ಇಂದು ಶ್ರೀ ವ್ಯಾಸರಾಜ ಗುರುಸಾರ್ವಭೌಮ ಅವರ ಜಯಂತಿ. ಈ ಸಂದರ್ಭದಲ್ಲಿ ಗುರುಗಳನ್ನು ಸ್ಮರಿಸುವ ಸಕಾಲಿಕ ಲೇಖನ.
*ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್
ಮೈಸೂರು ಜಿಲ್ಲೆಯ ಬನ್ನೂರಿನ ಶ್ರೀರಾಮಾಚಾರ್ಯರು ಹಾಗೂ ಸೀತಾಬಾಯಿ ದಂಪತಿಯ ಪುತ್ರರಾಗಿ ಕ್ರಿ.ಶ.1447ರ ವೈಶಾಖ ಶುದ್ಧ ಸಪ್ತಮಿ ಭಾನುವಾರ (ಅಧಿಕಮಾಸದಲ್ಲಿ) ಶ್ರೀವ್ಯಾಸರಾಜ ಗುರುಸಾರ್ವಭೌಮರು ಜನಿಸಿದರು.
ಇವರಿಗೆ ಮಾತಾಪಿತೃಗಳು ಪ್ರೀತಿಯಿಂದ ‘ಯತಿರಾಜ’ ಎಂಬ ಹೆಸರಿಟ್ಟರು. ಬಾಲ್ಯದಲ್ಲಿಯೇ ಸಾಕಷ್ಟು ದೈವಭಕ್ತಿ ಹೊಂದಿದ್ದ ಬಾಲಕನನ್ನು ಅಬ್ಬೂರಿನಲ್ಲಿದ್ದ ಶ್ರೀ ಸುಬ್ರಹ್ಮಣ್ಯತೀರ್ಥರು ಶಿಷ್ಯನಾಗಿ ಸ್ವೀಕರಿಸಿ ಸನ್ಯಾಸ ದೀಕ್ಷೆ ನೀಡಿದರು. ಗುರುಗಳಿಂದ ‘ವ್ಯಾಸತೀರ್ಥ’ ಎಂಬ ಆಶ್ರಮ ಅಭಿದಾನ ಪಡೆದು, ಶ್ರೀಪಾದರಾಜರಿಂದ ವಿದ್ಯೆ ಕಲಿತು ಮಠಾಧಿಪತಿಯಾಗಿ, ರಾಜಗುರುವಾಗಿ ಧರ್ಮೋಪದೇಶಕರು ಎನಿಸಿಕೊಂಡರು. ಜಗತ್ತಿಗೆ ಶಾಸ್ತ್ರೀಯ ಸಂಗೀತ ಪಿತಾಮಹರಾದ ಶ್ರೀಪುರಂದರದಾಸರನ್ನು ಕೊಡುಗೆಯಾಗಿ ನೀಡಿದ್ದರ ಜತೆ ದೇವರಿಗೆ ಕನ್ನಡ ಅರ್ಥವಾಗುತ್ತೆ ಎಂದು ಪಂಡಿತರಿಗೆ ಮನದಟ್ಟು ಮಾಡಿದ ಕನ್ನಡ ನಾಡಿನ ಧೀಮಂತ ಯತಿ.
ಸಾಳುವ ನರಸಿಂಹನ ಆಳ್ವಿಕೆಯ ಕಾಲದಿಂದ ಅಚ್ಯುತರಾಯನ ಆಳ್ವಿಕೆಯವರೆಗೆ ಅರವತ್ತು ವರ್ಷಗಳ ಕಾಲ ರಾಜಗುರುಗಳಾಗಿ ಹಲವಾರು ರಾಜರಿಗೆ ಸನ್ಮಾರ್ಗ ತೋರಿಸಿದರು. ವಿಜಯನಗರದ ಪ್ರಖ್ಯಾತ ದೊರೆಯೆನಿಸಿದ್ದ ಕೃಷ್ಣದೇವರಾಯರಿಗೆ ಒದಗಿದ್ದ ಕುಹೂಯೋಗವನ್ನು ನಿವಾರಿಸಲು ವಿಜಯನಗರ ಸಾಮ್ರಾಜ್ಯ ಸಿಂಹಾಸನದ ಮೇಲೆ ಒಂದೂವರೆ ಮುಹೂರ್ತಕಾಲ ಮಂಡಿಸಿದ್ದರು. ಹಾಗಾಗಿ ‘ವ್ಯಾಸರಾಯ’ ರಾದರು. ಬಹುಮನಿ ಸುಲ್ತಾನರು ಪ್ರಬಲರಾಗಿದ್ದ ಆ ದಿನಗಳಲ್ಲಿ ತಮಗೆ ನೀತಿ ಮಾರ್ಗೋಪದೇಶಕರಾಗಿ ರಾಜ್ಯವನ್ನು ಸಂರಕ್ಷಿಸಿದರು ಎಂದು ಸ್ವತಹ ಶ್ರೀಕೃಷ್ಣದೇವರಾಯ ಸ್ತುತಿಸಿದ್ದಾರೆ. ಹಿಂದೂ ಧರ್ಮ ಸಂರಕ್ಷಣೆಯಲ್ಲೂ ಶ್ರೀ ವ್ಯಾಸರಾಜರ ಕೊಡುಗೆ ಅನನ್ಯ.
ವಿದ್ಯಾಗುರುಗಳಾದ ಶ್ರೀಪಾದರಾಯರು ‘ಕನ್ನಡ ಭಾಷೆಯಲ್ಲಿ ದೇವರ ನಾಮಗಳನ್ನು ಬರೆಯುವ ಹೊಸ ಸಂಪ್ರದಾಯವನ್ನು ಆಚರಣೆಗೆ ತಂದರು.
ವ್ಯಾಸರಾಯರು ಶ್ರೀಕೃಷ್ಣ ಎಂಬ ಅಂಕಿತದಿಂದ ಹಲವಾರು ಕೀರ್ತನೆಗಳನ್ನು ರಚಿಸಿ, ಕನ್ನಡ ಪದ್ಯಗಳನ್ನು ತಮ್ಮ ವ್ಯಾಸಪೀಠದಲ್ಲಿಟ್ಟು ಪಂಡಿತರ ಬಾಯಿಕಟ್ಟಿಹಾಕಿ ‘ಪುರಂದರೋಪನಿಷತ್ತು’ ಎಂದು ಮನ್ನಣೆ ನೀಡಿದರು.
ಬಸವಾಭಟ್ಟನೆಂಬ ಅನ್ಯ ಸಿದ್ಧಾಂತಿಯನ್ನು ವಾದದಲ್ಲಿ ಜಯಿಸಿ, ಬಸವಾಭಟ್ಟರಿಂದ ಸ್ಫಟಿಕಲಿಂಗವನ್ನು ಕಾಣಿಕೆಯಾಗಿ ಪಡೆದರು. ಹಂಪಿಯ ಚಕ್ರತೀರ್ಥದ ಬಳಿ ಶ್ರೀಯಂತ್ರೋದ್ಧಾರಕ ಪ್ರಾಣದೇವರನ್ನು ಪ್ರತಿಷ್ಠಾಪಿಸಿದರಲ್ಲದೆ, ದೇಶದ ಮೂಲೆ ಮೂಲೆಗಳಲ್ಲಿ 732 ಪ್ರಾಣದೇವರ ಪ್ರತಿಮೆಗಳನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಶಂಕುಕರ್ಣ ಎಂಬ ದೇವತೆ ಮೊದಲಿಗೆ ಪ್ರಹ್ಲಾದರಾಜರಾಗಿ, ನಂತರ ಬಾಹ್ಲೀಕರಾಜರಾಗಿ, ತರುವಾಯ ಶ್ರೀವ್ಯಾಸರಾಯರಾಗಿ ಅವತರಿಸಿದ್ದಾರೆ. ಇವರ ನಂತರದ ರೂಪವೇ ಮಂತ್ರಾಲಯ ಪ್ರಭುಗಳಾದ ಶ್ರೀ ರಾಘವೇಂದ್ರ ತೀರ್ಥರು.
12 ವರ್ಷ ಕಾಲ ತಿರುಪತಿಯ ಶ್ರೀ ಶ್ರೀನಿವಾಸ ದೇವರನ್ನು ಪೂಜಿಸಿದ ವ್ಯಾಸರಾಯರು, ಒಟ್ಟು 92 ವರ್ಷಗಳ ಕಾಲ ಜೀವಿಸಿದ್ದರು. ಇವರು ಹರಿದಾಸ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯ. ದಾಸಶ್ರೇಷ್ಠರಾದ ಪುರಂದರದಾಸರು, ಕನಕದಾಸರಿಗೆ ದೀಕ್ಷೆ ಕೊಟ್ಟು ಅಂಕಿತನಾಮ ನೀಡಿದ ಮಹಾನ್ ಪುರುಷರು. ಇವರ ಪ್ರಸಿದ್ಧ ಕೃತಿ ‘ಕೃಷ್ಣಾ ನೀ ಬೇಗನೇ ಬಾರೋ…’ ಇಂದಿಗೂ ಜನಪ್ರಿಯವಾಗಿದೆ. ಇಂತಹ ಗುರುಗಳನ್ನು ಅವರ ಜನ್ಮದಿನದಂದು ವಿಶೇಷವಾಗಿ ನೆನೆಯೋಣ.