ಹೊಸ್ತಿಲು ಪೂಜೆ ಮಾಡುವುದು ಹೇಗೆ?

ಹೊಸ್ತಿಲ ನಮಸ್ಕಾರಕ್ಕೆ ಹೇಳುವ ಶ್ಲೋಕ

ಹ್ರೀಂಕಾರರೂಪಿಣೀ ದೇವಿ ವೀಣಾ ಪುಸ್ತಕಧಾರಿಣೀ |

ವೇದಮಾತರ್ನಮಸ್ತುಭ್ಯಂ ಮಾಂಗಲ್ಯಂ ದೇಹಿ ಮೇ ಸದಾ ||

ಮಾಂಗಲ್ಯಾಭರಣೈರ್ಯುಕ್ತೇ ಮಂಗಳೇ ಸರ್ವಮಂಗಳೇ |

ಗೃಹಲಕ್ಷ್ಮಿರ್ಧಾನ್ಯಲಕ್ಷ್ಮಿರ್ದ್ವಾರಲಕ್ಷ್ಮಿರ್ನಮೋಽಸ್ತುತೇ ||

ಸ್ತ್ರೀಯರಿಗೆ ಲಕ್ಷ್ಮಿದೇವಿಯ ಆರಾಧನೆಗೆ ಹಲವು ಪ್ರತೀಕಗಳಿವೆ. ಅವುಗಳಲ್ಲಿ, ಹೊಸ್ತಿಲು ಮತ್ತು ತುಳಸೀವೃಂದಾವನ ಪೂಜೆ ಪ್ರಮುಖವಾದವು. ಮನೆಯ ಮುತ್ತೈದೆಯರೆಲ್ಲರೂ ಹೊಸ್ತಿಲಿನಲ್ಲಿ ಲಕ್ಷ್ಮೀಭಾರತಿಯರನ್ನು ಪೂಜಿಸಬೇಕು. ಹೊಸ್ತಿಲು ಮತ್ತು ತುಳಸೀವೃಂದಾವನ ಪೂಜೆಯನ್ನು ಕನ್ಯೆಯರೂ ಕಡ್ಡಾಯವಾಗಿ ಮಾಡತಕ್ಕದ್ದು.

ಸ್ನಾನಕ್ಕೆ ಮೊದಲೇ ಹೊಸ್ತಿಲು ಬಳಿದು, ಸ್ವಸ್ತಿಕೆ ಬರೆದು, ಅಲಂಕರಿಸಿ ಸ್ನಾನಾನಂತರ ಪೂಜಿಸಬಹುದು. ಕೆಲವೆಡೆ ಸ್ನಾನಾನಂತರ ಹೊಸ್ತಿಲು ಬರೆಯುವ ಸಂಪ್ರದಾಯವಿದೆ. ಶಾಸ್ತ್ರರೀತ್ಯಾ ಸ್ನಾನಾನಂತರದ ಹೊಸ್ತಿಲಪೂಜೆ ಉತ್ತಮ. ಶುದ್ಧಜಲಪೂರ್ಣವಾದ ತಂಬಿಗೆಯನ್ನು ಹೊಸ್ತಿಲ ಮಧ್ಯದಲ್ಲಿಟ್ಟು ಮಂಗಳದ್ರವ್ಯಗಳಿಂದ ಪೂಜಿಸಿ, “ಹ್ರೀಂಕಾರರೂಪಿಣೀ…” ಎಂಬ ಶ್ಲೋಕಗಳಿಂದ ನಮಸ್ಕರಿಸಿ, ಹೊಸ್ತಿಲಿಗೆ ಅರ್ಪಿಸಿದ್ದ ಒಂದು ಹೂವನ್ನು ಮುಡಿದುಕೊಂಡು, ಕೈತೊಳೆದು, ತಂಬಿಗೆಯನ್ನು ಕೆಳಗಿಳಿಸಬೇಕು (ಹೊಸ್ತಿಲುಪೂಜೆ ಮುಗಿಯುವ ತನಕ ಯಾರೂ ಹೊಸ್ತಿಲು ದಾಟಬಾರದು,).

ಗೃಹದ ಪ್ರಧಾನದ್ವಾರವನ್ನು ಹೊಸ್ತಿಲುಪೂಜೆಗಾಗಿ ಆರಿಸಿಕೊಳ್ಳಬೇಕು. ಅನುಕೂಲತೆ ಹಾಗೂ ಶುದ್ಧಿಯ ಕಾರಣಗಳಿಂದ ದೇವರ ಕೋಣೆಯ ದ್ವಾರವನ್ನು ಪೂಜಿಸಿದರೂ, ಪ್ರಧಾನದ್ವಾರದಲ್ಲೂ ರಂಗೊಲಿ ಇರಬೇಕು. ”ಅಶೂನ್ಯಾ ದೇಹಲೀ ಕಾರ್ಯಾ…” ಎಂಬಂತೆ ಹೊಸ್ತಿಲು ಬೋಳಾಗಿರಕೂಡದು. ಕಸಕಡ್ಡಿಗಳಿಂದ ತುಂಬಿರಕೂಡದು. ಗೃಹವಸ್ತುಗಳನ್ನು ಹೊಸ್ತಿಲಲ್ಲಿಡಕೂಡದು. ಮನೆಯೊಳಗಿದ್ದೇ ಹೊಸ್ತಿಲ ಪೂಜೆಯನ್ನು ಮಾಡಬೇಕು.

ಹೊರಗಿನಿಂದ ಒಳಮುಖವಾಗಿ ಮಾಡಬಾರದು. ಆದರೂ ಲಕ್ಶ್ಮೀದೇವಿಯನ್ನು ಬರಮಾಡಿಕೊಳ್ಳುವಾಗ, ಹೊಸ್ತಿಲ ಹೊರಗೆ ನಿಂತು ಆಕೆಯನ್ನು ಆಹ್ವಾನಿಸುವ ಮತ್ತು ಆವಾಹಿಸುವ ಸಂಪ್ರದಾಯವು ಕೆಲವೆಡೆ ಪ್ರಚಲಿತವಾಗಿರುತ್ತದೆ. ಯಾವುದೇ ಪೂಜೆಯಲ್ಲೂ ಶ್ರದ್ಧೆ, ಭಕ್ತಿ ಮತ್ತು ಅನುಸಂಧಾನಗಳು ಪ್ರಮುಖವಾಗುತ್ತವೆ. ಕ್ರಮಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಯಗಳಿದ್ದರೂ ಯಾವುದೇ ಲೋಪವಿರುವುದಿಲ್ಲ. ದೇವರ ಕೋಣೆಯ ಹೊಸ್ತಿಲಿಗೆ ಮಾತ್ರ ಹೊರಗಿನಿಂದ ಪೂಜಿಸಬೇಕು.

Related Articles

ಪ್ರತಿಕ್ರಿಯೆ ನೀಡಿ

Latest Articles