ಹುಬ್ಬಳ್ಳಿ: ವಸಂತ ಮಾಸದಲ್ಲಿ ಹೊಸತನ ಸೃಷ್ಟಿಯಲ್ಲಿ ಕಾಣುವಂತೆ ಮನುಷ್ಯ ಜೀವನದಲ್ಲಿಯೂ ಸಹ ಹಳೆಯ ಕಹಿ ನೆನಪುಗಳನ್ನು ಕಳೆದುಕೊಂಡು ಹೊಸತನದಿಂದ ಬಾಳುವುದೇ ಯುಗಾದಿ ಹೊಸ ವರುಷದ ಸಂದೇಶವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಮಂಗಳವಾರ ತಾಲೂಕಿನ ತಿರುಮಲಕೊಪ್ಪ ವ್ಯಾಪ್ತಿಯಲ್ಲಿ ಬರುವ ಶ್ರೀ ಜಗದ್ಗುರು ರೇಣುಕ ಧರ್ಮ ನಿವಾಸದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಾರಥೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪರಶಿವನ ಪಂಚ ಮುಖಗಳಿಂದ ಅವತರಿಸಿದವರು ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು. ಜಾತಿ ಮತ ಪಂಥಗಳ ಸಂಕೋಲೆ ಮೀರಿ ಶಿವಾದ್ವೆöÊತ ಸಿದ್ಧಾಂತವನ್ನು ಬೋಧಿಸಿ ಸಕಲರನ್ನು ಉದ್ಧರಿಸಿದರು. ಸತ್ಯ ಧರ್ಮ ಸಂಸ್ಕೃತಿ ಪರಂಪರೆ ಆದರ್ಶ ಮೌಲ್ಯಗಳ ಪುನರುತ್ಥಾನಕ್ಕಾಗಿ ಶ್ರಮಿಸಿದ್ದನ್ನು ಮರೆಯಲಾಗದು. ಹೊಸ ವರುಷದ ಯುಗಾದಿಯಂದು ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಆಚರಣೆಯನ್ನು ಹುಟ್ಟು ಹಾಕಿದ ಕೀರ್ತಿ ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳಿಗೆ ಸಲ್ಲುತ್ತದೆ. ಸುಖ ದುಃಖಗಳ ಸಂಮಿಶ್ರಣ ಮಾನವ ಜೀವನ. ಸುಖದ ನಂತರ ದುಃಖ ದುಃಖದ ನಂತರ ಸುಖ ಬರುವುದು. ಇವೆರಡರ ಸಮನ್ವಯ ಭಾವನೆಯಿಂದ ಬಾಳನ್ನು ಸಾಗಿಸುವುದೇ ಬೇವು ಬೆಲ್ಲ ಸ್ವೀಕಾರದ ಅರ್ಥವಾಗಿದೆ ಎಂದ ಅವರು ಶ್ರೀ ಜಗದ್ಗುರು ರೇಣುಕ ಧರ್ಮ ನಿವಾಸದ ಪರಿಸರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಸಂಕಲ್ಪ ನಮ್ಮದಾಗಿದೆ. 5 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮಂಗಲ ಶಿಲಾ ಮೂರ್ತಿಯ ಸಂಪೂರ್ಣ ಸೇವೆಯನ್ನು ಹುಬ್ಬಳ್ಳಿ ನಗರದ ಶಿವಮೂರ್ತಯ್ಯ ವ್ಹಿ. ಚಿಕ್ಕಮಠ ಒಪ್ಪಿಕೊಂಡಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಶ್ರೀ ಮದ್ವೀರಶೈವ ಸದ್ಬೋಧನ ಸಂಸ್ಥೆ ಹುಬ್ಬಳ್ಳಿ ತಾಲೂಕಾ ಘಟಕದ ಅಧ್ಯಕ್ಷರಾದ ಪ್ರಕಾಶ ಬೆಂಡಿಗೇರಿ ಮಾತನಾಡಿ ನಾಲ್ಕು ತಾಲೂಕಾ ಕೇಂದ್ರಗಳ ಮಧ್ಯವರ್ತಿಯಾಗಿರುವ ಶ್ರೀ ಜಗದ್ಗುರು ರೇಣುಕ ಧರ್ಮ ನಿವಾಸ ಪರಿಸರದಲ್ಲಿ ಹಲವಾರು ಯೋಜನೆ ರೂಪಿಸುವ ಉದ್ದೇಶವಿದೆ. ಈ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕೆಂದರು.
