ಮಳೆಗಾಲ ಶುರುವಾಗಿದೆ. ಮಳೆಯಿಂದ ತೋಯ್ದ ಭುವಿಯ ಸುತ್ತಲೂ ಹಸಿರು ಹೊದಿಕೆಯ ಹಾಸು ಕಳೆಗಟ್ಟಿದೆ.
ಮಳೆಗಾಲ ಅಂದರೆ ಕೆಲವರಿಗೆ ಕಿರಿ ಕಿರಿ ಆಗಬಹುದು. ನಿಜ ಹೇಳಬೇಕು ಅಂದರೆ ಮಳೆಗಾಲ ಕಿರಿಕಿರಿ ಅಲ್ಲ ಹಿರಿ ಹಿರಿ ಹಿಗ್ಗು. ಮಳೆ ಬರುವಾಗ ಇಳೆಯೊಂದಿಗೆ ಜಳಕವಾಡುತ್ತಾ ಪುಳಕಗೊಳ್ಳುವುದು ಮಾತ್ರವಲ್ಲ, ಮನೆಯೊಳಗೆ ಕುಳಿತು ತರಹೇವಾರಿ ತಿನಿಸುಗಳನ್ನು ತಯಾರಿಸಿ ಸವಿಯುವ ಸಂಭ್ರಮವೂ ಇರುತ್ತದೆ. ವಿಶೇಷವಾಗಿ ಮಳೆಗಾಲದಲ್ಲಿ ಮಾತ್ರವೇ ಸಿಗುವ ಹಸಿರು ಸೊಪ್ಪು, ತರಕಾರಿ, ಹಲಸಿನ ಸೊಳೆ ಅಡುಗೆ ವೈವಿಧ್ಯವನ್ನು ಹೆಚ್ಚಿಸುತ್ತದೆ.
ಮಳೆ ನೀರು ಬಿದ್ದು ಒಂದೆರಡು ವಾರದಲ್ಲೇ ಚಿಗಿತು ಎಲೆಯರಳಿಸುವ ಕೆಸುವಿನ ಗಿಡದಿಂದ ಹಲವು ಬಗೆಯ ತಿನಿಸುಗಳನ್ನು ಮಾಡಬಹುದು. ಪತ್ರೋಡೆ, ದಂಟಿನ ಸಾರು, ಚಟ್ನಿಯನ್ನು ಕೂಡಾ ಮಾಡಿ ಬಿಸಿ ಅನ್ನದೊಂದಿಗೆ ಸವಿದರೆ ಅದರ ಸವಿ ಬಲ್ಲವನೇ ಬಲ್ಲ.
ಇಲ್ಲಿ ಕೆಸುವಿನ ಎಲೆಯಿಂದ ರುಚಿಕರವಾದ ಚಟ್ನಿ ಹೇಗೆ ತಯಾರಿಸಬಹುದು ಎಂಬುದರ ಕುರಿತ ರೆಸಿಪಿ ಇಲ್ಲಿದೆ.
ಬೇಕಾಗುವ ಸಾಮಗ್ರಿ:
ಕೆಸುವಿನ ಎಲೆ (ಮೂಂಡಿ ಕೆಸ) 4 ಎಲೆ, ಹಸಿ ಮೆಣಸಿನಕಾಯಿ-5, ತೆಂಗಿನಕಾಯಿತುರಿ 1 ಕಪ್, ಹುಣಸೆಹಣ್ಣು ಸ್ವಲ್ಪ, ಸಾಸಿವೆ, ಅರಸಿನ ಪುಡಿ, ಇಂಗು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
ಕೆಸುವಿನ ಎಲೆಯ ಮೇಲಿರುವ ದಪ್ಪನಾದ ನಾರನ್ನು ತೆಗೆದು ಅದನ್ನು ತೊಳೆದು ಸ್ವಲ್ಪ ನೀರು ಸೇರಿಸಿ ಬೇಯಿಸಿಟ್ಟುಕೊಳ್ಳಿ. ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಹಸಿಮೆಣಸಿನಕಾಯಿ ಸೇರಿಸಿ ಬಿಸಿ ಮಾಡಿಕೊಳ್ಳಿ. ಅದನ್ನು ಮಿಕ್ಸಿಗೆ ಹಾಕಿ ಅದಕ್ಕೆ ಹುಣಸೆ ಹಣ್ಣಿನ ರಸ, ಇಂಗು, ಬೇಯಿಸಿಟ್ಟುಕೊಂಡ ಕೆಸುವಿನ ಎಲೆ, ತೆಂಗಿನ ತುರಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕರಿಬೇವು,, ಬೆಳ್ಳುಳ್ಳಿ ಒಣಮೆಣಸು ಹಾಕಿ ಒಗ್ಗರಣೆ ಮಾಡಿದರಾಯಿತು.