ಬೆಟ್ಟಕ್ಕೆ ಬಂತು ರಂಗಪ್ಪನ ತೇರು, ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿಗೆ ನೂತನ ಬ್ರಹ್ಮರಥ

ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿಯ ನೂತನ ದೊಡ್ಡರಥವನ್ನು ಗುರುವಾರ ತೇರಿನ ಬೀದಿಯಲ್ಲಿ ದೇವಳದ ಸಿಬ್ಬಂದಿ ಬರ ಮಾಡಿಕೊಂಡರು.

ಸುಮಾರು ಐದಾರು ವರ್ಷಗಳಿಂದ ಶಿಥಿಲವಾದ ರಥವನ್ನು ಎಳೆಯಲಾಗದೆ ದೊಡ್ಡ ಜಾತ್ರೆ ಕಳೆಗಟ್ಟುತ್ತಿರಲಿಲ್ಲ. ಕೆಲವು ಬಾರಿ ಭಕ್ತರು ಅರ್ಧಕ್ಕೆ ಎಳೆದು ನಿಲ್ಲಿಸಬೇಕಾಗಿತ್ತು. ಇದೇ ಸಮಯಕ್ಕೆ ದೇವಳದ ಪುನರ್ ನಿರ್ಮಾಣ ಕಾಮಗಾರಿಯೂ ನಡೆಯುತ್ತಿತ್ತು. ಹೀಗಾಗಿ, ರಥೋತ್ಸವವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ನಂತರ ಭಕ್ತರು ಮತ್ತು ದಾನಿಗಳು ನೂತನ ರಥನಿರ್ಮಾಣಕ್ಕೆ ಮುಜರಾಯಿ ಇಲಾಖೆಗೆ ಬೇಡಿಕೆ ಇಟ್ಟಿದ್ದರು. ಸರ್ಕಾರದ ಅನುದಾನ, ಜಿಲ್ಲಾಧಿಕಾರಿ ನಿಧಿ ಮತ್ತು ದೇವಾಲಯದ ಸಂಪನ್ಮೂಲ ಕ್ರೋಢಿಕರಿಸಿ, ರಥವನ್ನು ನಿರ್ಮಾಣ ಮಾಡಲಾಗಿದೆ.

ಶಿಲ್ಪಿಗಳು ಸ್ಥಳದಲ್ಲಿದ್ದು, ತಾಂತ್ರಿಕ ಕೆಲಸ ಪೂರೈಸಲಿದ್ದಾರೆ. ಮೇ ತಿಂಗಳಲ್ಲಿ ದೊಡ್ಡ ತೇರಿನ ಉತ್ಸವಕ್ಕೆ ಸಿದ್ಧತೆ ನಡೆಯಲಿವೆ ಎಂದು ದೇವಾಲಯದ ಆಡಳಿತ ಮಂಡಳಿ ಸದಸ್ಯರು ಹೇಳಿದರು.

₹ 99.95 ಲಕ್ಷ ವೆಚ್ಚದಲ್ಲಿ ಬ್ರಹ್ಮರಥ ನಿರ್ಮಾಣ

ತೇರಿನ ಎತ್ತರ 18 ಅಡಿ. ₹ 99.95 ಲಕ್ಷ ವೆಚ್ಚವಾಗಿದ್ದು, ಕಳೆದ ವಾರ ರಥದ ಚಕ್ರಗಳು ದೇವಾಲಯಕ್ಕೆ ತಲುಪಿದ್ದವು. ಉಳಿದ ಪರಿಕರಗಳನ್ನು ಲಾರಿಗಳಲ್ಲಿ ತರಲಾಯಿತು. ಯಳಂದೂರಿನಲ್ಲಿ ಭಕ್ತರು ರಥಕ್ಕೆ ಅರ್ಚನೆ ನೆರವೇರಿಸಿ ಬರಮಾಡಿಕೊಂಡರು ಎಂದು ಇಒ ವೈ.ಎನ್.ಮೋಹನ್ ಕುಮಾರ್ ತಿಳಿಸಿದರು. ರಥವನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಿರ್ಮಿಸಲಾಗಿದೆ. ನಿಪುಣ ಕುಶಲ ಕರ್ಮಿಗಳು 1 ವರ್ಷದಲ್ಲಿ ತೇರಿನ ಕಾಯಕ ಪೂರೈಸಿದ್ದಾರೆ. ಇದಕ್ಕೆ ಗುಣಮಟ್ಟದ ತೇಗದ ಮರ ಬಳಕೆ ಮಾಡಲಾಗಿದೆ. ಮೂಲ ರಥದ ಸ್ವರೂಪಕ್ಕೆ ತಕ್ಕಂತೆ ಹೊಸ ತೇರನ್ನು ಸುಂದರವಾಗಿ ರಚಿಸಲಾಗಿದೆ. ರಥದ ಬಿಡಿ ಭಾಗಗಳನ್ನು ಜೋಡಿಸಿ, ಹಗ್ಗಕಟ್ಟಿ ಎಳೆಯುವ ಪರೀಕ್ಷೆ ಮಾಡಲಾಗುವುದು. ನಂತರವಷ್ಟೇ, ದೇವಾಲಯಕ್ಕೆ ಹಸ್ತಾಂತರ ಮಾಡಲಾಗುತ್ತದೆ ಎಂದು ಶಿಲ್ಪಿ ಬಸವರಾಜ ಎಸ್ ಬಡಿಗೇರ ಮಾಹಿತಿ ನೀಡಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles