ಸವದತ್ತಿ: ಸತ್ಯ, ನ್ಯಾಯಬದ್ಧತೆ, ಗುರು ಹಿರಿಯರಲ್ಲಿ ಗೌರವ ಭಾವ, ದೈವನಿಷ್ಠೆ, ಪ್ರಾಮಾಣಿಕತೆ ಮೊದಲಾದ ಗುಣಗಳ ಪ್ರತೀಕ ಶ್ರೀ ರಾಮ. ರಾಮಾಯಣ ಜೀವನದ ಮೌಲ್ಯಗಳನ್ನು ಒಳಗೊಂಡಿದೆ ಎಂದು ರತ್ನಾ ಆನಂದ ಮಾಮನಿ ಹೇಳಿದರು.
ಮಾಮನಿ ಕಲ್ಯಾಣ ಮಂಟಪದಲ್ಲಿಇತ್ತೀಚೆಗೆ ಜರುಗಿದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು, ಬೆಳಗಾವಿ ವಿಭಾಗ ಹಾಗೂ ಶ್ರೀ ರೇಣುಕಾ(ವ)ಸಂಸ್ಕೃತ ಪಾಠಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ವಿಭಾಗ ಮಟ್ಟದ ಶ್ರೀಮದ್ ವಾಲ್ಮೀಕಿ ರಾಮಾಯಣ ಆಧಾರಿತ ಶ್ರೀ ರಾಮೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ನಾವು ಚಿಕ್ಕವರಿದ್ದಾಗ ದೂರದರ್ಶನದಲ್ಲಿ ರಾಮಾಯಣ ಪ್ರಸಾರವಾಗುತ್ತಿದ್ದರೆ ಟೀವಿ ನೋಡಲು ಮನೆಯಲ್ಲಿ ಇಡೀ ಕುಟುಂವಷ್ಟೇ ಅಲ್ಲ, ಅಕ್ಕಪಕ್ಕದ ಮನೆಗಳವರೂ (ಟೀವಿ ಇಲ್ಲದ ಮನೆಗಳು) ಅಲ್ಲಿ ಬರುತ್ತಿದ್ದರು. ರಾಮಾಯಣವನ್ನು ಪೂಜ್ಯನೀಯ ಭಾವದಿಂದಲೇ ನೋಡುತ್ತಿದ್ದರು. ಈ ರೀತಿಯ ವಾತಾವರಣವನ್ನು ರಾಮಾಯಣ ಧಾರವಾಹಿ ಸೃಷ್ಟಿಸಲು ಕಾರಣವಾಗಿತ್ತು. ರಾಮನ ಆದರ್ಶದೊಂದಿಗೆ ಜೀವನ ಮೌಲ್ಯಗಳನ್ನು ಹೊಂದಿದ ಪಾತ್ರಗಳು ನಮ್ಮ ಮೇಲೆ ಪ್ರಭಾವ ಬೀರಿದ್ದವು. ಇಂದಿನ ಪೀಳಿಗೆಗೂ ನಾವು ನಮ್ಮ ದೈನಂದಿನ ಜೀವನದಲ್ಲಿ ರಾಮನ ಆದರ್ಶಗಳನ್ನು ಅಳವಡಿಸಿಕೊಂಡು ಬದುಕುವ ಸತ್ಪರಂಪರೆ ಹುಟ್ಟುಹಾಕಬೇಕು” ಎಂದು ಅವರು ಹೇಳಿದರು.
ವೈದ್ಯೆ ಡಾ.ನಯನಾ ಭಸ್ಮೆ, ಬೆಳಗಾವಿಯ ವೀರವಾಣಿ ಪತ್ರಿಕೆಯ ಸಂಪಾದಕರಾದ ರಾಮಚಂದ್ರ ಏಡಕೆ, ಸಂಸ್ಕೃತಿ ಶಿಕ್ಷಣ ನಿರ್ದೇಶನಾಲಯದ ಬೆಂಗಳೂರು ನಿರ್ದೇಶಕರಾದ ಪಿ.ಆರ್.ಪಾಗೋಜಿ, ಸಹಾಯಕ ಪ್ರಾಧ್ಯಾಪಕರಾದ ಭಾಸ್ಕರ ಜೋಶಿ.ಬಿ.ಎಸ್., ಗಡಾದ, ಜೆ.ಬಿ.ಕರೆಪ್ಪನವರ, ರವಿ.ಬ್ಯಾಹಟ್ಟಿ ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸವದತ್ತಿ ತಾಲೂಕ ಘಟಕದ ಅಧ್ಯಕ್ಷರಾದ ಸುರೇಶ ಬೆಳವಡಿ, ಶ್ರೀ ರೇಣುಕಾ(ಎ)ಸಂಸ್ಕೃತ ಪಾಠಶಾಲೆ ಸವದತ್ತಿಯ ಮುಖ್ಯೋಪಾಧ್ಯಾಯರಾದ ಬಿ.ಎನ್.ಹೊಸೂರ ಹಾಗೂ ಶ್ರೀರಾಮನ ವೇಷಧಾರಿ ಬಾಲಪ್ರತಿಭೆ ಸುಪರ್ಣಾ ಜೋಶಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿದ್ವಾನ್ ನಾಗಲಿಂಗ ಮಾಳೇದವರ ಕೃತಿ ”ವಿದ್ಯಾರ್ಥಿ ಮಿತ್ರ” ಬಿಡುಗಡೆ ಗೊಳಿಸಲಾಯಿತು. ಶಿವಯೋಗೀಶ್ವರ ಸಂಸ್ಕೃತ ಪಾಠಶಾಲೆ ಇಂಚಲದ ವಿದ್ಯಾರ್ಥಿಗಳಿಂದ “ಆತ್ಮಾರಾಮ ಆನಂದ ರಮಣ” ಭಜನೆ ಜರುಗಿತು.
ರಾಮಚ0ದ್ರ ಏಡಕೆ, ಪಿ.ಆರ್.ಪಾಗೋಜಿ, ಭಾಸ್ಕರ ಜೋಶಿ, ರತ್ನಾ ಆನಂದ ಮಾಮನಿ, ಡಾ.ನಯನಾ ಭಸ್ಮೆ, ಸುರೇಶ ಬೆಳವಡಿ, ವೈ.ಬಿ.ಕಡಕೋಳ ಮೊದಲಾದವರನ್ನು ಗೌರವಿಸಲಾಯಿತು.
ಮಲ್ಲೇಶ ಮಲಮೇತ್ರಿ ಕಾರ್ಯಕ್ರಮ ನಿರೂಪಿಸಿದರು. ಜೆ.ಬಿ.ಕರೆಪ್ಪನವರ ಸ್ವಾಗತಿಸಿದರು. ಬಿ.ಎಸ್. ಗಡಾದ ವಂದಿಸಿದರು.