ಸುಳ್ಳದ ಶಿವಸಿದ್ಧರಾಮೇಶ್ವರ ಶ್ರೀಗಳು, ಬಂಕಾಪುರ ರೇವಣಸಿದ್ಧ ಶ್ರೀಗಳು, ಸೂಡಿ ಡಾ. ಕೊಟ್ಟೂರು ಬಸವೇಶ್ವರ ಶ್ರೀಗಳು ಮಳಲಿಮಠದ ಡಾ. ನಾಗಭೂಷಣ ಶ್ರೀಗಳು ಯುಗಾದಿ ಹೊಸ ವರುಷದ ಆಚರಣೆ ಮತ್ತು ಶ್ರೀ ಜಗದ್ಗುರು ಪಂಚಾಚಾರ್ಯರು ಬೋಧಿಸಿದ ವಿಚಾರಗಳು ಕುರಿತು ಉಪದೇಶಾಮೃತವನ್ನಿತ್ತರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರಾದ ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶ್ರೀಗಳು ಮಾತನಾಡಿ ಪರಮ ತಪಸ್ವಿ ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ ತಪಸ್ಸಿನ ಫಲವಾಗಿ ಈ ಕ್ಷೇತ್ರ ಸ್ಥಾಪಿತಗೊಂಡಿದೆ. ಅವರ ಆದರ್ಶಗಳನ್ನು ಇಂದಿನ ಶ್ರೀ ರಂಭಾಪುರಿ ಜಗದ್ಗುರುಗಳು ಸಾಕಾರಗೊಳಿಸುತ್ತಿರುವುದು ಭಕ್ತ ಸಮುದಾಯಕ್ಕೆ ಹರುಷ ತಂದಿದೆ ಎಂದರು.
ಹುಬ್ಬಳ್ಳಿಯ ವೀರಭದ್ರಯ್ಯ ಚಿಕ್ಕಮಠ ಮತ್ತು ತಿರುಮಲಕೊಪ್ಪದ ಹಿರಿಯ ಜೀವ ಕಲ್ಲಪ್ಪ ಸೋಲಾರಕೊಪ್ಪ ಇವರಿಬ್ಬರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಪ್ರಶಸ್ತಿಯಿತ್ತು ಗುರು ರಕ್ಷೆ ನೀಡಿ ಆಶೀರ್ವದಿಸಿದರು.
ಸಮಿತಿಯ ಮುಖ್ಯಸ್ಥರಾದ ಶ್ರೀಕಂಠಗೌಡ ಹಿರೇಗೌಡರು ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಸಲ್ಲಿಸಿದರು. ಹುಬ್ಬಳ್ಳಿಯ ವಿಶ್ವನಾಥ ಹಿರೇಗೌಡ್ರ ಮತ್ತು ಅಗಡಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು ಆಶೀರ್ವಾದ ಪಡೆದರು. ಶಾಂತನಗೌಡ ಹನುಮಂತಗೌಡ್ರ ಮತ್ತು ಪಿ.ಎಸ್. ಹಿರೇಮಠ ಶಿಕ್ಷಕರು ನಿರೂಪಿಸಿದರು.
ಹಿರೇಬೂದಿಹಾಳದ ಪ್ರಕಾಶ ಶಾಸ್ತಿçಗಳ ವೈದಿಕತ್ವದಲ್ಲಿ ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು 65 ಜಂಗಮ ವಟುಗಳಿಗೆ ಶಿವದೀಕ್ಷೆ ಅಯ್ಯಾಚಾರ ನೆರವೇರಿಸಿ ಶುಭ ಹಾರೈಸಿದರು.
ಸಮಾರಂಭಕ್ಕೂ ಮುನ್ನ ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಾರಥೋತ್ಸವ ಭಕ್ತ ಸಮೂಹದ ಮಧ್ಯೆ ಸಂಭ್ರಮದಿ0ದ ಜರುಗಿತು. ಹಲವರು ಭಜನಾ ಸಂಘ, ಸುರಶೆಟ್ಟಿಕೊಪ್ಪದ ಜಗ್ಗಲಿ ಮೇಳದವರು ಪಾಲ್ಗೊಂಡಿದ್ದರು.
ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು.