ಸಾಲಿಗ್ರಾಮ ಶಿಲೆಯಿಂದ ಮೂರ್ತಿವೆತ್ತ ಶ್ರೀ ಗುರು ನರಸಿಂಹ ನೆಲೆಸಿದ ಪುಣ್ಯ ಕ್ಷೇತ್ರವಿದು

*ಶ್ರೀನಿವಾಸ ಮೂರ್ತಿ ಎನ್ ಎಸ್

ವಿಷ್ಣುವಿನ ವಿವಿಧ ರೂಪಗಳ ಆರಾಧನೆ ನಮ್ಮಲ್ಲಿ ಆರಂಭ ಕಾಲದಿಂದಲೂ ಇತ್ತು. ಅದರಲ್ಲಿ ಪ್ರಮುಖವಾಗಿ ನರಸಿಂಹ ದೇವರ ಆರಾಧನೆ ಕದಂಬರ ಕಾಲದಿಂದಲೂ ಕಾಣಬಹುದು. ನಮಗ ನರಸಿಂಹ ಎಂದೊಡನೆ ಕಲ್ಪನೆಗೆ ಬರುವುದು ಹಿರಣ್ಯ ಕಶುಪಿವಿನ ಸಂಹಾರ ಮಾಡುತ್ತಿರುವ ಮೂರ್ತಿ ಅಥವಾ ಶ್ರೀ ಲಕ್ಶ್ಮೀ ಸಮೇತನಾಗಿ ಇರುವ ಮೂರ್ತಿ. ನಾಡಿನ ಇತಿಹಾಸ ಪುಟದಲ್ಲಿ ಗಮನಸಿದರೆ ಈ ಶಿಲ್ಪದ ಕಲ್ಪನೆಗೆ ಮುನ್ನವೇ ಕರಾವಳಿ ಮತ್ತು ಮಲೆನಾಡಿನ ಭಾಗದಲ್ಲಿ 7 ನೇ ಶತಮಾನದವರೆಗೂ ಕಾಣುವ ವಿಭಿನ್ನ ಶೈಲಿಯ ಶಿಲ್ಪವೇ ಕೇವಲ ನರಸಿಂಹ.

ಕೇವಲ ನರಸಿಂಹ ಶಿಲ್ಪ ಸಾಮಾನ್ಯವಾಗಿ ಸುಖಾಸನದಲ್ಲಿ ಕುಳಿತಿರುವಂತೆ ಕೆತ್ತಲಾಗಿರುತ್ತದೆ. ಈ ಶಿಲ್ಪಗಳು ದ್ವಿಭುಜ ಶೈಲಿಯಲ್ಲಿದ್ದು ಎಡಗೈನ್ನು ಮಡಿಸಿರುವ ಕಾಲಿನ ಮೇಲೆ ಇದ್ದು, ಬಲಗೈನ್ನು ಮೊಳಕಾಲ ಮೇಲೆ ಇರುವಂತೆ ಅಥವಾ ಚಿಂತಾಮಣಿ, ಸುದರ್ಶನ ಚಕ್ರ ಅಥವಾ ಸಾಲಿಗ್ರಾಮವನ್ನು ಹಿಡಿದಿರುವಂತೆ ಇರುತ್ತದೆ. ಇನ್ನು ಕೆಲವು ಶಿಲ್ಪಗಳಲ್ಲಿ ಎಡಗೈನಲ್ಲಿ ಶಂಖದ ಕೆತ್ತನೆ ಇರುವುದು ಉಂಟು. ಈ ಶಿಲ್ಪಗಳು ಸರಳವಾದ ಕಂಠೀಹಾರ ಇದ್ದು ಕೆಲವು ಶಿಲ್ಪಗಳಲ್ಲಿ ಯಜ್ಞೋಪವೀತ ಕಾಣಬಹುದು.

