ಏಪ್ರಿಲ್ 1 ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಪುಣ್ಯಾರಾಧನಾ ಮಹೋತ್ಸವ. ತನ್ನಿಮಿತ್ತ ಸಕಾಲಿಕ ನುಡಿನಮನ.
*ಡಾ. ಗುರುರಾಜ ಪೋಶೆಟ್ಟಿಹಳ್ಳಿ
ಸಾಮಾನ್ಯವಾಗಿ ಶಿಷ್ಯರು ತಮ್ಮ ಗುರುಗಳ ಮಹಿಮಾನ್ವಿತ ವ್ಯಕ್ತಿತ್ವಕ್ಕೆ ಮನಸೋತು ಅವರನ್ನು ಶ್ರದ್ಧಾಭಕ್ತಿಗಳಿಂದ ಸ್ತೋತ್ರ ಮಾಡುವುದು ಲೋಕಾರೂಢಿ. ಆದರೆ ಗುರುಗಳೇ ತಮ್ಮ ಶಿಷ್ಯರ ಶ್ರೀಮಂತ ಗುಣಗಳಿಗೆ ಮಾರುಹೋಗಿ ಅವರ ಪ್ರತಿಭಾ ಸಾಮರ್ಥ್ಯಗಳನ್ನು ಹಾಡಿ ಹೊಗಳುವುದು ತುಂಬಾ ಅಪರೂಪ. ಶ್ರೀ ವ್ಯಾಸರಾಜರು ತಮ್ಮ ವಿದ್ಯಾಗುರುಗಳಾದ ಶ್ರೀ ಶ್ರೀಪಾದರಾಜರಿಂದಲೇ ‘ಸಾಸಿರ ಜಿಹ್ವೆಗಳುಳ್ಳ ಶೇಷನೇ ಕೊಂಡಾಡಬೇಕು ವ್ಯಾಸಮುನಿರಾಯರ ಸನ್ಯಾಸದಿರವ’ ಎಂದು ಮುಕ್ತಕಂಠದ ಶ್ಲಾಘನೆಗೆ ಭಾಜನರಾದ ಶಕ ಪುರುಷರು. ಶ್ರೀ ಮಧ್ವಾಚಾರ್ಯ ಪ್ರಣೀತವಾದ `ತತ್ತ್ವವಾದ’ದ ಪರಿಧಿಯನ್ನು ವಿಸ್ತರಿಸಿದ ಶ್ರೀ ವ್ಯಾಸರಾಜರು ಮಧ್ವಸಿದ್ದಾಂತವನ್ನು ಎಷ್ಟು ಸಮೃದ್ಧವಾಗಿ ವ್ಯಾಖ್ಯಾನಿಸಬಹುದೆಂದು ವಿದ್ವಜ್ಜನರಿಗೆ ತೋರಿದ ಜ್ಞಾನವರೇಣ್ಯರು. ವೈಚಾರಿಕ ಜಗತ್ತಿನಲ್ಲಿ ಅಚಾರ್ಯ ಮಧ್ವರ ತತ್ತ್ವವಾದ, ಉಳಿದೆಲ್ಲ ಚಿಂತನ ಕ್ರಮಗಳಿಗಿಂತ ಗಂಭೀರ, ವ್ಯಾಪಕ ಹಾಗೂ ನಿರ್ದಿಷ್ಟವಾದದ್ದೆಂದು ಸತಾರ್ಕಿಕವಾಗಿ, ಅತ್ಯಂತ ಸಮರ್ಪಕವಾಗಿ ಪ್ರತಿಪಾದಿಸಿ, ತಮ್ಮ ತರ್ಕತಾಂಡವ,
ನ್ಯಾಯಾಮೃತ ಹಾಗೂ ತಾತ್ಪರ್ಯಚಂದ್ರಿಕಾ ಗ್ರಂಥಗಳಿ0ದ ವಿದ್ವದ್ಮಾನ್ಯರಾದವರು.
ಹರಿದಾಸ ಸಾಹಿತ್ಯ ಪರಂಪರೆಗೆ ಪ್ರೇರಕ ಶಕ್ತಿ
ಶ್ರೀ ಮಧ್ವಾಚಾರ್ಯರು, ಶ್ರೀ ಜಯತೀರ್ಥರೊಂದಿಗೆ
ಮಧ್ವಮತದ ಮುನಿತ್ರಯರು’ ಎಂದು ಜ್ಞಾನಿನಾಯಕರಿಂದ ಅಸಾಧಾರಣ ಗೌರವಕ್ಕೆ ಪಾತ್ರರಾಗಿರುವ ಶ್ರೀ ವ್ಯಾಸರಾಜರು ಸಮಕಾಲೀನ ತತ್ತ್ವಜ್ಞಾನ ಚಿಂತನೆಗಳನ್ನು ಅತ್ಯಂತ ಕೂಲಂಕಷವಾಗಿ ಅಧ್ಯಯನ ಮಾಡಿ. ಅಷ್ಟೇ ತಲಸ್ಪರ್ಶಿಯಾದ ವಿಮರ್ಶೆಯನ್ನು ಮಾಡಿ ಅನೇಕ ಸಂದಿಗ್ಧಗಳನ್ನು ಪರಿಹರಿಸಿದರು.
ಹೀಗೆ `ಮಧ್ವತತ್ತ್ವಜ್ಞಾನ’ದ ಪ್ರಚಾರದಲ್ಲಿ ಅನಾದೃಶವಾದ ಅಪ್ರತಿಮವಾದ ಭೂಮಿಕೆಯನ್ನು ನಿರ್ವಹಿಸಿದ ಶ್ರೀ ವ್ಯಾಸರಾಜರು, ಆಚಾರ್ಯ ಮಧ್ವರಿಂದ ಬೀಜಾವಾಪನೆಗೊಂಡಿದ್ದ ಹರಿದಾಸ ಸಾಹಿತ್ಯ ಪರಂಪರೆಗೆ ಪ್ರೇರಕ ಶಕ್ತಿಯಾಗಿ, ಶ್ರೀ ವಾದಿರಾಜರು, ಶ್ರೀ ವಿಜಯೀಂದ್ರರು, ಶ್ರೀ ಪುರಂದರದಾಸರು, ಶ್ರೀ ಕನಕದಾಸರೇ ಮೊದಲಾದ ವಿದ್ವದ್ವಿಭೂತಿಗಳಿಗೆ ಗುರುಗಳಾಗಿ, ವಿಜಯನಗರದ ಧರ್ಮಸಾಮ್ರಾಜ್ಯದ ರಕ್ಷಕರಾಗಿ ಈ ನಾಡಿಗೆ ನೀಡಿದ ಕೊಡುಗೆ ಅಪೂರ್ವ.
ಶ್ರೀಶಾಪರೋಕ್ಷವನ್ನು ಪಡೆದು ಸನ್ಯಾಸಿ ರತ್ನಾಕರರೆಂದು ಪ್ರಸಿದ್ದರಾದ ಶ್ರೀ ವ್ಯಾಸರಾಜರದು ಲೋಕವೇ ನಿಬ್ಬೆರಗಾಗುವಂತಹ ವರ್ಣರಂಜಿತ ವ್ಯಕ್ತಿತ್ವ. ಅವರು ‘ಕೆರೆ ಬಾವಿ ಅಗ್ರಹಾರಗಳ ಮಾಡಿ‘ ಒಂದು ಲಕ್ಷಭೂಸುರರ ಕುಟುಂಬಗಳನ್ನು ಸಂರಕ್ಷಿಸಿದ ಗುಣಗಣ ಗಾಂಭೀರ್ಯಾದಿಗಳ ವೈಭವದ ಕೀರ್ತಿವಂತರು; ರಂಗವಿಠಲನಾದ ವಾಸುದೇವನ ಪಾದಾರಾವಿಂದಗಳನ್ನು ಹಗಲಿರುಳೆನ್ನದೆ ಮೀಸಲು ಮನಸ್ಸಿನಿಂದ ಭಜಿಸುವ ಭಕ್ತಾಗ್ರೇಸರರು, ಪ್ರಹ್ಲಾದನಾಗಿ ತಾವಾಡಿದ ಮಾತುಗಳನ್ನೇ ಅನುಷ್ಠಾನಿಸಿ ಮಾರ್ಗದರ್ಶನ ಮಾಡಲೆಂಬ0ತೆ ಬಾಲ್ಯದಲೇ ಸಂನ್ಯಾಸ ಸ್ವೀಕರಿಸಿದ ಶ್ರೀ ವ್ಯಾಸರಾಜರ ಅತಿಶಯ ವೈರಾಗ್ಯ ಸಂಪನ್ನತೆ, ಋಜುತನಗಳಿಗೆ ಹಿಡಿದ ಕೈಗನ್ನಡಿ.
