ಮಾನವ ಜನ್ಮ ನಮಗೆ ದೊರಕಿದ್ದು ಹಿಂದಿನ ಜನ್ಮದ ಪುಣ್ಯಫಲ, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. “ಪರೋಪಕಾರಾರ್ಥಂ ಇದಂ ಶರೀರಂ” ಎನ್ನುವ ಮಾತಿನಂತೆ ಜೀವನದಲ್ಲಿ ಸ್ವಲ್ಪವಾದರೂ ಪರರಿಗೆ ನೀಡುವ ಮಹಾಗುಣವನ್ನು ಬೆಳೆಸಿಕೊಂಡಿರಲೇಬೇಕು.
‘ನಾವು ಈ ಜಗತ್ತಿಗೆ ಏನು ನೀಡುತ್ತೇವೆಯೋ ಅದನ್ನೇ ಮತ್ತೆ ಪಡೆಯುತ್ತೇವೆ’ ಎಂಬ ಒಂದು ಮಾತಿದೆ. ಅಂದರೆ ಅದು ಪ್ರೀತಿ, ಅನುಕಂಪ, ಸಹಾಯಹಸ್ತ ಏನೇ ಆಗಿರಬಹುದು. ಅದು ಮತ್ತೆ ನಮಗೆಲ್ಲೋ ಯಾವುದೋ ರೂಪದಲ್ಲಿ, ನಮ್ಮ ಕಷ್ಟಕಾಲದಲ್ಲಿ ನಮಗೆ ದೊರಕುತ್ತದೆ.
ಸಹಾಯದಿಂದ ಸಂತೋಷ: ನಾವು ಮಾಡುವ ಸಣ್ಣ ಸಣ್ಣ ಸಹಾಯವೂ ಕೂಡಾ ಖುಷಿ ನೀಡುತ್ತದೆ. ಉದಾಹರಣೆಗೆ ನಾವು ನಿತ್ಯ ಓಡಾಡುವ ಬಸ್‌ನಲ್ಲಿ ವಯಸ್ಸಾದವರು, ಕುರುಡರೋ ಕುಂಟರೋ ಬಸ್ ಹತ್ತಬೇಕಿರುತ್ತದೆ. ತ್ರಾಸದಿಂದಲೇ ಬಸ್ ಹತ್ತಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಕಂಡೂ ಕಾಣದಂತೆ ವರ್ತಿಸುವ ಬದಲು, ಅವರಿಗೆ ಸಹಾಯ ಹಸ್ತ ನೀಡುವುದರಲ್ಲಿ ಆನಂದವನ್ನು ಕಂಡುಕೊಳ್ಳಬಹುದು. ಸಹಾಯ ಪಡೆದುಕೊಂಡವನ ಮನದಲ್ಲಿ ಮೂಡುವ ಸಂತೋಷ, ಮನದಲ್ಲಿ ಅಂದುಕೊಳ್ಳುವ ಅವರ ಆಶೀರ್ವಾದ ನಮಗೆ ದೊರಕುವ ಪಾಸಿಟಿವ್ ಶಕ್ತಿ.
ಯಾರೋ ಕಷ್ಟದಲ್ಲಿರುತ್ತಾರೆ. ಅವರಿಗೆ ಸಹಾಯ ಮಾಡುವುದರಿಂದ ಜಗತ್ತಿನಲ್ಲಿ ಯಾವುದೋ ಒಂದು ಸಕಾರಾತ್ಮಕ ಘಟನೆಗೆ ನಾವು ಕಾರಣರಾಗುತ್ತಿದ್ದೇವೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಹಾಗಾಗಿ ಇತರರಿಗೆ ಸಹಾಯ ಮಾಡುವುದರಿಂದ ಖುಷಿಯ ಅನುಭವ ಉಂಟಾಗುವುದು.
