ಬೆಂಗಳೂರು: ಐವತ್ತು ವರ್ಷಗಳ ಇತಿಹಾಸ ಹೊಂದಿರುವ ರಾಜ್ಯದ ಮುಜರಾಯಿ ದೇವಾಲಯಗಳ ಅರ್ಚಕರ ಸಮಸ್ಯೆಗಳಿಗೆ ಮತ್ತು ಬೇಡಿಕೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಹಾಗೂ ಉಪಾಧಿವಂತರ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ರವರ ಮಾರ್ಗದರ್ಶನದಲ್ಲಿ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಒಕ್ಕೂಟದ ಪದಾಧಿಕಾರಿಗಳು ಮೇ 20 ರಂದು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಕೋವಿಡ್ ಎರಡನೇ ಅಲೆಯ ಸೋಂಕಿನಿಂದ ಈಗಾಗಲೇ ದೇವಾಲಯಗಳು ಮುಚ್ಚಲ್ಪಟ್ಟಿದ್ದು ಪೂಜೆಗೆ ಮಾತ್ರ ಅವಕಾಶ ಕಲ್ಪಿಸಲಾಗಿರುತ್ತದೆ. ಇದರಿಂದ ರಾಜ್ಯದ 32000 ಕ್ಕೂ ಹೆಚ್ಚು ಇರುವ ಗ್ರಾಮಾಂತರ ದೇವಾಲಯಗಳು ಹಾಗೂ ಎ ಮತ್ತು ಬಿ ವರ್ಗದ ದೇವಾಲಯಗಳ ಅರ್ಚಕರುಗಳಿಗೆ ಜೀವನೋಪಾಯಕ್ಕೆ ತೊಂದರೆ ಆಗಿದೆ. ಕೋವಿಡ್ ಸಂಬಂಧ ಸರ್ಕಾರ ಘೋಷಣೆ ಮಾಡಿರುವ ವಿಶೇಷ ಪ್ಯಾಕೇಜ್ನಲ್ಲಿಯೂ ಸಹ ಯಾವುದೇ ಸಹಾಯ ನೀಡಿರುವುದಿಲ್ಲ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಅರ್ಚಕರಿಗೆ ಸಹಾಯ ಮಾಡಬೇಕೆಂದು ಆಗ್ರಹಿಸಲಾಯಿತು.
ಎ ಮತ್ತು ಬಿ.ವರ್ಗದ ದೇವಾಲಯಗಳ ಅರ್ಚಕರುಗಳಿಗೆ ಸಹಾಯಧನ ಮತ್ತು ವಿಮಾಸೌಲಭ್ಯ, ಗ್ರಾಮಾಂತರ ಪ್ರದೇಶದ ಸಿ ವರ್ಗದ ದೇವಾಲಯಗಳಿಗೆ ನೀಡಲಾಗುತ್ತಿರುವ ತಸ್ತೀಕ್ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಸಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎಸ್.ಎನ್ ದೀಕ್ಷಿತ್ ಅವರು ತಿಳಿಸಿದ್ದಾರೆ.