*ಚಂದ್ರಿಕಾ ಗಿರೀಶ್
ತಪೋವಿದ್ಯಾ ವಿರಕ್ತಾö್ಯದಿ ಸದ್ಗುಣೌ ಘಾಕರಾನಹಮ್
ವಾದಿರಾಜ ಗುರೂನ್ ವಂದೇ ಹಯಗ್ರೀವ ದಯಾಶ್ರಯಾನ್‘
ಶ್ರೀಮದಾಚರ‍್ಯರ ನಂತರ ತತ್ತ್ವವಾದದ ಪ್ರವರ್ತಕರಾಗಿ ಹಾಗೂ ಭಾಗವತ ಧರ್ಮವನ್ನು ಪ್ರಚಾರ ಮಾಡಿದ ಯತಿವರೇಣ್ಯರಲ್ಲಿ ಶ್ರೀ ವಾದಿರಾಜರು 4ನೇ ಸ್ಥಾನವನ್ನು ಪಡೆದಿದ್ದಾರೆ. ಸಮಾಜ ಸುಧಾರಕರಾಗಿ, ಪರಮ ಧಾರ್ಮಿಕರಾಗಿ, ಸಾರ್ಥಕರಾಗಿ ಬದುಕಿದ, ಪುಣ್ಯಪುರುಷರಾದ ಶ್ರೀ ವಾದಿರಾಜರು ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಸೋದೆ ಮಠದ ಪೀಠಾರೋಹಣ ಮಾಡಿ ಈ ಭರತ ಭೂಮಿಯಲ್ಲಿ 120 ವರ್ಷಗಳ ಕಾಲ ಬಾಳಿ ನಮ್ಮನ್ನು ಪುನೀತರನ್ನಾಗಿ ಮಾಡಿದ ಯತಿವರೇಣ್ಯರು ನಮ್ಮ ಶ್ರೀ ವಾದಿರಾಜರು. ಕ್ರಿಶ 1480- ಕ್ರಿಶ. 1600 ರ ಈ ಸಮಯದಲ್ಲಿ ಅವರು ಮಾಡಿದ ಸಮಾಜ ಸುಧಾರಣೆಗಳು, ಧಾರ್ಮಿಕ ಕಾರ್ಯಗಳು ಅಲೌಕಿಕವಾದದ್ದು ಹಾಗೂ ಅಸಾಮಾನ್ಯವಾದುದು.
ದಕ್ಷಿಣ ಕನ್ನಡ ಜಿಲ್ಲೆಯ ಕುಂಭಾಸಿಯ ಹತ್ತಿರ ಹೂವಿನಕೆರೆ ಎಂಬ ಚಿಕ್ಕ ಗ್ರಾಮದಲ್ಲಿ ದೇವರ ರಾಮಭಟ್ಟ ಮತ್ತು ಗೌರಿದೇವಿ ದಂಪತಿಗಳ ಮೊದಲ ಸಂತಾನ ಶ್ರೀ ವಾದಿರಾಜರು. ಅತ್ಯುತ್ತಮ ವಾಗ್ಮಿಗಳು, ಅದ್ಭುತ ಗ್ರಂಥರಚನಕಾರರು ಹಾಗೂ ಅದ್ವಿತೀಯ ಸಮಾಜ ಸುಧಾರಕರು. ಸಂಸ್ಕೃತ ಮತ್ತು ಕನ್ನಡದಲ್ಲಿ ಅದ್ಭುತ ಗ್ರಂಥಗಳನ್ನು ರಚಿಸಿದ ಇವರ ಮಹಿಮೆಗೆ ಎಣೆಯಿಲ್ಲ. ವಿಷಯಾನುಸಾರವಾಗಿ ಭಾಷೆ, ಅದಕ್ಕನುಗುಣವಾಗಿ ಭಾವನೆ ಎಲ್ಲವೂ ಮಿಳಿತವಾಗಿರುವುದು ಶ್ರೀ ವಾದಿರಾಜರ ಗ್ರಂಥಗಳಲ್ಲಿ. ಮಹಾನ್ ಶ್ರೇಷ್ಠ ದಾಸರಾದ ಶ್ರೀ ಕನಕದಾಸರಿಗೆ ಮನ್ನಣೆಯನ್ನು ನೀಡಿ ಉಡುಪಿಯಲ್ಲಿ ನೆಲೆ ನೀಡಿದವರು ಶ್ರೀ ವಾದಿರಾಜರು.