‘ಈಸುಮುನಿಗಳಿದ್ದೇನು ಮಾಡಿದರಯ್ಯಾ ವ್ಯಾಸಮುನಿ ಮಧ್ವಮತವನುದ್ಧರಿಸಿದ’ ಎಂಬುದಾಗಿ ಶ್ರೀ ವ್ಯಾಸರಾಜರ ಮಹಿಮೆಯನ್ನು ಕೊಂಡಾಡಿದ ಶ್ರೀ ಪುರಂದರದಾಸರು ಶ್ರೀವ್ಯಾಸರಾಜರ ಶಿಷ್ಟಾಗ್ರಹಿಗಳಾದ ದಾಸ ಶ್ರೇಷ್ಠರು. ತಮ್ಮ ಗುರುಗಳಿಂದಲೇ ‘ದಾಸರೆಂದರೆ ಪುರಂದರ ದಾಸರಯ್ಯ' 'ಕಂಗಳಿಗೆ ಹಬ್ಬವಾಯಿತಯ್ಯ ಮಂಗಳಾತ್ಮಕ ಪುರಂದರ ದಾಸರನು ಕಂಡು' ಎಂದು ಮುಕ್ತಕಂಠದ ಶ್ಲಾಘನೆಗೆ ಪಾತ್ರರಾದ ಶ್ರೀ ಪುರಂದರದಾಸರು ತಮ್ಮ ಅನೇಕ ಕೃತಿಗಳಲ್ಲಿ ಶ್ರೀ ವ್ಯಾಸರಾಯರನ್ನು ಅತಿಶಯವಾಗಿ ಸ್ತುತಿಸಿದ್ದಾರೆ.
‘ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ” ಎಂದು ಗುರುವಿನ ಮಹತಿಯನ್ನು ಸಾರಿ ಹೇಳಿದ ದಾಸರಾಯರು.
ಹರಿದಾಸರ ದೀಕ್ಷೆಗೆ 'ಅಂಕಿತ' ಅತ್ಯಂತ ಪ್ರಮುಖವಾದದ್ದು, 'ಅಂಕಿತವಿಲ್ಲದ ದೇಹ ನಿಷೇಧ ಅಂಕಿತವಿಲ್ಲದ ಕಾಯ ಶೋಭಿಸದು ಅಂಕಿತವಿಲ್ಲದಿರಬಾರದೆ0ಬುದು ಚಕ್ರಾಂಕಿತವನ್ನು ಮಾಡಿ ಎನ್ನಂಗಕ್ಕೆ ಪಂಕಜನಾಭ ಶ್ರೀ ಪುರಂದರ ವಿಠಲನ ಅಂಕಿತವೆನಗಿತ್ತ ಗುರು ವ್ಯಾಸಮುನಿರಾಯ' ಎಂದು ತಮಗೆ '
ಶ್ರೀ ಪುರಂದರ ವಿಠಲ' ಎಂಬ ಅಂಕಿತ ಪ್ರದಾನ ಮಾಡಿದ ಶ್ರೀ ವ್ಯಾಸರಾಜರನ್ನು ಸ್ಮರಿಸುತ್ತಾರೆ.
