ಕೋಟಿ ಕೋಟಿ ಜನುಮಕೆ ನಿನ್ನ ನಾಮವೊಂದೇ ಸಾಕು… ದಾಟಿಸುವುದು ಭವಸಾಗರವಾ…

ಮಂತ್ರಾಲಯದ ಫೇಸ್‌ಬುಕ್ ಪುಟದಲ್ಲಿ ಏಪ್ರಿಲ್ 15 ರಂದು ಬೆಂಗಳೂರಿನ ವಿದ್ವಾನ್ ಅಭಿರಾಮ ಭರತವಂಶಿ ಅಪರೂಪದ “ಹರಿ ಕಥಾ ಸುಧಾ ಸಿಂಚನ” ಕಾರ‍್ಯಕ್ರಮ ನಡೆಸಿಕೊಟ್ಟರು! ಸುಮಾರು 190 ನಿಮಿಷಗಳ ಭಕ್ತಿ ರಸ ಸಿಂಚನದ ಸುಧೆ ಹರಿಸಿದ ಶಾಸ್ತ್ರೀಯ ಸಂಗೀತಗಾರ ನಾಡಿನ ಮೇರು ಗುರು ಗಾನಕಲಾ ಭೂಷಣ, ಸಂಗೀತ ವಿದ್ಯಾನಿಧಿ ಡಾ.ಆರ್.ಕೆ.ಪದ್ಮನಾಭರ ಶಿಷ್ಯೋತ್ತಮನೇ! ನೆರೆದ ಸುಮಾರು 600 ಕ್ಕೂ ಮೀರಿದ ಭಗವದ್ಭಕ್ತರ ಸಮಕ್ಶಮದಲ್ಲಿ ಅಭಿಜಾತ ಕಲಾವಿದ ಅಭಿರಾಮ ತನ್ನ ಮನೆಯ ಸ್ಟುಡಿಯೋದಿಂದಲೇ ಹತ್ತು-ಹದಿನಾರು ದಾಸರ ಪದಗಳನ್ನು ಬಲು ಭಕುತಿಯಿಂದ, ಶ್ರದ್ಧಾ ಭಾವಗಳಿಂದ ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದ ವೈಖರಿ ನಿಜಕ್ಕೂ ಪ್ರಶಂಸನೀಯ!

ತಮ್ಮ ಗುರುಗಳಿಗೆ ವಂದಿಸುತ್ತಲೇ ಪದ್ಮನಾಭದಾಸರ ಪಥದಲ್ಲೇ ಮೊದಲಿಗೆ ಗುರು ವಾದಿರಾಜಾಚಾರ‍್ಯರ “ತಪೋವಿದ್ಯಾ ವಿರಕ್ತಾದಿ ಸದ್ಗುಣೌ ಗಾಕರಾನನಂ..” ಶ್ಲೋಕದೊಂದಿಗೆ ಆರಂಭಿಸಿ ವಿಜಯದಾಸರ “ಗಜವದನ ಪಾಲಿಸೋ…” ಗಂಭೀರ ನಾಟ ರಾಗದಲ್ಲಿ, ಆದಿ ತಾಳದಲ್ಲಿ ಮಂಡಿಸಿದರು. ನಂತರದ ಮೋಹನ ರಾಗ ಕಮಲೇಶ ವಿಠಲದಾಸರ “ಏಕೆ ಬ್ರಂದಾವನದಿ ನೆಲೆಸಿರುವೆ ಗುರುವೆ..” ಗೀತೆಯನ್ನು ವಿಜ್ರಂಭಿಸಿತ್ತು. ಅದಕ್ಕೂ ಮುನ್ನ ರಾಯರ ಕುರಿತಾದ ಶ್ಲೋಕ “ಅಪಾದಮೌಳಿರ‍್ಯಂತ..” ಅನರ‍್ವಚನೀಯ ಶೋಭೆ ನೀಡಿದ್ದು ಸ್ವಯಂವೇದ್ಯ. ಪ್ರಾಯಶಃ ಅಮೃತವರ್ಷಿಣಿ ರಾಗವೆಂದರೆ ಒಲವು ಹೆಚ್ಚೆನಿಸುವಂತೆ ಗಾಯಕ ಮುಂದಿನ “ನಂಬಿ ಸ್ತುತಿಸಿರೋ ರಾಘವೇಂದ್ರ ದೊರೆಯ”, ಜಗನ್ನಾಥದಾಸರ ಈ ಕೀರ್ತನದಲ್ಲಿ ರಾಯರ ಗುಣಗಾನ ಮಾಡುತ್ತಾ ಕಲಿಯುಗ ಕಲ್ಪತರು-ಕಾಮಧೇನು ಗುರು ಸಾರ್ವಭೌಮರನ್ನು ‘ರಾಮ ನರಹರಿ ಕೃಷ್ಣರ ಪದದೂತ, ಲೋಕವಿಖ್ಯಾತ ಎಂದು ಕೊಂಡಾಡಿದ್ದು ಅತಿ ಸೂಕ್ತವೇ!

