ಕೃಷ್ಣ ನಿರ್ಯಾಣ ಕಾಲದಲ್ಲಿ ಕಾಲಿನ ಹೆಬ್ಬೆರಳಿಗೆ ತಗುಲಿದ ಶರತಾಪಕ್ಕೆ ನಲುಗಿ ಅಮ್ಮಾ ಎಂದು ಅರಚಿದನಂತೆ. ತಕ್ಷಣವೇ ಮೂರು ಜನ ಓಡೋಡುತ್ತಾ ಬಂದು ಎದುರು ನಿಂತರ0ತೆ. ಜನ್ಮ ನೀಡಿದ ದೇವಕಿ, ಸಾಕಿ ಸಲಹಿದ ಯಶೋಧೆ ಮತ್ತು ಮೈತುಂಬ ವಿಷ ಎದೆ ತುಂಬಿದ ಹಾಲು ಹೊತ್ತಿದ್ದ ಆ ಪೂತನಿ.
ಪೂತನಿಯ ಕಂಡು ಉಳಿದಿಬ್ಬರಿಗೂ ಅಚ್ಚರಿ. ದೇವಕಿ ಜನುಮ ನೀಡಿದಾಕೆ, ಯಶೋಧೆ ಲಾಲಿಸಿ ಪಾಲಿಸಿದಾಕೆ. ಅಂದು ಕೊಲ್ಲಲು ಬಂದವಳು ಈಗೇಕೆ?? ಸಾವ ಕಾಣಲು ಬಂದಳೆ?
ಪೂತನಿ ನೊಂದು ನುಡಿದಳಂತೆ ನೀವಿಬ್ಬರೂ ಆತನ ಹುಟ್ಟಿಸಿ ಬೆಳೆಸಿದವರು
ಆದರೆ…. ಆದರೆ ಆತ ನನ್ನ ಎದೆಯೊಳಗಿನ ವಿಷ ಹೀರಿ ನನ್ನೊಳಗೆ ತಾಯಿಯನ್ನು ಹುಟ್ಟಿಸಿದವನು. ಹುಟ್ಟಿಸಿ, ಪಾಲಿಸಿ ತಾಯಾಗುವುದು ಸಹಜ. ಆದರೆ ಮಗುವಿನಿಂದ ತಾಯಾಗಿ ಹುಟ್ಟುವುದು ವಿಶೇಷ. ನನ್ನನ್ನು ತಾಯಾಗಿ ಹುಟ್ಟಿಸಿದ ಮಗ ಕರೆದಾಗ ಬರದಿರಲಾದೀತೆ ಎಂದಳ0ತೆ.
ಅದಕ್ಕೆ ಹೇಳುವುದು ಜಗದ ಸುಂದರ ಸೃಷ್ಟಿ ಹೆಣ್ಣು, ಜಗದ ಅತಿ ಸುಂದರ ಸೃಷ್ಟಿ ತಾಯಿ ಎಂದು.