ಶಂಕುಕರ್ಣನೆ0ಬ ಕರ್ಮಜದೇವತೆ, ಪ್ರಹ್ಲಾದರಾಜರಾಗಿ, ಬಾಹ್ಲೀಕ ರಾಜರಾಗಿ, ವ್ಯಾಸರಾಜರಾಗಿ, ಶ್ರೀ ರಾಘವೇಂದ್ರರಾಗಿ ಶ್ರೀ ಹರಿಯ ವಿಶೇಷ ಸೇವೆ ಮಾಡಿದನೆಂಬುದು ಶಾಸ್ತ್ರೋಕ್ತ ವಿಚಾರ, ಪ್ರಹ್ಲಾದರಾಜರಲ್ಲಿ ಶೇಷದೇವರ ಆವೇಶವಿತ್ತೆಂಬುದು ಶಾಸ್ತ್ರಸಿದ್ಧವಾಗಿದ್ದು, ವಾಯುದೇವರ ಹಾಗೂ ಸಾಕ್ಷಾತ್ ಪರಮಾತ್ಮನ ವಿಶೇಷ ಅನುಗ್ರಹಕ್ಕೆ ಪಾತ್ರರಾದ ಶ್ರೀ ವ್ಯಾಸರಾಜರು ಪ್ರಹ್ಲಾದರಾಜರ ಅವತಾರವೆಂಬುದನ್ನು ಶ್ರೀ ಪುರಂದರ ದಾಸರು, ‘ಶೇಷಾವೇಶ ಪ್ರಹ್ಲಾದನವತಾರವೆನಿಸಿದೆ ವ್ಯಾಸರಾಯನೆಂಬೊ ಪಸರು ನಿನಗಂದ0ತೆ’ ಎಂಬುದಾಗಿ ಸೂಚಿಸಿದ್ದಾರೆ.
ಶ್ರೀ ವ್ಯಾಸರಾಯರ ಕ್ರಾಂತಿ
ಶ್ರೀ ವ್ಯಾಸರಾಯರು ಅಂದಿನ ಕಾಲದಲ್ಲಿ ಮಾಡಿದ ಮಹತ್ತರ ಕ್ರಾಂತಿಯೆ0ದರೆ, ಶ್ರೀ ಕನಕದಾಸರ ಜೀವದ ಯೋಗ್ಯತೆಯನ್ನು ಪರಿಗಣಿಸಿ ಅವರಿಗೆ ಅಪಾರವಾದ ಮನ್ನಣೆಯನ್ನು ನೀಡಿ ಗೌರವಿಸಿದ್ದು, ಮಡಿವಂತ ಸಮಾಜ ಶ್ರೀ ಕನಕದಾಸರನ್ನು ಪುರಸ್ಕರಿಸದಿದ್ದರೂ, ಶ್ರೀ ವ್ಯಾಸರಾಜರಂತಹ ಯತಿಶ್ರೇಷ್ಠರು ಅವರನ್ನು ಗೌರವಿಸಿದ್ದುದು ಕನಕದಾಸರ ಘನತೆ ಜಗತ್ತಿಗೆ ತಿಳಿಯಲು ಸಹಾಯಕವಾಯಿತು.
ಶ್ರೀ ಪುರಂದರದಾಸರ ಇನ್ನೊಬ್ಬ ಮಗ ಗುರುಪುರಂದರ ವಿಠಲಾಂಕಿತ ದಾಸರು, ‘ವಾದಿಗಜಸಿಂಹ, ದುವಾದಿಮೃತ ಭೇರುಂಡ, ವಾದಿಫಣಿ ಗರುಡ, ತತ್ವಾದಿರಚಿತಾ, ವಾದಿಭಯಂಕರ, ದುರ್ವಾದಿ ಕೋಲಾಹಲ, ವಾದಿ ಮಸ್ತಕಶುಲ, ಮಧುರ ಗುಣಶೀಲ, ವೈಷ್ಣವೋತ್ತಮ, ಸದ್ವೈಷ್ಣವ ಪ್ರಜಾನಂದ, ವೈಷ್ಣವಾಗಮಭರಿತ, ವೈಷ್ಣವಪ್ರಿಯಾ, ವೈಷ್ಣವ ಕಮಲಸೂರ್ಯ, ವೈಷ್ಣವಕುಮುದ ಚಂದ್ರ, ವೈಷ್ಣವ ಕುಲೋತ್ಕ್ರುಷ್ಟ, ವೈಷ್ಣವ ವಿಶಿಷ್ಟ, ಹರಿಯಿಲ್ಲದ ಕ್ಷೇತ್ರವರಿಯದ ಮಹಾಮಹಿಮ, ಸಿರಿಕೃಷ್ಣ ಸರಸೀರುಹ ಭೃಂಗ’’ ಮೊದಲಾದ ವಿಶೇಷಣಗಳ ಮಾಲಿಕೆಯನ್ನು ಶ್ರೀ ವ್ಯಾಸತೀರ್ಥರ ಪಾದಪದ್ಮಗಳಿಗೆ ಸಮರ್ಪಿಸಿದ್ದಾರೆ.