ಅಪರೂಪದ ರಾಗಗಳನ್ನು, ಬಹು ಅಪರೂಪದ ಕೀರ್ತನೆಗಳನ್ನು ಸ್ವತಃ ತಾವೇ ರಾಗ ಸಂಯೋಜಿಸಿ ನೂರಾರು ವೇದಿಕೆಗಳಲ್ಲಿ ಹಾಡಿ, ಕಳೆದ ಎರಡು ದಶಕಗಳಲ್ಲಿ ಕರ್ನಾಟಕ,ಆಂಧ್ರಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟç ರಾಜ್ಯಗಳಲ್ಲಿ ವಿಜಯಪತಾಕೆ ಹಾರಿಸುತ್ತಲೇ ಸಾಗಿರುವ ಅಭಿರಾಮ ಒಂದೇ ಕೃತಿಯನ್ನು ರಾಗಮಾಲಿಕೆಗಳಲ್ಲಿ ಪ್ರಸ್ತುತಪಡಿಸುವ ಕಲಾಕೋವಿದ! ಪ್ರಸನ್ನ ವೇಂಕಟದಾಸರ “ರಾಮ ರಾಮ ಜಯರಾಮ ..” ಭಜನ್ ಕೈಗೆತ್ತಿಕೊಂಡು ರಾಗ ದೇಶ್-ಹಿಂದೋಳ-ಸಿ0ಧುಭೈರವಿಗಳಲ್ಲಿ ವಿಶಿಷ್ಟವಾಗಿ ಸಂಚರಿಸುತ್ತಾ ತನ್ನ ಹಿರಿತನ ಮೆರೆದು ನಿಸ್ಪೃಹತೆಯಿಂದ ಕುಳಿತದ್ದು ಕಂಡು ಹೃದಯ ತುಂಬಿ ಬಂದ ರಸಿಕರು ಹುಬ್ಭಳಿಯಿಂದಲೂ ಶಭಾಸ್ ಎಂದು ಆನ್‌ಲೈನ್‌ನಲ್ಲೇ ಬೆನ್ನು ತಟ್ಟಿದ್ದು ಆಗಾಗ ಕಾಣಬರುತ್ತಿತ್ತು.

ಈ ಗಾಯಕನ ವೈಶಿಷ್ಟö್ಯವನ್ನಾದರೂ ಒಮ್ಮೆ ಗಮನಿಸಿ ಸಂಗೀತದ ನಿಜರಸಿಕರೆ! ಪ್ರತಿಯೊಂದು ಕೀರ್ತನೆಯನ್ನು ಅನುರೂಪವಾದ ಉಗಾಭೋಗದೊಂದಿಗೇ ಪ್ರವೇಶಿಸುವ ಕಲೆ ಕರಗತಮಾಡಿಕೊಂಡಿರುವ ಭರತವಂಶಿಗೆ ಈ ಉಗಾಭೋಗವನ್ನು ವೈಭವೀಕರಿಸುವುದರಲ್ಲಿ ಬಹಳ ಖುಷಿ ಸಿಕ್ಕಿತಂತೆ… ‘ಕೋಟಿ ಕೋಟಿ ಜನುಮಕೆ ನಿನ್ನ ನಾಮವೊಂದೇ ಸಾಕು…ದಾಟಿಸುವುದು ಭವಸಾಗರವಾ…!’ ಕಛೇರಿಯ ನಡುನಡುವೆ ಸ್ವತಃ ತಾನೇ ಒಂದಷ್ಟು ನಿರೂಪಣೆಯನ್ನೂ ಮಾಡುತ್ತಾ ಸಾಗಿದ ಗಾಯಕ ಪ್ರಸಕ್ತ ಭಾರತೀಯರು ಮಹಾಮಾರಿ ಕೊರೊನಾದಿಂದಾಗಿ ಬಳಲುತ್ತಿರುವುದನ್ನೂ ಉಲ್ಲೇಖಿಸಿ ವಿಜಯದಾಸರ “ಸಾಗಿಬಾರಯ್ಯಾ ಭವರೋಗ ವೈದ್ಯನೆ ಬಾಗಿ ಸ್ತುತಿಪೆನು ಇಂದು…” ಎಂದು ರಾಗ ಬಿಲಹರಿಯಲ್ಲಿ ಹಾಡುತ್ತಾ ಭಾವಪರವಶರಾಗಿದ್ದು ಮರೆಯಲಾಗದ ಸಮಯವೇ ಸರಿ! ತಬಲಾದಲ್ಲಿ ಪಂಡಿತ್ ಗೋಪಾಲ್ ಪನ್ವಾರ್ ಉತ್ತಮ ಸಾಥ್ ನೀಡಿ ಜನಮನ ಗೆದ್ದರು.

ಮಂತ್ರಾಲಯದ 1008 ಶ್ರೀ ಶ್ರೀ ಸುಭುದೇಂದ್ರ ತೀರ್ಥರ ಆಶೀರ್ವಾದ, ಗುರುಸಾರ್ವಭೌಮರ ಅನುಗ್ರಹದಿಂದ ಮಂತ್ರಾಲಯದಲ್ಲೂ ತನ್ನನ್ನು ಹಾಡಿಸಿ ಎಂದು ಸೂಚ್ಯವಾಗಿ ಮನದಾಸೆ ಹೊಮ್ಮಿಸಿದ ಸ್ಫುರದ್ರೂಪೀ ಸಂಗೀತಗಾರ ಅಭಿರಾಮ ಭರತವಂಶಿ, ದಾಸ ಶ್ರೇಷ್ಠ ಪುರಂದರದಾಸರ” ಇಂದಿನ ದಿನವೇ ಶುಭದಿನವು…” ಪದವನ್ನು ಮಧ್ಯಮಾವತೀ ರಾಗದಲ್ಲಿ ಅರ್ಪಿಸಿ ಮಂಗಳ ಹಾಡಿದರು.

– ಸಾರಗ್ರಾಹಿ

Related Articles

ಪ್ರತಿಕ್ರಿಯೆ ನೀಡಿ

Latest Articles