ಮನೆಯಲ್ಲಿ ಹೇಗೆ ಬೇಕೋ ಹಾಗೆ ಬೇಕಾಬಿಟ್ಟಿಯಲ್ಲಿ ಆಹಾರ ತಯಾರಿಸುವುದರಿಂದ ಅದರ ರುಚಿಯಲ್ಲಿ ವ್ಯತ್ಯಾಸ ಆಗಬಹುದು. ಶುಚಿತ್ವ ಕಾಪಾಡಿಕೊಳ್ಳದೇ ಇದ್ದರೆ ಆ ಆಹಾರವನ್ನು ತಿನ್ನುವುದರಿಂದ ಅನಾರೋಗ್ಯ ಕಾಡಬಹುದು. ಹಾಗಾಗಿ ಅಡುಗೆ ತಯಾರಿಸುವಾಗ ಶುದ್ಧತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಅನ್ನ ಶುದ್ಧಿ ಮಹತ್ವ ಏನು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಅನ್ನಶುದ್ಧಿಯು ಸುಲಭವಾಗಿದೆ. ಸ್ನಾನ ಮಾಡಿ, ತಾಜಾ ನೀರನ್ನು ಉಪಯೋಗಿಸಿ, ಕೂದಲುಗಳನ್ನು ಕಟ್ಟಿಕೊಂಡು (ಬಿಟ್ಟಿರುವ ಕೂದಲು ವರ್ಜ್ಯ) ಅನ್ನಪೂರ್ಣಾ ದೇವಿಯ ಸ್ಮರಣೆ ಮಾಡಿ, ಸಿಡಿಮಿಡಿಗೊಳ್ಳದೇ (ಏನಿದು ಕಿರಿಕಿರಿ ಮುಂತಾದ ಶಬ್ದಗಳನ್ನು ಉಚ್ಚರಿಸದೇ) ನಾನು ತಯಾರಿಸಿದ ಅನ್ನದ ರುಚಿಯನ್ನು ಪ್ರತ್ಯಕ್ಷ ಭಗವಂತನು ವಾಯುರೂಪದಲ್ಲಿ ಗ್ರಹಿಸುವವನಿದ್ದಾನೆ, ನನ್ನ ಮನೆಯಲ್ಲಿನ ವ್ಯಕ್ತಿಗಳು ಈ ಆಹಾರವನ್ನು ಸೇವಿಸಲಿದ್ದಾರೆ, ಪಶುಪಕ್ಷಿಗಳಿಗೂ (ಗೋಗ್ರಾಸ, ಕಾಕಪಿಂಡ) ಇದರಲ್ಲಿನ ಒಂದು ಭಾಗವನ್ನು ನೀಡಲಿದ್ದೇನೆ, ಎಂಬ ಭಾವವನ್ನಿಟ್ಟುಕೊಂಡು ಶುಚಿ ವಸ್ತ್ರಗಳನ್ನು ತೊಟ್ಟುಕೊಂಡು ನಾವು ಯಾವ ಅಡುಗೆಯನ್ನು ಮಾಡುತ್ತೇವೆಯೋ, ಅದು ‘ಸಾತ್ತ್ವಿಕ’ ಮತ್ತು ‘ಶುದ್ಧ’ ಈ ಸಂಜ್ಞೆಯಲ್ಲಿ ಬರುತ್ತದೆ.
ನಾವು ಯಾವ ಆಹಾರವನ್ನು ಸೇವಿಸುತ್ತೇವೆಯೋ, ಅದೇ ಆಹಾರದಿಂದ ಶರೀರದಲ್ಲಿ ರಕ್ತ ಉತ್ಪತ್ತಿ ಆಗುತ್ತದೆ ಮತ್ತು ಶರೀರದ ಪೋಷಣೆಯಾಗುತ್ತದೆ. ಬುದ್ಧಿ ಮತ್ತು ಚಿತ್ತದ ಮೇಲೆ ಆಹಾರದ ಪರಿಣಾಮವಾಗುತ್ತದೆ. ಸತತ ಎಣ್ಣೆ, ಖಾರಯುಕ್ತ ಆಹಾರವನ್ನು ಸೇವಿಸುವವರು ಸಿಡಿಮಿಡಿ ಸ್ವಭಾವದವರಾಗುತ್ತಾರೆ ಹಾಗೂ ಅವರ ಆರೋಗ್ಯವೂ ಕೆಡುತ್ತದೆ.