ಗುಹಾಲಯದಲ್ಲಿ ನೆಲೆನಿಂತ ಸೋಮನಾಥೇಶ್ವರ ದೇವ

ಕಟೀಲಿನಿಂದ ಸುಮಾರು 10 ಕಿ.ಮೀ ದೂರದಲ್ಲಿ ಶ್ರೀ ಕ್ಷೇತ್ರ ನೆಲ್ಲಿತೀರ್ಥದ ಸೋಮನಾಥ ದೇವಸ್ಥಾನ ಹಾಗೂ ಜಾಬಾಲಿ ಮುನಿಗಳು ತಪಸ್ಸು ಮಾಡಿದ ಗುಹೆ ಇರುವ ಪ್ರಾಕೃತಿಕ ಸುಂದರ ತಾಣ. ಈ ದೇವಸ್ಥಾನ ಕ್ರಿ.ಶ. 1487 ಕಾಲಕ್ಕೆ ಸೇರಿದ್ದೆಂದು ಚರಿತ್ರೆಯಿಂದ ತಿಳಿದು ಬರುತ್ತದೆ. ದೇವಸ್ಥಾನದ ಒಂದು ಬದಿಯಲ್ಲಿ ಸುಂದರ ಸ್ವಾಭಾವಿಕ ಗುಹಾಲಯವೂ ಇದ್ದು ಇಲ್ಲಿ ಜಾಬಾಲಿ ಮುನಿಗಳು ತಪಸ್ಸು ಮಾಡಿ ದೇವಿಯನ್ನು ಒಲಿಸಿಕೊಂಡ ಸ್ಥಳ ಎಂಬ ನಂಬಿಕೆ ಬಹಳ ಕಾಲದಿಂದಲೂ ಇದೆ.

ಸಾಲಿಗ್ರಾಮ ಶಿಲೆಯ ಸೋಮನಾಥ
ಪುತ್ತಿಗೆ ಚೌಟ ಅರಸರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣಗೊಂಡ ದೇಗುಲವಿದು. ದೇವಸ್ಥಾನದ ಹೊರಭಾಗದಲ್ಲಿ ಅರಸುಳೆ ಮಂಚ, ಅರಸುಳೆ ಮಂಟಪ, ಕ್ಷೇತ್ರಪಾಲ ಕಟ್ಟೆಯ ಎದುರಿನ ಜಿನ ವಿಗ್ರಹ ಮತ್ತು ಸಾಲಿಗ್ರಾಮ ಶಿಲೆಯ ಶಿವಲಿಂಗವನ್ನು ಕಾಣಬಹುದು. ಒಳಭಾಗದಲ್ಲಿ ಗಣಪತಿ ವಿಗ್ರಹ, ನಂದಿಯನ್ನು ಕಾಣಬಹುದು.

ಪೌರಾಣಿಕ ಕಥೆಯ ಪ್ರಕಾರ ಅರುಣಾಸುರನೆಂಬ ಅಸುರ ತಪಸ್ಸು ಮಾಡಿ ಜಾಬಾಲಿ ಮುನಿಗಳಿಂದ ಗಾಯತ್ರಿ ಮಂತ್ರವನ್ನು ಕಲಿಯುತ್ತಾನೆ. ಗಾಯತ್ರಿ ಮಂತ್ರದ ಶಕ್ತಿಯಿಂದ ತನ್ನದೇ ಪಾರುಪತ್ಯ ಸ್ಥಾಪಿಸುತ್ತಾನೆ. ಋಷಿ ಮುನಿಗಳ ಯಾಗಗಳಿಗೂ ತೊಂದರೆ ಕೊಡುತ್ತಿರುತ್ತಾನೆ. ಜಾಬಾಲಿ ಮುನಿಗಳು ಇವನ ತೊಂದರೆಯಿ0ದ ತಪ್ಪಿಸಿಕೊಳ್ಳಲು ದುರ್ಗೆಯನ್ನು ಪ್ರಾರ್ಥಿಸುತ್ತಾರೆ. ಜಾಬಾಲಿ ಮುನಿಗಳ ಮಾತುಗಳಿಗೆ ಮನ್ನಣೆ ನೀಡಿ, ದುಂಬಿಯ ರೂಪದಲ್ಲಿ ಬಂದು ಅರುಣಾಸುರನನ್ನು ವಧಿಸುತ್ತಾಳೆ. ಕಟೀಲಿನಲ್ಲಿ ನೆಲೆಯಗುತ್ತಾಳೆ. ಮಾತ್ರವಲ್ಲ ಗಂಗೆಯು ನೆಲ್ಲಿತೀರ್ಥದಲ್ಲಿ ಅಂತರಗ0ಗೆಯಾಗಿ ಬಂದು, ಕಟೀಲಿನಲ್ಲಿ ನಂದಿನಿ ನದಿಯಾಗಿ ಹರಿಯುತ್ತಾಳೆ ಎಂಬ ನಂಬಿಕೆ ಇದೆ. ನೆಲ್ಲಿತೀರ್ಥದ ಹತ್ತಿರದಲ್ಲಿಯೇ ತಾಯಿ ದುರ್ಗಾಪರಮೇಶ್ವರಿ ದೇವಾಲಯ, ವಿಷ್ಣುವಿನ ದೇವಾಲಯವೂ ಇದೆ.