ಈ ಮಾದರಿಯ ಶಿಲ್ಪಗಳು ಹೆಚ್ಚಾಗಿ ಕದಂಬರ ಕಾಲದಲ್ಲಿ ಕಂಡು ಬಂದಿದ್ದು ನಂತರ ಬಾದಾಮಿ ಚಾಲುಕ್ಯರ ಕಾಲದಲ್ಲೂ ಕಾಣಬಹುದು. ಸುಮಾರು 4 ರಿಂದ 8 ನೇ ಶತಮಾನದವರೆಗೂ ಕಾಣ ಬರುವ ಈ ಮಾದರಿಯ ಶಿಲ್ಪಗಳು ನಂತರ ಕಾಲದ ನರಸಿಂಹ ಮೂರ್ತಿಗಳಲ್ಲಿ ಕಾಣ ಬರುವುದಿಲ್ಲ.
ಈ ಮಾದರಿಯ ನರಸಿಂಹನ ಶಿಲ್ಪಗಳಲ್ಲಿ ಪ್ರಮುಖವಾದ ದೇವಾಲಯ ಉಡುಪಿ ಜಿಲ್ಲೆಯ ಗುರು ನರಸಿಂಹ
ಸಹ ಒಂದು.

ಸುಮಾರು 7 ನೇ ಶತಮಾನದಲ್ಲಿ ಸ್ಥಾಪಿತವಾದ ಈ ಶಿಲ್ಪ ಕದಂಬರ ಕಾಲದಲ್ಲಿ ನಿರ್ಮಾಣವಾಗಿದ್ದು ಕರಾವಳಿಯಲ್ಲಿ ದೊರೆತ ಅತ್ಯಂತ ಪುರಾತನ ಮೂರ್ತಿಗಳಲ್ಲಿ ಒಂದು. ಬಹುತೇಕ ನವೀಕರಣಗೊಂಡಿರುವ ಈ ದೇವಾಲಯ ಗರ್ಭಗುಡಿ, ಮಂಟಪ ಹಾಗೂ ಹೊಸದಾಗಿ ಬೄಹತ್ ರಾಜ ಗೋಪುರವನ್ನು ನಿರ್ಮಾಣ ಮಾಡಿದ್ದು ಗರ್ಭಗುಡಿಯಲ್ಲಿ ಸುಂದರವಾಗದ ಗುರು ನರಸಿಂಹನ ದ್ವಿಭುಜ ಶಿಲ್ಪವಿದೆ. ಬಲಗೈನಲ್ಲಿ ಚಕ್ರ ಹಾಗೂ ಎಡಗೈನಲ್ಲಿ ಶಂಖ ಹೊಂದಿದ್ದು ಸಾಲಿಗ್ರಾಮ ಶಿಲೆಯಿಂದ ರಚನೆಯಾಗಿದೆ.