ಯಾರಿಗೋ ಒಳ್ಳೆಯದು ಮಾಡಿರುತ್ತೀರಿ, ಇನ್ನೊಬ್ಬರ ಬದುಕಿಗೆ ಆಸರೆಯಾಗಿರುತ್ತೀರಿ. ಅದನ್ನು ಅವರು ಜೀವನ ಪರ್ಯಂತ ಕೃತಜ್ಞತಾಪೂರ್ವಕವಾಗಿ ನೆನಪಿಸಿಕೊಳ್ಳುತ್ತಾರೆ. ಅದರಿಂದ ವ್ಯಕ್ತಿ ವ್ಯಕ್ತಿಯ ನಡುವೆ ಬಾಂಧವ್ಯ ಹೆಚ್ಚುವುದು.
ನಅಲ್ಲಿ ಇಲ್ಲಿ ಹೋದಾಗ ನಮ್ಮ ಮುಂದೆ ಕೈಚಾಚುವವರಿಗೆ ಸಹಾಯ ಮಾಡುವುದರಲ್ಲಿ ಸಿಗುವ ಆನಂದ ಮತ್ತೊಬ್ಬರಿಂದ ಪಡೆಯುವುದರಲ್ಲಿ ಇರುವುದಿಲ್ಲ. ಆದರೆ ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕೆ ಪ್ರತಿಫಲಾಪೇಕ್ಷೆ ಇರಬಾರದು. ನಿರೀಕ್ಷೆ ನಮ್ಮನ್ನು ಕೊರಗುವಂತೆ ಮಾಡುವುದು. ಅದು ಜೀವನದಲ್ಲಿ ದುಃಖ ತರುತ್ತದೆ. ಆದ್ದರಿಂದ ಪ್ರತಿಫಲದ ನಿರೀಕ್ಷೆ ಇಲ್ಲದೇ ಮಾಡುವ ಸಹಾಯ ನಮ್ಮನ್ನು ಖುಷಿಯಾಗಿರುವಂತೆ ಮಾಡುತ್ತದೆ.
ಪರರಿಗಾಗಿ ಜೀವಿಸಿ:
ಸಹಾಯ ಮಾಡುವುದು ಅಥವಾ ಪರೋಪಕಾರ ಮಾಡುವುದು ಅಂದರೆ ಕೇವಲ ಹಣದ ಸಹಾಯ ಅಷ್ಟೇ ಅಲ್ಲ. ಇತರರಿಗೆ ಮತ್ಯಾವುದೋ ರೀತಿಯಲ್ಲಿಯೂ ಸಹಾಯ ಮಾಡುವುದೂ ಆಗಿದೆ. ಅಶಕ್ತರನ್ನು ಕೈಹಿಡಿದು ನಡೆಸುವುದು, ಇರುವ ಜ್ಞಾನವನ್ನು ಧಾರೆ ಎರೆಯುವುದು, ಗೊತ್ತಿಲ್ಲದವರಿಗೆ ಅಗತ್ಯ ಮಾಹಿತಿ ನೀಡುವುದು… ಇವೇ ಮೊದಲಾದ ರೀತಿಯ ಸಣ್ಣ ಸಣ್ಣ ಸಹಾಯಗಳು ಕೂಡಾ ಸಹಾಯ ಪಡೆದವರ ಮೊಗದಲ್ಲಿ ಸಂತಸದ ನಗೆಯನ್ನು ಹೊರಸೂಸುವುದು.
ಸಹಾಯ ಮಾಡುವುದು ಮನುಷ್ಯಜೀವನದ ಸಾರ್ಥಕತೆಯನ್ನು ಸೂಚಿಸುತ್ತದೆ. ಅಂದರೆ ಮನುಷ್ಯ ಜೀವನ ಇರುವುದು ಪರೋಪಕಾರಕ್ಕಾಗಿ. ಪ್ರಕೃತಿಯಲ್ಲಿ ಮರ- ಗಿಡಗಳು ಹಣ್ಣುಗಳನ್ನು ಕೊಡುವಂತೆ, ಹಸುಗಳು ಪರೋಪಕಾರ ಗುಣದಿಂದಲೇ ಹಾಲು ನೀಡುವಂತೆ, ಈ ಮನುಷ್ಯ ಜೀವನ ನಮಗೆ ಸಿಕ್ಕಿರುವುದು ಪರರಿಗೆ ಸಹಾಯ ಮಾಡುವುದಕ್ಕೆ ಎಂದೇ ಭಾವಿಸಬೇಕು.