ಗುಹಾಲಯ ತೀರ್ಥಸ್ನಾನ

ಗುಹಾಲಯದ ತೀರ್ಥಸ್ನಾನಕ್ಕೆ ಬಹಳ ಮಹತ್ವವಿದೆ. ಸ್ಥಳಪುರಾಣ ಮತ್ತು ಜನಸಾಮಾನ್ಯರ ನಂಬಿಕೆಯ ಪ್ರಕಾರ ಗುಹೆಯ ಒಳಗೆ ತೀರ್ಥ ಸ್ನಾನ ಮಾಡಿದರೆ ಮಾನಸಿಕ ರೋಗ ನಿವಾರಣೆಯಾಗುತ್ತದೆ, ಚರ್ಮರೋಗ ಗೂನವಾಗುತ್ತದೆ ಎಂದು ಹೇಳಲಾಗುತ್ತದೆ.

ಗುಹಾಲಯದ ನೋಟ
ಜಾಬಾಲಿ ಮುನಿಗಳು ತಪಸ್ಸು ಮಾಡಿದ ಗುಹಾಲಯದ ಒಳಗೆ ಹೋಗಲು ಮಧ್ಯಾಹ್ನ 12 ರವರೆಗೆ ಮಾತ್ರ ಪ್ರವೇಶ. ಗುಹೆಯ ಮೇಲಿನಿಂದ ನೀರು ನೆಲ್ಲಿಯ ಗಾತ್ರದಲ್ಲಿ ಮುತ್ತಿನಂತೆ ಜಿನುಗುತ್ತಿರುತ್ತದೆ. ಗುಹೆಯ ಒಳಹೋದಂತೆಯಲ್ಲಾ ಕಿರಿದಾಗುತ್ತಾ ಹೋಗುತ್ತದೆ. 200 ಮೀಟರ್ ದೂರದವರೆಗೂ ಗುಹೆಯ ಒಳಗೆ ಹೋಗಬಹುದು ಎಂದು ಹೇಳಲಾಗುತ್ತದೆ. ದೊಡ್ಡ ಬಂಡೆಯ ಮೇಲೆ ಜಾಬಾಲಿ ಮುನಿಗಳಿಂದ ಸ್ಥಾಪಿಸಲ್ಪಟ್ಟ ಶಿವಲಿಂಗವಿದೆ. ಜಾಬಲಿ ಋಷಿಯ ವಿಗ್ರಹವೂ ಇದೆ.

ಹೋಗುವುದು ಹೇಗೆ?

ಉಡುಪಿಯಿಂದ ಅಂದಾಜು 50ಕಿ.ಮೀ. ದೂರದಲ್ಲಿದೆ. ಅಲ್ಲಿಂದ ಕಿನ್ನಿಗೋಳಿಗೆ ಬಂದು ಕಟೀಲು ರಸ್ತೆಯಲ್ಲಿ ಸ್ವಲ್ಪ ದೂರ ಬಂದರೆ ನೆಲ್ಲಿತೀರ್ಥ ಸಿಗುತ್ತದೆ.

Related Articles

ಪ್ರತಿಕ್ರಿಯೆ ನೀಡಿ

Latest Articles