ಸೋದೆ ಮಠದ ಪರಂಪರೆಯ ಯತಿಗಳಾದ ರಾಜರು ಉಡುಪಿಯ ಎರಡು ತಿಂಗಳ ಪೂಜಾ ಪದ್ಧತಿಯನ್ನು ಎರಡು ವರ್ಷಗಳ ಪದ್ಧತಿಯನ್ನಾಗಿ ಜಾರಿಗೆ ತಂದು ಪರ್ಯಾಯ ಮಹೋತ್ಸವಕ್ಕೆ ಹೆಚ್ಚಿನ ಮೆರುಗನ್ನು ನೀಡಿದರು. ಯತಿಗಳ ಮೂಲ ಆರೋಹಣಕ್ಕನುಸಾರವಾಗಿ ಫಲಿಮಾರು ಮಠದಿಂದ ಪರ್ಯಾಯ ಮಹೋತ್ಸವ ಪ್ರಾರಂಭವಾಗಿ ಆ ನಂತರ ಕ್ರಮಶಃ ಆರನೇಯವರಾಗಿ ಶ್ರೀ ವಾದಿರಾಜರು ಕ್ರಿ.ಶ.1532 ರಲ್ಲಿ ತಮ್ಮ ಮೊದಲ ಪರ್ಯಾಯ ಪೂಜೆಯನ್ನು ಆಚರಿಸಿದರು. ಕ್ರಿ.ಶ. 1580ರಲ್ಲಿ ಅವರ ನಾಲ್ಕನೆಯ ಮತ್ತು ಕೊನೆಯ ಪರ್ಯಾಯ. ಆಗ ಅವರಿಗೆ ೧೦೦ರ ವಯಸ್ಸು.
ಶ್ರೀ ವಾದಿರಾಜರ ಸಂಸ್ಕೃತ ರಚನೆಗಳು:
ತತ್ತ್ವ ಪ್ರಕಾಶಿಕು ಟಿಪ್ಪಣಿ, ಭಗವದ್ಗೀತಾ ಟಿಪ್ಪಣೆ, ಗುರು ರಾಜೀಯ ಸುಧಾ ಟಿಪ್ಪಣಿ, ತಂತ್ರಸುರ ಟೀಕಾ, ಗುರ್ವರ್ಥ ದೀಪಿಕಾ, ಪ್ರಮೇಯ ಸಂಗ್ರಹ, ಯುಕ್ತಿ ಮಲ್ಲಿಕಾ, ಸರಸ ಭಾರತಿ ವಿಲಾಸ, ತೀರ್ಥ ಪ್ರಬಂಧ, ರುಕ್ಮಿಣೀಷ ವಿಜಯ, ಪಾಷಂಡ ಮತ ಖಂಡನ, ಏಕಾದಶೀ ನಿರ್ಣಯ, ಸಂಕಲ್ಪ ಪದ್ಧತಿ, ಕೃಷ್ಣಾಷ್ಟಕ, ಮಹಾಭಾರತ ಟಿಪ್ಪಣಿ, ತಾತ್ಪರ್ಯ ನಿರ್ಣಯ ಟೀಕೆ.
ಉಪಲಬ್ದವಿರುವ ಕನ್ನಡ ಗ್ರಂಥಗಳು
ಕನ್ನಡ ತಾತ್ಪರ್ಯ ನಿರ್ಣಯ, ವೈಕುಂಠ ವರ್ಣನೆ, ಗುಂಪಕ್ರಿಯೆ, ಲಕ್ಷ್ಮೀ ಶೋಬಾನೆ ಹಾಡು, ಸ್ವಪ್ನ ಗದ್ಯ, ಭ್ರಮರ ಗೀತೆ, ಸಾವಿರಾರು ದೇವರ ನಾಮಗಳು, ಸುಳಾದಿಗಳು ಇತ್ಯಾದಿ.
ಶ್ರೀ ವಾದಿರಾಜರು ಭುವಿ ವಾಯುದೇವರು “ಭಾವಿ ಸಮೀರರೆಂದೇ ಕರೆಯಲ್ಪಡುವ ಶ್ರೀ ವಾದಿರಾಜರು ಕದ್ರಿಯ ದೇವಾಲಯದಲ್ಲಿದ್ದ ಮಂಜುನಾಥ ದೇವರನ್ನು ತರಿಸಿ ಯಂತ್ರಸ್ಥಾಪನೆಯನ್ನು ಮಾಡಿ, ಪ್ರತಿಷ್ಠಾಪಿಸಿ ಪೂಜಾದಿಗಳನ್ನು ನೆರವೇರಿಸಿದರು, ಧರ್ಮಸ್ಥಳ ಶ್ರೀ ಮಂಜುನಾಥ ದೇವರು ಶ್ರೀ ವಾದಿರಾಜರು ಪ್ರತಿಷ್ಠಾಪನೆ ಮಾಡಿದ್ದೇ ಆಗಿದೆ.
ಶ್ರೀ ವಾದಿರಾಜರು ರಚಿಸಿದ ನೂರಾರು ದೇವರನಾಮಗಳು ಅವರು ಹಯಗ್ರೀವ ದೇವರನ್ನು ಪೂಜಿಸುತ್ತಿದ್ದರಾದುದರಿಂದ ‘ಹಯವದನ’ ಎಂಬ ಅಂಕಿತದಿ0ದ ರಾರಾಜಿಸುತ್ತಿವೆ.
ಶ್ರೀ ವಾದಿರಾಜರು ಆಗಿನ ಕಾಲದಲ್ಲಿ ವಿಜಯನಗರ ಸಂಸ್ಥಾನದಲ್ಲಿ ಗುರುಗಳಾಗಿದ್ದ ಶ್ರೀ ವ್ಯಾಸರಾಜರ ಹತ್ತಿರ ಕೆಲವು ಕಾಲ ಪ್ರೌಢ ವಿದ್ಯಾಭ್ಯಾಸವನ್ನು ನಡೆಸಿದರು. ವ್ಯಾಸರಾಯರ ಉಪದೇಶದ ರೀತಿ ವಾದಿಗಳೊಡನೆ ವಾದಿಸುವ ಕ್ರಮಗಳನ್ನು ವಾದಿರಾಜರು ಚೆನ್ನಾಗಿ ಗ್ರಹಿಸಿದರು. ಅಲ್ಲದೇ ವಿದ್ವತ್ಸಭೆಗಳಲ್ಲಿ ಪ್ರಖ್ಯಾತಿ ಪಡೆದರು.
ಲಕ್ಷ್ಮೀ ಶೋಭಾನೆ ಹಾಡಿನ ಮಹಿಮೆ
ಶ್ರೀ ವಾದಿರಾಜರು ಮದುವೆ ದಿಬ್ಬಣದಲ್ಲಿ ವರನಿಗೆ ಒದಗಿದ ಮೃತ್ಯುವನ್ನು ಪರಿಹಾರ ಮಾಡಲು “ಲಕ್ಷ್ಮೀ ಶೋಭಾನೆಯೆಂಬ ಪದವನ್ನು ಹಾಡಿ, ಶ್ರೀ ಲಕ್ಷ್ಮೀ ನಾರಾಯಣನ ಅನುಗ್ರಹದಿಂದ ಆತನನ್ನು ಬದುಕಿಸಿದರು. ಅಂದಿನಿ0ದ ವಿವಾಹ ಸಮಯದಲ್ಲಿ ವಧೂ- ವರರ ಮಂಗಲಕ್ಕಾಗಿ ಶ್ರೀ ಲಕ್ಷ್ಮೀ ಶೋಭಾನೆ ಪದವನ್ನು ಮುತ್ತೈದೆಯರು ಹಾಡುವ ಪದ್ಧತಿ ಇದೆ.
ವಾದಿರಾಜರು ಬದರಿಕಾಶ್ರಮಕ್ಕೆ ಹೋಗಿ ಬಂದ ನಂತರ ಬದರಿಯಲ್ಲಿ ಶ್ರೀ ಮನ್ಮಧ್ವಾಚಾರ್ಯರಿಂದ ತ್ರಿವಿಕ್ರಮ ಮೂರ್ತಿಯನ್ನು ತರಿಸಿ ಸೋದೆಯಲ್ಲಿ ಪ್ರತಿಷ್ಠಾಪಿಸಬೇಕೆಂಬ ಯೋಚನೆಯಿಂದ 1504ರಲ್ಲಿ ನಾರಾಯಣಭೂತನು ವಾದಿರಾಜರ ಅನುಗ್ರಹ ಬಲದಿಂದ ಬದರಿಗೆ ಹೋಗಿ ಶಿಲಾರೂಢ ಸಹಿತವಾದ ತ್ರಿವಿಕ್ರಮ ಮೂರ್ತಿಯನ್ನು ತಂದು ಶ್ರೀ ವಾದಿರಾಜರು ಮಹಾಪೂಜಾದಿಗಳನ್ನು ನಡೆಸಿ ಶ್ರೀ ತ್ರಿವಿಕ್ರಮ ಪ್ರತಿಷ್ಠೆಯನ್ನು ಮಾಡಿದರು.
ವಾದಿರಾಜರು ತಮ್ಮ ವೃದ್ಧಾಪ್ಯದಲ್ಲಿ ಸೋದೆಯಲ್ಲಿ ವಾಸ ಮಾಡಿದರು. ಭಾರತೀಯ ಯತಿಗಳ ಇತಿಹಾಸದಲ್ಲಿ ಸಶರೀರವಾಗಿ ಬೃಂದಾವನ ಮಾಡಿದವರಲ್ಲಿ ವಾದಿರಾಜರು ಮೊದಲನೇಯವರು. 120 ವರ್ಷಗಳ ಅವರ ಜೀವಿತ ಕಾಲದಲ್ಲಿ ಅವರು ಮಾಡಿದ ಕೆಲಸಗಳು ಎಲ್ಲರಿಂದ ಮಾನ್ಯವಾಯಿತು. ಪಾಮರರನ್ನು ಉದ್ಧಾರ ಮಾಡಿದರು. ಸಂಸ್ಕೃತಕ್ಕೆ ಸಮನಾದ ಸ್ಥಾನವನ್ನು ಕನ್ನಡಕ್ಕೂ ಕೊಟ್ಟು ಉದ್ಧಾರ ಮಾಡಿದರು.
ಶ್ರೀ ವಾದಿರಾಜರು ಕ್ರಿ.ಶ. 1600 ಫಾಲ್ಗುಣ ಬಹುಳ ತೃತೀಯಾ ದಿವಸ ವೃಂದಾವನಸ್ಥರಾದ ಶ್ರೀ ವಾದಿರಾಜರು ಅಂದಿನಿ0ದ ಇಂದಿನವರೆಗೆ ಸೇವೆ ಮಾಡುವ ಭಕ್ತಾದಿಗಳಿಗೆ ವಿವಿಧ ಇಷ್ಟಾರ್ಥಗಳನ್ನು ನೀಡುತ್ತಿದ್ದಾರೆ. ಸೋಂದಾ ಕ್ಷೇತ್ರ ಅತ್ಯಂತ ಪಾವನವಾದ ಮಹಿಮೆಯುಳ್ಳ ಕ್ಷೇತ್ರವಾಗಿದ್ದು ಅವರ ಪಾದೋದಕ ಅವರ ಮೃತ್ತಿಕಾ ಸೇವನೆಯಿಂದ ಅನೇಕ ವ್ಯಾಧಿಗಳು ಪರಿಹಾರ ಆಗುತ್ತಿವೆ. ಇಂತಹ ಮಹಿಮಾನ್ವಿತರಾದ ಕರುಣಾ ಸಮುದ್ರರಾದ ಭಕ್ತಾದಿಗಳ ಅಘಗಳನ್ನು ಮನ್ನಿಸಿ ಅಭಯವನ್ನು ನೀಡುತ್ತಿರುವ ಶ್ರೀ ವಾದಿರಾಜರು ನಮ್ಮೆಲ್ಲರನ್ನು ರಕ್ಷಿಸಲಿ. ಶ್ರೀ ಕೃಷ್ಣಾರ್ಪಣಮಸ್ತು.