ಸಹ ಔಷಧವೇ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

Related Articles

ಪ್ರತಿಕ್ರಿಯೆ ನೀಡಿ

Latest Articles