ಶ್ರೀ ವಿಜಯದಾಸರು ದಾಸಸಾಹಿತ್ಯದ ದ್ವಿತೀಯ ಘಟ್ಟದ ಚಾಲಕ ಶಕ್ತಿಯಾಗಿ ನಿಂತವರು, ಶ್ರೀ ಗೋಪಾಲದಾಸರು, ಶ್ರೀ ತಿಮ್ಮಣ್ಣದಾಸರ, ಶ್ರೀ ಮೋಹನದಾಸರು, ಶ್ರೀ ಜಗನ್ನಾಥದಾಸರೇ ಮೊದಲಾದ ಹರಿದಾಸರಿಗೆ ಪ್ರೇರಕರಾಗಿ ದಾಸಸಾಹಿತ್ಯ ಪರಂಪರೆಯನ್ನು ಬೆಳೆಸಿದ ಮಹಾನುಭಾವರು, ಶ್ರೀ ವಿಜಯದಾಸರು ತಮ್ಮ ಕೃತಿಗಳಲ್ಲಿ ಶ್ರೀ ವ್ಯಾಸತೀರ್ಥರನ್ನು ಅತ್ಯಂತ ಗೌರವದಿಂದ ಸ್ಮರಿಸಿದ್ದಾರೆ.
ಸಾಳ್ವ ನರಸಿಂಹನ ದುಡುಕಿನಿಂದ ನಿಂತು ಹೋಗಿದ್ದ ದೇವತಾ ಸೇವೆಗಳನ್ನು ಊರ್ಜಿತಗೋಳಿಸಿ ತಿರುಪತಿಯಲ್ಲಿ ಹನ್ನೆರಡು ವರ್ಷಗಳ ಕಾಲ ಶ್ರೀ ಶ್ರೀನಿವಾಸನನ್ನು ಶ್ರೀ ವ್ಯಾಸರಾಯರು ಸ್ವಹಸ್ತದಿಂದ ತಂತ್ರಸಾರೋಕ್ತ ವಾಗಿ ಪೂಜಿಸಿ, ಅರ್ಚಕ ಮನೆತನದವರಿಗೆ ಆ ಹಕ್ಕನ್ನು ಪುನಃ ಹಿಂತಿರುಗಿಸಿದ ಮಹಾಮನಿಷಿಗಳು .
ವಿಜಯನಗರ ಅರಸರ ಪರಂಪರೆಯಲ್ಲಿ ಅತ್ಯಂತ ಹೆಸರುವಾಸಿಯಾಗಿದ್ದ ಶ್ರೀಕೃಷ್ಣದೇವರಾಯನ ಕುಹಯೋಗ ಕಂಟಕವನ್ನು ನಿವಾರಿಸಿ ಹಿಂದೂ ಧರ್ಮದ ಸಂಘಟನೆಗಾಗಿ, ಆ ಮೂಲಕ ವಿಜಯನಗರ ಸಾಮ್ರಾಜ್ಯದ ಭದ್ರ ಬುನಾದಿಯಾಗಿ ಸಂಚಾರಹೋದಲೆಲ್ಲ ಮುಖ್ಯಪ್ರಾಣದೇವರ (೭೩೨) ವಿಗ್ರಹ ಸ್ಥಾಪಿಸಿ, ವೈಷ್ಣವ ಆಚಾರ್ಯರಾದರು. ಶೈವದ್ವೇಷಿಯಾಗದೆ ಬಸವಾಭಟ್ಟನಿಂದ ಕೊಡುಗೆಯಾಗಿ ಪಡೆದ ಪಚ್ಚೆಲಿಂಗವನ್ನು ಪೂಜಿಸುತ್ತ ಮತೀಯ ಸಾಮರಸ್ಯಕ್ಕೆ ಹೊಸದೊಂದು ಮುನ್ನುಡಿ ಬರೆದ ಆನೆಗೊಂದಿಯ ನಡುಗಡ್ಡೆಯ ಪದ್ಮನಾಭತೀರ್ಥರ ಬೃಂದಾವನದ ಎದುರು ಬೃಂದಾವನಸ್ಥರಾದ ಪಾವನ ಜೀವನ ಪುಣ್ಯ ಚೇತನರು.