ಜೀವನಕ್ಕೊಂದು ಅರ್ಥ ಕಂಡುಕೊಳ್ಳುವುದು ಅಂದರೆ ಅದು ತಾನಾಗಿ ಬರುವುದಿಲ್ಲ. ಕಾರ್ಯಗಳಿಂದ, ನಾವು ಬದುಕುವ ರೀತಿಯಿಂದ ಅದನ್ನು ಅರ್ಥಪೂರ್ಣವಾಗಿಸಿಕೊಳ್ಳಬೇಕು.
ಕೊಡುವುದರಲ್ಲಿನ ಖುಷಿ:
‘ಪಡೆಯುವುದಕ್ಕಿಂತ ಕೊಡುವುದರಲ್ಲಿ ಹೆಚ್ಚು ಆನಂದವಿದೆ’ ಎಂಬ ಮಾತಿದೆ. ಕೊಡುವ ಗುಣ ನಮ್ಮಲ್ಲಿದ್ದರೆ ಅದನ್ನು ನಾವು ಸತ್ಪಾತ್ರರಿಗೆ ನೀಡಬೇಕು. ಕೆಲವೊಮ್ಮೆ ಹಣದಲ್ಲಿ ನೀಡಲಾಗದೇ ಇದ್ದುದನ್ನು ನಮ್ಮ ಸಮಯ, ಅನುಕಂಪ ನೀಡುವುದರ ಮೂಲಕವೂ ನೀಡಬಹುದು. ಎಲ್ಲರಿಗೂ ಸಮಯವಂತೂ ಇದ್ದೇ ಇರುತ್ತದೆ. ಕಷ್ಟದಲ್ಲಿರುವವರು ದುಃಖವನ್ನು ಹೇಳಿಕೊಳ್ಳುತ್ತಿರುತ್ತಾರೆ ಎಂದಾದರೆ ಅವರಿಗೆ ಒಂದಷ್ಟು ಹೊತ್ತು ಸಮಯ ಮೀಸಲಿಡಿ. ಅವರ ಕಷ್ಟಗಳಿಗೆ ಸ್ಪಂದಿಸುವುದು ಕೂಡಾ ಒಂದು ರೀತಿಯಲ್ಲಿ ಸಹಾಯ ಮಾಡಿದಂತೆ.
ಕೊನೆಯದಾಗಿ ನಾವು ಏನೇ ಮಾಡುವುದಿದ್ದರೂ ಅದರಿಂದ ಫಲಾಪೇಕ್ಷೆ ಇರಬಾರದು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳಿರುವಂತೆ ‘ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಶು ಕದಾಚನ’ಎನ್ನುವಂತೆ ಯಾವುದೇ ಫಲಾಪೇಕ್ಷೆಯಿಲ್ಲದೇ ಇತರರಿಗೆ ಸಹಾಯ ಮಾಡಬೇಕು. ಅದು ನಿಜವಾದ ಮಾನವ ಧರ್ಮ. ‘ನೀನಾರಿಗಾದೆಯೋ ಎಲೆ ಮಾನವಾ, ಹರಿಹರೀ ಗೋವು ನಾನು, ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೇ ನೊಸಲಿಗೆ ವಿಭೂತಿಯಾದೆ, ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದೆ ನೀನಾರಿಗಾದೆಯೋ ಎಲೆ ಮಾನವ’ – ಇದು ಎಸ್.ಜಿ. ನರಸಿಂಹಾಚಾರ್ ಅವರ ಕವನ. ಮನುಷ್ಯ ತನ್ನ ಬದುಕನ್ನು ಕೂಡಾ ಗೋವಿನ ಹಾಗೆ ಸಾರ್ಥಕವಾಗಿಸಿಕೊಳ್ಳಬೇಕು ಎಂಬ ಅರ್ಥವನ್ನು ಸೂಚಿಸುತ್ತಿದೆ.