ಪೌರಾಣಿಕ ಹಿನ್ನೆಲೆ

ದೇವಾಲಯ ಉಲ್ಲೇಖ ಪದ್ಮ ಪುರಾಣದಲ್ಲಿ ಹಾಗೂ ಸ್ಕಂದ ಪುರಾಣದ ಸಹ್ಯಾದಿ ಖಾಂಡದಲ್ಲಿ
ನೋಡಬಹುದು. ಇನ್ನು ಸ್ಥಳಿಯ ಪುರಾಣದಂತೆ ಒಮ್ಮೆ ನಾರದ ಮುನಿಗಳಿಗೆ ಇಲ್ಲಿ ದಿವ್ಯ ವಾಣಿಯೊಂದು
ಕೇಳಿಸಿದ್ದು ಅದರಲ್ಲಿ ಬ್ರಹ್ಮ ಹಾಗು ರುದ್ರನಿಂದ ಅರ್ಚಿತ ಶಂಖ ಹಾಗೂ ಚಕ್ರ ಸಮೇತನಾದ ನರಸಿಂಹನು
ಇಲ್ಲಿನ ಅಶ್ವತ್ಥ ಮರದಲ್ಲಿ ನೆಲೆಸಿರುವನು ಎನ್ನಲಾಗಿ ಇಲ್ಲಿನ ಸ್ಥಳಿಯ ಅಶ್ವತ್ಠ ಮರದಲ್ಲಿ ನೆಲೆಸಿದ್ದ
ನರಸಿಂಹನನ್ನು ನಾರದ ಮುನಿಗಳು ಸ್ಥಾಪಿಸಿದರು. ನಂತರ ಕದಂಬರ ಕಾಲದಲ್ಲಿ ರಾಜ
ಲೋಕಾದಿತ್ಯನ ಕೋರಿಕೆ ಮೇರೆಗೆ ಉತ್ತರ ಭಾರತದಿಂದ ಬಂದ ಭಟ್ಟಾಚಾರ್ಯರು ಗಣಪತಿ ಯಂತ್ರದ
ಮೇಲೆ ಸ್ಥಾಪಿಸಿದರು. ದೇವಾಲಯ ನಿರ್ವಹಣೆಗೆಂದು ಅಲ್ಲಿಂದ ವೈದಿಕರನ್ನು ಕರೆಸಿದರು
ಎನ್ನಲಾಗುತ್ತದೆ.
ಸಾಲಿಗ್ರಾಮದಿಂದ ರಚಿತವಾದ ದೇವರ ಮೂರ್ತಿಯಿಂದ ಈ ಸ್ಥಳಕ್ಕೆ ಸಾಲಿಗ್ರಾಮ ಎಂಬ ಹೆಸರು
ಬಂದಿದ್ದು ಇಲ್ಲಿ ಸಿಂಹ ಹಾಗೂ ಆನೆಗಳು ವೈರತ್ವ ಮರೆತ ಕಾರಣ ನಿರ್ವೈರ ಸ್ಥಳ ಎಂದು ಕರೆಯಲ್ಪಟ್ಟಿತು. ಇಲ್ಲಿನ ಶಿಲ್ಪ ಯೋಗ ಭಂಗಿಯಲ್ಲಿರುವ ಕಾರಣ ಯೋಗ ನರಸಿಂಹ ಎಂದು ಕರೆಯುವ ವಾಡಿಕೆ ಇದೆ.
ಇಲ್ಲಿನ 14 ಗ್ರಾಮದ ಬ್ರಾಹ್ಮಣ ಮನೆತನಗಳಿಗೆ ಶ್ರೀ ಗುರು ನರಸಿಂಹನೇ ಅರಾಧ್ಯ ದೈವವಾಗಿದ್ದು
ಶ್ರೀ ಗುರು ನರಸಿಂಹನನ್ನು ಗುರುವಾಗಿ ಹಾಗು ದೇವರಾಗಿ ಪೂಜಿಸುವ ಕಾರಣ ಗುರುನರಸಿಂಹ ಎಂಬ ಹೆಸರು ಬಂದಿದೆ ಎನ್ನಲಾಗಿದೆ.
ಇನ್ನು ಮೂಲತಹ ಪೂರ್ವ ಮುಖವಾಗಿ ಸ್ಥಾಪಿತವಾಗಿದ್ದ ಈ ನರಸಿಂಹನ ಉಗ್ರತೆಯಿಂದ ಅ ದಿಕ್ಕಿನ
ಬೆಳೆಗಳು ನಾಶವಾಗುತ್ತಿತ್ತು. ಇದರಿಂದ ಕೋಪಗೊಂಡ ಬ್ರಾಹ್ಮಣರೊಬ್ಬರು ಘಾಸಿಗೊಳಿಸಲು
ಪ್ರಯತ್ನಿಸಿದಾಗ ನರಸಿಂಹನನ್ನು ಪಶ್ಚಿಮ ದಿಕ್ಕಿಗೆ ಸ್ಥಾಪಿಸಲಾಯಿತು ಹಾಗು ಅವನ ಉಗ್ರತೆ ಶಮನಕ್ಕಾಗಿ
ಆಂಜನೇಯನನ್ನು ಪಶ್ಚಿಮ ದಿಕ್ಕಿನಲ್ಲಿ ಸ್ಥಾಪಿಸಿಲಾಯಿತು. ದೇವಾಲಯದಲ್ಲಿ ತ್ರಿಕಾಲ ಪೂಜೆ ನಡೆಯಲಿದ್ದು ಸಂಕ್ರಾಂತಿ, ಶನಿವಾರ ಹಾಗು ಸೌರ ಯುಗಾದಿಯಂದಿ ವಿಷೇಶ ಪೂಜೆಗಳು ನಡೆಯುತ್ತವೆ ಸಂಕ್ರಾಂತಿಯಂದು ರಥಾರೋಹಣ ನಡೆಯುತ್ತದೆ.

Related Articles

2 COMMENTS

ಪ್ರತಿಕ್ರಿಯೆ ನೀಡಿ

Latest Articles