ಲಲಿತಾದೇವಿಯ ನಾಮಜಪದಿಂದ ಕೆಟ್ಟ ಯೋಚನೆ ಸುಳಿಯದು

*ಕೃಷ್ಣ ಪ್ರಕಾಶ್ ಉಳಿತ್ತಾಯ

28
ಭಂಡಸೈನ್ಯವಧೊದ್ಯುಕ್ತಶಕ್ತಿವಿಕ್ರಮಹರ್ಷಿತಾ|
ನಿತ್ಯಾಪರಾಕ್ರಮಾಟೋಪನಿರೀಕ್ಷಣಸಮುತ್ಸುಕಾ||

ಈ ಎರಡು ಹೆಸರುಗಳಲ್ಲಿ ಎರಡು ತತ್ತ್ವಗಳನ್ನು ಕಾಣಬಹುದು. ಒಂದು ಶಕ್ತಿ ತತ್ತ್ವವಾದರೆ ಮತ್ತೊಂದು ಜ್ಞಾನ ತತ್ತ್ವ. ಲಲಿತೆಯ ಪರಿವಾರ ದೇವತೆ ಅಥವಾ ಶಕ್ತಿ ದೇವತೆಗಳು ಭಂಡಾಸುರನ ಸೈನ್ಯವನ್ನು ಚಾನಾಹಾನಿ ಮಾಡುತ್ತಿರುವ ವಿಕ್ರಮವನ್ನು ಕಂಡ ಲಲಿತೆ ಹರ್ಷಿತಳಾಗಿರುವುದನ್ನು ಇಲ್ಲಿ ನಾವು ಧ್ಯಾನಿಸಬೇಕು. ಇದನ್ನು ಈ ಬಗೆಯಲ್ಲೂ ನೋಡಬಹುದೇನೋ. ನಮ್ಮ ಮನದಲ್ಲಿ ಪ್ರತಿದಿನವೂ ಪುಟಿದೇಳುವ ಕ್ಷುದ್ರಶಕ್ತಿಗಳನ್ನು ನಮ್ಮ ನಮ್ಮ ಸಕಾರಾತ್ಕ ಮನೋಭಾವ ನಾಶಮಾಡುತ್ತಿರುವಾಗ ನಮ್ಮ ಮನದಲ್ಲಾಗುವ ಪರಿಣಾಮವೇ ಈ “ಭಂಡಸೈನ್ಯವಧೊದ್ಯುಕ್ತಶಕ್ತಿವಿಕ್ರಮಹರ್ಷಿತಾ” ನಾಮದ ಅಧಿಷ್ಠಾತೃದೇವತೆಯಾದ ಲಲಿತೆ ಎಂದೂ ಪರಿಭಾವಿಸಬಹುದೇನೋ. ಹೀಗಾಗಿ ಈ ಶಕ್ತಿವಂತ ನಾಮದ ಸ್ಮರಣೆ ನಮ್ಮಲ್ಲಿ ಜಾಗ್ರತವಾಗಿದ್ದಷ್ಟು ಹೊತ್ತು ನಮ್ಮ ಮನದಲ್ಲಿ ಕೆಟ್ಟ ಯೋಚನೆ ಬಾರದೆಂಬುದು ಇಲ್ಲಿ ನಾವು ಚಿಂತಿಸಬಹುದು.

“ನಿತ್ಯಾಪರಾಕ್ರಮಾಟೋಪನಿರೀಕ್ಷಣಸಮುತ್ಸುಕಾ”
 ಇಲ್ಲಿ ತಾಯಿತ ಪರಿವಾರ ಶಕ್ತಿ ದೇವತೆಗಳಾದ ನಿತ್ಯಾ ದೇವತೆಗಳು ಭಂಡನ ಸೈನ್ಯದೆದುರು ತಮ್ಮ ಪರಾಕ್ರಮವನ್ನು ವಿಸ್ತಾರವಾಗಿ ಅಭಿವ್ಯಕ್ತಿಸುತ್ತಿರುವಾಗ ನಿತ್ಯರ ಪರಾಕ್ರಮದ ಆಟೋಪವನ್ನು ಕಂಡು ಉತ್ಸುಕಳಾಗಿ ಹರ್ಷಿಸುತ್ತಿದ್ದಾಳೆ. ಕಾಮೇಶ್ವರಿಯಿಂದ ಚಿತ್ರೆಯವರೆಗಿನ ನಿತ್ಯಾದೇವತೆಯರು ಹದಿನೈದು ತಿಥಿಗಳಿಗೆ ಅಭಿಮಾನಿ ದೇವತೆಯರೆಂದು ಜ್ಞಾನಿಗಳ ಅಂಬೋಣ. ಇಂತಹ ನಿತ್ಯಾದೇವತೆಗಳು ಜ್ಞಾನ ಕೊಡುವವರು. ಒಮ್ಮೆ ಇವರ ಅನುಗ್ರಹವಾದರೆ ಜ್ಞಾನವು ವೃದ್ಧಿಸುತ್ತಲೇ ಸಾಗುತ್ತದೆ. ಜ್ಞಾನದಿಂದ ಸೌಭಾಗ್ಯ ಸಿದ್ಧಿಸಿ ಲಲಿತೆಯ ಪರಮಾನುಗ್ರಹ ನಮಗೆ ಸಿಗಲು ಸಾಧ್ಯವಿದೆ.

ಈ ರೀತಿಯಾಗಿ ಮೇಲಿನ ಎರಡು ನಾಮಗಳ ಅನುಸಂಧಾನ ಶಕ್ತಿ-ಜ್ಞಾನದ ಸಂಪನ್ನತೆಗಾಗಿ ಆಲಂಬನೀಯವೂ ಪರಮ ಶ್ರೇಯಸ್ಕರವೂ ಹೌದು.

ReplyForward

Related Articles

ಪ್ರತಿಕ್ರಿಯೆ ನೀಡಿ

Latest Articles