ಸಮೃದ್ಧಿ ಸಮಾಧಾನ ಪಡೆಯುವುದೇ ಜೀವನದ ಗುರಿ : ಶ್ರೀ ರಂಭಾಪುರಿ ಜಗದ್ಗುರುಗಳು

ರಂಭಾಪುರಿ ಪೀಠ (ಬಾಳೆಹೊನ್ನೂರು) : ಜೀವನ ಬೇಕು ಬೇಡಗಳ ಪಗಡೆಯಾಟ. ಅಲ್ಪ ಆಶೆ ಆಮಿಷಗಳಿಗೆ ಮನುಷ್ಯ ಬಲಿಯಾಗಿ ಸತ್ಯ ಶಾಂತಿ ಸತ್ಪಥದಲ್ಲಿ ನಡೆಯಲು ಬಯಸುವುದಿಲ್ಲ. ಮನಸ್ಸಿನಲ್ಲಿರುವ ಕೊಳೆ ಕಳೆದುಕೊಂಡರೆ ಮಾತ್ರ ಜೀವನದಲ್ಲಿ ಸಮೃದ್ಧಿ ಸಮಾಧಾನ ದೊರೆಯುವುದೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಏಪ್ರಿಲ್ 27ರಂದು ಪೌರ್ಣಿಮೆ ಅಂಗವಾಗಿ ಶ್ರೀ ಪೀಠದಲ್ಲಿ ಅಗ್ನಿಹೋತ್ರ ಮತ್ತು ಧನ್ವಂತರಿ ಹೋಮ ಪೂರ್ಣಾಹುತಿ ನೆರವೇರಿಸಿ ಆಶೀರ್ವಚನ ನೀಡಿದರು.
ಪೂರ್ವಜರು ಗಳಿಸಿದ ಸಂಪತ್ತು ಆದರ್ಶವಾದುದು. ಭೌತಿಕ ಸಂಪತ್ತು ಬಾಹ್ಯವಾದರೆ ಅಂತರಂಗದ ಬದುಕು ಜ್ಞಾನದಿಂದ ಸುಂದರ. ದೀಪ ಮನೆಗಳನ್ನು ಬೆಳಗುವಂತೆ ಪರಮಾತ್ಮ ಇಡೀ ಜಗತ್ತನ್ನು ಬೆಳಗುತ್ತಿರುವನು. ಪರಮಾತ್ಮನ ಪ್ರತಿರೂಪವಾದ ಜೀವ ಜ್ಯೋತಿ ಎಲ್ಲರಲ್ಲಿ ಒಂದೇ ಆಗಿದೆ. ಪರಮಾತ್ಮನೊಬ್ಬನೇ ಯಾವಾಗಲೂ ಶಾಶ್ವತ. ಉಳಿದುದೆಲ್ಲ ಅಶಾಶ್ವತ. ಬದುಕಿನ ಮೂಲ ಉದ್ದೇಶ ಸಮೃದ್ಧಿ ಮತ್ತು ಸಮಾಧಾನ ಪಡೆಯುವುದೇ ಆಗಿದೆ. ನೆಲ ಜಲ ಗಾಳಿ ಬೆಳಕು ಕೊಟ್ಟ ಭಗವಂತನನ್ನು ಮರೆಯದೇ ಪೂಜಿಸು. ದೇವರಲ್ಲಿ ಶ್ರದ್ಧೆ ಕಾಯಕದಲ್ಲಿ ನಿಷ್ಠೆ ಗುರು ಹಿರಿಯರಲ್ಲಿ ವಿನಮ್ರ ಭಾವನೆಗಳನ್ನು ಬೆಳೆಸುವ ಅವಶ್ಯಕತೆಯಿದೆ. ಕರೋನಾ ವೈರಸ್ ಸೋಂಕು ನಿಯಂತ್ರಣಕ್ಕೆ ಬರಬೇಕಾದರೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಸ್ವಯಂ ನಿರ್ಧಾರದಿಂದ ಅಗತ್ಯ ಕ್ರಮಗಳನ್ನು ಪರಿಪಾಲಿಸಿ ಅಮೂಲ್ಯವಾದ ಜೀವ ರಕ್ಷಣೆ ಮಾಡಿಕೊಳ್ಳಬೇಕಾಗಿದೆ. ಯಾರೂ ಉದಾಶೀನ ನಿರ್ಲಕ್ಷö್ಯ ತಾಳಬಾರದು. ಶಕ್ತಿಮಾತೆ ಶ್ರೀ ಚೌಡೇಶ್ವರ ಮಂದಿರದಲ್ಲಿ ನೆರವೇರಿಸಿದ ಅಗ್ನಿಹೋತ್ರ ಮತ್ತು ಧನ್ವಂತರಿ ಹೋಮದಿಂದ ಸಕಲ ಜನತೆಗೆ ಆರೋಗ್ಯ ಭಾಗ್ಯ ಪ್ರಾಪ್ತಿಯಾಗಲೆಂದರು.


ವೇದವಿದ್ವಾನ್ ಶ್ರೀ ಗುರು ದಾರುಕಾಚಾರ್ಯಶಾಸ್ತ್ರಿಗಳ ಪ್ರಧಾನ ಪೌರೋಹಿತ್ಯದಲ್ಲಿ ಪ್ರಕಾಶ ಶಾಸ್ತ್ರಿ, ರೇಣುಕಸ್ವಾಮಿ, ಚನ್ನವೀರ ಶಾಸ್ತ್ರಿ ಮೊದಲಾದ ಪುರೋಹಿತರು ಹೋಮ ನೆರವೇರಿಸಿದರು. ಆಸ್ತಿಕ ಭಕ್ತ ಬಂಧುಗಳು ಕೋವಿಡ್-19 ನಿಯಮಾನುಸಾರ ಪಾಲ್ಗೊಂಡು ಪುನೀತರಾದರು.


ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು.

Related Articles

ಪ್ರತಿಕ್ರಿಯೆ ನೀಡಿ

Latest Articles