*ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ
ಒಬ್ಬ ಆಗರ್ಭ ಶ್ರೀಮಂತನಿದ್ದ. ಆತ ಹಗಲು ರಾತ್ರಿ ಶ್ರಮಪಟ್ಟು ಹಣ ಗಳಿಸಿದ್ದ. ಪ್ರಪಂಚದಲ್ಲಿರುವ ಹೊಸದಾಗಿ ಬಂದ ಯಾವುದೇ ಹೊಸ ವಸ್ತುಗಳು ತನ್ನ ಮನೆಯಲ್ಲಿ ಇರಲೇಬೇಕೆಂದು ಹಂಬಲಿಸುತ್ತಿದ್ದ. ಒಮ್ಮೆ ಆತ ವ್ಯಾಪಾರ ನಿಮಿತ್ತ ಮನೆಯಿಂದ ಹೊರಟ. ದಾರಿ ನಡುವೆ ಸಿಕ್ಕ ಕಾಡಿನಲ್ಲಿ ಆಯಾಸವನ್ನು ಪರಿಹರಿಸಿಕೊಳ್ಳಲು ಒಂದು ಮರದ ಕೆಳಗೆ ಕುಳಿತ. ಕೆಲ ಸಮಯದ ನಂತರ ಬಾಯಾರಿಕೆಯಾಗಿ ನೀರಿಗಾಗಿ ಹುಡುಕತೊಡಗಿದ. ನನಗೆ ನೀರು ಸಿಕ್ಕಿದರೆ ಈಗಲೇ ನನ್ನ ದಾಹವನ್ನು ತೀರಿಸಿಕೊಳ್ಳಬಹುದು ಎಂದುಕೊ0ಡ. ಪವಾಡವೆಂಬ0ತೆ ಆತನ ಮುಂದೆ ಒಂದು ನೀರಿನ ಹೂಜಿ ಪ್ರತ್ಯಕ್ಷವಾಗಿತ್ತು! ದಾಹವನ್ನು ತೀರಿಸಿಕೊಂಡ. ಇದಾದ ಕೆಲ ಸಮಯದ ನಂತರ ಆತನಿಗೆ ಹಸಿವಾಯಿತು. ಆತನೀಗ ಆಹಾರಕ್ಕಾಗಿ ಹುಡುಕತೊಡಗಿದ. ನನಗೀಗ ಒಳ್ಳೆಯ ಭೋಜನ ದೊರೆತರೆ ನಿಜವಾಗಲೂ ನಾನು ಅದೃಷ್ಟವಂತ ಎಂದಕೊಂಡ. ತಕ್ಷಣವೇ ಆತನೆದುರಿಗೆ ಆಹಾರದ ತಟ್ಟೆ ಬಂದಿತು.ಸವಿಸವಿಯಾದ ಆಹಾರವನ್ನು ಚೆನ್ನಾಗಿ ತಿಂದ ತೂಕಡಿಕೆ ಬಂತು. ಮಲಗಬೇಕೆಂದುಕೊಂಡ ಆದರೆ ಆ ಜಾಗ ಒರಟು ಒರಟಾಗಿತ್ತು.ಇಲ್ಲಿ ಮೆತ್ತನೆಯ ಹಾಸಿಗೆ ಇದ್ದಿದ್ದರೆ ಒಳ್ಳೆಯ ನಿದ್ದೆ ಮಾಡಬಹುದಿತ್ತೆಂದು ಬಯಸಿದ. ಅಚ್ಚರಿಯೆಂಬ0ತೆ ಅಲ್ಲಿಯೇ ಮೆತ್ತನೆಯ ಹಾಸಿಗೆ ಕಂಡಿತು. ಸುಂದರ ಹಸಿರು ಹಸಿರಾದ ವಾತಾವರಣದಲ್ಲಿ ಗಾಢ ನಿದ್ದೆ ಮಾಡಿದ. ಸ್ವರ್ಗದಲ್ಲೇ ಇದ್ದಂತೆ ಅನಿಸುತ್ತಿದೆ. ನನ್ನೆಲ್ಲ ಆಸೆಗಳು ಈಡೇರುತ್ತಿವೆ! ಆತ ಮಲಗಿದ್ದ ಜಾಗದಲ್ಲಿದ್ದ ಮರವು ಕೇಳಿದ್ದನ್ನೆಲ್ಲ ನೀಡುವ ಕಲ್ಪವೃಕ್ಷವಾಗಿತ್ತು.
ಮಲಗಿ ಎದ್ದ ಶ್ರೀಮಂತ, ಅಬ್ಬಾ! ಈ ಕಾಡಿನಲ್ಲಿ ನಾನು ಒಬ್ಬನೇ ಇದ್ದೇನೆ. ಕ್ರೂರ ಪ್ರಾಣಿಗಳಾದ ಹುಲಿ ಸಿಂಹ ಏನಾದರೂ ನನ್ನ ಮೇಲೆ ಎರಗಿ ಕೊಲ್ಲಬಹುದು. ಹಾಗೇನಾದರೂ ಆದರೆ ನನ್ನನ್ನು ನಾನು ಕಾಪಾಡಿಕೊಳ್ಳಲಾರೆ ಎಂದುಕೊಳ್ಳುತ್ತಿರುವಾಗಲೇ ಸಿಂಹವೊಂದು ಆತನ ಮೇಲೆ ಎರಗಿತು. ಆತನೆಷ್ಟು ಹೆದರಿದ್ದನೆಂದರೆ ಆತನಿಗೆ ತಪ್ಪಿಸಿಕೊಳ್ಳಲು ತೋಚಲಿಲ್ಲ. ಆತ ಕೇವಲ ಒಂದೇ ಒಂದು ನಕಾರಾತ್ಮಕ ಯೋಚನೆಯಿಂದ ತನ್ನ ಪ್ರಾಣ ಕಳೆದುಕೊಂಡ.
ಯೋಚನೆಗಳು ನಮ್ಮನ್ನು ರೂಪಿಸುತ್ತವೆ
ನಮಗೆಲ್ಲ ಗೊತ್ತಿರುವಂತೆ ಯೋಚನೆಗಳು ನಮ್ಮನ್ನು ರೂಪಿಸುತ್ತವೆ. ಸಕಾರಾತ್ಮಕ ಯೋಚನೆಗಳಿಂದ ಕೂಡಿದ್ದರೆ ಸದಾ ಸುಖವಾಗಿರುತ್ತೇವೆ. ನಿಜ ಹೇಳಬೇಕೆಂದರೆ ನಾವು ನಕಾರಾತ್ಮಕ ಯೋಚನೆಗಳನ್ನು ಹುಡುಕಿಕೊಳ್ಳುತ್ತೇವೆಯೋ ಅಥವಾ ಅವಾಗಿಯೇ ಅನಿವಾರ್ಯವಾಗಿ ಆವರಿಸಿಕೊಳ್ಳುತ್ತವೆಯೋ ಎಂಬ ಪ್ರಶ್ನೆ ಕಾಡುತ್ತದೆ. ದಟ್ಟ ಗಿಡಮರಗಳಿರುವ ಪರ್ವತ ಪ್ರದೇಶ ಗಾಢ ಹಸಿರು ಬಣ್ಣದಲ್ಲಿ ಕಾಣುತ್ತದೆ. ಎತ್ತರ ಪರ್ವತ, ಹರಿಯುವ ತೊರೆ, ಪಕ್ಷಿಗಳ ಕಲರವ ಆಕರ್ಷಿಸುತ್ತಿದ್ದರೂ ಅದನ್ನು ಸವಿಯಲಾಗುವುದಿಲ್ಲ. ಸೂರ್ಯ ಮುಳುಗುವ ಸಮಯವಾದರೂ ತಲೆಯಲ್ಲಿ ನಕಾರಾತ್ಮಕ ಯೋಚನೆಯ ಹುಳು ಬಿಟ್ಟುಕೊಂಡು ಅಲೆದದ್ದೇ ಬಂತು ಹೊರತು ಸುತ್ತಲೂ ಆವರಿಸಿರುವ ನಿಸರ್ಗ ಸಿರಿಯನ್ನು ಕಣ್ತುಂಬಿಸಿಕೊಂಡು ಖುಷಿ ಪಡಲಾಗುವುದೇ ಇಲ್ಲ.ಇದರರ್ಥ ನಕಾರಾತ್ಮಕತೆಯನ್ನು ಹೊತ್ತುಕೊಂಡು ಹೋದರೆ ಚೆಂದದ ವಾತಾವರಣವೂ ನಮ್ಮನ್ನು ಖುಷಿಯಾಗಿಡದು. ನಕಾರಾತ್ಮಕ ಧೂಳಿನಿಂದ ತುಂಬಿದ್ದ ಮನಸ್ಸನ್ನು ಎಲ್ಲಾದರೂ ಒಂದು ಕಡೆ ಚೆಲ್ಲಬೇಕೆಂದು, ಕಾಡುವ ಸಂಗತಿಗಳಿ0ದ ಮುಕ್ತನಾಗಬೇಕೆಂದು ಲೋಕ ಬಿಟ್ಟು ದೂರ ಬಂದರೂ ಅದೇ ಗತಿ! ‘ಲೋಕವನ್ನು ಅರಿಯಲು ಅದರಿಂದಲೇ ವಿಮುಖರಾಗಬೇಕು.’ ಎಂಬುದು ಅಲ್ಬರ್ಟ್ ಕಮೂ ಅವರ ಅಭಿಪ್ರಾಯ. ಯಾವುದೇ ನಿರ್ಜನ ಪ್ರದೇಶದ ಸನ್ಯಾಸಿಯಂತೆ ಗಂಭಿರವಾಗಿ ವರ್ತಿಸಬೇಕೆಂದರೂ ಆಗುವುದಿಲ್ಲ. ಭೌತಿಕವಾಗಿ ಲೋಕದಿಂದ ದೂರವಿದ್ದರೂ ಮನಸ್ಸಿನಲ್ಲಿ ಹೊತ್ತು ತಿರುಗುವ ಫಲವೇ ದುಃಖಕ್ಕೆ ಕಾರಣ. ಸುಖವಾಗಿ ಬದುಕುವ, ನಗುವ ಕನಸುಗಳನ್ನು ತಲೆಯಲ್ಲಿ ತುಂಬಿಕೊಂಡಿರಬೇಕು. ನಮ್ಮನ್ನು ನಾವು ಸೂಕ್ಷö್ಮದರ್ಶಕದ ಕೆಳಗೆ ಇಟ್ಟುಕೊಳ್ಳಲು ಹೆದರಬಾರದು. ನಕಾರಾತ್ಮಕ ಯೋಚನೆಗಳನ್ನು ಹೊರಹಾಕಿ ಸಕಾರಾತ್ಮಕ ಯೋಚನೆಗಳನ್ನು ಬೆಳೆಸಿಕೊಳ್ಳಬೇಕು.
ವರ್ಷದ ದಿನಗಳಲ್ಲಿ ನಾವೆಷ್ಟು ದಿನ ಸಕಾರಾತ್ಮಕವಾಗಿರುತ್ತೇವೆ ಎನ್ನುವುದು ಮುಖ್ಯ. ಒಬ್ಬ ಒಂದು ವರ್ಷದ ಅವಧಿಯಲ್ಲಿ ಒಂದು ವಾರದ ಮೌಲ್ಯ ಮಾತ್ರ ಗಳಿಸಿದರೆ, ಮತ್ತೊಬ್ಬ ಒಂದೇ ವಾರದಲ್ಲಿ ಒಂದು ವರ್ಷದ ಮೌಲ್ಯ ಪಡೆಯಬಹುದು. ಕಾಡಿನ ರಾಜನೆನಿಸಿಕೊಳ್ಳುವ ಸಿಂಹವು ಸಹ ನೊಣದಿಂದ ತನ್ನನ್ನು ತಾನು ಕಾಪಾಡಿಕೊಳ್ಳಬೇಕು. ಅಂತೆಯೇ ನಾವು ನಮ್ಮನ್ನು ಕೆಟ್ಟ ಯೋಚನೆಗಳಿಂದ ಕಾಪಾಡಿಕೊಳ್ಳಬೇಕು. ಒಬ್ಬ ಸಮರ್ಥ ವ್ಯಕ್ತಿಯ ಹಿಂದೆ ಯಾವಾಗಲೂ ಸಕಾರಾತ್ಮಕ ಯೋಚನೆಗಳು ಇರುತ್ತವೆ. ಅವು ಕೋಟಿ ಕೋಟಿ ಸಂಪತ್ತಿಗಿ0ತಲೂ ಮಿಗಿಲಾದವು. ನಕಾರಾತ್ಮಕ ಯೋಚನೆಗಳು ಒಳ್ಳೆಯ ವರ್ತಮಾನವನ್ನು ಸುಂದರ ಭವಿಷ್ಯವನ್ನು ಹಾಳು ಮಾಡದಿರಲು ಬಿಟ್ಟರೆ ಚೆಂದದ ಜೀವನ ತಿದ್ದಿ ತೀಡಿದ ಕವನದಂತೆ ಲಯಬದ್ಧತೆಯಲ್ಲಿ ಸಾಗುವುದು.